ಬಾಯಿಯ ಈ ಆರೋಗ್ಯ ಸಮಸ್ಯೆಗಳು ನಿಮಗೆ ಗೊತ್ತೇ......?

Update: 2018-07-21 10:45 GMT

ಹಲವಾರು ವಿಧಗಳ ಬಾಯಿ ರೋಗಗಳಿದ್ದು,ಇವು ಬಾಯಿಯೊಳಗೆ ಅಥವಾ ಬಾಯಿಯ ಸುತ್ತ ಕಾಣಿಸಿಕೊಳ್ಳುತ್ತವೆ. ಕೆಲವು ಯಾತನಾದಾಯಕವಾಗಿದ್ದು,ಗಂಭೀರ ಸ್ವರೂಪದ್ದಾಗಿರುತ್ತವೆ. ಕೆಲವು ಬಾಯಿ ರೋಗಗಳ ಕುರಿತು ಮಾಹಿತಿಗಳಿಲ್ಲಿವೆ.

ಲಕ್ಷಣಗಳು

►ಕ್ಯಾಂಡಿಡಿಯಾಸಿಸ್: ಕ್ಯಾಂಡಿಡಿಯಾಸಿಸ್ ಅಥವಾ ಶಿಲೀಂಧ್ರ ಸೋಂಕು ಯೀಸ್ಟ್‌ನ ಅತಿಯಾದ ಬೆಳವಣಿಗೆಯಿಂದಾಗಿ ಬಾಯಿ ಅಥವಾ ಗಂಟಲಲ್ಲಿ ಉಂಟಾಗುತ್ತದೆ. ಬಾಯಿಯೊಳಗೆ ಅಥವಾ ನಾಲಿಗೆಯ ಮೆಲೆ ಬಿಳಿಯ ಕಲೆಗಳು,ನುಂಗುವುದಕ್ಕೆ ಕಷ್ಟ ಮತ್ತು ಗಂಟಲು ಕೆರತ ಇತ್ಯಾದಿಗಳು ಕ್ಯಾಂಡಿಯಾಸಿಸ್‌ನ ಲಕ್ಷಣಗಳಾಗಿವೆ.

►ಶೀತಹುಣ್ಣುಗಳು: ಇವು ಸಾಮಾನ್ಯವಾಗಿ ತುಟಿಗಳ ಹೊರಭಾಗದಲ್ಲಿ ಉಂಟಾಗುತ್ತವೆ. ಇವು ಮೂಗಿನ ಕೆಳಗೆ ಅಥವಾ ಗಲ್ಲದ ಕೆಳಗೂ ಕಾಣಿಸಿಕೊಳ್ಳುತ್ತವೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸಾಂಕ್ರಾಮಿಕವಾಗಿವೆ.

►ಕ್ಯಾಂಕರ್ ಹುಣ್ಣುಗಳು: ಇವು ಮಧ್ಯದಲ್ಲಿ ಬಿಳಿ ಅಥವಾ ಹಳದಿ ಬಣ್ಣ ಮತ್ತು ಸುತ್ತಲೂ ಕೆಂಪುಛಾಯೆಯನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಬಾಯಿಯೊಳಗೆ, ಕೆನ್ನೆಗಳ ಒಳಭಾಗದಲ್ಲಿ,ನಾಲಿಗೆ ಮತ್ತು ತುಟಿಗಳ ಮೇಲೆ,ವಸಡುಗಳು ಮತ್ತು ಕುತ್ತಿಗೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಸಾಂಕ್ರಾಮಿಕವಲ್ಲ.

 ►ಹಲ್ಲು ಬಾವು: ಇದು ಹಲ್ಲಿನ ನರಕ್ಕೆ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುತ್ತದೆ. ತೀವ್ರ ಹಲ್ಲುನೋವು,ಬಿಸಿಯಾದ ಅಥವಾ ತಣ್ಣಗಿನ ಪಾನೀಯ ಮತ್ತು ಆಹಾರಗಳ ಸೇವನೆಯಲ್ಲಿ ಕಷ್ಟ,ದುಗ್ಧರಸ ಗ್ರಂಥಿಗಳ ಊತ ಮತ್ತು ಜ್ವರ ಇದರ ಲಕ್ಷಣಗಳಾಗಿವೆ.

ಸಾಮಾನ್ಯವಲ್ಲದ ಬಾಯಿ ರೋಗಗಳು

ದಂತಕ್ಷಯ ಮತ್ತು ವಸಡುಗಳ ಸಮಸ್ಯೆ ಇವು ಅತ್ಯಂತ ಸಾಮಾನ್ಯ ಬಾಯಿರೋಗಗಳಾಗವೆ. ಆದರೆ ವಿರಳವಾಗಿ ಕಾಣಿಸಿಕೊಳ್ಳುವ ಕೆಲವು ಬಾಯಿರೋಗಗಳೂ ಇದ್ದು,ಇವುಗಳ ಕುರಿತು ಮಾಹಿತಿ ಇಲ್ಲಿದೆ.

