ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಆರೋಗ್ಯಕರ ಪೇಯಗಳು ನಿಜಕ್ಕೂ ಆರೋಗ್ಯಕಾರಿಯೇ?

Update: 2018-07-20 16:32 GMT

ಕೇವಲ ಕೆಲವೇ ಮಂದಿಗೆ ಪರಿಚಿತವಿದ್ದ ಆರೋಗ್ಯಕರ ಪಾನೀಯ (ಪ್ರೊಬಯಾಟಿಕ್ ಡ್ರಿಂಕ್ಸ್)ಗಳ ಪ್ರವಾಹವೇ ಇದೀಗ ಭಾರತೀಯ ಮಾರುಕಟ್ಟೆಗೆ ಹರಿದಿದೆ. ‘ಕರುಳಿನ ಆರೋಗ್ಯಕ್ಕೆ’ ಎಂಬ ಲೇಬಲ್‌ನಡಿ ಪ್ರತಿ ಸೂಪರ್‌ಮಾರ್ಕೆಟ್ ಶೆಲ್ಫ್‌ಗಳಲ್ಲೂ ಇವು ರಾರಾಜಿಸುತ್ತಿವೆ. ಸುಮಾರು ವಾರ್ಷಿಕ 15 ದಶಲಕ್ಷ ರೂಪಾಯಿ ಮಾರುಕಟ್ಟೆ ವ್ಯವಹಾರ ನಡೆಸುತ್ತಿರುವ ಭಾರತ, ಹೈನು ಉತ್ಪನ್ನಗಳಿಗೆ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ.

ಆರೋಗ್ಯಕರ ಪೇಯಗಳತ್ತ ವಾಲುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್. ಜಠರ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯಕರ ಪಾನೀಯಗಳ ಪ್ರವಾಹ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಕೇವಲ ಕೆಲವೇ ಮಂದಿಗೆ ಪರಿಚಿತವಿದ್ದ ಆರೋಗ್ಯಕರ ಪಾನೀಯ (ಪ್ರೊಬಯಾಟಿಕ್ ಡ್ರಿಂಕ್ಸ್)ಗಳ ಪ್ರವಾಹವೇ ಇದೀಗ ಭಾರತೀಯ ಮಾರುಕಟ್ಟೆಗೆ ಹರಿದಿದೆ. ‘ಕರುಳಿನ ಆರೋಗ್ಯಕ್ಕೆ’ ಎಂಬ ಲೇಬಲ್‌ನಡಿ ಪ್ರತಿ ಸೂಪರ್‌ಮಾರ್ಕೆಟ್ ಶೆಲ್ಫ್‌ಗಳಲ್ಲೂ ಇವು ರಾರಾಜಿಸುತ್ತಿವೆ. ಸುಮಾರು ವಾರ್ಷಿಕ 15 ದಶಲಕ್ಷ ರೂಪಾಯಿ ಮಾರುಕಟ್ಟೆ ವ್ಯವಹಾರ ನಡೆಸುತ್ತಿರುವ ಭಾರತ, ಹೈನು ಉತ್ಪನ್ನಗಳಿಗೆ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ.
ಹೆಲ್ತ್ ಡ್ರಿಂಕ್ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಸುಮಾರು 14 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದು, ಇದಕ್ಕೆ ಹೋಲಿಸಿದರೆ ಭಾರತೀಯ ಮಾರುಕಟ್ಟೆ ತೀರಾ ಚಿಕ್ಕದು ಎನಿಸಬಹುದು. ಆದಾಗ್ಯೂ ನಗರ ಪ್ರದೇಶದಲ್ಲಿ ಇಂತಹ ಪೇಯ ಮತ್ತು ಆಹಾರ ಪದಾರ್ಥಗಳು ಮಾರುಕಟ್ಟೆ ಸೃಷ್ಟಿಸುತ್ತಿವೆ. ಆರೋಗ್ಯಕರ ಪೇಯಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವ್ಯಾಖ್ಯಾನದ ಪ್ರಕಾರ, ಈ ಜೀವಂತ ಸೂಕ್ಷ್ಮಾಣುಜೀವಿಗಳನ್ನು ಸಮರ್ಪಕ ಪ್ರಮಾಣದಲ್ಲಿ ಸೇವಿಸಿದಾಗ ಇದು ಆರೋಗ್ಯಕ್ಕೆ ಲಾಭ ತರುತ್ತವೆ.
