ಲಿಂಗ ತಾರತಮ್ಯ ನಮ್ಮ ದೇಶದ ಆಘಾತಕಾರಿ ಬೆಳವಣಿಗೆ!

Update: 2018-07-23 18:27 GMT

‘ಬೇಟಿ ಬಚಾವೋ ಮತ್ತು ಬೇಟಿ ಪಢಾವೋ’ ಘೋಷಣೆಯಿಂದ ಮಾತ್ರ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಲಾಗದು. ಬದಲು ಈ ಯೋಜನೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಿದರೆ ಮಾತ್ರ ಹೆಣ್ಮಕ್ಕಳ ಸಂಖ್ಯೆ ಹೆಚ್ಚುವುದಲ್ಲದೆ, ಅವರ ಬದುಕೂ ಬಂಗಾರವಾದೀತು.

ಭಾರತದಲ್ಲಿ ಅನಾದಿಕಾಲದಿಂದಲೂ ಮದುವೆಯ ಪದ್ಧತಿ ಜಾರಿಯಲ್ಲಿದೆ. ಈ ಪದ್ಧತಿ ಅನೂಚಾನವಾಗಿ ಮುಂದುವರಿಯಬೇಕಾದರೆ ಸ್ತ್ರೀಪುರುಷರ ಅನುಪಾತ 1:1 ಇರಬೇಕು. ಆದರೆ ನಮ್ಮ ದೇಶದಲ್ಲಿ ಹೆಣ್ಣಿಗಿಂತ ಗಂಡಿಗೆ ಹೆಚ್ಚಿನ ಮಹತ್ವ. ಹೀಗಾಗಿ ಒಟ್ಟಾರೆ ಜನಸಂಖ್ಯೆ ಏರಿದಾಗ ಭೂಪತಿ ಗಂಡುಗಳ ಸಂಖ್ಯೆ ಏರಿತಾದರೂ ಹೆಣ್ಣು ಮಕ್ಕಳ ಸಂಖ್ಯೆ ಏರಲೇ ಇಲ್ಲ. ಅಲ್ಲಿ ಆರಂಭಗೊಂಡಿತು ಲಿಂಗ ತಾರತಮ್ಯ. ಹಾಗಾಗಿ ಒಂದು ಕಾಲಕ್ಕೆ ಸರಾಸರಿ ಸಾವಿರ ಗಂಡಸರಿಗೆ 995 ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಈಗ ಕುಸಿದು 934ಕ್ಕೆ ತಲುಪಿದೆ.ಆದರೆ ಜಾತಿವಾರು ವಿಶ್ಲೇಷಣೆ ಮಾಡಿದರೆ ಕುಸಿತದ ಪ್ರಮಾಣ ಕೆಳ ಜಾತಿಯವರಿಗಿಂತ ಮೇಲ್ಜಾತಿಯವರಲ್ಲಿ ಹೆಚ್ಚಿರುವುದು ಕಂಡು ಬಂದಿದೆ. ಈ ಕೆಳಗೆ ತೋರಿಸಿದ ಕೋಷ್ಟಕವು ಬೇರೆ ಬೇರೆ ದೇಶಗಳಲ್ಲಿಯ ಸ್ತ್ರೀ ಪುರುಷರ ಲಿಂಗಾನುಪಾತವನ್ನು ಸೂಚಿಸುತ್ತದೆ.

 ಈ ಕೋಷ್ಟಕದಿಂದ ತಿಳಿದು ಬರುವುದೇನೆಂದರೆ ಭಾರತ ಪಾಕಿಸ್ತಾನ ಮತ್ತು ಚೀನಾದಲ್ಲಿ ಮಾತ್ರ ಸ್ತ್ರೀಯರ ಸಂಖ್ಯೆ ಪುರುಷರಿಗಿಂತ ಬಹಳ ಕಡಿಮೆ. ಒಂದು ದುರ್ದೈವದ ಸಂಗತಿಯೇನೆಂದರೆ ಈ ಮೂರು ದೇಶಗಳಲ್ಲಿ ವಿಶ್ವವ್ಯಾಪಿ ಮದುವೆಯ ಪದ್ಧತಿ ಜಾರಿಯಲ್ಲಿದೆ. ಅಂದರೆ ಪ್ರತಿಯೋರ್ವ ಪುರುಷನಿಗೂ ಒಬ್ಬಳು ಸ್ತ್ರೀ ಇರಲೇ ಬೇಕು. ಆದರೆ ಈ ಮೇಲೆ ತಿಳಿಸಿದ ಮಾಹಿತಿ ಹೇಳುವುದೇನೆಂದರೆ ಭಾರತ ಮತ್ತು ಚೀನಾಗಳಲ್ಲಿ ನೂರು ಗಂಡಸರಲ್ಲಿ 7 ಜನರಿಗೆ, ಮದುವೆಯ ಭಾಗ್ಯವೇ ಇಲ್ಲ. ಹಾಗೇಯೇ ಪಾಕಿಸ್ತಾನದಲ್ಲಿ ನೂರರಲ್ಲಿ ಸುಮಾರು 5ರಿಂದ 6 ಗಂಡಸರಿಗೆ ಹುಡುಗಿ ಸಿಗುವುದಿಲ್ಲ. ಆದರೆ ಜಗತ್ತಿನ ಸಣ್ಣ ಮತ್ತು ಅಭಿವೃದ್ಧಿ ಹೊಂದುತ್ತಿರುವ ಶ್ರೀಲಂಕಾದಂತಹ ದೇಶದಲ್ಲಿ ಸ್ತ್ರೀಯರ ಸಂಖ್ಯೆ ಸುಮಾರು 106 ಇರುವುದು. ಅಂದರೆ ಅಲ್ಲಿಯ ಜನರು ಸ್ತ್ರೀಯರ ಕುರಿತು ಹೊಂದಿದ ಆರೋಗ್ಯದಾಯಕ ಭಾವನೆ.