►ಬಾಯಿಯ ಹರ್ಪಿಸ್: ಬಾಯಿಯ ಹರ್ಪಿಸ್ ಅಥವಾ ಬಾಯಿಯ ಸರ್ಪಸುತ್ತು ಸಾಂಕ್ರಾಮಿಕ ವೈರಸ್ ಆಗಿದ್ದು,ಮಕ್ಕಳು ಮತ್ತು ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ವ್ರಣಗಳು,ವಸಡುಗಳ ಅಂಗಾಂಶಗಳಲ್ಲಿ ಊತ ಇವು ಇದರ ಲಕ್ಷಣಗಳಾಗಿವೆ. ಅತಿಯಾದ ಜೊಲ್ಲು ಮತ್ತು ಬಾಯಿಯೊಳಗೆ ಗುಳ್ಳೆಗಳೂ ಕಾಣಿಸಿಕೊಳ್ಳಬಹುದು. ಈ ವ್ರಣಗಳು 7ರಿಂದ 14 ದಿನಗಳಲ್ಲಿ ಮಾಯುತ್ತವಾದರೂ ವೈರಸ್ ಶರೀರದಲ್ಲಿ ಸುಪ್ತವಾಗಿರುತ್ತದೆ. ವ್ಯಕ್ತಿಯು ಒತ್ತಡದಲ್ಲಿದ್ದಾಗ,ಬಿಸಿಲಿಗೆ ಒಡ್ಡಿಕೊಂಡಾಗ,ಅತಿಯಾದ ಬಳಲಿಕೆ ಅಥವಾ ಜ್ವರವಿದ್ದಾಗ ಈ ವೈರಸ್ ಮತ್ತೆ ಕ್ರಿಯಾಶೀಲಗೊಳ್ಳುತ್ತದೆ.

►ಒಣ ಬಾಯಿ: ಬಾಯಿಯಲ್ಲಿ ಜೊಲ್ಲು ಉತ್ಪತ್ತಿಯಾಗದಿದ್ದರೆ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಮ್ಮ ಬಾಯಿಯಿಂದ ಹೊರಹಾಕಲು ಸಾಧ್ಯವಾಗುವುದಿಲ್ಲ. ಬಾಯಿ ಹಲವಾರು ಕಾರಣಗಳಿಂದ ಒಣಗುತ್ತದೆ. ಜೊಲ್ಲಿನ ಉತ್ಪತ್ತಿ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಕೆಲವು ಔಷಧಿಗಳು,ವಿಕಿರಣ ಚಿಕಿತ್ಸೆ ಮತ್ತು ಏಡ್ಸ್‌ನಂತಹ ಕಾಯಿಲೆಗಳು ಇದರಲ್ಲಿ ಸೇರಿವೆ. ಒಣ ಬಾಯಿಯು ದುರ್ವಾಸನೆ,ವಸಡು ರೋಗ,ಬಾಯಿ ಹುಣ್ಣುಗಳು ಮತ್ತು ದಂತಕ್ಷಯದ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ.

►ದವಡೆ ಕೀಲುಗಳ ನೋವು: ದವಡೆ ಕೀಲುಗಳು ನಮ್ಮ ತಲೆಯ ಎರಡೂ ಪಾರ್ಶ್ವಗಳಲ್ಲಿ ಇರುತ್ತವೆ ಮತ್ತು ಇವುಗಳು ನಾವು ಬಾಯಿಯನ್ನು ತೆರೆಯಲು ಮತ್ತು ಮುಚ್ಚಲು,ಮಾತನಾಡಲು,ಆಹಾರವನ್ನು ಅಗಿಯಲು ಮತ್ತು ನುಂಗಲು ನೆರವಾಗುತ್ತವೆ. ಆದರೆ ಈ ಕೀಲು ಅಥವಾ ಸಂದುಗಳು,ಅವುಗಳ ಸುತ್ತಲಿನ ಸ್ನಾಯುಗಳು ಮತು ಅಸ್ಥಿರಜ್ಜುಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ದವಡೆ ಕೀಲುಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ.

►ಬಾಯಿ ಕ್ಯಾನ್ಸರ್: ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮೂರು ಪ್ರಮುಖ ಕ್ಯಾನ್ಸರ್ ರೋಗಗಳಲ್ಲಿ ಬಾಯಿ ಕ್ಯಾನ್ಸರ್ ಒಂದಾಗಿದೆ. ಮದ್ಯಪಾನ ಮತ್ತು ತಂಬಾಕು ಬಳಕೆ ಬಾಯಿ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಆದರೆ ಸೂರ್ಯನ ಬಿಸಿಲಿಗೆ ಅತಿಯಾಗಿ ತೆರೆದುಕೊಳ್ಳುವುದೂ ಬಾಯಿ ಕ್ಯಾನ್ಸರ್‌ನ್ನುಂಟು ಮಾಡುತ್ತದೆ. ಆಗಾಗ್ಗೆ ದಂತವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಈ ಅಪಾಯದಿಂದ ದೂರವಿರಬಹುದಾಗಿದೆ.

►ಬಾಯಿ ಉರಿ: ಇದು ಹೆಚ್ಚಾಗಿ ಮಧ್ಯವಯಸ್ಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಹಾರ್ಮೋನ್ ಬದಲಾವಣೆಗಳು,ಪೌಷ್ಟಿಕಾಂಶಗಳ ಕೊರತೆ,ಒಣ ಬಾಯಿ,ಶಿಲೀಂಧ್ರ ಸೋಂಕುಗಳು ಮತ್ತು ನರಕ್ಕೆ ಹಾನಿ ಇದಕ್ಕೆ ಕಾರಣಗಳಾಗಿವೆ. ನಾಲಿಗೆ ಅಥವಾ ಬಾಯಿಯಲ್ಲಿ ಉರಿಯುತ್ತಿರುವ ಅನುಭವ,ರುಚಿಯಲ್ಲಿ ಬದಲಾವಣೆ ಈ ರೋಗದ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News