ಪ್ರಾಮಾಣಿಕತೆಯನ್ನು ಧ್ವನಿಸುವ ಆತ್ಮಕಥನ

Update: 2018-07-20 10:39 GMT

ಇತ್ತೀಚೆಗೆ ನಿಧನರಾದ ನಾಡಿನ ಹಿರಿಯ ಸಜ್ಜನ ರಾಜಕಾರಣಿ ಬಿ. ಎ. ಮೊಹಿದೀನ್ರ ಆತ್ಮಕಥನ ‘ನನ್ನೊಳಗಿನ ನಾನು’ ಇಂದು ಮಂಗಳೂರಿನ ಬಿಡುಗಡೆಯಾಗಲಿದೆ. ಈ ಪುಸ್ತಕಕ್ಕೆ ಲೇಖಕ ಉಮರ್ ಟೀಕೆಯವರು ಬರೆದ ಮುನ್ನುಡಿಯ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ.

ಲೇಖಕರೂ ಗೆಳೆಯರೂ ಆದ ಮುಹಮ್ಮದ್ ಕುಳಾಯಿ ಮತ್ತು ಬಿ.ಎ. ಮುಹಮ್ಮದ್ ಅಲಿಯವರು ‘ನನ್ನೊಳಗಿನ ನಾನು’ ಕಥನವನ್ನು ಸುಂದರ, ಸುಲಲಿತ ಆಡುಮಾತಲ್ಲಿ ನಿರೂಪಿಸಿದ್ದಾರೆ. ನಮಗೆಲ್ಲಾ ಚಿರಪರಿಚಿತವಾದಂತಹ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಾಜಕೀಯದ ಸಮಕಾಲೀನ ವಿದ್ಯಮಾನಗಳ, ಆಗುಹೋಗುಗಳ ಸೂಕ್ಷ್ಮದರ್ಶನ ಮಾಡಿಸುತ್ತಾ, ಸಮಾಜದಲ್ಲಿ ಹಂತ ಹಂತವಾಗಿ ಮತ್ತೆ ಕೆಲವೊಮ್ಮೆ ತೀರಾ ಕ್ಷಿಪ್ರ ಎನ್ನುವ ರೀತಿಯಲ್ಲಿ ಆದ ಬದಲಾವಣೆಗಳ ಮೌಲ್ಯಮಾಪನ ಮಾಡುತ್ತಾ, ಅಲ್ಲೊಮ್ಮೆ ಇಲ್ಲೊಮ್ಮೆ ಸಮಾಜದ ಅನಿಷ್ಟಗಳ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾ, ಹಾಗೇ ಅವುಗಳೊಂದಿಗೆ ಮೊಹಿದೀನ್‌ರವರ ಜೀವನದ ಮೈಲಿಗಲ್ಲುಗಳನ್ನು, ತಿರುವುಗಳನ್ನು, ಏಳುಬೀಳುಗಳನ್ನು ಬೆಸೆಯುತ್ತಾ, ಹೊಂದಿಸಿಕೊಳ್ಳುತ್ತಾ ಹೋಗುವಂತಹ ನಿರೂಪಕರ ಶೈಲಿಯಿಂದಾಗಿ, ಈ ಪುಸ್ತಕವನ್ನು ಒಂದೇ ಏಟಿಗೆ ಓದಿ ಮುಗಿಸಲು ಸಾಧ್ಯವಾಗುತ್ತದೆ. ಇವರ ಕುಟುಂಬದ ಜೊತೆ ಇವರಿಗಿರುವ ಒಲುಮೆ, ತಂದೆ-ತಾಯಿಯವರ ಜೊತೆಗಿದ್ದ ಆದರಪೂರ್ವಕ ಬಾಂಧವ್ಯ, ಓರಗೆಯವರ, ಗೆಳೆಯರ ಜೊತೆಗಿದ್ದ ಸ್ನೇಹಸೇತು, ಸಾರ್ವಜನಿಕ ರಂಗದ ಕಾರ್ಯಕರ್ತರ ಜೊತೆಗಿದ್ದ ಆತ್ಮೀಯತೆ, ಇಂದಿರಾ ಗಾಂಧಿ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಸಿದ್ದರಾಮಯ್ಯ ಮುಂತಾದ ಘಟಾನುಘಟಿ ನಾಯಕರೊಂದಿಗೆ ಇವರಿಗಿದ್ದ ಸಾಮೀಪ್ಯ, ಎಲ್ಲರಿಗಿಂತ ಮಿಗಿಲಾಗಿ, ತನ್ನ ಜೀವನದಲ್ಲಿ ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸಿ ನಡೆದ ಪ್ರಾಂಜಲ ಮನಸ್ಸಿನ, ನಿಷ್ಕಳಂಕ ವಿಚಾರಧಾರೆಯ ತನ್ನ ಬಾಳಸಂಗಾತಿಯ ಜೊತೆಗಿದ್ದ ಅಭಿಮಾನಪೂರ್ವಕ ಪ್ರೀತಿ-ಇವೆಲ್ಲವನ್ನೂ ಎಲ್ಲೂ ಅತಿಯಾಗದಂತೆ ಮೊಹಿದೀನ್‌ರವರ ಮಾತಿನಲ್ಲೇ ಚಿತ್ರಿಸುತ್ತಾ ಹೋಗುವ ನಿರೂಪಕರ ಸಾಮರ್ಥ್ಯದಿಂದಾಗಿ, ಪುಟದಿಂದ ಪುಟಕ್ಕೆ ಈ ಕಥನ ಇನ್ನಷ್ಟು ಇಷ್ಟವಾಗುತ್ತಾ ಹೋಗುತ್ತದೆ.
