ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟ ರಾಮ್‌ಕುಮಾರ್ ರಾಮನಾಥನ್
ನ್ಯೂಪೋರ್ಟ್, ಜು.23: ಹಾಲ್ ಆಫ್ ಫೇಮ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಅಮೆರಿಕದ ಮೂರನೇ ಶ್ರೇಯಾಂಕದ ಸ್ಟೀವ್ ಜಾನ್ಸನ್ ವಿರುದ್ಧ ಸೋತಿದ್ದಾರೆ. ತನ್ನ ಚೊಚ್ಚಲ ಎಟಿಪಿ ಫೈನಲ್‌ನಲ್ಲಿ ಜಯ ಸಾಧಿಸಿ ಪ್ರಶಸ್ತಿ ಗೆಲ್ಲಬೇಕೆಂಬ ರಾಮ್‌ಕುಮಾರ್ ಕನಸು ಈಡೇರಲಿಲ್ಲ.
ಇಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಅಮೆರಿಕದ ಜಾನ್ಸನ್ ಅವರು ಚೆನ್ನೈ ಆಟಗಾರ ರಾಮ್‌ಕುಮಾರ್‌ರನ್ನು 7-5, 3-6, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ವರ್ಷಾರಂಭದಲ್ಲಿ ಹೌಸ್ಟನ್‌ನಲ್ಲಿ ನಡೆದ ಟೂರ್ನಿಯಲ್ಲಿ ಜಯ ಸಾಧಿಸಿದ್ದ ಜಾನ್ಸನ್ ಅವರು ರಾಮ್‌ಕುಮಾರ್ ವಿರುದ್ದ ಕೇವಲ ಎರಡು ಗಂಟೆಯೊಳಗೆ ಜಯ ದಾಖಲಿಸಿದರು. ಜಾನ್ಸನ್ ಈ ಗೆಲುವಿನೊಂದಿಗೆ 20 ವರ್ಷಗಳ ಬಳಿಕ ಎಟಿಪಿ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಬೇಕೆಂಬ ಗುರಿ ಇಟ್ಟುಕೊಂಡಿದ್ದ ರಾಮ್‌ಕುಮಾರ್‌ಗೆ ಆಘಾತ ನೀಡಿದರು. 1998ರಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ನ್ಯೂಪೋರ್ಟ್‌ನಲ್ಲಿ ಎಟಿಪಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.