‘ಗಟ್ ಮೈಕ್ರೊಬಯೋಟಾ ಆ್ಯಂಡ್ ಪ್ರೊಬಾಟಿಕ್ ಸೈನ್ಸ್ ಫೌಂಡೇಷನ್’ನ ಕಾರ್ಯದರ್ಶಿ ನೀರ್ಜಾ ಹಜೇಲಾ ಹೇಳುವಂತೆ, ‘‘ಆರೋಗ್ಯಕರ ಪೇಯಗಳು ಜಠರ ಆರೋಗ್ಯಕ್ಕೆ ಪೂರಕವಾಗಿರುವುದರಿಂದ ಹೆಚ್ಚಿನ ಮಹತ್ವ ಪಡೆಯುತ್ತಿವೆ. ದೇಹದ ಆರೋಗ್ಯದ ಎಲ್ಲ ಆಯಾಮಗಳನ್ನು ನಿಯಂತ್ರಿಸುವ ಅಂಗಾಂಗ ಜಠರವಾಗಿದ್ದರೂ, ಇದು ತೀರಾ ನಿರ್ಲಕ್ಷಿತ ಅಂಗ’’ ಎನ್ನುವುದು ಅವರ ವಿವರಣೆ.
‘‘ನಾವು ತಿನ್ನುವ ಆಹಾರ ಇಲ್ಲಿ ಜೀರ್ಣವಾಗುತ್ತದೆ ಹಾಗೂ ಪೋಷಕಾಂಶಗಳು ಹೀರಲ್ಪಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಜಠರ ಪ್ರಮುಖ ಪ್ರತಿರೋಧ ಕಣಗಳನ್ನು ದೇಹಕ್ಕೆ ವರ್ಗಾಯಿಸುತ್ತದೆ ಹಾಗೂ ಅತಿದೊಡ್ಡ ಪ್ರತಿರೋಧ ಅಂಗವಾದ ಇದು ಬಹಳಷ್ಟು ರೋಗಗಳಿಂದ ರಕ್ಷಿಸುತ್ತದೆ. ಸೂಕ್ಷ್ಮಾಣುಜೀವಿಗಳು ಲಾಭಕಾರಕವೂ ಹೌದು; ಹಾನಿಕಾರಕವೂ ಹೌದು. ಆದ್ದರಿಂದ ಇವುಗಳ ನಡುವೆ ಸಮತೋಲನ ಅಗತ್ಯ. ಈ ಸಮತೋಲನವನ್ನು ನಿರ್ವಹಿಸಲು ಪ್ರೊಬಾಟಿಕ್ ಪೇಯಗಳು ಸಹಕರಿಸುತ್ತವೆ’’ ಎಂದು ಹಜೇಲಾ ವಿಶ್ಲೇಷಿಸುತ್ತಾರೆ.

ಹಸಿವುಕಾರಕ
ಪ್ರೊಬಾಟಿಕ್ ಪೇಯ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಬ್ರಾಂಡ್‌ಗಳೆಂದರೆ ಯಾಕುಲ್ಟ್, ನೆಸ್ಲೆ, ಅಮೂಲ್, ಮತ್ತು ಮದರ್‌ಡೈರಿ ಯೊಗರ್ಟ್, ಹಾಲು, ಐಸ್‌ಕ್ರೀಂ ಮತ್ತು ಚಹಾದಂತಹ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿರುವ ಚಿಕ್ಕಪುಟ್ಟ ಕಂಪೆನಿಗಳು. ಜಪಾನ್‌ನ ಯಾಕುಲ್ಟ್ ಮತ್ತು ಫ್ರಾನ್ಸ್‌ನ ದನೋನ್ ಆಹಾರೋತ್ಪನ್ನ ಕಂಪೆನಿಯ ಜಂಟಿ ಸಹಭಾಗಿತ್ವದ ಕಂಪೆನಿಯಾಗಿರುವ ಯಾಕುಲ್ಟ್ ದನೋನ್, ಹರ್ಯಾಣದ ಸೋನಿಪತ್‌ನಲ್ಲಿರುವ ಘಟಕದಲ್ಲಿ 65 ಮಿಲಿಲೀಟರ್‌ನ 2.8 ಲಕ್ಷ ಬಾಟಲಿಗಳನ್ನು ಪ್ರತಿದಿನ ಉತ್ಪಾದಿಸುತ್ತಿದೆ.
