ಬಿಜೆಪಿ ಅಧಿಕಾರದಲ್ಲಿರುವವರೆಗೆ ನ್ಯಾಯ ದೊರಕುವ ನಿರೀಕ್ಷೆಯಿಲ್ಲ

Update: 2018-07-23 09:57 GMT

ಫೋನ್ ಖರೀದಿಸುವಷ್ಟು ಆರ್ಥಿಕವಾಗಿ ಸಬಲನಾಗಿರಲಿಲ್ಲ ಅಕ್ಬರ್ ಖಾನ್ (31). ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಅಕ್ಬರ್ ಹತ್ಯೆ ಸುದ್ದಿ ತಿಳಿದ ಬಳಿಕ ಇಡೀ ಕೊಲ್ಗಾಂವ್ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದೆ. ಎರಡು ವರ್ಷದ ಪುತ್ರಿ ಇರಾಮ್ ಸೇರಿದಂತೆ ಏಳು ಮಕ್ಕಳನ್ನು ಅವರು ಅಗಲಿದ್ದಾರೆ.

"ಮೇವಾಟ್ ಜನರಿಗೆ ಶಿಕ್ಷಣ ಎನ್ನುವುದು ನಿಲುಕದ ಕನಸು. ನಮಗೆ ಸಂಪನ್ಮೂಲ ಇಲ್ಲ. ಅಕ್ಬರ್ ಕನಿಷ್ಠ ತನ್ನ ಮಕ್ಕಳ ಆಹಾರಕ್ಕೆ ಬೇಕಾಗುವಷ್ಟನ್ನಾದರೂ ಸಂಪಾದಿಸುತ್ತಿದ್ದರು. ಈಗ ಅವರ ಕುಟುಂಬದ ಕಾಳಜಿ ವಹಿಸಲು ಯಾರೂ ಇಲ್ಲ" ಎಂದು ಮೃತನ ಸಹೋದರ ಇರ್ಷಾದ್ ಖಾನ್ ಹೇಳುತ್ತಾರೆ.

"ಮೃಗಗಳು ನನ್ನ ಸಹೋದರನನ್ನು ಕೊಂದಿವೆ. ಆತ ಹಸುಗಳ ಕಳ್ಳಸಾಗಣೆ ಮಾಡುತ್ತಿರಲಿಲ್ಲ. ಮಕ್ಕಳಿಗೆ ಹಾಲಿನ ಸಲುವಾಗಿ ಹಸುಗಳನ್ನು ಸಾಗಿಸುತ್ತಿದ್ದ" ಎಂದವರು ಹೇಳುತ್ತಾರೆ.

ಹರ್ಯಾಣ ಮತ್ತು ರಾಜಸ್ಥಾನ ಸರ್ಕಾರಗಳಿಂದ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಕ್ಬರ್ ಖಾನ್ ಕುಟುಂಬದವರು ಶನಿವಾರ ಹಲವು ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದರು. ಕಾಂಗ್ರೆಸ್ ಹಾಗೂ ಇಂಡಿಯನ್ ನ್ಯಾಷನಲ್ ಲೋಕದಳ ಸೇರಿದಂತೆ ಹಲವು ವಿರೋಧ ಪಕ್ಷಗಳೂ ಇವರ ಆಗ್ರಹಕ್ಕೆ ದನಿಗೂಡಿಸಿದ್ದವು. ಆಡಳಿತಾರೂಢ ಬಿಜೆಪಿಯ ಯಾವ ಸದಸ್ಯರೂ ಇದುವರೆಗೆ ಅವರನ್ನು ಭೇಟಿಯಾಗಿಲ್ಲ. ನಗರ ಮ್ಯಾಜಿಸ್ಟ್ರೇಟ್ ಹಾಗೂ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಭರವಸೆ ಮೇರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ.

ರವಿವಾರ ಮುಂಜಾನೆ 2 ಗಂಟೆ ವೇಳೆಗೆ ಕೊಲ್ಗಾಂವ್ ಸ್ಮಶಾನದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು.

"ಅಕ್ಬರ್ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು ಎನ್ನುವುದು ನಮ್ಮ ಆಗ್ರಹ. ಮ್ಯಾಜಿಸ್ಟ್ರೇಟ್ ಅವರ ಭರವಸೆ ಕೂಡಾ ಮೌಖಿಕವಾಗಿ ಬಂದಿದೆಯೇ ವಿನಃ ಯಾವ ದಾಖಲೆನ್ನೂ ನೀಡಿಲ್ಲ. ನಮಗೆ ಯಾವುದೇ ನೆರವು ಸಿಗುತ್ತದೆ ಎಂಬ ನಂಬಿಕೆ ಇಲ್ಲ" ಎಂದು ಸೋದರ ಸಂಬಂಧಿ ಅಝರ್ ಖಾನ್ ಹೇಳುತ್ತಾರೆ.

