'ನಾವು ಉಗ್ರರಿಗೆ ಟಿಪ್ಸ್ ನೀಡುವುದಿಲ್ಲ' ಎಂದ ಗ್ರಾಹಕನಿಗೆ ನಿಷೇಧ

Update: 2018-07-20 08:44 GMT

ಟೆಕ್ಸಾಸ್, ಜು.20: ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡಿದ ಗ್ರಾಹಕನೊಬ್ಬ ಅಲ್ಲಿನ ವೈಟರ್ ಗೆ ಟಿಪ್ಸ್ ನೀಡಲು ನಿರಾಕರಿಸಿದ್ದೇ ಅಲ್ಲದೆ ರಶೀದಿಯಲ್ಲಿ "ವಿ ಡೋಂಟ್ ಟಿಪ್ ಟೆರರಿಸ್ಟ್ಸ್" ( ನಾವು ಉಗ್ರರಿಗೆ ಟಿಪ್ಸ್ ನೀಡುವುದಿಲ್ಲ) ಎಂದು ಜನಾಂಗೀಯ ನಿಂದನೆ ಮಾಡುವಂತಹ ಪದಗಳನ್ನು ಬರೆದಿದ್ದಾನೆ. ಆ ರೆಸ್ಟೋರೆಂಟ್ ನಿರ್ದಿಷ್ಟ ಗ್ರಾಹಕನಿಗೆ ನಿಷೇಧ ಹೇರಿದೆ. 

ಇಪ್ಪತ್ತು ವರ್ಷದ ವೈಟರ್ ಖಲೀಲ್ ಕಾವಿಲ್ ಹೆಸರನ್ನು ಓದಿ ಆ ಗ್ರಾಹಕ ಆ ರೀತಿ ಬರೆದಿದ್ದಾನೆಂದು ತಿಳಿಯಲಾಗಿದೆ.  ಕಾವಿಲ್ ಆತನ ಮೂಲ ಹೆಸರಾಗಿದ್ದು ಆತ ಕ್ರೈಸ್ತ ಧರ್ಮಕ್ಕೆ ಸೇರಿದವನಾಗಿದ್ದರೂ ಆತನ ತಂದೆಯ ಅಚ್ಚುಮೆಚ್ಚಿನ ಗೆಳೆಯ ಖಲೀಲ್ ಎಂಬವರು ಅಪಘಾತವೊಂದರಲ್ಲಿ ಸಾವಿಗೀಡಾದ ನಂತರ ಅವರು ತಮ್ಮ ಪುತ್ರ ಕಾವಿಲ್ ಹೆಸರಿಗೆ ಖಲೀಲ್ ಜೋಡಿಸಿದ್ದರು.

"ಸಾಲ್ಟ್ ಗ್ರಾಸ್ ಸ್ಟೀಕ್ ಹೌಸ್ ಎಂಬ ಒಡೆಸ್ಸಾದಲ್ಲಿರುವ ರೆಸ್ಟೋರೆಂಟ್ ನಲ್ಲಿ ಎಂದಿನಂತೆ ಇತ್ತೀಚೆಗೆ ಕರ್ತವುದಲ್ಲಿದ್ದಾಗ ಆ ನಿರ್ದಿಷ್ಟ ಗ್ರಾಹಕ ರಶೀದಿಯಲ್ಲಿ ತನ್ನ ಹೆಸರಿನಲ್ಲಿರುವ ಖಲೀಲ್ ಪದಕ್ಕೆ ವೃತ್ತಾಕಾರದಲ್ಲಿ ಗುರುತು ಹಾಕಿ ನಂತರ ``ವಿ ಡೋಂಟ್ ಟಿಪ್ ಟೆರರಿಸ್ಟ್' ಎಂದು ಬರೆದಿದ್ದ. ಈ ಗ್ರಾಹಕನ ಬಿಲ್ 108 ಡಾಲರ್ ಆಗಿತ್ತು.

"ಆ ಕ್ಷಣ ಏನು  ಮಾಡಬೇಕು ಹೇಗೆ ಯೋಚಿಸಬೇಕು ಎಂದು ನನಗೆ ತಿಳಿಯದಾಗಿತ್ತು, ಈಗಲೂ ದ್ವೇಷ ಮತ್ತು ಜನಾಂಗೀಯ ನಿಂದನೆ ಅಸ್ತಿತ್ವದಲ್ಲಿದೆಯೆಂದು ಜನರು ಅರಿಯುವಂತಾಗಬೇಕೆಂದು ಇದನ್ನು ಶೇರ್ ಮಾಡುತ್ತಿದ್ದೇನೆ,'' ಎಂದು ಕಾವಿಲ್ ತನ್ನ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾನಲ್ಲದೆ ಆ ಗ್ರಾಹಕನ ಬಿಲ್ ನ ಪ್ರತಿಯನ್ನೂ ಪೋಸ್ಟ್ ಮಾಡಿದ್ದಾನೆ. ಖಲೀಲ್ ನ ಈ ಪೋಸ್ಟ್ ಅನ್ನು ಸಾವಿರಾರು  ಜನರು ಶೇರ್ ಮಾಡಿದ್ದಾರೆ.

ಘಟನೆಗೆ ಖೇದ ವ್ಯಕ್ತಪಡಿಸಿರುವ ಸಾಲ್ಟ್ ಗ್ರಾಸ್ ಸ್ಟೀಕ್ ಹೌಸ್ ಸಿಒಒ ಟೆರ್ರಿ ಟರ್ನಿ  ಹೇಳಿಕೆ ನೀಡಿ ``ನಾವು ನಮ್ಮ ಉದ್ಯೋಗಿಯ ಪರ ನಿಲ್ಲುತ್ತೇವೆ. ಯಾವುದೇ ರೀತಿಯ ಜನಾಂಗೀಯ ನಿಂದನೆ ಸ್ವೀಕಾರಾರ್ಹವಲ್ಲ ಆ ಗ್ರಾಹಕನಿಗೆ ನಮ್ಮ ರೆಸ್ಟೋರೆಂಟ್ ಪ್ರವೇಶಕ್ಕೆ ನಿಷೇಧ ಹೇರಿದ್ದೇವೆ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News