ಜಾತಿಯೆಂಬುದೊಂದು ವಿಷಸರ್ಪ

Update: 2018-07-22 18:36 GMT
ಹಿಮಾದಾಸ್

ಇತ್ತೀಚೆಗೆ ಅಂತರ್ಜಾಲದಲ್ಲಿ ಬಂದಿದ್ದ ಒಂದು ಸಂದೇಶ ಓದುತ್ತಿದ್ದೆ, ಅದನ್ನು ಓದಿ ಬಹಳ ಹೇಸಿಗೆ ಎನಿಸಿತು. ಮೊನ್ನೆ ಮೊನ್ನೆ ಫ್ರಾನ್ಸ್‌ನಲ್ಲಿ ನಡೆದ ಅಥ್ಲೆಟಿಕ್ಸ್ ನಲ್ಲಿ ಭಾರತದ ಹಿಮಾದಾಸ್ ಎಂಬ ದಲಿತ ಹೆಣ್ಣು ಮಗಳೊಬ್ಬಳು 400 ಮೀಟರ್ ಓಟದಲ್ಲಿ ಮೊದಲಿಗಳಾಗಿ ಚಿನ್ನದ ಪದಕವನ್ನು ಗೆದ್ದಳು. ಇದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡಬೇಕೇ ಹೊರತು ಆ ಹೆಣ್ಣು ಮಗಳ ಜಾತಿ ಹುಡುಕುವ ವಿಕೃತ ಬುದ್ಧಿ ಏಕೆ ಬೇಕು. ಅದೇ ವಿಷಯವಾಗಿ ಆ ಸಂದೇಶದ ಪ್ರಕಾರ ಚಿನ್ನದ ಪದಕ ಗೆದ್ದ ಮಹಿಳೆಯ ಜಾತಿ ಯಾವುದೆಂದು ಪ್ರತಿಷ್ಠಿತ ಹುಡುಕಾಟದ ಜಾಲವಾದ ಗೂಗಲ್‌ನಲ್ಲಿ ಅತಿ ಹೆಚ್ಚು ಜನ ಹುಡುಕಿದ್ದಾರಂತೆ.
ಒಬ್ಬ ಭಾರತೀಯ ಹೆಣ್ಣು ಮಗಳು ವಿಶ್ವದ ಬಲಾಢ್ಯ ಓಟಗಾರ್ತಿಯರನ್ನೆಲ್ಲಾ ಹಿಂದಿಕ್ಕಿ ಮೊದಲನೆಯವಳಾಗಿ ಚಿನ್ನದ ಪದಕ ಗೆದ್ದಿರುವವಳನ್ನು ಜಾತಿ ಹುಡುಕಲು ಹೋಗಿದ್ದಾರಲ್ಲ ಎಂಥ ನಾಚಿಕೆಗೇಡಿನ ಸಂಗತಿ ನಮ್ಮ ಜನಕ್ಕೆ. ಅವಳೂ ಭಾರತೀಯಳಲ್ಲವೇ? ನಮ್ಮ ಸೋದರಿಯಲ್ಲವೇ? ಇದೇನಾ ನಮ್ಮ ಹಿಂದೂ ಧರ್ಮದ ಸಂಸ್ಕೃತಿ. ಹೀಗೆ ಎಲ್ಲಾ ವಿಷಯಗಳಲ್ಲಿ ಜಾತಿ ಹುಡುಕುತ್ತಿರುವುದರಿಂದಲೇ ನಮ್ಮ ದೇಶದ ಹಿಂದುಳಿದ ಜಾತಿಗಳಲ್ಲಿ ಅದೆಷ್ಟೋ ಪ್ರತಿಭಾವಂತರುಗಳು ಅವಕಾಶವಂಚಿತರಾಗಿ ಮೂಲೆಗುಂಪಾಗಿದ್ದಾರೆ. ಜೊತೆಗೆ ಜಾತಿ ರಾಜಕೀಯ ಬೆರೆಸಿ ಅಪ್ರತಿಭಾವಂತರಿಗೆ ಅವಕಾಶ ನೀಡಿ ದೇಶದ ಉನ್ನತಿಗೆ ಅಡ್ಡಗಾಲಾಗುತ್ತಿದ್ದಾರೆ.
