ಭುವನೇಶ್ವರ್ ಮೊದಲ 3 ಟೆಸ್ಟ್ ಗಳಿಗೆ ಅಲಭ್ಯ

Update: 2018-07-19 18:29 GMT

ಮುಂಬೈ, ಜು.19: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯನ್ನು 2-1 ಅಂತರದಲ್ಲಿ ಕಳೆದುಕೊಂಡಿರುವ ಟೀಮ್ ಇಂಡಿಯಾಗೆ ಮತ್ತೆ ಹಿನ್ನಡೆ ಉಂಟಾಗಿದೆ. ಟೆಸ್ಟ್ ಸರಣಿಯ ಮೂರು ಪಂದ್ಯಗಳಿಗೆ ಆಯ್ಕೆಯಾಗಿದ್ದ ವೇಗಿ ಭುವನೇಶ್ವರ ಕುಮಾರ್ ಗಾಯದ ಕಾರಣದಿಂದಾಗಿ ತಂಡದಿಂದ ದೂರ ಉಳಿಯುವಂತಾಗಿದೆ.

ಭುವನೇಶ್ವರ ಕುಮಾರ್‌ಗೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬುಧವಾರ ಪ್ರಕಟಗೊಂಡಿದ್ದ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರೂ, ಅವರು ಆಡುವ ಬಗ್ಗೆ ಸಂಶಯ ಉಂಟಾಗಿತ್ತು. ಬಿಸಿಸಿಐ ಮೆಡಿಕಲ್ ಟೀಮ್ ಅವರಿಗೆ ಆಡಲು ಗ್ರೀನ್ ಸಿಗ್ನಲ್ ನೀಡಲಾಗಿಲ್ಲ. ಈ ಕಾರಣದಿಂದಾಗಿ ಅವರು ತವರಿಗೆ ವಾಪಸಾಗುವಂತಾಗಿದೆ. ಮೂರು ಟೆಸ್ಟ್‌ಗಳಿಗೆ ಭುವನೇಶ್ವರ ಕುಮಾರ್ ಲಭ್ಯವಿರುವುದಿಲ್ಲ. ಅವರು ಗಾಯದಿಂದ ಚೇತರಿಸಿಕೊಂಡರೆ ಅಂತಿಮ ಎರಡು ಟೆಸ್ಟ್‌ಗಳಿಗೆ ಅವಕಾಶ ಪಡೆಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

 ಲೀಡ್ಸ್‌ನಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ ಕುಮಾರ್ ಗಂಟೆಗೆ 120 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿದ್ದರು. ಆದರೆ ಅವರು 7 ಓವರ್‌ಗಳ ಬೌಲಿಂಗ್ ನಡೆಸಿ 49 ರನ್ ನೀಡಿದ್ದರೂ, ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಭಾರತ ಸೋಲು ಅನುಭವಿಸಿತ್ತು. ಇಂಗ್ಲೆಂಡ್ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು.

ಐಪಿಎಲ್ ಟೂರ್ನಿಯ ವೇಳೆ ಭುವನೇಶ್ವರ ಕುಮಾರ್‌ಗೆ ಬೆನ್ನು ನೋವು ಕಾಡಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಭುವನೇಶ್ವರ ಕುಮಾರ್‌ಗೆ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಅಂತಿಮ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ವಿದೇಶದಲ್ಲಿ ಭುವಿ ಯಶಸ್ವಿ ಬೌಲರ್. ಕಳೆದ ವರ್ಷ ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 19 ವಿಕೆಟ್‌ಗಳನ್ನು ಉಡಾಯಿಸಿದ್ದರು.

ಟೀಮ್ ಇಂಡಿಯಾಕ್ಕೆ ಭುವನೇಶ್ವರ ಕುಮಾರ್ ಅಲಭ್ಯವಾಗಿರುವ ಜೊತೆಗೆ ಇನ್ನೂ ಹಲವು ಸಮಸ್ಯೆ ಎದುರಿಸುವಂತಾಗಿದೆ. ಆಯ್ಕೆ ಸಮಿತಿ 18 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿತ್ತು. ವೇಗಿ ಜಸ್‌ಪ್ರೀತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಅವರು ಮೊದಲ ಟೆಸ್ಟ್‌ಗೆ ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ.ಅಷ್ಟು ಮಾತ್ರವಲ್ಲ ಲಾರ್ಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲೂ ಅವರು ಆಡುವುದು ಸಂಶಯ. ಈ ಕಾರಣದಿಂದಾಗಿ ಈಗಾಗಲೇ ಇಂಗ್ಲೆಂಡ್‌ನಲ್ಲಿರುವ ಮುಂಬೈ ಬೌಲರ್ ಶಾರ್ದುಲ್ ಠಾಕೂರ್ ಅವರಿಗೆ ಟೆಸ್ಟ್ ತಂಡಲ್ಲಿ ಸೇರಿಸಿಕೊಳ್ಳುವ ಅವಕಾಶ ನೀಡುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ.

ಕುಲ್‌ದೀಪ್ ಯಾದವ್ ಮತ್ತು ಕರುಣ್ ನಾಯರ್ ತಂಡಕ್ಕೆ ಮರಳಿದ್ದಾರೆ. ನಾಯರ್ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಆಡಿದ್ದರು. ಯಾದವ್ ತಂಡಕ್ಕೆ ಮರಳಿದ್ದಾರೆ. ವೇಗಿ ಮುಹಮ್ಮದ್ ಶಮಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಅವರು ತಂಡದಲ್ಲಿ ಮರಳಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ಅವರು ಗಾಯಾಳು ವೃದ್ಧಿಮಾನ್ ಸಹಾ ಬದಲಿಗೆ ಅವಕಾಶ ಪಡೆದಿದ್ದಾರೆ.

ಸ್ವದೇಶದಲ್ಲಿ ನಡೆಯುವ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಸಮರ್ಥರಾಗಿರುವ ಅಶ್ವಿನ್ ಮತ್ತು ಜಡೇಜರನ್ನು ಅನಿವಾರ್ಯವಾಗಿ ಸೇರಿಸಿಕೊಳ್ಳಲಾಗಿದೆ. ವಿದೇಶದಲ್ಲಿ ಇವರ ಪ್ರದರ್ಶನ ತೃಪ್ತಿಕರವಾಗಿಲ್ಲ. ಕುಲದೀಪ್ ಸೇರ್ಪಡೆ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.

ಶಿಖರ್ ಧವನ್ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ಇಂಗ್ಲೆಂಡ್‌ನಲ್ಲಿ ಕಠಿಣ ಸವಾಲು ಎದುರಾಗಿದೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಂಡಕ್ಕೆ ಅಚ್ಚರಿಯ ಆಯ್ಕೆ. ಕಳೆದ ವರ್ಷ ಕೋಚ್ ರವಿಶಾಸ್ತ್ರಿ ಅವರು ಪಂತ್ ಅವರಿಗೆ ಸರಿಯಾದ ಸಮಯದಲ್ಲಿ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News