ಯಾಕುಲ್ಟ್ ಸಂಸ್ಥಾಪಕ ಡಾ.ಮಿನೊರು ಶಿರೋಟಾ ಅವರು, ರೋಗ ಬಾರದಂತೆ ತಡೆಯುವ ಔಷಧಗಳ ಮಹತ್ವವನ್ನು ವಿವರಿಸಿ, ಆರೋಗ್ಯಕರ ಜಠರ ವ್ಯವಸ್ಥೆಯ ಮಹತ್ವವೇ ದೀರ್ಘಾಯುಷ್ಯದ ಗುಟ್ಟು ಎಂದು ಹೇಳುತ್ತಾರೆ. ರೋಗ ತಡೆ ಔಷಧಿಗಳ ಕ್ಷೇತ್ರದಲ್ಲಿ ಅವರು ಸಂಶೋಧನಾ ಚಟುವಟಿಕೆಗಳ ಆಧಾರದಲ್ಲಿ ಜಠರದ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡುವವರು ಹೆಚ್ಚು ಕಾಲ ಬದುಕುತ್ತಾರೆ ಎಂದು ಪ್ರತಿಪಾದಿಸುತ್ತಾರೆ.
ಭಾರತದಲ್ಲಿ ಆರೋಗ್ಯಕರ ಪಾನೀಯಗಳನ್ನು ಉತ್ಪಾದಿಸುವ ಮತ್ತೊಂದು ಪ್ರಮುಖ ಕಂಪೆನಿಯಾದ ಮದರ್ ಡೈರಿಯ ನ್ಯೂಟ್ರಿಫಿಟ್ ಎಲ್ಲ ಬಹು ಬ್ರಾಂಡ್ ಮಳಿಗೆಗಳಲ್ಲಿ ಸಿಗುತ್ತದೆ. ಇತರ ಚಿಲ್ಲರೆ ಹಾಗೂ ಸಾಂಸ್ಥಿಕ ವಾಹಿನಿಗಳ ಮೂಲಕವೂ ಇದನ್ನು ವಿತರಿಸಲಾಗುತ್ತದೆ.


ಅಮೂಲ್‌ನ ಆರೋಗ್ಯಕರ ಐಸ್‌ಕ್ರೀಂ ಕೂಡಾ ತನ್ನದೇ ಗ್ರಾಹಕ ವರ್ಗವನ್ನು ಹೊಂದಿದೆ ಎಂದು ಇಂಥ ಉತ್ಪನ್ನಗಳನ್ನು ನಿಯತವಾಗಿ ಖರೀದಿಸುವ ಮುಹಮ್ಮದ್ ಅಜ್ಮಲ್ ಹೇಳುತ್ತಾರೆ. ಅಮೂಲ್‌ನ ಪ್ರೊಲೈಫ್ ಪ್ರೊಬಾಟಿಕ್ ಐಸ್‌ಕ್ರೀಂ, ಯೊಗರ್ಟ್ ಮತ್ತು ಮಜ್ಜಿಗೆ ನನಗೆ ಅಚ್ಚುಮೆಚ್ಚು. ಇದು ಜೀರ್ಣವನ್ನು ಹೆಚ್ಚಿಸುತ್ತದೆ ಎಂದವರು ಹೇಳುತ್ತಾರೆ.
