ಮಹಾರಾಜ್ ಸಾಹಸದ ಹೊರತಾಗಿಯೂ ಆಫ್ರಿಕಕ್ಕೆ ಹಿನ್ನಡೆ

Update: 2018-07-21 19:02 GMT

ಕೊಲಂಬೊ, ಜು.21: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇಶವ್ ಮಹಾರಾಜ್(9-129) ಟೆಸ್ಟ್ ಇನಿಂಗ್ಸ್‌ನಲ್ಲಿ ಎರಡನೇ ಶ್ರೇಷ್ಠ ಬೌಲಿಂಗ್ ಮಾಡಿದ ದಕ್ಷಿಣ ಆಫ್ರಿಕದ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. ಆದಾಗ್ಯೂ, ಎರಡನೇ ದಿನವಾದ ಶನಿವಾರ ದಿನದಾಟದಂತ್ಯಕ್ಕೆ ದ.ಆಫ್ರಿಕ ಹಿನ್ನಡೆ ಕಂಡಿದೆ.

 ಶ್ರೀಲಂಕಾದ ಮೊದಲ ಇನಿಂಗ್ಸ್ 338 ರನ್‌ಗೆ ಉತ್ತರಿಸಹೊರಟ ದ.ಆಫ್ರಿಕ ಆಟಗಾರರು ಸ್ಪಿನ್ನರ್‌ಗಳಾದ ಅಖಿಲ ಧನಂಜಯ(5-52) ಹಾಗೂ ದಿಲ್ರುವಾನ್ ಪೆರೇರ(4-40)ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ 34.5 ಓವರ್‌ಗಳಲ್ಲಿ 124 ರನ್‌ಗೆ ಗಂಟುಮೂಟೆ ಕಟ್ಟಿದರು. ಆಫ್ರಿಕದ ಪರ ಎಫ್‌ಡು ಪ್ಲೆಸಿಸ್(48) ಹಾಗೂ ಕ್ವಿಂಟನ್ ಡಿಕಾಕ್(32) ಎರಡಂಕೆಯ ಸ್ಕೋರ್ ದಾಖಲಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 214 ರನ್ ಮುನ್ನಡೆ ಪಡೆದಿರುವ ಶ್ರೀಲಂಕಾ 2ನೇ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿತ್ತು. ಒಟ್ಟು 365 ರನ್ ಮುನ್ನಡೆಯಲ್ಲಿದೆ.

ಗುಣತಿಲಕ(61) ಹಾಗೂ ಕರುಣರತ್ನೆ (ಔಟಾಗದೆ 59)ಮೊದಲ ವಿಕೆಟ್‌ಗೆ 91 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದಾರೆ. ಕುಸಾಲ್ ಮೆಂಡಿಸ್(18)ರನೌಟಾದರು. ಧನಂಜಯ ಡಿಸಿಲ್ವಾ ಖಾತೆ ತೆರೆಯಲು ವಿಫಲರಾದರು. ಸರಣಿಯಲ್ಲಿ ಸತತ 4ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಕರುಣರತ್ನೆ(59, 92 ಎಸೆತ, 8 ಬೌಂಡರಿ) ಹಾಗೂ ಮ್ಯಾಥ್ಯೂಸ್(ಔಟಾಗದೆ 12)ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಕೇಶವ್ ಮಹಾರಾಜ್ 90 ರನ್‌ಗೆ 2 ವಿಕೆಟ್ ಪಡೆದಿದ್ದಾರೆ.

ಇದಕ್ಕೆ ಮೊದಲು 9 ವಿಕೆಟ್ ನಷ್ಟಕ್ಕೆ 277 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ಪರ ಕೊನೆಯ ವಿಕೆಟ್‌ನಲ್ಲಿ 74 ರನ್ ಸೇರಿಸಿದ ಅಖಿಲ ಧನಂಜಯ(ಔಟಾಗದೆ 43) ಹಾಗೂ ರಂಗನ ಹೆರಾತ್ ದಕ್ಷಿಣ ಆಫ್ರಿಕ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ತಂಡದ ಮೊತ್ತವನ್ನು 338ಕ್ಕೆ ವಿಸ್ತರಿಸಿದರು. ಇದೇ ವೇಳೆ, ದ.ಆಫ್ರಿಕದ ಮಹಾರಾಜ್ 129 ರನ್‌ಗೆ 9 ವಿಕೆಟ್ ಕಬಳಿಸಿದರು. ಹ್ಯೂಗ್ ಟೇಫೀಲ್ಡ್(9-113) ನಂತರ ಈ ಸಾಧನೆ ಮಾಡಿದ ಆಫ್ರಿಕದ ಎರಡನೇ ಬೌಲರ್ ಎನಿಸಿಕೊಂಡರು. 1957ರಲ್ಲಿ ಟೇಫೀಲ್ಡ್ ಅವರು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

ಮಹಾರಾಜ್ ವಿದೇಶಿ ನೆಲದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ದಕ್ಷಿಣ ಆಫ್ರಿಕದ ಮೊದಲ ಆಟಗಾರ ಎನಿಸಿಕೊಂಡರು. 1996ರಲ್ಲಿ ಕೋಲ್ಕತಾದಲ್ಲಿ ಲ್ಯಾನ್ಸ್ ಕ್ಲೂಸ್ನರ್(8-64) ಉತ್ತಮ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News