ರಾಹುಲ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಮಂಡಿಸಿದ ಬಿಜೆಪಿ

Update: 2018-07-22 15:31 GMT

ಹೊಸದಿಲ್ಲಿ, ಜು.22: ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ನಾಲ್ವರು ಬಿಜೆಪಿ ಸಂಸದರು ರಾಹುಲ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.

ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಅನುರಾಗ್ ಠಾಕೂರ್, ದುಶ್ಯಂತ್ ಸಿಂಗ್ ಮತ್ತು ಪ್ರಹ್ಲಾದ್ ಜೋಶಿ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದವರು. ಸದಸ್ಯರ ವಿರುದ್ಧ ಆರೋಪ ಮಾಡುವ ಮೊದಲು ನೋಟಿಸ್ ನೀಡುವ ನಿಯಮವಿದೆ. ಆರೋಪಕ್ಕೆ ಪೂರಕವಾದ ಅಂಶಗಳನ್ನೂ ಸ್ಪೀಕರ್‌ಗೆ ಸಲ್ಲಿಸಬೇಕು. ಆದರೆ ರಾಹುಲ್ ಗಾಂಧಿ ಇದನ್ನು ಮಾಡಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್ ಹೇಳಿದ್ದಾರೆ. ಸರಕಾರದ ವಿರುದ್ಧ ಸಲ್ಲಿಸಲಾಗಿದ್ದ ಅವಿಶ್ವಾಸ ನಿರ್ಣಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, “ಫ್ರಾನ್ಸ್‌ನೊಂದಿಗಿನ ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ಗೋಪ್ಯತೆಯ ಷರತ್ತು ಇರುವ ಕಾರಣ ಕೆಲವು ಅಂಶಗಳನ್ನು ಬಹಿರಂಗಗೊಳಿಸಲಾಗದು ಎಂದು ಹೇಳುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೇಶಕ್ಕೆ ಸುಳ್ಳುಮಾಹಿತಿ ನೀಡಿದ್ದಾರೆ. ಈ ರೀತಿಯ ಷರತ್ತು ಒಪ್ಪಂದದಲ್ಲಿ ಇಲ್ಲ ಎಂದು ಫ್ರಾನ್ಸಿನ ಅಧ್ಯಕ್ಷರು ತನಗೆ ಸ್ಪಷ್ಟವಾಗಿ ತಿಳಿಸಿದ್ದಾರೆ” ಎಂದು ಹೇಳಿದ್ದರು. ಆದರೆ ಇದನ್ನು ನಿರಾಕರಿಸಿದ್ದ ನಿರ್ಮಲಾ ಸೀತಾರಾಮನ್, “2008ರಲ್ಲಿ ಯುಪಿಎ ಆಡಳಿತಾವಧಿಯಲ್ಲೇ ಸಹಿ ಹಾಕಲಾಗಿದ್ದ ಈ ವ್ಯವಹಾರದ ಆರಂಭಿಕ ಒಡಂಬಡಿಕೆಯಲ್ಲೇ ಗೋಪ್ಯತೆಯ ಷರತ್ತು ಒಳಗೊಂಡಿತ್ತು” ಎಂದಿದ್ದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್, “ರಫೇಲ್ ಒಪ್ಪಂದಲ್ಲಿ ಮೋದಿ ಓರ್ವ ಉದ್ಯಮಿಗೆ ಅನುಕೂಲ ಮಾಡಿಕೊಟ್ಟಿದ್ದರು ಹಾಗೂ ಡೋಕ್ಲಮ್‌ನಲ್ಲಿ ಭಾರತದ ಸೇನೆಗೆ ವಿಶ್ವಾಸದ್ರೋಹ ಬಗೆದಿದ್ದಾರೆ” ಎಂದು ಆರೋಪಿಸಿದ್ದರು.

ರಾಹುಲ್ ಯಾವುದೇ ಆಧಾರವಿಲ್ಲದೆ ಆರೋಪ ಹೊರಿಸಿರುವುದನ್ನು ಹಕ್ಯುಚ್ಯುತಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅನಂತ್‌ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News