ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ವೃದ್ಧಿಮಾನ್ ಸಹಾ

Update: 2018-07-21 19:15 GMT

ಹೊಸದಿಲ್ಲಿ, ಜು.21: ಟೀಮ್ ಇಂಡಿಯದ ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಶನಿವಾರ ತಿಳಿಸಿದೆ. ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿರುವ ವೈದ್ಯ ಡಾ. ಲೆನ್ನರ್ಡ್ ಫಂಕ್ ಸಹಾಗೆ ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಸಹಾರನ್ನು ಕೈಬಿಡಲಾಗಿದೆ. ಸದ್ಯ ಅವರು ಸಂಪೂರ್ಣವಾಗಿ ಗುಣಮುಖರಾಗಲು ಎಷ್ಟು ಸಮಯ ಬೇಕಾಗಬಹುದು ಎಂಬ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಚಿಕಿತ್ಸೆಯ ಮತ್ತು ಸಮಾಲೋಚನೆಯ ಸಂಪೂರ್ಣ ಸಿದ್ಧತೆಯನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯು ಭಾರತೀಯ ತಂಡದ ವ್ಯವಸ್ಥಾಪನಾ ಮಂಡಳಿ ಮತ್ತು ವೈದ್ಯರ ಸಮನ್ವಯದೊಂದಿಗೆ ನಡೆಸಿದೆ ಎಂದು ಬಿಸಿಸಿಐ ತಿಳಿಸಿದೆ. 

ಜನವರಿಯಲ್ಲಿ ಟೀಮ್‌ಇಂಡಿಯಾ ಕೈಗೊಂಡ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ 33ರ ಹರೆಯದ ಸಹಾ ಭುಜದ ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ಅವರು ಎನ್‌ಸಿಎಗೆ ನಂತರ ಮಾಹಿತಿ ನೀಡಿದ್ದರು. ಐಪಿಎಲ್ ಪಂದ್ಯಾವಳಿಯ ವೇಳೆ ಹೆಬ್ಬೆರಳ ಗಾಯದ ಸಮಸ್ಯೆಗೆ ಒಳಗಾಗಿದ್ದ ಸಹಾ ದೀರ್ಘ ಸಮಯದ ವಿಶ್ರಾಂತಿಯ ನಂತರ ಚೇತರಿಕೆ ಕಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News