ಆರೋಗ್ಯ ಕರ್ನಾಟಕ ಕಾರ್ಡ್ ನ ಪ್ರಯೋಜನೆ ಪಡೆದುಕೊಳ್ಳುವುದು ಹೇಗೆ ?

Update: 2018-07-23 07:55 GMT

ವಿಶ್ವಸಂಸ್ಥೆಯ ಮಿಲೇನಿಯಂ ಡೆವಲಪ್ ಮೆಂಟ್ ಗೋಲ್(MDG) ಆಶಯದಂತೆ ವಿಶ್ವದ ಎಲ್ಲಾ ವಯಸ್ಸಿನ ಜನರಿಗೆ ಆರೋಗ್ಯಕರ ಜೀವನವನ್ನು ಒದಗಿಸುವ ಗುರಿಯನ್ನಿಟ್ಟುಕೊಂಡು ಕರ್ನಾಟಕ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಆರೋಗ್ಯ ಕರ್ನಾಟಕ ಯೋಜನೆ. 

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನ ಗೊಳಿಸಲಾಗುವ ಈ ಯೋಜನೆಗಳ ಲಾಭ ಪಡೆದುಕೊಳ್ಳಲು ರಾಜ್ಯದ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಅರ್ಹರಾಗಿರುತ್ತಾರೆ. ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವವರು ಬೇರೆ ಯಾವುದೇ ಆರೋಗ್ಯ ವಿಮಾ ಯೋಜನೆಗಳನ್ನು ಹೊಂದಿಲ್ಲ ಎಂಬ ದೃಢೀಕರಣವನ್ನು ನೀಡಬೇಕಾಗುತ್ತದೆ.

ರಾಜ್ಯದಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ, ವಾಜಪೇಯಿ ಆರೋಗ್ಯಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ಯಶಸ್ವಿನಿ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಇಂದಿರಾ ಸುರಕ್ಷಾ ಯೋಜನೆ ಹಾಗೂ ಮುಖ್ಯಮಂತ್ರಿ ಸಾಂತ್ವಾನ ಹರೀಶ್ ಯೋಜನೆ ಮುಂತಾದ ಯೋಜನೆಗಳನ್ನು ಒಗ್ಗೂಡಿಸಿ ಎಲ್ಲಾ ಜನರಿಗೂ ಪರಿಪೂರ್ಣ ಆರೋಗ್ಯ ಒದಗಿಸುವ ಮಹತ್ವದ ಗುರಿ ಈ ಆರೋಗ್ಯ ಕರ್ನಾಟಕ ಯೋಜನೆಯ ಹಿಂದಿದೆ.

ಈ ಮಹತ್ವಾಕಾಂಕ್ಷೆಯಂತೆ  ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯ ಮೂಲಕ ಪರಿಪೂರ್ಣ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾದ ಆರೋಗ್ಯ ಕರ್ನಾಟಕ ಕಾರ್ಡ್  ಯೋಜನೆಗೆ ರಾಜ್ಯದಲ್ಲಿ ಈಗಾಗಲೇ ಚಾಲನೆ ದೊರೆತಿದ್ದು, ರಾಜ್ಯದ 11 ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ನೀಡಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಸ್ಥಳೀಯ ಜಿಲ್ಲೆಗಳಿಗೆ ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಕರ್ನಾಟಕ ಕಾರ್ಡ್ ನೀಡುವ ಕಾರ್ಯವು ಭರದಿಂದ ಸಾಗುತ್ತಿದೆ.

ದಿನಂಪ್ರತಿ 250 ಜನರಿಗೆ ವಿತರಿಸಲ್ಪಡುತ್ತಿದ್ದ ಆರೋಗ್ಯ ಕರ್ನಾಟಕ ಕಾರ್ಡ್, ಸದ್ಯ ಕೆಲವು ದಿನಗಳಿಂದ ಕಾರಣಾಂತರದಿಂದಾಗಿ ಕೇವಲ ಒಳ ಹಾಗೂ ಹೊರ ರೋಗಿಗಳಾಗಿ ದಾಖಲಾಗುವವರಿಗೆ ಮಾತ್ರ ಕಾರ್ಡ್ ವಿತರಿಸಲಾಗುತ್ತದೆ. ರೋಗಿಗಳಾಗಿ ದಾಖಲಾಗುವವರಿಗೆ ಈ ಕಾರ್ಡ್ ಅವಶ್ಯಕತೆಯಿರು ವುದರಿಂದ ಸಾರ್ವಜನಿಕರಿಗೆ ಮುಂದೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ  ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ಯೋಜನೆ ಜಾರಿಗೆ ಬರಲಿದೆ. 2018ನೇ ಸೆಪ್ಟಂಬರ್ ನಿಂದ ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿಯೂ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ಯೋಜನೆ ಜಾರಿಗೆ ಬರಲಿದೆ. ಈ ಆರೋಗ್ಯ ಕಾರ್ಡ್ ಮಾಡಿಸಲು ಯಾವುದೇ ಸಮಯದ ಮಿತಿ ಇರುವುದಿಲ್ಲ. ಇದು ನಿರಂತರ ಪ್ರಕ್ರಿಯೆಯಾಗಿದೆ. ಕರ್ನಾಟಕದ ಕೊನೆಯ ಪ್ರಜೆಯ ಕೈಗೆ ಆರೋಗ್ಯ ಕರ್ನಾಟಕ ಕಾರ್ಡ್ ದೊರೆಯುವ ವರೆಗೆ ಈ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ.

