ಸಂಘಪರಿವಾರದಿಂದ ಬೆದರಿಕೆ: ಕಾದಂಬರಿ ಹಿಂಪಡೆದ ಕೇರಳದ ಲೇಖಕ

Update: 2018-07-21 18:06 GMT

ತಿರುವನಂತಪುರಂ, ಜು.21: ವಾರ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಸರಣಿಯಲ್ಲಿ ಪ್ರಕಟವಾಗುತ್ತಿದ್ದ ತನ್ನ ಕಾದಂಬರಿಗೆ ಸಂಘಪರಿವಾರದಿಂದ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಕೇರಳದ ಸಣ್ಣ ಕತೆಗಳ ಲೇಖಕರೊಬ್ಬರು ತಮ್ಮ ಕಾದಂಬರಿಯನ್ನೇ ಹಿಂಪಡೆದುಕೊಂಡಿದ್ದಾರೆ.

 ಲೇಖಕ ಎಸ್.ಹರೀಶ್ ಅವರ ಪ್ರಥಮ ಕಾದಂಬರಿ ‘ಮೀಶಾ’ (ಮೀಸೆ) ಸರಣಿ ರೂಪದಲ್ಲಿ ಮಾತೃಭೂಮಿ ಎಂಬ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಸದ್ಯ ಲೇಖಕರು ತಮ್ಮ ಕಾದಂಬರಿಯನ್ನು ಪ್ರಕಟಿಸದಂತೆ ಸೂಚಿಸಿರುವುದಾಗಿ ಪತ್ರಿಕೆಯ ಸಂಪಾದಕ ಕಮಲ್ ರಾಮ್ ಸಜೀವ್ ಟ್ವೀಟ್ ಮಾಡಿದ್ದಾರೆ.

 ಎಸ್ ಹರೀಶ್ ತಮ್ಮ ಕಾದಂಬರಿಯನ್ನು ಹಿಂಪಡೆದುಕೊಂಡಿದ್ದಾರೆ. ಸಾಹಿತ್ಯದ ಸಾಮೂಹಿಕ ಹತ್ಯೆ ನಡೆಸಲಾಗುತ್ತಿದೆ. ಕೇರಳದ ಸಾಂಸ್ಕೃತಿಕ ಇತಿಹಾಸದಲ್ಲೇ ಇದು ಕರಾಳ ದಿನ, ಮುಂದೆ ಕತ್ತಲ ದಿನಗಳು ಬರಲಿವೆ ಎಂದು ಸಜೀವ್ ಟ್ವೀಟ್ ಮಾಡಿದ್ದಾರೆ. ಲೇಖಕ ಹರೀಶ್ ಪತ್ರಿಕೆಯ ಸಂಪಾದಕರಿಗೆ ಬರೆದಿರುವ ಪತ್ರದಲ್ಲಿ, ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಸೈಬರ್ ದಾಳಿ ನಡೆಸಲಾಗುತ್ತಿದೆ. ಅದರ ಒತ್ತಡವನ್ನು ಸಹಿಸಲಾಗುತ್ತಿಲ್ಲ. ಹಾಗಾಗಿ ಕಾದಂಬರಿಯನ್ನು ಹಿಂಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಕಾದಂಬರಿಯಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಬರೆಯಲಾಗಿದೆ ಎಂದು ಸಂಘಪರಿವಾರ ಆರೋಪಿಸಿವೆ. ಈ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಲೇಖಕರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿವೆ ಮತ್ತು ಬೆದರಿಕೆ ಹಾಕಿವೆ ಎಂದು ಆರೋಪಿಸಲಾಗಿದೆ.

ಘಟನೆಯ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಸಂಸದ ಶಶಿ ತರೂರ್, ನಾನು ಹಿಂದುತ್ವ ತಾಲಿಬಾನ್‌ನ ಉಗಮದ ಬಗ್ಗೆ ನೀಡಿರುವ ಎಚ್ಚರಿಕೆಯನ್ನು ನಂಬದವರಿಗೆ ಈಗ ಮಲಯಾಳಂ ಲೇಖಕನಿಗೆ ಎದುರಾಗಿರುವ ಸಂಕಷ್ಟದಿಂದಾದರೂ (ಅದಕ್ಕೂ ಮಿಗಿಲಾಗಿ ಲೇಖಕರ ಕೈಯನ್ನು ಕಡಿಯುವುದಾಗಿ ಬೆದರಿಕೆ ಹಾಕಿರುವುದು)ಪರಿಸ್ಥಿತಿಯ ಅರಿವಾಗಬಹುದು ಎಂದು ತಿಳಿಸಿದ್ದಾರೆ. ಹಿಂದು ಐಕ್ಯ ವೇದಿ ಸಂಘಟನೆಗೆ ಸೇರಿದ ಕಾರ್ಯಕರ್ತರು ಎಂದು ಶಂಕಿಸಲಾಗಿರುವ ಕೆಲವರು ಕೊಚ್ಚಿ ತ್ರಿಪುನಿತುರದಲ್ಲಿ ಇತ್ತೀಚೆಗೆ ಮಾತೃಭೂಮಿ ಸಮೂಹ ಆಯೋಜಿಸಿದ್ದ ಪುಸ್ತಕ ಪ್ರದರ್ಶನಕ್ಕೆ ಅಡ್ಡಿಪಡಿಸುವ ಮೂಲಕ ಕಾದಂಬರಿಯ ವಿರುದ್ಧ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News