‘ಅವಿಶ್ವಾಸ’ವೆಂಬ ಹಿಮಗಡ್ಡೆಯ ಚೂರಿ!

Update: 2018-07-21 18:36 GMT

ಅರಸು ರಾಕ್ಷಸ,
ಮಂತ್ರಿಯೆಂಬವ ಮೊರೆವ ಹುಲಿ

ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪ ಇನ್ನಾರು ಕೇಳುವರು?
ಉರಿಯುತಿದೆ ದೇಶ
ನಾವಿನ್ನಿರಲು ಬಾರದೆನ್ನುತಾ
ಜನ ಬೇಸರದ ಬೇಗೆಯಲಿ....
       ಕುಮಾರವ್ಯಾಸ(ಗದುಗಿನ ಭಾರತ)

‘ವಿಶ್ವಾಸ’ವೆನ್ನುವುದು ಬರೇ ಅಂಕಿ ಸಂಖ್ಯೆಗಳಿಗೆ ಸಂಬಂಧಿಸಿದ್ದಲ್ಲ. ಅದು ಕೆಲವೊಮ್ಮೆ ಆತ್ಮಸಾಕ್ಷಿಯೊಂದಿಗೆ ಬೆಸೆದು ಕೊಂಡಿರುತ್ತದೆ. ಒಬ್ಬನಿಂದ ತಾನು ಮೋಸ ಹೋಗುತ್ತಿದ್ದೇನೆ ಎನ್ನುವುದು ಗೊತ್ತಿದ್ದೂ ಆತ ಇನ್ನೂ ಅವನ ಬಗ್ಗೆ ವಿಶ್ವಾಸ ಹೊಂದಿದ್ದಾನೆಂದರೆ ಅದನ್ನು ಮೋಸ ಮಾಡುವವನ ಹೆಚ್ಚುಗಾರಿಕೆಯೆಂದು ನಾವು ಬಗೆಯಲಾಗುವುದಿಲ್ಲ. ಕೆಲವೊಮ್ಮೆ ಮೋಸ ಹೋಗುವವನ ಅಮಾಯಕತನ ಅಥವಾ ಅಸಹಾಯಕತೆ ಮೋಸ ಮಾಡುವವನ ಶಕ್ತಿಯಾಗಿರುತ್ತದೆ. ತಾನು ನಂಬಿದ ವ್ಯಕ್ತಿಯ ಬಗ್ಗೆ ಅವಿಶ್ವಾಸವನ್ನು ಪ್ರಕಟಪಡಿಸುವ ವ್ಯಕ್ತಿ, ಅದನ್ನು ಸಾಬೀತು ಮಾಡಲು ವಿಫಲವಾಗಬಹುದು. ಅವಿಶ್ವಾಸಕ್ಕೆ ಒಳಗಾದ ವ್ಯಕ್ತಿ ಅದನ್ನೇ ತನ್ನ ವಿಜಯವೆಂದು ಬಗೆದು ತನ್ನನ್ನು ಆತ್ಮವಿಮರ್ಶೆಗೆ ಒಡ್ಡಲು ಒಂದಿಷ್ಟೂ ಮುಂದಾಗುವುದಿಲ್ಲವೆಂದರೆ, ಆತ ಲಜ್ಜೆಗೇಡಿ. ಲಜ್ಜೆ ಹೊಂದಿರುವ ಮನುಷ್ಯನ ಪಾಲಿಗೆ ಮಾತ್ರ ಅವಿಶ್ವಾಸವೆನ್ನುವುದು ಹಿಮಗಡ್ಡೆಯ ಚೂರಿಯಾಗಿದೆ. ಲಜ್ಜೆ ಕಳೆದುಕೊಂಡವನನ್ನು ಶಿಕ್ಷಿಸುವುದು ಅಸಾಧ್ಯ. ಸದ್ಯದ ರಾಜಕೀಯದಲ್ಲಿ ಲಜ್ಜೆಗೆ ಸ್ಥಾನವಿಲ್ಲ ಎನ್ನುವುದನ್ನು ನಮಗೆ ನಾವೇ ತೀರ್ಮಾನಿಸಿ ಬಿಟ್ಟಿದ್ದೇವೆ. ಅಂಕಿಗಳ ಸಂಖ್ಯೆಯನ್ನು ಕೈಯಲ್ಲಿಟ್ಟುಕೊಂಡು ಏನನ್ನೂ ಮಾಡಿದರೂ ಅದು ತನ್ನ ಸಾಧನೆಯೆಂಬಂತೆ ಬಿಂಬಿಸಬಲ್ಲೆ ಎನ್ನುವ ನಾಯಕನೊಬ್ಬನ ಕೈಕೆಳಗೆ ದೇಶ ಸಿಕ್ಕಿಕೊಂಡಿದೆ. ಒಂದೆಡೆ ಬೃಹತ್ ಉದ್ಯಮಿಗಳು ಬ್ಯಾಂಕ್‌ಗಳನ್ನು ಮುಳುಗಿಸಿ ಒಬ್ಬೊಬ್ಬರಾಗಿ ವಿದೇಶ ಸೇರುತ್ತಿದ್ದಾರೆ. ಅವರಿಂದ ನಾಶವಾಗುತ್ತಿರುವ ಭಾರತದ ಆರ್ಥಿಕತೆಯನ್ನು ಉಳಿಸಲು ನೋಟು ನಿಷೇಧ ಮಾಡಿ, ಜನಸಾಮಾನ್ಯರ ಹಣವನ್ನು ಬಲವಂತವಾಗಿ ಬ್ಯಾಂಕ್‌ಗಳಿಗೆ ತುಂಬಿಸಲಾಯಿತು. ಅದರ ಪರಿಣಾಮವಾಗಿ ಸಹಸ್ರಾರು ಗ್ರಾಮೀಣ ಉದ್ದಿಮೆಗಳು ಬೀದಿಗೆ ಬಿದ್ದವು. ನಿರುದ್ಯೋಗದ ಪ್ರಮಾಣ ದುಪ್ಪಟ್ಟಾಯಿತು. ದೇಶದ ಜಿಡಿಪಿ ಕುಸಿಯಿತು. ಡಾಲರ್ ಮುಂದೆ ರೂಪಾಯಿ ಸಾಷ್ಟಾಂಗ ಮಲಗಿತು. ಆದರೆ ನೋಟು ನಿಷೇಧದ ದುಷ್ಪರಿಣಾಮಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಇಂದಿಗೂ ಪ್ರಧಾನಿ ನರೇಂದ್ರ ಮೋದಿಯವರು ವಿಫಲರಾಗಿದ್ದಾರೆ. ಬಿಜೆಪಿ ಸರಕಾರ ಗೋರಕ್ಷಣೆಯ ಹುಯಿಲೆಬ್ಬಿಸಿದ ದಿನಗಳಿಂದ, ರೈತರು ಗ್ರಾಮೀಣ ಪ್ರದೇಶಗಳಲ್ಲಿ ಗೋವುಗಳನ್ನು ಸಾಕುವುದು ಕಷ್ಟಕರವಾಗಿದೆ. ತಾವು ಸಾಕುತ್ತಿರುವ ಜಾನುವಾರುಗಳ ಮೇಲಿನ ಹಕ್ಕುಗಳನ್ನೇ ಅವರು ಕಳೆದುಕೊಂಡಿದ್ದಾರೆ. ನೋಟು ನಿಷೇಧದ ಬಳಿಕ, ಗ್ರಾಮೀಣ ರೈತರಲ್ಲಿರುವ ಕರೆನ್ಸಿಯನ್ನು ಎರಡನೆಯ ಬಾರಿಗೆ ಕೇಂದ್ರ ಸರಕಾರ ಕಿತ್ತುಕೊಂಡದ್ದು ‘ಜಾನುವಾರು ಮಾರಾಟ ಕಾಯ್ದೆ’ಯನ್ನು ಜಾರಿಗೊಳಿಸುವ ಪ್ರಯತ್ನದ ಮೂಲಕ. ರೈತರು ತಮ್ಮ ಅವಶ್ಯಕತೆಗಾಗಿ ತಮ್ಮದೇ ಹಟ್ಟಿಯಲ್ಲಿರುವ ಜಾನುವಾರುಗಳನ್ನು ಮಾರಲಾಗದ ಸ್ಥಿತಿ ದೇಶಾದ್ಯಂತ ನಿರ್ಮಾಣವಾಯಿತು. ಇದರ ಲಾಭವನ್ನು ತಮ್ಮದಾಗಿಸಿಕೊಂಡಿರುವುದು ಬೀದಿಯಲ್ಲಿ ನಕಲಿ ಗೋರಕ್ಷಕರ ವೇಷದಲ್ಲಿ ಓಡಾಡುವ ಗೂಂಡಾಗಳು ಮತ್ತು ಗೋಶಾಲೆಯ ಹೆಸರಿನಲ್ಲಿ ಸರಕಾರದ ನಿಧಿಗಳನ್ನು ಬಾಚುವ ಸ್ವಾಮೀಜಿಗಳು. ಜೊತೆಗೆ ಬೃಹತ್ ಗೋಮಾಂಸ ಸಂಸ್ಕರಣಾ ಘಟಕಗಳು. ಬೀದಿಗಳಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳ ಹಿಂದೆ ರಾಜಕೀಯ ನಾಯಕರಿದ್ದಾರೆ. ಹತೈಗೈದ ಕ್ರಿಮಿನಲ್‌ಗಳನ್ನು ಅವರು ಪೊಲೀಸ್ ಠಾಣೆಗಳಲ್ಲೂ, ನ್ಯಾಯಾಲಯಗಳಲ್ಲೂ ಬಹಿರಂಗವಾಗಿ ರಕ್ಷಿಸುತ್ತಿದ್ದಾರೆ. ಬಿಡುಗಡೆಯಾದವರಿಗೆ ಹಾರ ಹಾಕಿ ಸನ್ಮಾನಿಸುತ್ತಿದ್ದಾರೆ. ಹತ್ಯೆ ಮಾಡುತ್ತಿರುವ ಗುಂಪುಗಳ ಸಂಖ್ಯೆ ದಿನದಿಂದ ದಿನಕಕೆ ಬೆಳೆಯುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ರಾಜಕಾರಣಿಗಳ ನೇರ ಹಸ್ತಕ್ಷೇಪವಿರುವುದರಿಂದ ಈ ಕುರಿತಂತೆ ಪೊಲೀಸ್ ಇಲಾಖೆ ಅಸಹಾಯಕವಾಗಿದೆ. ಇತ್ತ ವೈಚಾರಿಕವಾದ ಚಿಂತನೆಗಳನ್ನು ಸಂಪೂರ್ಣವಾಗಿಬಗ್ಗು ಬಡಿಯಲಾಗುತ್ತಿದೆ. ಸರಕಾರದ ವಿರುದ್ಧ ಮಾತನಾಡಿದವರ ತಲೆಗೆ ನೇರವಾಗಿ ‘ದೇಶದ್ರೋಹ’ ಪಟ್ಟವನ್ನು ಕಟ್ಟಿ ಅವರ ಮೇಲೆ ಬಹಿರಂಗವಾಗಿ ಹಲ್ಲೆಗೆ ಮುಂದಾಗುವ ಸ್ಥಿತಿ ನಿರ್ಮಾಣವಾಗಿದೆ. ಎಂಬತ್ತು ವರ್ಷ ಪ್ರಾಯದ ಸನ್ಯಾಸಿ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ, ಈ ದೇಶದ ‘ಸಂಸ್ಕೃತಿ’ ಸಾಗುತ್ತಿರುವ ಪಾತಾಳದ ವಿಕರಾಳ ರೂಪವನ್ನು ತೋರಿಸಿದೆ. ಗುಂಪು ಹತ್ಯೆಯ ಕುರಿತಂತೆ ಸುಪ್ರೀಂಕೋರ್ಟ್ ಆರ್ತನಾದ ಮಾಡುತ್ತಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ಕಿವುಡಾಗಿದ್ದಾರೆ. ಅವರ ದಿವ್ಯವೌನ ದೇಶಾದ್ಯಂತ ಮಾರಕ ವೈರಸ್‌ಗಳನ್ನು ಅಂಟಿಸಿಕೊಂಡ ‘ರೆಂಬಿ’ಗಳಂತಿರುವ ಗುಂಪು ಕೊಲೆಗಾರರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ವಿಶ್ವವಿದ್ಯಾನಿಲಯಗಳ ಮೇಲೆ ಸರಕಾರ ನಿಯಂತ್ರಣ ಸಾಧಿಸಲು ಮುಂದಾಗಿದೆ. ಅಸ್ತಿತ್ವದಲ್ಲೇ ಇರದ ವಿಶ್ವವಿದ್ಯಾನಿಲಯವೊಂದು ಅತ್ಯುತ್ತಮ ವಿಶ್ವವಿದ್ಯಾನಿಲಯವಾಗಿ ಗುರುತಿಸಲ್ಪಡುತ್ತಿದೆ. ಇದರ ಜೊತೆ ಜೊತೆಗೇ, ದೇಶದ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಮೇಕ್ ಇನ್ ಇಂಡಿಯಾ ಅರ್ಥ ಕಳೆದುಕೊಂಡಿದೆ. ‘ಭ್ರಷ್ಟಾಚಾರ ಮುಕ್ತ ಆಡಳಿತ’ ಎಂದು ಹೇಳಿಕೊ ಳ್ಳುತ್ತಿರುವ ಬಿಜೆಪಿ, ವಿಶ್ವದಲ್ಲೇ ಅತಿ ಹೆಚ್ಚು ಶ್ರೀಮಂತ ಪಕ್ಷವೆಂದು ಗುರುತಿಸಲ್ಪಟ್ಟಿದೆ. ರಫೇಲ್ ಒಪ್ಪಂದದಲ್ಲಿ ಆಗಿರುವ ಅವ್ಯವಹಾರಗಳ ಕುರಿತಂತೆ ಮೋದಿ ಈವರೆಗೆ ಸ್ಪಷ್ಟೀಕರಣ ನೀಡಿಲ್ಲ. ದೇಶ ಅಘೋಷಿತತುರ್ತುಪರಿಸ್ಥಿತಿಯಲ್ಲಿದ್ದರೆ, ನರೇಂದ್ರ ಮೋದಿ 70ರ ದಶಕದ ತುರ್ತು ಪರಿಸ್ಥಿತಿಯ ಕುರಿತಂತೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಡೀ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ವೈಚಾರಿಕವಾಗಿ ಹಿಂದಕ್ಕೆ ಚಲಿಸುತ್ತಿದೆ ಮತ್ತು ಇದನ್ನೇ ಅಭಿವೃದ್ಧಿ ಎಂದು ಜನರಲ್ಲಿ ಬಿತ್ತುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ.

 ಸದ್ಯದ ಸಂದರ್ಭದಲ್ಲಿ ಮಾಧ್ಯಮಗಳನ್ನು ಬಳಸಿಕೊಂಡು ವಿರೋಧ ಪಕ್ಷದ ಸಣ್ಣ ಧ್ವನಿಯೂ ಜನಸಾಮಾನ್ಯರನ್ನು ತಲುಪದಂತೆ ನೋಡಿಕೊಳ್ಳುವಲ್ಲಿ ಮೋದಿ ನೇತೃತ್ವದ ಸರಕಾರ ಯಶಸ್ವಿಯಾಗಿದೆ. ಮೋದಿಯ ವೌನವೆಂಬ ಬಲಾಢ್ಯ ಗೋಡೆಯನ್ನು ಸೀಳಲು ಸರ್ವ ತಂತ್ರವನ್ನು ಬಳಸಬೇಕಾದುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿದೆ. ಇಡೀ ದೇಶದ ವಿಶ್ವಾಸ ನಿಮ್ಮ ವಿರುದ್ಧವಾಗಿದೆ ಎನ್ನುವುದನ್ನು ಸರ್ವ ರೀತಿಯಲ್ಲಿ ಮೋದಿಗೆ ಅರ್ಥೈಸಿಕೊಡಬೇಕಾದುದು ವಿರೋಧಪಕ್ಷಗಳ ಹೊಣೆಗಾರಿಕೆಯೂ ಆಗಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಅವಿಶ್ವಾಸ ಮತ ನಿರ್ಣಯವನ್ನು ಪ್ರತಿಪಕ್ಷಗಳು