ಮೊಹಿದೀನ್‌ರವರು ಅತಿಯಾಗಿ ಗುರುತಿಸಲ್ಪಡುವ ದಕ್ಷಿಣ ಕನ್ನಡದ ಬ್ಯಾರಿ ಸಮುದಾಯದ ಶೈಕ್ಷಣಿಕ ಕ್ರಾಂತಿ ಇಂದು ಜಿಲ್ಲೆಯಲ್ಲೆಲ್ಲಾ ಜನಜನಿತ. ತೀರಾ ಹಿಂದುಳಿದ ಒಂದು ಸಮುದಾಯವನ್ನು ಶಿಕ್ಷಣದ ಮೂಲಕ ಸಾಮೂಹಿಕ ಅಭಿವೃದ್ಧಿಯೆಡೆಗೆ ಕೊಂಡೊಯ್ಯುವುದರ ಜೊತೆ ಜೊತೆಗೆ ಸಾಮಾಜಿಕ ಸಾಮರಸ್ಯಕ್ಕಾಗಿ, ಸೌಹಾರ್ದದ ಬೀಜವನ್ನು ಸಾರ್ವತ್ರಿಕ, ಜಾತ್ಯತೀತ ಶಿಕ್ಷಣ ವ್ಯವಸ್ಥೆಯ ಮೂಲಕ ಸಮಾಜದಲ್ಲಿ ಬಿತ್ತುವ ಇವರ ಪ್ರಯತ್ನ ಅನುಕರಣೀಯ. ಆದರೂ ಇವರು ಒಂದು ಕಡೆ, ‘‘ಇದೆಲ್ಲವನ್ನೂ ನಾನೊಬ್ಬನೇ ಮಾಡಿದ್ದು ಎಂದು ನಾನು ಹೇಳುವುದಿಲ್ಲ. ಇಂತಹ ಒಂದು ವಾತಾವರಣ ಸೃಷ್ಟಿಸುವಲ್ಲಿ, ಭೂಮಿಕೆಯನ್ನು ನಿರ್ಮಿಸುವಲ್ಲಿ ನನ್ನದೂ ಒಂದು ಅಳಿಲ ಸೇವೆ ಇದೆ ಎಂದು ಮಾತ್ರ ಹೇಳಬಲ್ಲೆ’’ ಅನ್ನುವ ಮಾತು ಇವರ ಪ್ರಾಮಾಣಿಕತೆಗೆ, ನಿಸ್ವಾರ್ಥ ಮನೋಭಾವಕ್ಕೆ ಹಿಡಿದ ಕನ್ನಡಿ.