ಜಾತಿ ಎಂಬ ವಿಷಯಕ್ಕೆ ಎಲ್ಲಿಂದ ಬೇರು ಬಂದಿದೆ ಎಂದು ತಿಳಿಯಲು ಹೊರಟರೆ ಆಶ್ಚರ್ಯವಾಗುತ್ತದೆ. ಪ್ರೊಫೆಸರ್ ಕೆ.ಎಸ್.ಭಗವಾನ್ ಅವರು ಒಂದು ಟಿವಿ ಸಂದರ್ಶನದಲ್ಲಿ ತ್ರೇತಾಯುಗದಲ್ಲಿ ನಡೆಯಿತೆನ್ನಲಾದ ರಾಮಾಯಣದಲ್ಲೂ ಕೂಡ ಈ ಜಾತಿಯ ಚಾತುರ್ವರ್ಣ ನೀತಿ ಚಾಲ್ತಿಯಲ್ಲಿತ್ತು ಎಂದು ಹೇಳುತ್ತಾರೆ. ಅವರ ಪ್ರಕಾರ ಶೂದ್ರನೊಬ್ಬ ದೇವರ ಕುರಿತು ತಪಸ್ಸು ಮಾಡುತ್ತಿರುತ್ತಾನೆ, ಅದನ್ನು ನೋಡಿದ ಬ್ರಾಹ್ಮಣ ಶಾಹಿಯೊಬ್ಬ ಪರಮ ಪುರುಷೋತ್ತಮನೆನಿಸಿದ ದಶರಥನ ಪ್ರೀತಿಯ ಪುತ್ರ ಶ್ರೀರಾಮಚಂದ್ರನ ಹತ್ತಿರ ಬಂದು ಪ್ರಭುವೇ ಶುದ್ರನೊಬ್ಬ ಘೋರ ತಪಸ್ಸು ಮಾಡುತ್ತಿದ್ದಾನೆ, ಅವರೆಲ್ಲ ತಪಸ್ಸು ಮಾಡಿದರೆ ನಮ್ಮ ಜಾತಿಗೇ ಅವಮಾನ ಎಂದು ಕಿವಿ ಹಿಂಡುತ್ತಾನೆ. ಹಿಂದು ಮುಂದು ಯೋಚಿಸದೆ ಲೋಕೋದ್ಧಾರಕನೆನಿಸಿದ ಜಾನಕಿರಾಮನು ಆ ಬ್ರಾಹ್ಮಣನ ಮಾತು ಕೇಳಿ ಆ ಶೂದ್ರನನ್ನು ಕೊಲ್ಲಲು ಆಜ್ಞಾಪಿಸುತ್ತಾನೆ.ಇದರಿಂದಲೇ ತಿಳಿಯುತ್ತದೆ ಈ ಜಾತಿ ಎಂಬ ಅಂಟು ರೋಗ ಯುಗಯುಗಗಳಿಂದಲೂ ಬಂದಿದೆಯೆಂದು. ನಾವು ಶ್ರೀರಾಮನನ್ನು ದೇವರೆಂದು ಪೂಜಿಸುತ್ತೇವೆ. ದೇವರೇ ಜಾತಿಭೇದ ಮಾಡಿದ ಮೇಲೆ ಇನ್ನು ಸಾಮಾನ್ಯ ಜನರು ಸುಮ್ಮನಿರುತ್ತಾರೆಯೇ?.
ಜಾತಿಯು ಎಲ್ಲಿಂದ ಶುರುವಾಯಿತು ಎಂಬುದರ ಬಗ್ಗೆ ಇನ್ನೂ ಆಳವಾಗಿ ಅಧ್ಯಯನ ಮಾಡುತ್ತಾ ಹೋದರೆ ಪೂರ್ವಕಾಲದಿಂದಲೂ ಇದೆ ಎಂದು ತಿಳಿಯುತ್ತದೆ. ಈ ಜಾತಿಯ ವಿಷಯವಾಗಿ ದಾಸರೊಬ್ಬರು ತಮ್ಮ ಕೀರ್ತನೆಗಳಲ್ಲಿ ಈ ರೀತಿ ಹೇಳಿದ್ದಾರೆ.....
