ಶಿವಾಜಿ ಪ್ರತಿಮೆ ನಿರ್ಮಾಣ ಎನಿಸಿದಂತೆ ಸಾಧ್ಯವೇ?

Update: 2018-07-21 18:36 GMT

ಭಾಗ-2

ದೇಶದ ಅತ್ಯುನ್ನತ ಸಂಸ್ಥೆಗಳು ತಾರ್ಕಿಕ ವೈರುಧ್ಯವುಳ್ಳ ವರದಿಗಳನ್ನು ಯಾಂತ್ರಿಕವಾಗಿ ತಯಾರಿಸುತ್ತವೆ ಮತ್ತು ಸರಕಾರವು ಮುಖ್ಯ ವಿಷಯವನ್ನು ಮರೆಮಾಚಲು ನೆರವಾಗುತ್ತದೆ ಎಂಬುದೇ ದುಃಖದ ವಿಷಯ. ಐಐಟಿ-ಬೆಂಗಳೂರಿನಂಥ ಶೈಕ್ಷಣಿಕ ಸಂಸ್ಥೆ ಕೂಡಾ ತಪ್ಪನ್ನು ತಪ್ಪೆಂದು ಹೇಳಲು ವಿಫಲವಾಗಿದೆ. ದೇಶದ ಪ್ರಮುಖ ಇಂಜಿನಿಯರಿಂಗ್ ಕಂಪೆನಿಯು ಒಂದು ಅಸುರಕ್ಷಿತ ಯೋಜನೆಯ ಗುತ್ತಿಗೆಯನ್ನು ಪಡೆದುಕೊಂಡಿದೆ.

ಈ ಸಮಿತಿಗಳ ಮುಖ್ಯಸ್ಥರಿಗೆ ಯೋಜನೆ ಬಗ್ಗೆ ಅಷ್ಟಾಗಿ ಮಾಹಿತಿಯಿರುವುದಿಲ್ಲ, ಹಾಗಾಗಿ ಅವರು ಈ ವಿಷಯವನ್ನು ತಜ್ಞರು ಸರಿಯಾಗಿ ಓದಿರಬೇಕು ಎಂದು ನಿರೀಕ್ಷಿಸುತ್ತಾರೆ. ಶಿವಾಜಿ ಪ್ರತಿಮೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡ ಮುಖ್ಯ ಇಂಜಿನಿಯರ್ ಸಾರ್ವಜನಿಕ ಕಾರ್ಯ ಇಲಾಖೆಯ ವಿಶೇಷ ಯೋಜನೆ ವಿಭಾಗದವರಾಗಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿ ಬದಲಾವಣೆಗೊಂಡಿದ್ದಾರೆ, ಅದೂ ಪ್ರತಿಯೊಬ್ಬರ ನೇಮಕಾತಿಯ ಮಧ್ಯೆ ಸಮಯದಲ್ಲಿ ದೊಡ್ಡ ಅಂತರವಿದೆ. ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಮಾಜಿ ಸರಕಾರಿ ಅಧಿಕಾರಿಗಳ ಸಮಿತಿಗಳಿಂದ ನಿರ್ಮಿಸಲು ಸಾಧ್ಯವಿಲ್ಲ. ದಕ್ಷಿಣ ಮುಂಬೈಯ ಕೊಲಾಬಾದಲ್ಲಿರುವ ಕಫೆ ಪರೇಡ್‌ನಲ್ಲಿ ತೆರೆಯಲಾಗಿರುವ ಸ್ಮಾರಕ ನಿರ್ಮಾಣದ ಯೋಜನಾ ಕಚೇರಿಯೇ ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದ್ದು ಅದನ್ನು ಕೂಡಲೇ ವಿಶ್ವ ವ್ಯಾಪಾರ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ.

