×
Ad

ಮೊದಲ ಏಕದಿನ: ವಿಂಡೀಸ್‌ಗೆ ಸೋಲುಣಿಸಿದ ಬಾಂಗ್ಲಾದೇಶ

Update: 2018-07-23 23:40 IST

ಗಯಾನ, ಜು.23: ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಅಜೇಯ ಶತಕದ(130)ನೆರವಿನಿಂದ ಬಾಂಗ್ಲಾದೇಶ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 48 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಗಯಾನ ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 280 ರನ್ ಗುರಿ ಪಡೆದಿದ್ದ ವೆಸ್ಟ್‌ಇಂಡೀಸ್ ತಂಡ ಕ್ರಿಸ್ ಗೇಲ್ ಕ್ರೀಸ್‌ನಲ್ಲಿರುವ ತನಕ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಗೇಲ್ 22ನೇ ಓವರ್‌ನಲ್ಲಿ 40 ರನ್ ಗಳಿಸಿ ರನೌಟ್ ಆದ ಬಳಿಕ ಹಿನ್ನಡೆ ಕಂಡ ವಿಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಶ್ರಾಫೆ ಮೊರ್ತಝಾ(4-37) ಹಾಗೂ ಮುಸ್ತಫಿಝರ್ರಹ್ಮಾನ್(2-35)ಆರು ವಿಕೆಟ್ ಹಂಚಿಕೊಂಡರು. ಇದಕ್ಕೆ ಮೊದಲು ಟಾಸ್ ಜಯಿಸಿದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇನಿಂಗ್ಸ್ ನ ಎರಡನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡ ಬಾಂಗ್ಲಾ ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 207 ರನ್ ಜೊತೆಯಾಟ ನಡೆಸಿದ ಇಕ್ಬಾಲ್ ಹಾಗೂ ಶಾಕಿಬ್ ಅಲ್ ಹಸನ್(97,121 ಎಸೆತ)ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 279 ರನ್ ಗಳಿಸಲು ನೆರವಾದರು.

ಇನಿಂಗ್ಸ್ ಅಂತ್ಯದಲ್ಲಿ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 30 ರನ್ ಗಳಿಸಿದ ಮುಶ್ಫಿಕುರ್ರಹೀಂ ಬಾಂಗ್ಲಾ 279 ರನ್ ಗಳಿಸಲು ನೆರವಾದರು.

ವೆಸ್ಟ್‌ಇಂಡೀಸ್ ತಂಡ ಬಾಂಗ್ಲಾದೇಶ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಆ್ಯಂಟಿಗುವಾ ಹಾಗೂ ಜಮೈಕದಲ್ಲಿ ನಡೆದಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News