 ಹೊಲಸು ತಿನ್ನುವವನು ಹೊಲೆಯ
 ಪರಸ್ತ್ರೀಯನ್ನು ಬಯಸುವವನು ಹೊಲೆಯ
 ಕಳ್ಳತನ ಮಾಡುವವನು ಹೊಲೆಯ
 ಸುಲಿಗೆ ಮಾಡುವವನು ಹೊಲೆಯ
 ಎಂಬ ಸಾಲು ಸಾಲು ವಾಕ್ಯಗಳನ್ನು ಹೊಲೆಯ ಎಂಬ ಅಂತ್ಯ ಪ್ರಾಸದೊಂದಿಗೆ ಕೊನೆಗಾಣಿಸಿ ಬರೆದಿದ್ದಾರೆ. ಇಲ್ಲಿ ನಮಗೆ ಮೂಡುವ ಒಂದು ಪ್ರಶ್ನೆ ಹೊಲೆಯ ಎಂದರೆ ಯಾರು?. ಅವರದೇ ಪದ್ಯದ ಸಾಲಿನ ವ್ಯಾಖ್ಯಾನದ ಪ್ರಕಾರ ಹೊಲೆಯ ಎಂದರೆ ಅಸ್ಪೃಶ್ಯ ಎಂದರ್ಥವಾಗುತ್ತದೆ. ಅಸ್ಪಶ್ಯ ಎಂದರೆ ಮುಟ್ಟಿಸಿಕೊಳ್ಳದವರು ಎಂದಿದೆ. ಅಂಥ ವಿದ್ವಾಂಸರುಗಳೇ ಜಾತಿಯೆಂಬ ಬೀಜವನ್ನು ಬಿತ್ತಿ ಹೋಗಿದ್ದಾರೆ ಎನ್ನುವಾಗ ಇನ್ನು ಜಾತಿವಾದಿಗಳ ತಡೆಯಲಾದೀತೇ. ಅಸ್ಪಶ್ಯ ಎಂದು ಲೋಕರೂಢಿಯಾಗಿ ಖ್ಯಾತರಾಗಿರುವವರು ದಲಿತರು. ಅಸ್ಪಶ್ಯ ಎಂಬ ಪದವನ್ನೇ ಏಕೆ ಬಳಸಬೇಕಿತ್ತು?. ಬೇರೆ ಪದವನ್ನು ಬಳಸಬಹುದಿತ್ತಲ್ಲ ಎಂಬ ವಾದವೂ ನಡೆಯದಿರಲು ಅತಿಶಯೋಕ್ತಿಯೇನಲ್ಲ. ಇನ್ನು ಜಾತಿಯನ್ನೇ ಹೊದಿಕೆ ಮಾಡಿ ಮಲಗಿರುವ ಜಾತಿವಾದಿಗಳು ಬಿಡುತ್ತಾರೆಯೇ?.