ಆದರೆ ಇಲ್ಲಿಯವರೆಗೂ ಈ ಆದೇಶವನ್ನು ಪಾಲಿಸಲಾಗಿಲ್ಲ. ಮತ್ತೊಂದೆಡೆ, ಅಹ್ಮದಾಬಾದ್‌ನಲ್ಲಿ ನಿರ್ಮಿಸಲಾಗುತ್ತಿರುವ ಏಕತಾ ಪ್ರತಿಮೆಯಲ್ಲಿ ನೇರವಾದ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲಾಗಿದ್ದು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರು ನೇರವಾಗಿ ನಿಂತಿರುವ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಈ ಪ್ರತಿಮೆಯನ್ನು ಸೆಕೆಂಡ್‌ಗೆ 44 ಮೈಲಿ ವೇಗದ ಗಾಳಿಯನ್ನು ತಡೆಯುವ ಸಾಮರ್ಥ್ಯಕ್ಕನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಮೆಯ ಬಲ ಕಾಲು ಸ್ವಲ್ಪ ಮುಂದಕ್ಕೆ ಚಾಚಿದ್ದೂ ಅದಕ್ಕೂ ನಿಖರವಾದ ವಿಶ್ಲೇಷಣೆಗಳನ್ನು ಮಾಡಲಾಗಿದೆ. ಪ್ರತಿಮೆಯ ನಿರ್ಮಾಣಕ್ಕೆ ಸಾಕಷ್ಟು ಸ್ಥಳಾವಕಾಶವಿದ್ದು ಈ ಪ್ರದೇಶವನ್ನು ವರ್ಷದ 365 ದಿನವೂ ತಲುಪಬಹುದಾಗಿದೆ. ಶಿವಾಜಿ ಸ್ಮಾರಕದ ವಿಷಯಕ್ಕೆ ಬಂದರೆ, ಪ್ರತಿಮೆಯ ಸುರಕ್ಷತೆಯ ವಿಷಯದ ಬಗ್ಗೆ ಭಾರತೀಯ ತಾಂತ್ರಿಕ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ಇಲಾಖೆಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. 2015ರ ಡಿಸೆಂಬರ್‌ನಲ್ಲಿ ಬರೆದ ಈ ಪತ್ರದಲ್ಲಿ ಸ್ಮಾರಕದ ರಚನಾತ್ಮಕ ಸ್ಥಿರತೆಯ ಅಧ್ಯಯನ ನಡೆಸುವಂತೆ ಸೂಚಿಸಲಾಗಿತ್ತು.

ಅಷ್ಟಕ್ಕೂ, ಇದಕ್ಕೂ ಮೊದಲ ಶಿವಾಜಿ ಸ್ಮಾರಕದ ರಚನಾತ್ಮಕ ವಿನ್ಯಾಸದಲ್ಲಿ ಯಾವುದೇ ಲೋಪವಿಲ್ಲ ಎಂದು ತಿಳಿಸಿದ್ದ ಐಐಟಿ-ಬಿ ಈ ಕಾರ್ಯವನ್ನು ಮಾಡಲು ಒಪ್ಪಿದ್ದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ವರದಿಯನ್ನು ಒಂದು ವಾರದ ಒಳಗೆ ಒಪ್ಪಿಸಲು ಐಐಟಿ-ಬಿ 2.29 ಲಕ್ಷ ರೂ.ನ ಕೊಟೇಶನ್ ನೀಡಿತ್ತು ಎಂಬುದು ಬೇರೆ ಮಾತು. 2016ರ ಆಗಸ್ಟ್‌ನಲ್ಲಿ ನೀಡಿದ ವರದಿಯಲ್ಲಿ, ಇಂಥ ರಚನೆಯನ್ನು ನಿರ್ಮಿಸಬಹುದು ಎಂದು ತಿಳಿಸಲಾಗಿತ್ತು. ಕೇವಲ ಏಳು ಪ್ಯಾರಾಗ್ರಾಫ್‌ಗಳನ್ನು ಒಳಗೊಂಡಿದ್ದ ಸಣ್ಣ ಅಂತಿಮ ವರದಿಯಲ್ಲಿ, ನಾಲ್ಕು ಚಿತ್ರಗಳು ಮತ್ತು ಅಂಕಿಅಂಶಗಳ ಒಂದು ಕಾಲಂ ಮತ್ತೊಂದು ಕಾಲಂನಲ್ಲಿ ತಪ್ಪಾಗಿ ಮುದ್ರಿಸಲ್ಪಟ್ಟಿತ್ತು.

ಈ ತಪ್ಪನ್ನು ಕಂಡುಹಿಡಿಯಲು ಸಾರ್ವಜನಿಕ ಕಾರ್ಯ ಇಲಾಖೆಗೆ ಎರಡು ವರ್ಷಗಳೇ ಬೇಕಾದವು. ಹಾಗಾಗಿ, ಈ ಯೋಜನೆಯಲ್ಲಿ ರಚನಾತ್ಮಕ ಸುರಕ್ಷತೆಗೆ ನೀಡಲಾಗಿರುವ ಪ್ರಾಮುಖ್ಯತೆಯೇನು ಎಂಬುದು ಸ್ಪಷ್ಟವಾಗುತ್ತದೆ. ಈ ಲೋಪವನ್ನು 2018ರ ಮೇನಲ್ಲಿ ಎಪಿಎಲ್‌ಐ ಮುಂಬೈ ಪತ್ತೆಮಾಡಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಯೋಜನೆಯ ವರದಿಯನ್ನು ಪಡೆದುಕೊಂಡ ಎಪಿಎಲ್‌ಐ, ಈ ವರದಿಯಲ್ಲಿ ನೀಡಲಾಗಿರುವ ಅಂಕಿಅಂಶಗಳು ಸಮರ್ಥನೀಯವಲ್ಲ ಎಂದು ತಿಳಿಸಿತ್ತು. ಶಿವಾಜಿಯ ಪ್ರತಿಮೆಯ ಕೈಯಲ್ಲಿರುವ ಖಡ್ಗವು 50 ಮೀ. ಉದ್ದ, 4 ಮೀ. ಹೊರವ್ಯಾಸ ಮತ್ತು 2 ಮೀ. ಒಳವ್ಯಾಸವನ್ನು ಹೊಂದಿರುವ ಟೊಳ್ಳು ಕಬ್ಬಿಣದ ಸಿಲಿಂಡರ್ ಆಗಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ ಜಾಲರಿಯಂಥ ವಿನ್ಯಾಸ ಹೊಂದಿರುವ ಈ ಖಡ್ಗವು ಕನಿಷ್ಠವೆಂದರೆ 1,200 ಟನ್ ತೂಗಲಿದೆ. ಈ ಖಡ್ಗಕ್ಕೆ ಒಂದು ಬದಿಯಲ್ಲಿ ಆಧಾರ ನೀಡಲಾಗಿ, ಅಲ್ಲಿಂದ ಸಮುದ್ರದ ಮಧ್ಯದಲ್ಲಿ 190 ಮೀ. (55 ಮಹಡಿ ಕಟ್ಟಡಕ್ಕೆ ಸಮ) ಚಾಚಿಕೊಳ್ಳಲಿದೆ. ಇನ್ನು ಐಐಟಿ-ಬಿ ಪ್ರಕಾರ, ಈ ಖಡ್ಗವನ್ನು ಹಿಡಿದಿರುವ ಕೈ 33.8 ಮೀ. ಉದ್ದವಾಗಿದ್ದು 8 ಮೀ. ಹೊರವ್ಯಾಸ ಮತ್ತು 5 ಮೀ. ಒಳವ್ಯಾಸವನ್ನು ಹೊಂದಿರಲಿದೆ. ಈ ವಿನ್ಯಾಸವು 8,000 ಟನ್ ತೂಕ ಹೊಂದಲಿದೆ. ಇಷ್ಟೊಂದು ದೈತ್ಯಾಕಾರದ ಹಿಡಿದಂಡನ್ನು ಮರುಪಡೆಯಲಾದ ಸಣ್ಣ ದ್ವೀಪದಲ್ಲಿ ಸ್ಥಾಪಿಸಲು ಮತ್ತು ಆಧರಿಸಲು ಸಾಧ್ಯ ಎಂಬುದನ್ನು ಅಧ್ಯಯನವು ತಿಳಿಸಲು ಹೇಗೆ ಸಾಧ್ಯ? ಈ ಪ್ರಶ್ನೆಗಳನ್ನು ಐಐಟಿ-ಬಿಗೆ ಕೇಳಲಾಗಿದ್ದು, ಇದಕ್ಕೆ ವಿವರಣೆ ನೀಡಲು ಸಂಸ್ಥೆ ಒಪ್ಪಿಕೊಂಡಿದೆ. ಆದರೆ ಸಾರ್ವಜನಿಕ ಕಾರ್ಯ ಇಲಾಖೆಯಿಂದ ಈ ಕುರಿತು ಯಾವುದೇ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ.