ಮಂಡಿಸಿದವು. ಇಲ್ಲಿ ವಿಶ್ವಾಸ ಮತದ ಸೋಲು-ಗೆಲುವು ಸ್ಥಾನಗಳ ಅಂಕಿಗಳಿಂದ ನಿರ್ಧಾರವಾಗುತ್ತದೆ ಎಂದು ಮೋದಿ ಪರ ಮಾಧ್ಯಮಗಳು ಮೊದಲೇ ‘ತಲೆಬರಹಗಳನ್ನು’ ಸಿದ್ಧಪಡಿಸಿಕೊಂಡಿದ್ದವು. ಯಾವ ಕಾರಣದಿಂದಲೋ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಮತ ಸಾಬೀತು ಮಾಡುವುದು ಅಸಾಧ್ಯ ಎಂದು ಗೊತ್ತಿದ್ದೂ ಪ್ರತಿ ಪಕ್ಷಗಳು ‘ಅವಿಶ್ವಾಸ’ವನ್ನು ಘೋಷಿಸುವುದು ಸದ್ಯದ ಸಂದರ್ಭದಲ್ಲಿ ತೀರಾ ಅನಿವಾರ್ಯವಾಗಿತ್ತು. ಪ್ರತಿ ಪಕ್ಷಗಳ ಆರೋಪಗಳಿಗೆ ಮುಖ ತಿರುವಿ ನಡೆಯುತ್ತಿದ್ದ ಪ್ರಧಾನಿಯ ಬಳಿ, ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸ್ಪಷ್ಟೀಕರಣವನ್ನು ಪಡೆದುಕೊಳ್ಳಲೇಬೇಕಾಗಿತ್ತು. ಇಡೀ ದೇಶ, ಮೋದಿ ಸರಕಾರದ ಸಂವೇದನಾರಹಿತ ಸ್ಥಿತಿಗೆ ವಿರೋಧ ಪಕ್ಷಗಳ ಅಸಹಾಯಕತೆ, ಹತಾಶೆಯನ್ನುಹೊಣೆ ಮಾಡುತ್ತಿತ್ತು.. ವಿರೋಧ ಪಕ್ಷಗಳು ಸಣ್ಣ ಗುಂಪು ಎನ್ನುವ ಕಾರಣಕ್ಕಾಗಿ ಅವಿಶ್ವಾಸವನ್ನು ಮಂಡಿಸಬಾರದು ಎಂದಿಲ್ಲ. ಇದೇ ಸಂದರ್ಭದಲ್ಲಿ, ಅವಿಶ್ವಾಸವನ್ನು ಮಂಡಿಸಲು ಸಂಸದರ ಸಂಖ್ಯೆಗಿಂತ, ಸಮಸ್ಯೆಗಳ ಸಂಖ್ಯೆಯೇ ಮುಖ್ಯ. ದೇಶ ಇಂತಹದೊಂದು ಅವಿಶ್ವಾಸವನ್ನು ಮಂಡಿಸುವ ಸ್ಥಿತಿಯಲ್ಲಿದೆಯೇ ಎನ್ನುವ ಅಂಶ ಇಲ್ಲಿ ಪ್ರಧಾನ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆರೋಗ್ಯ, ಶಿಕ್ಷಣ ಕ್ಷೇತ್ರ, ನಿರುದ್ಯೋಗ, ಬಡತನ, ಹಸಿವು ಇವುಗಳ ಬಗ್ಗೆ ಹೊರ ಬೀಳುತ್ತಿರುವ ವರದಿಗಳೇ ಸದ್ಯದ ಅವಿಶ್ವಾಸದ ಅನಿವಾರ್ಯತೆಯನ್ನು ಹೇಳುತ್ತದೆ. ಈ ನಿಟ್ಟಿನಲ್ಲಿ, ಭಾರತದ ಸದ್ಯದ ಆತಂಕಕಾರಿ ಸಂದರ್ಭವನ್ನು ಅವಿಶ್ವಾಸ ಮತದ ಹೆಸರಲ್ಲಿ ದೇಶಕ್ಕೆ ಮನವರಿಕೆ ಮಾಡುವಲ್ಲಿ ಪ್ರತಿ ಪಕ್ಷ ಭಾಗಶಃ ಯಶಸ್ವಿಯಾಗಿದೆ.
ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ, ಅತ್ಯಂತ ಮುತ್ಸದ್ದಿತನದಿಂದ ಅವಿಶ್ವಾಸ ನಿರ್ಣಯದಲ್ಲಿ ಮಾತನಾಡಿದ್ದಾರೆ. ‘ಅಂಕಿ ಸಂಖ್ಯೆಗಳಾಚೆಗೆ’ ಇರುವ ಸತ್ಯಗಳನ್ನು ಹೃದಯದ ಭಾಷೆಯಲ್ಲಿ ದೇಶದ ಮುಂದೆ ಮಂಡಿಸಿದ್ದಾರೆ. ನರೇಂದ್ರ ಮೋದಿಯ ವಾಚಾಳಿತನ, ರಾಹುಲ್ ಅವರ ಹೃದಯದ ಮಾತುಗಳ ಮುಂದೆ ಬಣ್ಣ ಕಳೆದುಕೊಂಡು ಪೇಲವವಾಯಿತು.ದೇಶದ ಜನರಿಗೆ ನರೇಂದ್ರ ಮೋದಿಯ ಭಾವಾವೇಶದ ಭಾಷಣ ಆಕಳಿಕೆ ತರಿಸುತ್ತಿದೆೆ. ಜನರ ಹೃದಯ ಸತ್ಯದ ಮಾತುಗಳಿಗೆ ಕಾತರಿಸುತ್ತಿದೆ ಎನ್ನುವುದು ಅವಿಶ್ವಾಸ ಮತ ಯಾಚನೆಯಲ್ಲಿ ಸಾಬೀತಾಗಿದೆ. ರಾಹುಲ್‌ಗಾಂಧಿಯ ಮಾತುಗಳಿಗೆ ಉತ್ತರಕೊಡಲಾಗದೆ, ಬರೇ ವೈಯಕ್ತಿಕ ನಿಂದನೆಗಳ ಮೂಲಕವೇ ತನ್ನ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳಲು ಮುಂದಾದ ಮೋದಿ, ಅವಿಶ್ವಾಸ ನಿರ್ಣಯದಲ್ಲಿ ಗೆದ್ದೂ ಸೋತಿದ್ದಾರೆ. ಒಂದು ರೀತಿಯಲ್ಲಿ, ಹಿಮಗಡ್ಡೆಯ ಚೂರಿಯಲ್ಲಿ ಸರಕಾರವನ್ನು ಇರಿಯಲಾಗಿದೆ. ಚೂರಿ ಕರಗಿದೆಯಾದರೂ, ಸರಕಾರಕ್ಕೆ ಆಳವಾದ ಗಾಯವನ್ನು ಮಾಡಿದೆ.