ಸಮಾಜಸೇವಕರಾಗಿ, ಶಾಸಕರಾಗಿ, ಮಂತ್ರಿಯಾಗಿ, ಉಸ್ತುವಾರಿ ಸಚಿವರಾಗಿ ಇವರು ಮಾಡಿದ ಸಾಧನೆಗಳ ಬಗ್ಗೆ ಬರೆಯುತ್ತಾ ‘‘ನಾನು ಮಾಡಿದ ಅನೇಕ ಕೆಲಸಗಳನ್ನು ನಾನೇ ಮರೆತುಬಿಟ್ಟಿದ್ದೇನೆ’’ ಅಂತ ಇವರು ಹೇಳುವುದು, ಈ ಸಾಧನೆಗಳ ಪಟ್ಟಿಯನ್ನು ನೋಡಿದಾಗ ಅಕ್ಷರಶಃ ನಿಜ ಅಂತ ಅನಿಸುತ್ತದೆ. ಯಾಕೆಂದರೆ, ಸಾಮಾನ್ಯವಾಗಿ ನಮ್ಮ, ನಿಮ್ಮ ಗಮನದಲ್ಲಿರುವ ಅನೇಕ ಘನ ಕಾರ್ಯಗಳು ಇಲ್ಲಿ ಉಲ್ಲೇಖಿಸಲ್ಪಡುವುದೇ ಇಲ್ಲ. ಹಾಗೆಯೇ ಇವರ ಈ ಸಾಧನೆಗಳಿಗೆ ಪ್ರತಿಫಲವಾಗಿ ದೊರೆತ ಪುರಸ್ಕಾರ, ಸನ್ಮಾನಗಳ ಬಗ್ಗೆಯೂ ಇವರು ಉಲ್ಲೇಖಿಸಲು ಸಂಪೂರ್ಣ ಮರೆತಿದ್ದಾರೆ. ಇವುಗಳಲ್ಲಿ ಅತೀ ಮಹತ್ವದ್ದಾದ ದಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಇವರಿಗೆ ದೊರೆತ ಅತ್ಯಂತ ಪ್ರತಿಷ್ಠಿತ ‘ದೇವರಾಜ ಅರಸು ಪ್ರಶಸ್ತಿ’ ಹಾಗೂ ಅದರ ಹಿಂದಿನಿಂದಲೇ ನಡೆದ ಸರಣಿ-ಸರಣಿ ಸನ್ಮಾನಗಳ ಬಗ್ಗೆಯೂ ಇವರು ಆತ್ಮಕಥನದಲ್ಲೆಲ್ಲೂ ಚಕಾರವನ್ನೂ ಎತ್ತಿಲ್ಲ. ‘‘ಯಾರನ್ನೋ ಖುಷಿಪಡಿಸಲು ಅಥವಾ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳಲು ರಾಜಕೀಯ ಮಾಡಿದವನೇ ಅಲ್ಲ... ಎಲ್ಲಿಯೂ ಪ್ರಚಾರವನ್ನು ಬಯಸಲೇ ಇಲ್ಲ’’ ಅಂಥ ಆತ್ಮಕಥನದೊಂದೆಡೆ ಇವರು ಹೇಳುವ ಮಾತನ್ನು ಇದು ಸಂಪೂರ್ಣ ಪುಷ್ಟೀಕರಿಸುವಂತಿದೆ.
ಮೊಹಿದೀನ್‌ರವರದು ಯಾವಾಗಲೂ ದಿಟ್ಟ, ನೇರ ನಡೆ-ನುಡಿ. ‘‘ನನ್ನ ರಾಜಕೀಯ ದುರಂತಗಳಿಗೆ ಕಾರಣೀಭೂತರು ಇವರುಗಳು’’ ಎಂದು ನಂಬಿರುವ ನಾಯಕರ ಬಗ್ಗೆ ಹೇಳುವಾಗ ಇವರ ಮಾತಲ್ಲಿ ದ್ವೇಷದ ಸುಳಿವಿಲ್ಲ; ಅದೊಂದು ನೇರ, ವಸ್ತುನಿಷ್ಠ ವಿವರಣೆ. ಹಾಗೆಯೇ ಸುರತ್ಕಲ್ ಗಲಭೆಯ ಕಹಿನೆನಪಿನ ಬಗ್ಗೆ ಹೇಳುವಾಗ, ಅನ್ಯ ಸಮುದಾಯದ ಕೆಲವು ವ್ಯಕ್ತಿಗಳ ಕೋಮುವಾದದ ಬಗ್ಗೆ ತಾನು ಪರಿಶೀಲಿಸಿ ತಿಳಿದಿದ್ದನ್ನು, ನಂಬಿದ್ದನ್ನು ನೇರವಾಗಿ ಹೇಳಿದರೆ, ಜೀವನಪರ್ಯಂತ ತಾನು ಸಾಧಿಸಿ, ಗಳಿಸಿದಂತಹ ‘ಜಾತ್ಯತೀತ’ ಎಂಬ ಹಣೆಪಟ್ಟಿಗೆ ಏನಾದರೂ ಕಳಂಕ ಬರಬಹುದೇ ಎನ್ನುವ ಅಂಜಿಕೆ ಇಲ್ಲ; ಏನಿದ್ದರೂ ಮುಚ್ಚುಮರೆ ಇಲ್ಲದ, ಓಲೈಕೆ ಇಲ್ಲದ ದಿಟ್ಟ ವಿಶ್ಲೇಷಣೆ. ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವಂತಹ ಅನಿಷ್ಟ ಪದ್ಧತಿಗಳ ಬಗ್ಗೆ, ಇಂದಿನ ಮುಸ್ಲಿಂ ರಾಷ್ಟ್ರಗಳ ದೊರೆಗಳ ಆಷಾಢಭೂತಿತನಗಳ ಬಗ್ಗೆ ಹೇಳುವಾಗಲೂ ಅದೇ ವಿಮರ್ಶಾತ್ಮಕ, ನಿಷ್ಪಕ್ಷಪಾತ ನಿಲುವು. ಕಥನದ ಕಟ್ಟಕಡೆಗೆ, ಇದುವರೆಗೆ ತನ್ನ ಪ್ರಾಣಸ್ನೇಹಿತರಲ್ಲೂ ಹಂಚಿಕೊಳ್ಳದ, ತನ್ನ ಜೀವನದಲ್ಲಿ ನಡೆದ ಒಂದು ಕಹಿಸತ್ಯದ ‘ರಹಸ್ಯ’ವನ್ನು ಓದುಗರೊಂದಿಗೆ ಹಂಚುವಾಗಲೂ ಅದೇ ನಿಸ್ಸಂಕೋಚ ಪ್ರಾಮಾಣಿಕತೆ.