ಈ ಯೋಜನೆಗೆ ಯೋಜನಾ ವ್ಯವಸ್ಥಾಪನಾ ಸಮಾಲೋಚಕರನ್ನು ನೇಮಿಸುವ ಉದ್ದೇಶದಿಂದ 2015ರ ಅಕ್ಟೋಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ನಾಲ್ಕು ಬಿಡ್ಡುದಾರರ ಪೈಕಿ, ಟಾಟಾ ಕನ್ಸಲ್ಟೆನ್ಸಿಯ ಇಂಜಿನಿಯರ್‌ಗಳು ಶಿವಾಜಿ ಮಹಾರಾಜ್ ಪೀಠದಲ್ಲಿ ಕುಳಿತಿರುವ ಸ್ಮಾರಕವನ್ನು ನಿರ್ಮಿಸುವ ಸಲಹೆ ನೀಡಿತ್ತು. ಆದರೆ, ನಿಗಾ ಸಮಿತಿಯು ಈ ಯೋಜನೆಯ ಜವಾಬ್ದಾರಿಯನ್ನು ಲಂಡನ್ ಮೂಲದ ಎಜಿಸ್ ಇಂಡಿಯಗೆ ಒಪ್ಪಿಸಿತು. ಎಜಿಸ್‌ನ ಶುಲ್ಕವೇ 94.7 ಕೋಟಿ ರೂ. ಅದರಲ್ಲೂ ಶೇ. 40 (37 ಕೋಟಿ ರೂ.) ಟೆಂಡರ್ ಮೊದಲೇ ನೀಡಬೇಕಾಗಿದೆ. ಯೋಜನೆಯ ವಿನ್ಯಾಸ ಪರಿಕಲ್ಪನಾ ವರದಿ ಮತ್ತು ನಿರ್ಮಾಣಕ್ಕೆ ಟೆಂಡರ್ ದಾಖಲೆಗಳನ್ನು ರಚಿಸಿದ ಎಜಿಸ್, ಈ ಯೋಜನೆಯ ವಿನ್ಯಾಸ, ಇಂಜಿನಿಯರಿಂಗ್, ನಿರ್ಮಾಣ ಮತ್ತು ನಿರ್ವಹಣೆ ಮುಂತಾದ ಎಲ್ಲ ಜವಾಬ್ದಾರಿಗಳನ್ನು ಅಸಹಾಯಕ ಗುತ್ತಿಗೆದಾರನ ಮೇಲೆ ಹಾಕಿತು. ಒಂದು ಸಾವಿರ ಪುಟಗಳ ಪರಿಕಲ್ಪನಾ ವರದಿ ಅಥವಾ ಟೆಂಡರ್ ದಾಖಲಾತಿಯಲ್ಲಿ ಯಾವ ಕಡೆಯೂ ಮಾನ್ಸೂನ್ ಸಮಯದಲ್ಲಿ ಈ ಪ್ರದೇಶಕ್ಕೆ ತೆರಳಲು ಸಾಧ್ಯವಿಲ್ಲ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇನ್ನು ಮುಂಬೈ ಬಂದರಿನಲ್ಲಿ ಸಂಚರಿಸುವ 200 ಪ್ರಯಾಣಿಕ ಬೋಟ್‌ಗಳಿಗೆ ಮುಂಬೈ ದ್ವೀಪದ ದಕ್ಷಿಣ ತುದಿಯಾಗಿರುವ ಕೊಲಬಾವನ್ನು ದಾಟುವ ಅನುಮತಿಯಿಲ್ಲ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಭಾರತೀಯ ಸರಕಾರದ ಗೆಜೆಟ್‌ನಲ್ಲಿ ತಿಳಿಸಿರುವಂತೆ ಒಳನಾಡು ಹಡಗುಗಳ ಕಾಯ್ದೆಯಡಿ ನೋಂದಾವಣಿಗೊಂಡಿರುವ ಬೋಟ್‌ಗಳು ಮೂಲ ಗಡಿಯನ್ನು ದಾಟಿ ಹೋಗುವಂತಿಲ್ಲ.