ದೇಶಕ್ಕಾಗಿ ಹೋರಾಡಿ ಸ್ವಾತಂತ್ರ ಬರಲು ಮುಖ್ಯ ಕಾರಣವೆನಿಸಿದ ಮಹಾತ್ಮ ಗಾಂಧೀಜಿಯವರ ಮೇಲೂ ಜಾತಿವಾದದ ಆರೋಪ ಕೇಳಿ ಬಂದಿತ್ತು. ಅವರೇ ಹೇಳಿದಂತೆ ದಲಿತರನ್ನು ಹರಿಜನ ಎಂದು ಕರೆದ ಪರಿಣಾಮ ಜಾತಿ ವಿಂಗಡಣೆಗೆ ಬುನಾದಿ ಹಾಕಿದಂತಾಗಿ ಅವರ ಅನುಯಾಯಿಗಳಿಗೆ ಮತ್ತಷ್ಟು ಬಲ ಬಂದಂತಾಯಿತು. ಇನ್ನು ಶತಮಾನಗಳ ಹಿಂದೆಯೂ ಕೂಡ ಜಾತಿಯೆಂಬ ಪೆಡಂಭೂತ ತನ್ನ ಕರಿನಾಲಿಗೆಯನ್ನು ಎಲ್ಲಿಯವರೆಗೆ ಚಾಚಿತ್ತು ಎಂದರೆ 12ನೇ ಶತಮಾನದಲ್ಲಿ ಬಸವಣ್ಣನವರು ಶರಣರೆಲ್ಲರನ್ನು ಕೂಡಿಸಿಕೊಂಡು ಅನುಭವ ಮಂಟಪ ಕಟ್ಟಿ ಸಮಾನತೆಗೆ ಹೋರಾಡಿದರು. ಅದಕ್ಕೆ ಇಂಬು ಎಂಬಂತೆ ಅಂತರ್ಜಾತಿ ವಿವಾಹ ಮಾಡಿಸಿ ಜಾತಿ ನಿರ್ಮೂಲನೆ ನಾಂದಿ ಹಾಡಿದರಾದರೂ ಹೆಚ್ಚು ಫಲಪ್ರದವಾಗಲಿಲ್ಲ. ಈಗಿನ ಕಾಲದಂತೆಯೇ ಅಂದೂ ಕೂಡ ಜಾತಿವಾದಿಗಳು ಕಿಡಿಕಾರುತ್ತಲೇ ಇದ್ದರು.
ಸ್ವತಂತ್ರ ಪೂರ್ವದಲ್ಲಿ ಮಹಾತ್ಮಾ ಗಾಂಧಿಯವರ ಸಮಕಾಲೀನರಾದ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರು ಈ ಜಾತಿಯೆಂಬ ಕರಿನೆರಳಿನ ಜೊತೆ ಗುದ್ದಾಡಿ ಗೆದ್ದವರು. ದಲಿತ ಕುಲದಲ್ಲಿ ಹುಟ್ಟಿ ಈ ಕೆಟ್ಟ ಸಮಾಜದಲ್ಲಿ ಪಡಬಾರದ ಕಷ್ಟಪಟ್ಟು ಅದಕ್ಕೆ ತಕ್ಕಂತೆ ಓದಿನಲ್ಲಿ ವಿದ್ವತ್ತನ್ನು ಸಂಪಾದಿಸಿ ಸ್ವಾತಂತ್ರಾ ನಂತರದ ಆಧುನಿಕ ಭಾರತಕ್ಕೆ ಭದ್ರ ಬುನಾದಿಯೆಂಬಂತೆ ಸಂವಿಧಾನ ಎಂಬ ಬೃಹತ್ ಗ್ರಂಥವನ್ನು ಕೊಟ್ಟು ಸಂವಿಧಾನದ ಮುಖಾಂತರ ದಲಿತರಿಗೆ ಹಿಂದುಳಿದವರಿಗೆ ಸಮಾನತೆಯನ್ನು ಸಾರಲು ಮೀಸಲಾತಿಯೆಂಬ ಅಸ್ತ್ರವನ್ನು ಉಪಯೋಗಿಸಿ ಯಶಸ್ವಿಯಾದರು. ನಿಜ ಹೇಳಬೇಕೆಂದರೆ ಇವರನ್ನು ಆಧುನಿಕ ಭಾರತದ ಪಿತಾಮಹ ಎಂದರೆ ತಪ್ಪಾಗಲಾರದು. ಜಾತಿ ವಿನಾಶ ಎಂಬ ಪದವನ್ನು ಕೇಳಿದ ಕೂಡಲೇ ನಮಗೆ ತಟ್ಟನೆ ನೆನಪಿಗೆ ಬರುವುದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು. ಅವರ ಆಳವಾದ ಅಧ್ಯಯನದ ಫಲವಾಗಿ ಮತ್ತು ಅವರು ಅನುಭವಿಸಿದ ಜಾತಿ ನಿಂದನೆಗಳು ಎರಡನ್ನೂ ಕ್ರೋಢೀಕರಿಸಿ ಬರೆದಂತಹ ಪುಸ್ತಕವೇ ಈ ‘ಜಾತಿ ವಿನಾಶ’. ಭಾರತದಂತ ಜಾತ್ಯತೀತ, ಧರ್ಮಾತೀತ ದೇಶದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಜಾತಿಗಳಿವೆ ಎಂದು ಅಧ್ಯಯನದ ಪ್ರಕಾರ ತಿಳಿದು ಬಂದಿದೆ. ಅಷ್ಟೂ ಜಾತಿಗಳಲ್ಲಿ ದಲಿತ ಜಾತಿಯೂ ಒಂದು. ಜಾತಿಯನ್ನು ಹುಟ್ಟಿನಿಂದ ಅಳೆಯಬೇಡಿ ಅವರ ಕಸುಬಿನಿಂದ(ಕೆಲಸ) ಅಳೆಯಿರಿ ಎಂದು ಮಹಾತ್ಮರೊಬ್ಬರು ಹೇಳಿದ್ದಾರೆ. ಆದರೆ ಯಾರೂ ಕೂಡ ಕಾಯಕದಿಂದ ಜಾತಿಯನ್ನು ನೋಡುವುದಿಲ್ಲ. ಎಲ್ಲಾ ಹುಟ್ಟಿನಿಂದಲೇ ಇವನು ಇಂಥ ಜಾತಿ ಎಂದು ನಿರ್ಧಾರ ಮಾಡಿಬಿಡುತ್ತಾರೆ.
ಮಂಗನಿಂದ ಮಾನವನಾಗಿ ಪರಿವರ್ತನೆಯಾದ ಸಂದರ್ಭದಲ್ಲಿ ಯಾವ ಜಾತಿಯೂ ಇರಲಿಲ್ಲ. ಇದ್ದದ್ದು ಒಂದು ಹೆಣ್ಣು ಮತ್ತೊಂದು ಗಂಡು. ಆ ಎರಡೂ ಕಾಲ ಉರುಳುತ್ತಿದ್ದಂತೆ ಹೊಸ ಹೊಸ ಅವಿಷ್ಕಾರಗಳು ಮತ್ತು ಹೊಸ ಹೊಸ ಪ್ರಯೋಗಗಳನ್ನು ಕಂಡು ಹಿಡಿಯುತ್ತಾ ಜೊತೆ ಜೊತೆಗೆ ಜಾತಿಯೆಂಬ ಭೂತವನ್ನು ಬೆನ್ನಿಗೆ ಕಟ್ಟಿಕೊಂಡು ಬಂದ.ಅದೇ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.ಏನೇ ಮಾಡಿದರೂ ಜಾತಿಯ ಹೆಸರಿಲ್ಲದೆ ಮುಂದುವರಿಯುವ ಹಾಗೇ ಇಲ್ಲ ಎನ್ನುವಷ್ಟು ಬೆಳೆದಿದ್ದಾರೆ. ಈ ರೀತಿ ಆಗುತ್ತದೆ ಎಂದು ತಿಳಿದೋ ಏನೋ ಬಾಬಾ ಸಾಹೇಬರು ದೂರಾಲೋಚನೆಯಿಂದ ಸಂವಿಧಾನದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳಿಗೆ ಮುಂದೆ ಇವರಿಗೆ ಸರಿಯಾದ ಸ್ಥಾನಮಾನ ಸಿಗುವುದಿಲ್ಲ ಎಂದು ಅರಿತೇ ಮೀಸಲಾತಿಯನ್ನು ನೀಡಿ ಸ್ವಲ್ಪ ಉಸಿರಾಡುವಂತೆ ಮಾಡಿದ್ದಾರೆ. ಇಲ್ಲವೆಂದರೆ ಅವರ ಬಾಳು ನಾಯಿ ಮುಟ್ಟಿದ ಮಡಕೆಯ ರೀತಿ ಆಗುತ್ತಿತ್ತೇನೋ ?.
