ಅಲ್ಪಸಂಖ್ಯಾತ ಸಮುದಾಯದ ಶಾಲಾ ಬಾಲಕಿಯರ ಸ್ಕಾಲರ್‌ಶಿಪ್ ಹೆಚ್ಚಳ

Update: 2018-07-22 17:50 GMT

ಹೊಸದಿಲ್ಲಿ, ಜು.22: ಅಲ್ಪಸಂಖ್ಯಾತ ಸಮುದಾಯದ ಶಾಲಾ ಬಾಲಕಿಯರಿಗೆ ನೀಡಲಾಗುವ ಸ್ಕಾಲರ್‌ಶಿಪ್ ಮೊತ್ತವನ್ನು ಶೇ.15ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ತಿಳಿಸಿದೆ.

ಶಾಲಾ ಬಾಲಕಿಯರಿಗೆ ನೀಡಲಾಗುವ ‘ಬೇಗಮ್ ಹಝ್ರತ್ ಮಹಲ್ ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆ’ಯ ಅನುದಾನವನ್ನು ಹೆಚ್ಚಿಸಲು ಹಾಗೂ ಯೋಜನೆಯ ಕುರಿತು ತೀವ್ರ ಪ್ರಚಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿರುವುದಾಗಿ ವೌಲಾನಾ ಆಝಾದ್ ಶಿಕ್ಷಣ ಪ್ರತಿಷ್ಠಾನ(ಎಂಎಇಎಫ್) ತಿಳಿಸಿದೆ. ಇದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಅಧೀನ ಸಂಸ್ಥೆಯಾಗಿದೆ .

ಈ ಯೋಜನೆಯಡಿ 2017-18ರಲ್ಲಿ ಸುಮಾರು 1,15,000 ಬಾಲಕಿಯರಿಗೆ ಸ್ಕಾಲರ್‌ಶಿಪ್ ನೀಡಲಾಗಿದೆ. ಇದಕ್ಕಾಗಿ ಸುಮಾರು 78 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಈ ವರ್ಷ ಮೊತ್ತವನ್ನು 90 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು ಈ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಯೋಜನೆಯಂತೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 5,000 ರೂ. ಹಾಗೂ 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 6,000 ರೂ.ಗಳ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಎಂಎಇಎಫ್ ದೇಶದಾದ್ಯಂತ ಸುಮಾರು 300 ‘ಗರೀಬ್ ನವಾಝ್ ಕೌಶಲ್ಯ ಅಭಿವೃದ್ಧಿ ಕೇಂದ್ರ’ಗಳನ್ನು ನಡೆಸುತ್ತಿದೆ ಎಂದು ಎಂಎಇಎಫ್ ಕಾರ್ಯದರ್ಶಿ ರಿಝ್ವನೂರ್ ರಹ್ಮಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News