ಈ ಮೂಲ ಗಡಿಯನ್ನು ದಾಟಬೇಕಾದರೆ ವ್ಯಾಪಾರಿ ಹಡಗು ಕಾಯ್ದೆಯಡಿ ಪ್ರಮಾಣ ಪತ್ರ ಪಡೆದುಕೊಳ್ಳುವ ಅಗತ್ಯವಿದೆ. ಜೊತೆಗೆ ಭಾರತೀಯ ಹಡಗು ನೋಂದಣಿಯಲ್ಲಿ ಸೂಚಿಸಲಾಗಿರುವ ಕಠಿಣ ನಿಯಮಗಳನ್ನು ಪಾಲಿಸಲು ಯಂತ್ರವನ್ನು ಮೇಲ್ದರ್ಜೆಗೇರಿಸಬೇಕಾಗುತ್ತದೆ. ಇದರಿಂದಾಗಿ ನೂರು ಪ್ರಯಾಣಿಕ ಬೋಟ್‌ಗಳ ಮೇಲಿನ ವೆಚ್ಚ ಮೂರು ಕೋಟಿ ರೂ.ನಿಂದ ಹತ್ತು ಕೋಟಿ ರೂ. ಗೆ ತಲುಪುತ್ತದೆ. ಹಾಗಾಗಿ ಈ ಸ್ಮಾರಕ ದ್ವೀಪಕ್ಕೆ ತೆರಳಲು ಸಾರ್ವಜನಿಕರಿಗೆ ಅಸಾಧ್ಯವಾಗಲಿದೆ. ದೇಶದ ಅತ್ಯುನ್ನತ ಸಂಸ್ಥೆಗಳು ತಾರ್ಕಿಕ ವೈರುಧ್ಯವುಳ್ಳ ವರದಿಗಳನ್ನು ಯಾಂತ್ರಿಕವಾಗಿ ತಯಾರಿಸುತ್ತವೆ ಮತ್ತು ಸರಕಾರವು ಮುಖ್ಯ ವಿಷಯವನ್ನು ಮರೆಮಾಚಲು ನೆರವಾಗುತ್ತದೆ ಎಂಬುದೇ ದುಃಖದ ವಿಷಯ. ಐಐಟಿ-ಬೆಂಗಳೂರಿನಂಥ ಶೈಕ್ಷಣಿಕ ಸಂಸ್ಥೆ ಕೂಡಾ ತಪ್ಪನ್ನು ತಪ್ಪೆಂದು ಹೇಳಲು ವಿಫಲವಾಗಿದೆ. ದೇಶದ ಪ್ರಮುಖ ಇಂಜಿನಿಯರಿಂಗ್ ಕಂಪೆನಿಯು ಒಂದು ಅಸುರಕ್ಷಿತ ಯೋಜನೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಕೇವಲ ಎರಡು ವಾರಗಳ ಮೊದಲು, ವಾಯು ನಿಯಂತ್ರಣ ಸಾಮರ್ಥ್ಯ ಪರೀಕ್ಷೆ, ಹವಾಮಾನ ಮತ್ತು ಲೋಹಶಾಸ್ತ್ರದ ಅಧ್ಯಯನಗಳ ವರದಿ ಪಡೆದುಕೊಳ್ಳುವಂತೆ ಈ ಕಂಪೆನಿ ಕೇಳಿಕೊಂಡಿದೆ. ಈ ಒಪ್ಪಂದದಲ್ಲಿ ಗುತ್ತಿಗೆದಾರ ಸಂಸ್ಥೆಯು 2018ರ ಮಾರ್ಚ್ 1ರಿಂದ ಆರಂಭಿಸಿ 2021ರ ಫೆಬ್ರವರಿ 28 ಒಳಗಾಗಿ ಈ ಯೋಜನೆಯನ್ನು ಸಂಪೂರ್ಣಗೊಳಿಸುವುದಾಗಿ ತಿಳಿಸಿದೆ. ಆದರೆ ಇದು ಅಸಾಧ್ಯ ಎಂಬುದು ಸ್ಪಷ್ಟ. ಹಾಗಾಗಿ ಒಪ್ಪಂದದಲ್ಲಿರುವ ನಿಬಂಧನೆಗಳನ್ನು ಕಂಪೆನಿಯು ಪೂರೈಸಲು ವಿಫಲವಾಗುವ ಹಿನ್ನೆಲೆಯಲ್ಲಿ ಈ ಸ್ಮಾರಕ ನಿರ್ಮಾಣ ವೆಚ್ಚವೂ ಏರಿಕೆಯಾಗುವ ಸಾಧ್ಯತೆಯಿದೆ. ಕಾನೂನು ಪಾಲಿಸುವ ನಾಗರಿಕರು ಇಂಥ ಲೋಪವೇ ತುಂಬಿರುವ ಯೋಜನೆಗೂ ಮರುಮಾತಿಲ್ಲದೆ ಹಣವನ್ನು ಒದಗಿಸಬೇಕಿರುವುದು ಮಾತ್ರ ಅಸಹನೀಯ.

ಕೃಪೆ: thewire.in

Writer - ಐ. ಸಿ. ರಾವ್

contributor

Editor - ಐ. ಸಿ. ರಾವ್

contributor

Similar News

ಜಗದಗಲ
ಜಗ ದಗಲ