 ಎಂಒ’ಸ್ ಸೂಪರ್‌ಫುಡ್ ಭಾರತೀಯ ಮಾರುಕಟ್ಟೆಗೆ ಎಂಒ’ಸ್ ಕೆಫೀರ್ ಹೆಸರಿನಲ್ಲಿ ಯೂರೋಪಿಯನ್ ಪ್ರೊಬಯಾಟಿಕ್ ಯೊಗರ್ಟ್ ಪರಿಚಯಿಸಿದೆ. ಇದರ ಸಂಸ್ಥಾಪಕಿ ಮತ್ತು ಆಡಳಿತ ನಿರ್ದೇಶಕಿ ಮೋನಿಕಾ ಒಬೆರಾಯ್ ಅವರು ‘ಅಲ್ ಅರೇಬಿಯಾ’ ಜತೆ ಇದರ ವಿವರಗಳನ್ನು ಹಂಚಿಕೊಂಡಿದ್ದಾರೆ.
‘‘ಎರಡು ಪ್ರಮುಖ ಆಯಾಮಗಳತ್ತ ನಮ್ಮ ಸೂತ್ರ ಗಮನ ಹರಿಸಿದೆ. ಒಂದು ಸಂವೇದನೆ ಹಾಗೂ ಇನ್ನೊಂದು ಕಾರ್ಯನಿರ್ವಹಣೆ. ಸಂವೇದನೆ ದೃಷ್ಟಿಯಿಂದ ಎಂಒ’ಸ್ ಕೆಫೀರ್ ಭಾರತ ಹಾಗೂ ಏಶ್ಯಾ ಪ್ರದೇಶಕ್ಕೆ ಅನುಕೂಲಕರ. ಶೆಫ್ ಆಗಿದ್ದುಕೊಂಡು ವೈಯಕ್ತಿಕವಾಗಿ ನಮ್ಮ ಉತ್ಪನ್ನವನ್ನು ನಾವೇ ಸ್ವತಃ ಮೊದಲು ಪರೀಕ್ಷಿಸಿಕೊಳ್ಳುವುದು ಉತ್ತಮ’’ ಎಂದು ಹೇಳುತ್ತಾರೆ.
ಕಾರ್ಯನಿರ್ವಹಣೆ ದೃಷ್ಟಿಯಿಂದ ಎಂಒ’ಸ್ ಕೆಫಿರ್ ಬ್ಯಾಕ್ಟೀರಿಯಾ ಅಂಶಗಳ ಸಂಯೋಗವಾಗಿದ್ದು, ಇದು ಸಾಮಾನ್ಯವಾಗಿ ಕಂಡುಬರುವ ಎಲ್ಲ ರೋಗಗಳಲ್ಲಿ ಕೂಡಾ ಧನಾತ್ಮಕ ಆರೋಗ್ಯ ಪರಿಣಾಮವನ್ನು ಬೀರುತ್ತದೆ ಎನ್ನುವುದು ಅವರ ಹೇಳಿಕೆ.

ಪ್ರೊಬಯಾಟಿಕ್ ಸಂಶೋಧನೆ
ಪ್ರೊಬಯಾಟಿಕ್ ಉತ್ಪನ್ನಗಳ ಪ್ರವಾಹ ಮಾರುಕಟ್ಟೆಗೆ ಹರಿಯುತ್ತಿರುವಂತೆಯೇ, ಸಾಕಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳೂ ನಡೆಯುತ್ತಿವೆ. ‘‘ಸಾಮಾನ್ಯ ಶೀತ, ಅಲರ್ಜಿಯಂಥ ಸಮಸ್ಯೆಗಳ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತದೆ. ಜಠರ ಮತ್ತು ಮೆದುಳಿನ ನಡುವೆ ಸಂಪರ್ಕ ಇರುವುದರಿಂದ ಉದ್ವಿಗ್ನತೆ ಮತ್ತು ಖಿನ್ನತೆ ಸಮಸ್ಯೆಗೂ ಇದು ಪರಿಣಾಮಕಾರಿ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.’’ ಎಂದು ನೀರಜಾ ಹಜೇಲಾ ಹೇಳುತ್ತಾರೆ.
