ಪಾಣೆಮಂಗಳೂರು: ಶಿಥಿಲ ಸೇತುವೆಯಲ್ಲಿ ಲಘು ವಾಹನಗಳ ಸಂಚಾರ!

Update: 2018-07-20 09:14 GMT

ಬಂಟ್ವಾಳ, ಜು.19: ಪಾಣೆಮಂಗಳೂರಿನ ನೇತ್ರಾವತಿ ನದಿಯ ಹಳೆಯ ಉಕ್ಕಿನ ಸೇತುವೆ ಶಿಥಿಲ ಸೇತುವೆ ಎಂದು ಘೋಷಿಸಲ್ಪಟ್ಟಿದ್ದರೂ ಇಂದಿಗೂ ಈ ಸೇತುವೆಯು ಬಿ.ಸಿ.ರೋಡ್- ಪಾಣೆಮಂಗಳೂರು ಪೇಟೆಗಳ ಮಧ್ಯೆ ಸಂಚಾರಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಘನ ವಾಹನ ಸಂಚಾರ ನಿಷೇಧದ ಬಳಿಕ ಈ ಸೇತುವೆಯಲ್ಲಿ ಲಘು ವಾಹನಗಳ ಸಂಚಾರವು ನಿರಂತರವಾಗಿದೆ. ಆದರೆ, ಇತ್ತೀಚೆಗೆ ಮುಲ್ಲರಪಟ್ನ ಫಲ್ಗುಣಿ ಸೇತುವೆಯು ಕುಸಿದು ಬಿದ್ದಿರುವ ಬಳಿಕ ಪಾಣೆಮಂಗಳೂರಿನ ಶಿಥಿಲ ಸೇತುವೆಯ ಬಗ್ಗೆ ಜನ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಈ ಸೇತುವೆಯ ಅಡಿಭಾಗದ ಪಿಲ್ಲರ್‌ಗಳಿಗೆ ಆಧಾರವಾಗಿ ನೀಡಲಾಗಿರುವ ಕಬ್ಬಿಣದ ರಾಡ್‌ಗಳ ಸಹಿತ ಅಡಿ ಭಾಗದ ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿದು ಕುಸಿತದ ಭೀತಿಯನ್ನು ಎದುರಿಸುತ್ತಿವೆ.

ಶಿಥಿಲ ಸೇತುವೆ ಎಂದು ಘೋಷಣೆ

ಈ ಸೇತುವೆಯ ಒಂದು ಪಾರ್ಶ್ವದಲ್ಲಿ ಸಣ್ಣ ಬಿರುಕು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೇತುವೆ ಶಿಥಿಲತೆಯ ಬಗ್ಗೆ ಕೇಂದ್ರ ಸರಕಾರಕ್ಕೆ ವರದಿ ರವಾನಿಸಿದ ನಂತರ ಕೇಂದ್ರ ಸರಕಾರವು ಈ ಸೇತುವೆಯನ್ನು ಶಿಥಿಲ ಸೇತುವೆ ಎಂದು ಕೆಲ ವರ್ಷಗಳ ಹಿಂದೆ ಘೋಷಣೆ ಮಾಡಿತ್ತು.

ಈ ಸೇತುವೆಯ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಪುರಸಭೆಗೆ ಕೇಂದ್ರ ಸರಕಾರ ವಹಿಸಿಕೊಟ್ಟಿದ್ದರೂ ಈವರೆಗೆ ಇಲ್ಲಿನ ಪುರಸಭೆ ಈ ಸೇತುವೆಯ ನಿರ್ವಹಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೇತುವೆ ಮೇಲೆ ಸಂಚರಿಸುವ ವಾಹನಗಳ ಹಾಗೂ ಜನಸಂಚಾರದ ಬಗ್ಗೆ ಯಾವುದೇ ಮುತುವರ್ಜಿ ವಹಿಸದಿರುವುದರಿಂದ ನಿವಾಸಿಗಳು ಆತಂಕಿತರಾಗಿದ್ದಾರೆ.

ಬ್ರಿಟಿಷರ ಕಾಲದ ಸೇತುವೆ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರಮುಖವಾಗಿ ಸಂಪರ್ಕಿಸುತ್ತಿದ್ದ ಪಾಣೆಮಂಗಳೂರು ಹಳೆ ಸೇತುವೆಗೆ ಇದೀಗ ಶತ ವರ್ಷಗಳೇ ಕಳೆದಿವೆ. 1914ರಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ ಎಂಬುದಕ್ಕೆ

ಸೇತುವೆಯ ಪಿಲ್ಲರ್ ಮೇಲೆ ಕೆತ್ತಲಾಗಿರುವ ಅಂದಿನ ಕಾಲದ ಬರಹವೊಂದೇ ಸಾಕ್ಷಿ.

ಪಾಣೆಮಂಗಳೂರು ಪೇಟೆ ಪ್ರವೇಶಿಸುವ ಸಾರಿಗೆ ವಾಹನಗಳು ಹಳೆ ಸೇತುವೆ ಮೂಲಕ ಸಂಚರಿಸುವಂತಾಗಲು ಸೇತುವೆಯ ಇಕ್ಕೆಲಗಳಲ್ಲಿ ಸಾರಿಗೆ ವಾಹನ ಹೊರತುಪಡಿಸಿ ಇತರ ಘನ ವಾಹನ ಸಂಚಾರ ನಿಷೇಧಿಸಿ ಎಂಬ ಜಿಲ್ಲಾಧಿಕಾರಿ, ಪುರಸಭೆ ಆದೇಶದಂತೆ ನಾಮಫಲಕಗಳನ್ನು ಬಿ.ಸಿ.ರೋಡ್ ಸರ್ಕಲ್ ಬಳಿ ಅಳವಡಿಸಲಾಗಿತ್ತು. ಇಲ್ಲಿನ ರಸ್ತೆ ಕಾಮಗಾರಿಯ ನಂತರ ಫಲಕಗಳು ನಾಪತ್ತೆಯಾಗಿವೆ.

-ಇಕ್ಬಾಲ್ ಗೂಡಿನಬಳಿ, ಪುರಸಭಾ ಸದಸ್ಯ

Writer - ಅಬ್ದುಲ್ ರಹ್ಮಾನ್ ತಲಪಾಡಿ

contributor

Editor - ಅಬ್ದುಲ್ ರಹ್ಮಾನ್ ತಲಪಾಡಿ

contributor

Similar News