ಜಾತಿ ಎಂಬುದು ಬರೀ ದೇಹಕ್ಕೆ ಮಾತ್ರ ಮೀಸಲೇ?, ಒಳಗೆ ಹರಿಯುವ ರಕ್ತಕ್ಕಿಲ್ಲವೇ? ಎಷ್ಟೋ ಜನ ರಸ್ತೆ ಅಪಘಾತವಾಗಿ ಪ್ರಾಣ ಉಳಿಸಲು ರಕ್ತ ಬೇಕೆಂದಾಗ ಆಸ್ಪತ್ರೆಗಳಲ್ಲಿ ತಕ್ಷಣ ರಕ್ತ ನೀಡಿ ಬದುಕಿಸುತ್ತಾರಲ್ಲಾ ಆವಾಗ ದೇಹದೊಳಗೆ ರಕ್ತವನ್ನು ಹಾಕುವ ಮುನ್ನ ಯಾವ ಜಾತಿಯದೆಂದು ಕೇಳಬಹುದಲ್ಲವೇ?. ಆಕಸ್ಮಾತ್ ದಾರಿಯಲ್ಲಿ ಹೋಗುತ್ತಿದ್ದಾಗ ಸವರ್ಣೀಯನೊಬ್ಬ ಕೆರೆಗೊ, ಬಾವಿಗೋ ಇಲ್ಲಾ ನದಿಗೋ ಜಾರಿ ಬಿದ್ದು ಈಜಲು ಬಾರದೆ ಮುಳುಗಿ ಸಾಯುವ ಸಮಯದಲ್ಲಿ ಕೀಳು ಜಾತಿಯವನೊಬ್ಬ ಕಾಪಾಡಿ ಬದುಕಿಸುತ್ತಾನೆ. ನೀರಿನೊಳಗೆ ಅವನನ್ನು ಮುಟ್ಟುವಾಗ ಜಾತಿ ನೆನಪಿಗೆ ಬರುವುದಿಲ್ಲವೇ?.
ಹೇಳಿ ಕೇಳಿ ರೈತರೇ ದೇಶದ ಬೆನ್ನೆಲುಬು ಎಂದು ಬದುಕುತ್ತಿರುವ ದೇಶದ ಪ್ರಜೆಗಳು ನಾವು. ರೈತ ಅಂತ ಬಂದಾಗ ಜಾತಿಯ ಭೇದವೆಲ್ಲವ ಮರೆತು ಎಲ್ಲರೂ ಹೋರಾಡುತ್ತಾರೆ. ರೈತರು ಬೆಳೆಯುವ ಒಂದೊಂದು ಕಾಳು ಜಾತಿವಾದಿಗಳು ತಿನ್ನುತ್ತಾರೆ. ಅನ್ನ ತಿನ್ನುವಾಗ ಏನಾದರೂ ನಾನು ಈ ಜಾತಿಯವನು ಬೆಳೆದದ್ದು ನಿನ್ನ ಗಂಟಲೊಳಗೆ ಇಳಿಯುವುದಿಲ್ಲ ಎಂದು ಹೇಳುತ್ತದೆಯೇ?. ಅಥವಾ ಪೇಟೆಯಲ್ಲಿ ಅಕ್ಕಿಯನ್ನು ಖರೀದಿಸುವಾಗ ಜಾತಿಯ ಹೆಸರೇನಾದರೂ ಬರೆದಿರುತ್ತದೆಯೇ?. ಕೂಲಿ ನಾಲಿ ಮಾಡುವ ಅದೆಷ್ಟೋ ಜಾತಿಯ ಕೈಗಳು ಮುಟ್ಟಿ ಬಂದಿರುವ ಅಕ್ಕಿಯನ್ನು ನಾವು ಗಾಂಭೀರ್ಯದಿಂದ ಉಪಯೋಗಿಸುತ್ತೇವೆ. ತಿನ್ನುವ ಅನ್ನಕ್ಕಿಲ್ಲದ ಜಾತಿ ಸುಟ್ಟು ಹೋಗುವ ಈ ದೇಹಕ್ಕೇಕೆ.