‘‘ಆದಾಗ್ಯೂ ಇವುಗಳ ಲಾಭಗಳು ಆಯಾ ವಂಶಕ್ಕೆ ನಿರ್ದಿಷ್ಟವಾಗಿರುತ್ತವೆ ಹಾಗೂ ಇದನ್ನು ಸಾಮಾನ್ಯಗೊಳಿಸಲಾಗದು. ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷತೆ ಹಾಗೂ ಆರೋಗ್ಯ ಪ್ರಯೋಜನಗಳ ದೃಷ್ಟಿಯಿಂದ ವೈಜ್ಞಾನಿಕ ಮಾಹಿತಿಗಳ ಆಧಾರದಲ್ಲಿ ಇವುಗಳ ಆರೋಗ್ಯಕರ ಪ್ರಮಾಣವನ್ನು ಸೇವಿಸುವುದು ಅಗತ್ಯ’’ ಎನ್ನುವುದು ಹಜೇಲಾ ಅವರ ಅಭಿಮತ.
ಪ್ರೊಬಯಾಟಿಕ್ ಪೇಯಗಳನ್ನು ಖರೀದಿಸುವಾಗ ಯಾವ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಪ್ರಶ್ನೆಗೆ, ‘‘ಆ ಉತ್ಪನ್ನದ ಲೇಬಲ್ ಅಧ್ಯಯನ ಪ್ರಮುಖ ಅಂಶ. ಏಕೆಂದರೆ ಇದು ಸಂಪೂರ್ಣ ಹೆಸರನ್ನು (ಜೀನ್ಸ್, ಪ್ರಭೇದ ಹಾಗೂ ತಳಿ), ಜೀವಂತ ಬ್ಯಾಕ್ಟೀರಿಯಾ ಸಂಖ್ಯೆ, ಶೆಲ್ಫ್ ಅವಧಿಯ ಗಡುವು ಮತ್ತು ವೈಜ್ಞಾನಿಕವಾಗಿ ದೃಢಪಟ್ಟ ಆರೋಗ್ಯ ಪ್ರಯೋಜನಗಳನ್ನು ವಿವರಿಸುತ್ತದೆ ಎಂದು ಉತ್ತರಿಸುತ್ತಾರೆ.
ಅವರ ಪ್ರಕಾರ, ಭಾರತದಲ್ಲಿ ಲಭ್ಯವಿರುವ ಬಹುತೇಕ ಪ್ರೊಬಯಾಟಿಕ್ ಆಹಾರಗಳು ಹೈನು ಉತ್ಪನ್ನಗಳಿಂದ ಮಾಡಲ್ಪಟ್ಟಿದ್ದು, ದಾಸ್ತಾನು ಸ್ಥಿತಿ ಕೂಡಾ ಮಹತ್ವದ್ದಾಗುತ್ತದೆ. ಇವು ಬ್ಯಾಕ್ಟೀರಿಯಾಗಳ ಇರುವಿಕೆಯನ್ನು ಖಾತ್ರಿಪಡಿಸುವ ಸಲುವಾಗಿ ಶೀತಲೀಕರಣ ವ್ಯವಸ್ಥೆಯಡಿ ದಾಸ್ತಾನು ಮಾಡಲ್ಪಟ್ಟಿರುತ್ತವೆ.
