ಧರ್ಮ ದ್ವೇಷ ವಿರುದ್ಧ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ ದೆಹಲಿ ಹೈಕೋರ್ಟ್

Update: 2018-07-23 04:17 GMT

ಹೊಸದಿಲ್ಲಿ, ಜು. 23: ಧರ್ಮದ ಹಿನ್ನೆಲೆಯಲ್ಲಿ ವ್ಯಕ್ತಿಯ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಭಾರತೀಯ ಮೂಲದ ಕೆನಡಾ ಪ್ರಜೆ ಮುಹಮ್ಮದ್ ಅಬ್ದುಲ್ ಮೊಯೀದ್ ಅವರ ವೀಸಾ ಮನವಿಯನ್ನು ಮರುಪರಿಶೀಲನೆ ಮಾಡುವಂತೆ ಸೂಚಿಸಿದೆ.

ಕೆನಡಾಗೆ ವಲಸೆ ಹೋಗಿರುವ ಮೊಯೀದ್, ಭಾರತದಲ್ಲಿರುವ ತಮ್ಮ ಪತ್ನಿ ಹಾಗೂ ರೋಗಗ್ರಸ್ಥ ಮಗುವನ್ನು ಭೇಟಿ ಮಾಡಲು ಅವಕಾಶ ನೀಡದಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಭಿನ್ನಸಾಮರ್ಥ್ಯದ ಹಾಗೂ ರೋಗಗ್ರಸ್ಥ ಮಗು, ವಯೋವೃದ್ಧೆ ಅತ್ತೆ ಸೇರಿದಂತೆ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡದಿರುವುದು ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂದು ಮೊಯೀದ್ ವಾದಿಸಿದ್ದರು.

2015ರಲ್ಲಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ, ವಿನಾಕಾರಣ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು, ಕೆನಡಾಗೆ ಗಡೀಪಾರು ಮಾಡಿದ್ದರು ಎಂದು ಅವರು ಆಪಾದಿಸಿದ್ದರು. "ವೀಸಾ ಕಾನೂನಿನ ಪ್ರತಿ ಉಲ್ಲಂಘನೆ ಕೂಡಾ ಒಬ್ಬ ವ್ಯಕ್ತಿ ದೇಶವನ್ನು ಪ್ರವೇಶಿಸದಂತೆ ನಿಷೇಧಿಸಲು ಕಾರಣವಾಗುವುದಿಲ್ಲ. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಆತ ಕೃತ್ಯ ಎಸಗಿದ್ದಾನೆ ಎನ್ನುವುದಕ್ಕೆ ಪುರಾವೆ ಇದ್ದರೆ ಮಾತ್ರ ನಿಷೇಧಿಸಲು ಸಾಧ್ಯ" ಎಂದು ನ್ಯಾಯಮೂರ್ತಿ ರಾಜೀವ್ ಶಕ್ದರ್ ಸ್ಪಷ್ಟಪಡಿಸಿದ್ದಾರೆ. "ಆ ವ್ಯಕ್ತಿಯ ಧರ್ಮವನ್ನೇ ಆಧಾರವಾಗಿಟ್ಟುಕೊಂಡು ಅವರ ನಡತೆ ಬಗ್ಗೆ ನಿರ್ಧಾರಕ್ಕೆ ಬರುವುದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕ್ರಮ" ಎಂದು ಹೇಳಿದ್ದಾರೆ.

ಹಿಂದೆ ಭಾರತಕ್ಕೆ ಭೇಟಿ ನೀಡಿದಾಗ ಮೊಯೀದ್, ತಬ್ಲಿಕ್ ಇ ಜಮಾತ್ ಸಿದ್ಧಾಂತವನ್ನು ಪ್ರಚಾರಪಡಿಸಲು ಹರ್ಯಾಣದ ಮೇವಾಟ್ ಜಿಲ್ಲೆಯ ಮಸೀದಿಗಳಿಗೆ ಭೇಟಿ ನೀಡಿ ಸ್ಥಳೀಯ ಮುಸ್ಲಿಮರ ಜತೆ ಮಾತುಕತೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಭಾರತ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿದೆ. ಇದನ್ನು ಪ್ರಶ್ನಿಸಿ ಮೊಯೀದ್ ದಾವೆ ಹೂಡಿದ್ದರು.

ತಾನು ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ಯಾವುದೇ ಅಂಥ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಮೊಯೀದ್ ಸಮರ್ಥಿಸಿಕೊಂಡಿದ್ದರು. ಇಮಿಗ್ರೇಷನ್ ಅಧಿಕಾರಿಗಳು ಮೊಯೀದ್ ಅವರಿಗೆ ತಮ್ಮ ನಿಲುವು ತಿಳಿಸಲು ಅವಕಾಶ ನೀಡಿಲ್ಲ ಎಂದು ಕೋರ್ಟ್ ಆಕ್ಷೇಪಿಸಿ, ವೀಸಾ ಮನವಿಯನ್ನು ಮರುಪರಿಶೀಲನೆ ನಡೆಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News