ಫಿಫಾ ವಿಶ್ವಕಪ್‌ ನಡೆಯಲಿರುವ ಕತರ್‌ನಲ್ಲಿ ನೂರೆಂಟು ಸಮಸ್ಯೆ

Update: 2018-07-19 18:30 GMT

ದೋಹಾ, ಜು.19: ಮುಂದಿನ ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿರುವ ಕತರ್ ಇದೀಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. 2022ರ ವಿಶ್ವಕಪ್‌ಗೆ ಹಲವು ಸಮಸ್ಯೆಗಳ ನಡುವೆಯೂ ಕತರ್‌ನಲ್ಲಿ ತಯಾರಿ ನಡೆಯುತ್ತಿದೆ.

ಶ್ರೀಮಂತ ರಾಷ್ಟ್ರವಾಗಿರುವ ಕತರ್‌ನ ಫುಟ್ಬಾಲ್ ತಂಡ ಈ ತನಕ ವಿಶ್ವಕಪ್‌ನಲ್ಲಿ ಭಾಗವಹಿಸಿಲ್ಲ. ಈ ದೇಶಕ್ಕೆ ವಿಶ್ವಕಪ್‌ನ ಆತಿಥ್ಯ ನೀಡಿರುವ ವಿಚಾರ ಆರಂಭದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಮಧ್ಯಪ್ರಾಚ್ಯದಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್‌ಗೆ ಅಲ್ಲಿನ ಸರಕಾರ ಭರದ ಸಿದ್ಧತೆ ಕೈಗೊಂಡಿದೆ.

  ಕತರ್ ರಾಜತಾಂತ್ರಿಕ ಬಿಕ್ಕಟ್ಟು, ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪ, ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆರೋಪವನ್ನು ಎದುರಿಸುತ್ತಿದೆ. ಟೂರ್ನಮೆಂಟ್ ಮೊದಲ ಬಾರಿ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಎಷ್ಟು ತಂಡಗಳು ಪಾಲ್ಗೊಳ್ಳಲಿವೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ದೇಶವೊಂದು ಈ ರೀತಿಯ ಸಮಸ್ಯೆ ಎದುರಿಸುತ್ತಿರುವುದು ಇದೆ ಮೊದಲು.

ಉಗ್ರವಾದಕ್ಕೆ ಬೆಂಬಲ ನೀಡುತ್ತದೆ ಎಂಬ ಆರೋಪ ಮತ್ತು ಇರಾನ್‌ಗೆ ನಿಕಟವಾಗಿದೆ ಎಂಬ ಕಾರಣಕ್ಕಾಗಿ 2017 ಜೂನ್‌ನಿಂದ ನೆರೆಯ ರಾಷ್ಟ್ರಗಳಾದ ಸೌದಿ ಅರೇಬಿಯ,ಯುಎಇ ರಾಷ್ಟ್ರಗಳು ಕತರ್‌ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.

ಈ ಬಿಕ್ಕಟ್ಟಿನಿಂದಾಗಿ ಸೌದಿ ಅರೇಬಿಯ ಮತ್ತು ಯುಎಇ ರಾಷ್ಟ್ರಗಳ ಪ್ರಜೆಗಳಿಗೆ ಕತರ್‌ಗೆ ಪ್ರಯಾಣಿಸದಂತೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರೂ ಫುಟ್ಟಾಲ್‌ಪ್ರಿಯ ರಾಷ್ಟ್ರವಾಗಿರುವ ಸೌದಿ ಸೇರಿದಂತೆ ವಿವಿಧ ದೇಶಗಳಿಂದ 1.5 ಮಿಲಿಯನ್ ಫುಟ್ಬಾಲ್ ಅಭಿಮಾನಿಗಳು ಫುಟ್ಬಾಲ್ ವಿಶ್ವಕಪ್ ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News