ಬದಲಾಗುತ್ತಿರುವ ಆಹಾರ ಹವ್ಯಾಸಗಳ ಬಗ್ಗೆ ಮೋನಿಕಾ ಒಬೆರಾಯ್ ಹೇಳುವಂತೆ, ‘‘ಜಠರ ಸ್ನೇಹಿ ಆಹಾರಗಳು ಇಂದಿನ ಒಲವು ಎನ್ನುವುದಕ್ಕಿಂತ ಹೆಚ್ಚಾಗಿ ತುರ್ತು ಅಗತ್ಯ. ಭಾರತದಲ್ಲಿ ಗರಿಷ್ಠ ಪ್ರಮಾಣದ ಟೈಪ್-2 ಮಧುಮೇಹ, ರಕ್ತದ ಅಧಿಕ ಒತ್ತಡ, ಕ್ಯಾನ್ಸರ್, ಹೃದ್ರೋಗದಂಥ ಜೀವನಶೈಲಿ ರೋಗಗಳು ಇರುವ ಹಿನ್ನೆಲೆಯಲ್ಲಿ, ಬದಲಾಗುತ್ತಿರುವ ಆಹಾರ ಹವ್ಯಾಸಕ್ಕೆ ಪೂರಕವಾದ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಸಾವಯವ ಹಾಗೂ ಆರೋಗ್ಯಕರ ಉತ್ಪನ್ನಗಳ ಮಾರಾಟ ಕಳೆದ ಐದು ವರ್ಷಗಳಿಂದ ಹೆಚ್ಚುತ್ತಿದೆ.’’
‘‘ಇದು ಜಠರದ ಆರೋಗ್ಯದ ಬಗ್ಗೆ ಸೂಕ್ತವಾದ ತಿಳುವಳಿಕೆಯನ್ನು ವಿವರಿಸುವ ವಿಶ್ವಾಸಾರ್ಹ ಸಂವಹನ ಹೆಚ್ಚಿದಷ್ಟೂ ಈ ಮಾರುಕಟ್ಟೆ ಮತ್ತಷ್ಟು ವಿಸ್ತೃತಗೊಳ್ಳುತ್ತದೆ’’ ಎನ್ನುವುದು ಅವರ ಅಭಿಮತ. ಈ ಆಹಾರಗಳು ರುಚಿಯಾಗಿದ್ದಷ್ಟೂ, ಆರ್ಥಿಕವಾಗಿ ಕೂಡಾ ಕೈಗೆಟಕುವಂತೆ ಮಾಡುವುದು ಅಗತ್ಯ ಎನ್ನುವುದು ಅವರ ಪ್ರತಿಪಾದನೆ.

ಇನ್ನೊಂದು ಮುಖ
ಈ ಕಂಪೆನಿಗಳು ಆರೋಗ್ಯಕರ ಪೇಯ ಮತ್ತು ಖಾದ್ಯಗಳ ಸರಣಿಯನ್ನೇ ಬಿಡುಗಡೆ ಮಾಡಿ, ಇವು ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿಡುವಲ್ಲಿ ಸಹಕಾರಿ ಎಂದು ಪ್ರತಿಪಾದನೆ ಮಾಡುತ್ತಿದ್ದರೂ ಇದಕ್ಕೆ ಇನ್ನೊಂದು ಮುಖವೂ ಇದೆ. ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್’ ಹೇಳುವಂತೆ ‘‘ಪ್ರೊಬಯಾಟಿಕ್ ಯೊಗರ್ಟ್‌ನಂಥ ಆರೋಗ್ಯಕರ ಪೇಯ ಮತ್ತು ಖಾದ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಳ್ಳೆಯ ಬ್ಯಾಕ್ಟೀರಿಯಾಗಳು ತೀವ್ರತರ ಮೇದೋಜೀರಕ ಗ್ರಂಥಿ ಸಮಸ್ಯೆ ಇರುವ ರೋಗಿಗಳ ಪಾಲಿಗೆ ಮಾರಕವಾಗಬಹುದು.’’
ಈ ವರದಿ ಬಗ್ಗೆ ನೀರಜಾ ಅವರ ಅಭಿಪ್ರಾಯ ಕೇಳಿದಾಗ, ‘‘ಈ ಅಧ್ಯಯನದ ಬಗ್ಗೆ ನಾನು ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಏಕೆಂದರೆ ಇದು ನಮ್ಮ ಅಧ್ಯಯನವಲ್ಲ. ಆದಾಗ್ಯೂ ಪ್ರತಿರೋಧ ಶಕ್ತಿ ಕಡಿಮೆ ಇರುವ ರೋಗಿಗಳು ಇದನ್ನು ಹೆಚ್ಚು ಎಚ್ಚರಿಕೆಯಿಂದ ಬಳಸುವುದು ಸೂಕ್ತ’’ ಎಂದು ಹೇಳುತ್ತಾರೆ.