ಮನುಷ್ಯನಿಗೆ ಬಟ್ಟೆ, ವಸತಿ, ಊಟ, ನೀರು ಇವೆಲ್ಲ ಮೂಲಭೂತ ವಸ್ತುಗಳು. ಇವೆಲ್ಲವುಕ್ಕಿಂತಲೂ ಅತಿಮುಖ್ಯವಾದ ವಸ್ತುವೆಂದರೆ ಅದು ಗಾಳಿ. ಗಾಳಿಯನ್ನು ಬಿಟ್ಟು ಮಿಕ್ಕೆಲ್ಲಾ ವಸ್ತುಗಳನ್ನ್ನು ಸ್ವಲ್ಪ ಗಂಟೆಗಳ ಕಾಲ, ದಿನಗಳ ಕಾಲ ಮತ್ತು ತಿಂಗಳುಗಳ ಕಾಲ ಬದುಕಬಲ್ಲೆವು. ಆದರೆ ಗಾಳಿಯ ಬಿಟ್ಟು ಅರೆಕ್ಷಣವೂ ಬದುಕುಳಿಯಲು ಸಾಧ್ಯವಾಗದ ಮಾತು. ಅಂಥ ಗಾಳಿ ಪ್ರಕೃತಿ ದತ್ತವಾಗಿ ಬಂದಿದೆ ಅದಕ್ಕೆ ಬಣ್ಣವಿಲ್ಲ, ಆಕಾರವಿಲ್ಲ, ಜಾತಿಯಿಲ್ಲ. ಪ್ರತಿದಿನ, ಪ್ರತಿಕ್ಷಣ ಕೋಟ್ಯಂತರ ಜನರು ಜಾತಿಭೇದವಿಲ್ಲದೇ ಸೇವಿಸುತ್ತಾರೆ. ಸೇವಿಸುವಾಗ ಜಾತಿಯ ವಾಸನೆಯೇನಾದರೂ ಮೂಗಿಗೆ ತಾಕುತ್ತದೆಯೇ?. ಮಾನವನ ಉಸಿರಾಟಕ್ಕೆ ಉಸಿರಾಗಿರುವ ಗಾಳಿಗಿಲ್ಲದ ಜಾತಿ ಮಣ್ಣಲ್ಲಿ ಮಣ್ಣಾಗುವ ದೇಹಕ್ಕೇಕೆ? .
ಒಮ್ಮಮ್ಮೆ ನನಗನಿಸುತ್ತದೆ ಈ ದೇಶದಲ್ಲಿ ಅದೂ ಹಿಂದೂ ಧರ್ಮದಲ್ಲಿ ಹುಟ್ಟಿರುವುದಕ್ಕೆ ನಾಚಿಕೆ ಪಡುತ್ತೇನೆ. ಅದಕ್ಕೆ ಏನೋ ಬಾಬಾ ಸಾಹೇಬರು ಈ ಜನರ ಸಂಕುಚಿತ ಮನೋಭಾವದ ಮನಸ್ಥಿತಿಯನ್ನ ಅರಿತು ಇವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಮಾನತೆಯ ಅರಸಿ ಬೌ್ಧಧರ್ಮಕ್ಕೆ ಮತಾಂತರವಾದದ್ದು.
ಇನ್ನಾದರೂ ಈ ಜಾತಿಯೆಂಬ ಪಿಡುಗನ್ನು ಹೋಗಲಾಡಿಸಲು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ಆಶಯದಂತೆ ಅವರ ಕನಸಿನ ಸಮೃದ್ಧ ಭಾರತ ಮತ್ತು ಪ್ರಬುದ್ಧ ಭಾರತವನ್ನು ನನಸು ಮಾಡಲು ಅವರ ನೆರಳಲ್ಲಿ ಬೆಳೆದು ವಿದ್ಯಾವಂತರೂ, ಜ್ಞಾನವಂತರೂ ಆದ ನಾವು ಕೈ ಜೋಡಿಸೋಣ...

Writer - ಮಹದೇವ್ ಬಿಳುಗಲಿ

contributor

Editor - ಮಹದೇವ್ ಬಿಳುಗಲಿ

contributor

Similar News

ಜಗದಗಲ
ಜಗ ದಗಲ