 ರಾಹುಲ್ ಅವರು ತಮ್ಮ ಭಾಷಣದ ಕೊನೆಗೆ ಧಾವಿಸಿ ಮೋದಿಯನ್ನು ಅಪ್ಪಿಕೊಂಡದ್ದು, ಒಂದು ಅದ್ಭುತ ರೂಪಕ ದಂತಿತ್ತು.. ಇಲ್ಲಿ ಸಂದೇಶವಿದೆ, ವ್ಯಂಗ್ಯವಿದೆ ಮತ್ತು ಜೊತೆಗೆ ರಾಜಕೀಯ ಕಾರ್ಯತಂತ್ರವೂ ಇದೆ. ಇಂದು ಇಡೀ ದೇಶ, ಪ್ರಧಾನಿ ಮೋದಿಯಿಂದ ಏನನ್ನು ಬಯಸುತ್ತಿದೆ ಎನ್ನುವುದನ್ನು ದೇಶಕ್ಕೆ ಅರ್ಥವಾಗುವಂತೆ ಕೃತಿಯಲ್ಲೇ ಅವರು ತೋರಿಸಿಕೊಟ್ಟರು ಮತ್ತು ಮೋದಿಯ ಪಾಲಿಗೆ ಇದೊಂದು ಅನಿರೀಕ್ಷಿತ ನಡೆಯಾಗಿತ್ತು. ಅವರ ನಾಟಕೀಯ ಭಾಷಣಗಳನ್ನೆಲ್ಲ ಈ ಆಲಿಂಗನ ಅಣಕಿಸುವಂತಿತ್ತು. ಜೊತೆಗೆ ವಿದೇಶಗಳಲ್ಲಿ ಕಂಡ ಕಂಡ ನಾಯಕರನ್ನು ಅತ್ಯುತ್ಸಾಹದಿಂದ ಆಲಂಗಿಸುವ ಮೋದಿಯ ಕೆಲಸವನ್ನು ಸಂಸತ್‌ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ರಾಹುಲ್ ವ್ಯಂಗ್ಯವಾಡಿದ್ದರು. ಹೊರಗಿನವರನ್ನು ತಬ್ಬಿದ್ದು ಸಾಕು, ಒಳಗಿನವರನ್ನು ಅಷ್ಟೇ ಆತ್ಮೀಯತೆಯಿಂದ ತಬ್ಬಿಕೊಳ್ಳಿ ಎನ್ನುವ ಸಂದೇಶವನ್ನು ಅವರು ಮೋದಿಗೆ ರವಾನಿಸಿದರು. ಅರೆಕ್ಷಣ ನರೇಂದ್ರ ಮೋದಿಯವರೇ ಇದರಿಂದ ತಬ್ಬಿಬ್ಬಾದರು. ಅದೆಲ್ಲಕ್ಕಿಂತ ಮುಖ್ಯವಾಗಿ, ಎಲ್ಲ ಮಾಧ್ಯಮಗಳ ಪುಟಗಳಲ್ಲಿ ರಾಹುಲ್ ಗಾಂಧಿ ಅನಿವಾರ್ಯವಾಗಿ ಕಾಣಿಸುವಂತಾಯಿತು. ಒಂದು ವೇಳೆ, ಬರೇ ಭಾಷಣದ ಮೂಲಕ ತನ್ನ ಮಾತುಗಳನ್ನು ಮುಗಿಸುತ್ತಿದ್ದರೆ, ಮರುದಿನ ಅವಿಶ್ವಾಸದ ಸೋಲಿನ ಜೊತೆಗೆ ಮೋದಿಯ ಭಾವಚಿತ್ರ ಮಾಧ್ಯಮಗಳ ಮುಖಪುಟದಲ್ಲಿ ಕಂಗೊಳಿಸುತ್ತಿತ್ತು. ಅನಿವಾರ್ಯವಾಗಿ ದೇಶ, ಈ ಆಕಸ್ಮಿಕ ಆಲಿಂಗನದ ಕಡೆ ಕತ್ತು ಹೊರಳಿಸುವಂತಾಯಿತು. ಮೋದಿ ಬದಿಗೆ ಸರಿದು, ಅವರನ್ನು ತಬ್ಬಿಕೊಂಡು ತಬ್ಬಿಬ್ಬು ಮಾಡಿದ ರಾಹುಲ್ ಸುದ್ದಿಯಾದರು. ಇದಾದ ಬಳಿಕ ಮೋದಿ ನೀಡಿದ ಸ್ಪಷ್ಟೀಕರಣವೆಲ್ಲವೂ ಆ ಆಲಿಂಗನದ ಆಘಾತದಿಂದ ಹೊರಬರಲಾಗದ ಬಡಾಯಿ ನಾಯಕನ ಬಡಬಡಿಕೆ ಮಾತ್ರವಾಗಿತ್ತು. ಒಣಗಿದ ಮರದಿಂದ ಉದುರಿದ ತರಗೆಲೆಯಂತಿತ್ತು ಮೋದಿಯ ಭಾಷಣ.

Writer - ಬಿ.ಎಂ. ಬಶೀರ್

contributor

Editor - ಬಿ.ಎಂ. ಬಶೀರ್

contributor

Similar News

ಜಗದಗಲ
ಜಗ ದಗಲ