ಮೋದಿ ಜನಪ್ರಿಯತೆ ಹೆಚ್ಚಿದಂತೆ ಗುಂಪಿನಿಂದ ಹತ್ಯೆ ಪ್ರಕರಣಗಳೂ ಹೆಚ್ಚಲಿವೆ ಎಂದ ಕೇಂದ್ರ ಸಚಿವ ಮೇಘ್ವಾಲ್!

Update: 2018-07-21 18:09 GMT

ಜೈಪುರ,ಜು.21: ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ದನ ಕಳ್ಳನೆಂಬ ಶಂಕೆಯಿಂದ ಗುಂಪೊಂದು 28ರ ಹರೆಯದ ಯುವಕನೋರ್ವನನ್ನು ಥಳಿಸಿ ಕೊಂದ ಪ್ರಕರಣವನ್ನು ಪ್ರಸ್ತಾಪಿಸಿದ ಕೇಂದ್ರ ಸಹಾಯಕ ಜಲ ಸಂಪನ್ಮೂಲ ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು,ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚುತ್ತ ಹೋದಂತೆ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳೂ ಹೆಚ್ಚಲಿವೆ ಎಂದು ಆರೋಪಿಸಿದರು.

ಇಂತಹ ಹತ್ಯೆ ಘಟನೆಗಳನ್ನು ಎತ್ತುವ ಮೂಲಕ ಕೇಂದ್ರ ಸರಕಾರದ ಹೆಸರು ಕೆಡಿಸಲು ಮೋದಿಯವರ ಟೀಕಾಕಾರರು ಪ್ರಯತ್ನಿಸುತ್ತಿದ್ದಾರೆ ಎಂದ ಅವರು,ಬಿಹಾರ ಚುನಾವಣೆ ಸಂದರ್ಭದಲ್ಲಿ ಪ್ರಶಸ್ತಿ ವಾಪಸಿ ಮಹತ್ವ ಪಡೆದಿತ್ತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಗುಂಪಿನಿಂದ ಥಳಿಸಿ ಹತ್ಯೆಗಳು ಒತ್ತು ಪಡೆದಿದ್ದವು. 2019ರ ಚುನಾವಣೆಯಲ್ಲಿ ಬೇರೆ ಯಾವುದಾದರೂ ವಿಷಯ ತಲೆಯೆತ್ತಲಿದೆ. ಮೋದಿಯವರು ಹಲವಾರು ಯೋಜನೆಗಳನ್ನು ನೀಡಿದ್ದಾರೆ ಮತ್ತು ಅವುಗಳ ಪರಿಣಾಮಗಳನ್ನು ಕಾಣಬಹುದಾಗಿದೆ. ಈ ಥಳಿಸಿ ಹತ್ಯೆ ಪ್ರಕರಣ ಅದಕ್ಕೊಂದು ಪ್ರತಿಕ್ರಿಯೆಯಾಗಿದೆ ಅಷ್ಟೇ ಎಂದರು.

1984ರ ಸಿಖ್ ವಿರೋಧಿ ದಂಗೆಯನ್ನು ಪ್ರಸ್ತಾಪಿಸಿದ ಅವರು,ಅದು ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಗುಂಪು ಹತ್ಯೆ ಪ್ರಕರಣವಾಗಿದೆ ಎಂದರು.

ಆಲ್ವಾರ್ ಘಟನೆಯನ್ನು ಕಟುವಾಗಿ ಖಂಡಿಸಿದ ಅವರು,ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News