ಗೋರಕ್ಷಕರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ಸರ್ಕಾರದ ವಿರುದ್ಧ ಅಕ್ಬರ್ ಸಂಬಂಧಿಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಲ್ವಾರ್ ಜಿಲ್ಲೆಯಲ್ಲಿ ಇಂಥ ಹಲವು ಘಟನೆಗಳು ನಡೆದರೂ ಯಾವ ಬದಲಾವಣೆಯೂ ಆಗಿಲ್ಲ ಎಂದು ಅವರು ಹೇಳುತ್ತಾರೆ.

"ಬಿಜೆಪಿ ಅಧಿಕಾರದಲ್ಲಿರುವವರೆಗೂ ನಮಗೆ ನ್ಯಾಯ ಸಿಗುವುದಿಲ್ಲ. ಪೆಹ್ಲೂಖಾನ್ ಕೂಡಾ ಹತ್ಯೆಯಾದರು. ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಅಕ್ಬರ್ ಪತ್ನಿ ಅಶ್ಮೀನಾ ಹತ್ತನೇ ತರಗತಿ ಓದಿದ್ದಾಳೆ. ಕನಿಷ್ಠ ಆಕೆಯನ್ನು ಅಂಗನವಾಡಿ ಶಿಕ್ಷಕಿಯಾಗಿಯಾದರೂ ನೇಮಕ ಮಾಡಿಕೊಳ್ಳಬಹುದು ಎಂದು ಅವರು ಸಲಹೆ ನೀಡುತ್ತಾರೆ.

ಅಕ್ಬರ್ ಹಾಗೂ ಮತ್ತೊಬ್ಬ ಗ್ರಾಮಸ್ಥ ಅಸ್ಲಂ (30) ಜುಲೈ 20ರ ರಾತ್ರಿ ರಾಜಸ್ಥಾನದ ಖಾನ್‍ಪುರದಿಂದ ಎರಡು ಹಸುಗಳನ್ನು ಒಯ್ಯುತ್ತಿದ್ದರು. ಅಲವಡಿ ಅರಣ್ಯ ಪ್ರದೇಶದ ಬಳಿ ಹೋಗುತ್ತಿದ್ದಾಗ, ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಅವರು ಕೇಳಿಸಿಕೊಂಡರು. ಆರೇಳು ಮಂದಿ ಇವರನ್ನು ಸುತ್ತುವರಿದರು. ಅಸ್ಲಂ ಹೇಗೋ ತಮ್ಮನ್ನು ರಕ್ಷಿಸಿಕೊಂಡರು. ಆದರೆ ಸಹಚರ ಅಕ್ಬರ್‍ನನ್ನು ನಿರ್ದಯವಾಗಿ ಬಡಿಗೆಯಿಂದ ಹೊಡೆಯಲಾಯಿತು. ಅಸ್ಲಂ ಓಡಿಹೋಗಿ ಶನಿವಾರ ರಾತ್ರಿ ಮನೆ ಸೇರಿಕೊಂಡರು.

"ಹಲವು ಮಂದಿ ನನ್ನನ್ನೂ ಅಟ್ಟಿಸಿಕೊಂಡು ಬಂದರು. ಆದರೆ ನಾನು ಎಲ್ಲೂ ನಿಲ್ಲಲಿಲ್ಲ. ಹಾಲಿಗಾಗಿ ಹಸುವನ್ನು ತರಲು ಮೊದಲ ಬಾರಿಗೆ ನಾವು ಹೋಗಿದ್ದೆವು. ಅಕ್ಬರ್ ಎಂದೂ ಹಸುಗಳ ಕಳ್ಳಸಾಗಾಣಿಕೆಯಲ್ಲಿ ಪಾಲ್ಗೊಂಡಿರಲಿಲ್ಲ. ಆತ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ" ಎಂದು ಅಸ್ಲಂ ಹೇಳುತ್ತಾರೆ. ರವಿವಾರ ಸಂಜೆ 4 ಗಂಟೆ ವೇಳೆಗೆ ಅವರ ಹೇಳಿಕೆಯನ್ನು ಫಿರೋಜ್‍ಪುರ ಜಿರ್ಕಾ ಠಾಣೆಯಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಬ್ಬರು ಪೊಲೀಸರು ರಾಮಗಢ ಠಾಣೆಯಿಂದ ಆಗಮಿಸಿದ್ದರು. ಸ್ಥಳೀಯ ಮುಖಂಡರು ಮತ್ತು ಠಾಣಾಧಿಕಾರಿಯ ಸಮ್ಮುಖದಲ್ಲಿ ಅವರ ಹೇಳಿಕೆಗಳ ವಿಡಿಯೊ ಚಿತ್ರೀಕರಣ ಮಾಡಲಾಯಿತು.

ಒಂದು ಗಂಟೆ ಕಾಲ ಹೇಳಿಕೆ ದಾಖಲೀಕರಣ ನಡೆಯಿತು. ಪ್ರಕರಣದ ತನಿಖೆಯನ್ನು ರಾಜಸ್ಥಾನ ಪೊಲೀಸರು ನಡೆಸುತ್ತಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಕೃಪೆ: www.indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News