ಆರೋಗ್ಯಕರ ಪೇಯ ಮತ್ತು ಖಾದ್ಯಗಳ ಒಲವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದೀಗ ಪೂರಕ ಆಹಾರಗಳು, ಪೌಷ್ಟಿಕಾಂಶಗಳು, ವಿಶೇಷ ಆರೋಗ್ಯಕ್ರಮದ ಆಹಾರ ಮತ್ತು ವಿಶೇಷ ವೈದ್ಯಕೀಯ ಉದ್ದೇಶದ ಆಹಾರಗಳಿಗೆ ಗುಣಮಟ್ಟಗಳನ್ನು ನಿಗದಿಪಡಿಸಿದೆ. ಅದರಲ್ಲೂ ಪ್ರಮುಖವಾಗಿ ಪ್ರೊಬಯಾಟಿಕ್, ಸಸ್ಯಾಂಶಗಳು ಮತ್ತು ಪ್ರಿಬಯಾಟಿಕ್ಸ್ ವಿನೂತನ ಆಹಾರಗಳಿಗೆ ಪ್ರತ್ಯೇಕ ಗುಣಮಟ್ಟ ನಿಗದಿಪಡಿಸಿದೆ.

ತಜ್ಞರ ಅಭಿಮತ
ಅಲ್ ಅರೇಬಿಯಾ ಇಂಗ್ಲಿಷ್‌ನ ಪ್ರಶ್ನೆಗೆ ಉತ್ತರಿಸಿದ ಮಂಗಳೂರು ಕೆಎಂಸಿ ಆಸ್ಪತ್ರೆಯ ಜೀರ್ಣಾಂಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಬಿ.ತಂತ್ರಿ, ‘‘ಅಪೇಕ್ಷಿತ ಪರಿಣಾಮವನ್ನು ಪಡೆಯಲು ದೃಢಪಡಿಸಿದ ಫಲಿತಾಂಶಕ್ಕೆ ಕಾರಣವಾಗುವ ಸೂಕ್ಷ್ಮಾಣುಜೀವಿಗಳಿರುವ ಪ್ರೊಬಯಾಟಿಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಲ್ಯಾಕ್ಟೊಬ್ಯಾಸಿಲಸ್, ಹಾಲಿನಲ್ಲಿರುವ ಸಕ್ಕರೆಯ ಅಂಶವಾದ ಲ್ಯಾಕ್ಟೋಸ್ ಜೀರ್ಣ ಮಾಡಿಕೊಳ್ಳಲಾಗದವರಿಗೆ ಪ್ರಯೋಜನಕಾರಿಯಾಗಬಹುದು. ಅಂತೆಯೇ ಐಬಿಎಸ್ ಹಾಗೂ ಅತಿಸಾರದ ಸಚರೋಮೈಸಿಸ್‌ಗೆ ಬಿಫಿಡೊಬ್ಯಾಕ್ಟೀರಿಯಮ್ ಸಹಕಾರಿಯಾಗಬಹುದು.
ಯಾವುದೇ ಪ್ರೊಬಯಾಟಿಕ್ ಖರೀದಿಸುವಾಗ ಗಡುವಿನ ದಿನಾಂಕವನ್ನು ಪರಿಶೀಲಿಸುವುದು ಮುಖ್ಯ. ಬ್ಯಾಕ್ಟೀರಿಯಾ ಕಾರ್ಯಸಾಧು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಶೆಲ್ಫ್‌ಲೈಫ್ ಕೊನೆಗೆ ಎಷ್ಟು ಬ್ಯಾಕ್ಟೀರಿಯಾಗಳು ಜೀವಂತ ಇರುತ್ತವೆ ಎನ್ನುವುದನ್ನು ಉತ್ಪಾದಕರು ನಿರ್ದಿಷ್ಟಪಡಿಸಬೇಕು’’ ಎಂದು ಡಾ.ತಂತ್ರಿ ಸ್ಪಷ್ಟಪಡಿಸುತ್ತಾರೆ. ಅಂತೆಯೇ ಪ್ಯಾಕಿಂಗ್‌ನಲ್ಲಿ ಯಾವುದೇ ಸೋರಿಕೆ ಅಥವಾ ಉಬ್ಬುವಿಕೆ ಇಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಕೆಲವರು ಪ್ರೊಬಯಾಟಿಕ್ಸ್ ಬಳಸುವಾಗ ಆರಂಭದಲ್ಲಿ ಅತಿಸಾರ ಹಾಗೂ ಉಬ್ಬುವಿಕೆಗೆ ಒಳಗಾಗಬಹುದು ಎಂದೂ ಅವರು ಎಚ್ಚರಿಸುತ್ತಾರೆ.