ಆರೋಗ್ಯ ಕರ್ನಾಟಕ ಕಾರ್ಡ್ ನ ಫಲಾನುಭವಿಗಳ ಕುಟುಂಬವೊಂದಕ್ಕೆ ಸಂಕೀರ್ಣ ದ್ವಿತೀಯ ಹಂತದ ರೋಗಗಳಿಗೆ 30,000 ರೂಪಾಯಿ ವರೆಗೆ ಹಾಗೂ ತೃತೀಯ ಹಂತದ ರೋಗಗಳಿಗೆ 1,50,000 ರೂಪಾಯಿ ವರೆಗೆ  ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಅಲ್ಲದೇ ವಿಶೇಷ ಪ್ರಕರಣ ಗಳಿಗೆ ಸಂಬಂಧಿಸಿದಂತೆ ರೋಗಿಗಳಿಗೆ ಕೆಲವು ನಿಬಂಧನೆಗಳೊಂದಿಗೆ ಹೆಚ್ಚುವರಿ 50,000 ರೂಪಾಯಿಗಳ ಚಿಕಿತ್ಸೆ ಪಡೆಯುವ ಅವಕಾಶ ಇರುತ್ತದೆ. ಅಂದರೆ ಕುಟುಂಬದ ಸದಸ್ಯರೊಬ್ಬರು 1,50,000 ರೂ. ವರೆಗಿನ ಪೂರ್ತಿ ಚಿಕಿತ್ಸಾ ಸೌಲಭ್ಯ ಪಡೆದಿದ್ದರೆ ಅದೇ ಕುಟುಂಬದ ಇನ್ನೊಬ್ಬರಿಗೆ ಖಾಯಿಲೆ ಬಂದರೆ  50,000 ರೂ. ವರೆಗಿನ ಹೆಚ್ಚುವರಿ ಚಿಕಿತ್ಸೆ ಪಡೆಯುವ ಅವಕಾಶವಿರುತ್ತದೆ. ಆದರೆ ಈ ಹಂತಗಳಲ್ಲಿ ರೋಗಿಗಳು ಸರಕಾರಿ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆಗಳನ್ನು  ಸರಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಬೇಕಾಗುತ್ತದೆ.

ಒಂದು ವೇಳೆ ಈ ಹಂತದಲ್ಲಿ ರೋಗಿಯ ಚಿಕಿತ್ಸೆಯು ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ರೆಫರೆನ್ಸ್ ನೊಂದಿಗೆ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ವಾಹನ ಅಪಘಾತ, ಹೃದಯಾಘಾತ ಮುಂತಾದ ತುರ್ತು ಸ್ಥಿತಿಯ ಸಂದರ್ಭಗಳಲ್ಲಿ ಸರಕಾರಿ ಆಸ್ಪತ್ರೆಯ ರೆಫರೆನ್ಸ್ ಪಡೆಯದೆ ನೇರವಾಗಿ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯು ಚಿಕಿತ್ಸೆ ಪಡೆಯಬಹುದಾಗಿದೆ. ಈ ಎಲ್ಲಾ ಚಿಕಿತ್ಸೆಯು ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿದ್ದು, ಎಪಿಎಲ್ ಕಾರ್ಡುದಾರರಿಗೆ ಚಿಕಿತ್ಸೆಯ ಶೇಖಡಾ 30ರಷ್ಟು ಉಚಿತವಾಗಿದೆ.

ಆರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ಪ್ರತಿಯೊಬ್ಬರು ತಮ್ಮ ಆದಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನೊಂದಿಗೆ ಸ್ವತಹ ತಮ್ಮ ಬೆರಳಚ್ಚು ನೀಡಬೇಕಾಗುತ್ತದೆ. ಈ ಕಾರ್ಡ್ ಗಾಗಿ ಸಾರ್ವಜನಿಕರಿಂದ ಕೇವಲ 10 ರೂಪಾಯಿ ಶುಲ್ಕ ಪಡೆಯಲಾಗುತ್ತದೆ. ಒಂದು ತಮ್ಮ ಕಾರ್ಡ್ ಕಳೆದು ಹೋದಲ್ಲಿ 20 ರೂಪಾಯಿ ಹೆಚ್ಚುವರಿ ಶುಲ್ಕ ನೀಡಿ ಡುಪ್ಲಿಕೇಟ್ ಕಾರ್ಡ್ ಪಡೆಯಬಹುದಾಗಿದೆ.

ತಮ್ಮ ದುಡಿಮೆಯ ಬಹುತೇಕ ಹಣವನ್ನು ಚಿಕಿತ್ಸೆಗಾಗಿ ಮೀಸಲಿಡಬೇಕಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಈ ಆರೋಗ್ಯ ಕಾರ್ಡ್ ಪಡೆಯುವ ಮೂಲಕ ಈ ಮಹತ್ವಾಕಾಂಕ್ಷಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ.

Writer - ಎಸ್.ಎ.ರಹಿಮಾನ್ ಮಿತ್ತೂರು

contributor

Editor - ಎಸ್.ಎ.ರಹಿಮಾನ್ ಮಿತ್ತೂರು

contributor

Similar News