ಆತ್ಮಕಥನದ ಪ್ರಾರಂಭದ ಪುಟದಲ್ಲಿ ಮೊಹಿದೀನ್‌ರವರು ಹೇಳುವ ಮಾತು - ‘‘ನಾನು ಇನ್ನಷ್ಟು ಮಾಡಬಹುದಿತ್ತು. ಮಾಡಿದ್ದು ತುಂಬಾ ಕಡಿಮೆಯಾಯಿತು ಎಂಬ ಕೊರಗು ಒಳಗೊಳಗೇ ಇರಿಯುತ್ತಿದೆ.’’ ಆದರೆ ಕಟ್ಟಕಡೆಯ ಪುಟದಲ್ಲಿ ಹೇಳುತ್ತಾರೆ - ‘‘ಈ ಜಗತ್ತಿನಲ್ಲಿ ಒಂದು ಸುಂದರವಾದ ತುಂಬು ಬದುಕನ್ನು ಬಾಳಿದೆ ಎಂಬ ತೃಪ್ತಿ ನನಗಿದೆ’’ ಎಂದು. ಇದೊಂದು ರೀತಿಯಲ್ಲಿ ದ್ವಂದ್ವದಂತೆ ಕಂಡರೂ, ಇದರ ಹಿಂದಿರುವಂತಹ ವೈಚಾರಿಕತೆ ಮೊಹಿದೀನ್‌ರವರ ಸಂಪೂರ್ಣ ಬದುಕಿನ, ಅವರ ವಿಚಾರಧಾರೆಯ ಸಾರಾಂಶ ಅಂಥ ಹೇಳಬಹುದು. ಇಂಗ್ಲಿಷ್‌ನಲ್ಲಿ ಬಹಳ ಅರ್ಥಗರ್ಭಿತ ವಾದಂತಹ ಒಂದು ಪದಗುಚ್ಛವಿದೆ - ‘Contended Dissatisfaction’ ಇದರ ಅರ್ಥ ‘‘ತೃಪ್ತಿದಾಯಕ ಅಸಮಾಧಾನ’’ ಅಂತ. ತೃಪ್ತಿ ಮತ್ತು ಅಸಮಾಧಾನ ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಪದಗಳಾದರೂ ಈ ಮಾತಿನ ಅರ್ಥವೇನೆಂದರೆ - ‘‘ಮಾಡಿದ ಪ್ರಯತ್ನಗಳ ಬಗ್ಗೆ ಅಸಮಾಧಾನವಿದೆ. ಇನ್ನೂ ಮಾಡಬಹುದಾಗಿತ್ತು, ಇನ್ನೂ ಮಾಡಬೇಕಾದದ್ದು ಬಹಳ ಇದೆ ಎನ್ನುವ ತುಡಿತ ಒಂದೆಡೆಯಾದರೆ, ಫಲಿಸಿದ ಫಲಿತಾಂಶಗಳ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ, ಕೊರಗಿಲ್ಲ ಎನ್ನುವ ಆತ್ಮಸಂತೃಪ್ತಿ ಇನ್ನೊಂದೆಡೆ.’’ ಇದುವೇ ಮೊಹಿದೀನ್‌ರವರ ಜೀವನದ ಸಾರಾಂಶ. ಇದುವೇ ಇವರ ಜೀವನದ ಸಂದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