ಜಠರಸಂಬಂಧಿ ಸಮಸ್ಯೆಗಳಿರುವ ರೋಗಿಗಳಿಗೆ ಪ್ರೊಬಯಾಟಿಕ್ಸ್‌ಗಳು ಎಷ್ಟು ಪರಿಣಾಮಕಾರಿ ಎಂದು ಕೇಳಿದಾಗ, ‘‘ಜಿಐ ವ್ಯತ್ಯಯದಂಥ ಕಾರ್ಯನಿರ್ವಹಣೆ ಸಂಬಂಧಿ ಸಮಸ್ಯೆಗಳಿಗೆ ಪ್ರೊಬಯಾಟಿಕ್‌ಗಳು ಪ್ರಯೋಜನಕಾರಿ. ಜತೆಗೆ ಜಠರ ಸಂಬಂಧಿ ಹೊಟ್ಟೆನೋವು, ವಾಕರಿಕೆ, ಹೊಟ್ಟೆಹುಣ್ಣು ಮತ್ತು ಆ್ಯಂಟಿಬಯಾಟಿಕ್ ಸಂಬಂಧಿತ ಅತಿಸಾರದಂಥ ಪ್ರಕರಣಗಳಲ್ಲಿ ಇದು ಪ್ರಯೋಜನಕಾರಿ’’ ಎಂದು ಡಾ.ತಂತ್ರಿ ಸ್ಪಷ್ಟಪಡಿಸುತ್ತಾರೆ.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರೊಬಯಾಟಿಕ್‌ಗಳು ಚಿಕಿತ್ಸಕ ಉದ್ದೇಶಗಳಿಗೆ ಇರುವಂಥವು. ಆದ್ದರಿಂದ ಎಫ್‌ಡಿಎ ನಿಯಂತ್ರಿತ ಉತ್ಪನ್ನಗಳನ್ನು ಖರೀದಿಸುವುದು ಉತ್ತಮ. ‘‘ಪ್ರೊಬಯಾಟಿಕ್‌ಗಳು ಚಿಕಿತ್ಸೆಗೆ ಪರ್ಯಾಯವಲ್ಲ. ಪ್ರೊಬಯಾಟಿಕ್‌ಗಳು ಸಾಮಾನ್ಯ ವ್ಯಕ್ತಿಯ ಪ್ರತಿರೋಧ ಶಕ್ತಿಯನ್ನು ಉತ್ತೇಜಿಸಿದರೂ, ಪ್ರತಿರೋಧಶಕ್ತಿ ಕುಂಠಿತಗೊಂಡ ರೋಗಿಗಳ ಪಾಲಿಗೆ ಇದು ಸೋಂಕಿನ ಮೂಲವಾಗಬಹುದು’’ ಎಂದು ತಂತ್ರಿ ಎಚ್ಚರಿಸುತ್ತಾರೆ.
ಕೃಪೆ: english.alarabiya.net

Writer - ಆಫ್ತಾಬ್ ಹುಸೈನ್ ಕೋಲಾ

contributor

Editor - ಆಫ್ತಾಬ್ ಹುಸೈನ್ ಕೋಲಾ

contributor

Similar News

ಜಗದಗಲ
ಜಗ ದಗಲ