ಗೋ ಕಳ್ಳ ಸಾಗಾಟ ಶಂಕೆ: ಓರ್ವ ವ್ಯಕ್ತಿಯ ಥಳಿಸಿ ಹತ್ಯೆ

Update: 2018-07-21 06:14 GMT

ಅಲ್ವರ್(ರಾಜಸ್ಥಾನ), ಜು.21: ಗೋಕಳ್ಳ ಸಾಗಾಟದ ಶಂಕೆಯ ಮೇರೆಗೆ ಹರ್ಯಾಣದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವರ್ ಜಿಲ್ಲೆಯ ರಾಮಗಢ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಗುಂಪುಹತ್ಯೆಯಲ್ಲಿ ಕೊಲೆಯಾದ ವ್ಯಕ್ತಿಯನ್ನು 28 ವಯಸ್ಸಿನ ಅಕ್ಬರ್ ಖಾನ್ ಎಂದು ಗುರುತಿಸಲಾಗಿದೆ. ಖಾನ್ ಕಳೆದ ರಾತ್ರಿ ರಾಮಗಢದ ಲಾಲ್ವಂಡಿ ಗ್ರಾಮದಿಂದ ಹರ್ಯಾಣದ ತನ್ನ ಹಳ್ಳಿಗೆ ಎರಡು ದನಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ಜನರ ಗುಂಪು ಖಾನ್ ಹಾಗೂ ಅವರೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿಯನ್ನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  ಮೃತದೇಹವನ್ನು ಅಲ್ವರ್ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಇಬ್ಬರು ದನಕಳ್ಳರೇ ಎಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗುಂಪು ಹತ್ಯೆಯನ್ನು ತಡೆಯಲು ಕೇಂದ್ರ ಸರಕಾರ ಶೀಘ್ರವೇ ಒಂದು ಕಾನೂನು ತರಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದ ಕೇವಲ ನಾಲ್ಕು ದಿನಗಳ ಬಳಿಕ ಬಿಜೆಪಿ ಆಡಳಿತದ ರಾಜ್ಯದಲ್ಲಿ ಈ ಘಟನೆ ನಡೆದಿದೆ.

ಕಳೆದ ವರ್ಷ ಎ.1ರಂದು ರಾಜಸ್ಥಾನದ ಅಲ್ವರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-8ರಲ್ಲಿ ಪೆಹ್ಲುಖಾನ್ ಎಂಬ 55 ವಯಸ್ಸಿನ ವ್ಯಕ್ತಿಯನ್ನು ಗೋರಕ್ಷಕರೆಂಬ ಹೆಸರಿನ ಗುಂಪು  ಥಳಿಸಿತ್ತು. ಗಂಭೀರ ಗಾಯಗೊಂಡಿದ್ದ ಖಾನ್‌ರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News