ತನ್ನದೇ ರಾಷ್ಟ್ರೀಯ ದಾಖಲೆ ಮುರಿದ ಭಾರತದ ಓಟಗಾರ ಮುಹಮ್ಮದ್ ಅನಸ್

Update: 2018-07-22 09:57 GMT

ಹೊಸದಿಲ್ಲಿ, ಜು.22: ಭಾರತದ ಸ್ಟಾರ್ ಓಟಗಾರ ಮುಹಮ್ಮದ್ ಅನಸ್ ಯಹ್ಯಾ ಮತ್ತೊಮ್ಮೆ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಮೂಡಿಸಿಕೊಂಡಿದ್ದಾರೆ.

ಝೆಕ್ ಗಣರಾಜ್ಯದಲ್ಲಿ ಶನಿವಾರ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 400 ಮೀ. ಓಟದಲ್ಲಿ ಜಯ ಸಾಧಿಸಿರುವ ಅನಸ್ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಅನಸ್ 45.24 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಿರ್ಮಿಸಿದ್ದ ತನ್ನದೇ ರಾಷ್ಟ್ರೀಯ ದಾಖಲೆ(45.31 ಸೆ.)ಮುರಿದು ಹೊಸ ದಾಖಲೆ ಬರೆದರು.

ಝೆಕ್ ಗಣರಾಜ್ಯದಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಮುಹಮ್ಮದ್ ಅನಸ್‌ಗೆ ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದೆ.

ಇದೇ ವೇಳೆ, ಎಂ.ಆರ್. ಪೂವಮ್ಮ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ 53.01 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿದ್ದಾರೆ. ಓಟಗಾರ ರಾಜೀವ್ ಅರೋಕಿಯ ಪುರುಷರ 200 ಮೀ. ಓಟದ ಸ್ಪರ್ಧೆಯಲ್ಲಿ 20.77 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

 ಅನಸ್ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ಗೆ ತಲುಪಿದ ಭಾರತದ ಎರಡನೇ ಓಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದರು. ಅಥ್ಲೆಟಿಕ್ಸ್ ದಂತಕತೆ ಮಿಲ್ಕಾ ಸಿಂಗ್ 1958ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 440 ಯಾರ್ಡ್ಸ್ ರೇಸ್‌ನಲ್ಲಿ ಫೈನಲ್‌ಗೆ ತಲುಪಿ ಚಿನ್ನ ಜಯಿಸಿದ ಮೊದಲಿಗನಾಗಿದ್ದಾರೆ.

ಅನಸ್ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನ 400 ಮೀ. ಫೈನಲ್‌ನಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದರು. 45.31 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಅನಸ್ ಇಂಡಿಯನ್ ಗ್ರಾನ್‌ಪ್ರಿನಲ್ಲಿ ತಾನೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(45.32 ಸೆ.) ಮುರಿಯಲು ಯಶಸ್ವಿಯಾಗಿದ್ದರು. ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 45.77 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಅನಾಸ್ ಚಿನ್ನದ ಪದಕ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News