    ನಮ್ಮ ದೇಶದಲ್ಲಿ ಈಗಿನಿಂದಲ್ಲ, ಇಪ್ಪತ್ತನೆಯ ಶತಮಾನದ ಆರಂಭದಿಂದಲೂ ಈ ತರಹದ ಬೆಳವಣಿಗೆ ಆರಂಭವಾಗಿದೆ.ಅಂದರೆ ಕ್ಷೀಣಿಸುತ್ತಿರುವ ಸ್ತ್ರೀಸಂಖ್ಯೆಗೆ ಸುಮಾರು 118 ವರ್ಷಗಳಷ್ಟು ಹಿಂದಿನ ಇತಿಹಾಸವಿದೆ. ಉದಾ: 1901ರ ಜನಗಣತಿಯಂತೆ ನಮ್ಮ ದೇಶದಲ್ಲಿ 100 ಪುರುಷರಿಗೆ 972ರಷ್ಟು ಹೆಂಗಸರಿದ್ದರು. ಈಗ ಅದು ಸುಮಾರು ಶೇ.93.4ಕ್ಕೆ ತಲುಪಿದೆ. ಇದರರ್ಥ ಇಷ್ಟೇ, ಇನ್ನು ಮುಂದೆ ನಮ್ಮ ದೇಶದಲ್ಲಿ ಹಲವಾರು ಗಂಡುಗಳಿಗೆ ಮದುವೆಯ ಭಾಗ್ಯವೇ ಇರಲಾರದು. ಹಾಗಂತ ನಾವು ನಮ್ಮ ದೇಶದಲ್ಲಿ ಕೊರತೆಯಿರುವ ವಸ್ತುಗಳನ್ನು ಆಮದು ಮಾಡಿಕೊಂಡಹಾಗೆ ಹೆಣ್ಣುಗಳ ಸಂಖೈ ಜಾಸ್ತಿ ಇರುವ ದೇಶಗಳಿಂದ ಆಮದು ಮಾಡಿಕೊಳ್ಳಲಾಗದು. ಆದುದರಿಂದ ನಾವು ಸ್ತ್ರೀಯರ ಸಂಖ್ಯಾಬಲದ ಕುರಿತು ಸೂಕ್ಷ್ಮವಾಗಿ ವಿಚಾರಿಸುವ ಕಾಲ ಈಗ ಒದಗಿ ಬಂದಿದೆ. ನಮ್ಮಲ್ಲಿಯಂತೆಯೇ ಸಾಮಾನ್ಯವಾಗಿ ಉತ್ತರ ಅಮೆರಿಕ, ಆಫ್ರಿಕ, ಯುರೋಫ್ ಮತ್ತು ಏಶ್ಯಾಖಂಡಗಳ ಎಲ್ಲಾ ದೇಶಗಳಲ್ಲಿ ಸ್ತ್ರೀಯರ ಸಂಖ್ಯೆ ಪುರುಷರಿಗಿಂತ ಕಡಿಮೆ ಇರುವುದು ಕಂಡು ಬಂದಿದೆ. ಆದರೆ ನಮ್ಮಲ್ಲಿರುವ ಹಾಗೆ ಕೆಲವು ಕಡೆ ಮದುವೆ ಪದ್ಧತಿ ಜಾರಿಯಲಿಲ್ಲ.
ನಮ್ಮ ದೇಶದ ಮಟ್ಟಿಗೆ ಸ್ತ್ರೀಯರ ಸಂಖ್ಯೆ ಕಡಿಮೆಯಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ವರದಕ್ಷಿಣೆಯ ಹಾವಳಿ, ಶೀಘ್ರ ಮದುವೆ ಮತ್ತು ಒತ್ತಾಯದ ತಾಯ್ತನದಿಂದಾಗಿ ಸಾವು, ಹೆಣ್ಣು ಮಗುವಿನ ಕುರಿತು ನಮ್ಮ ಕುಟುಂಬದಲ್ಲ್ಲನೇಕರು ಬೆಳೆಸಿಕೊಳ್ಳುವ ತಾತ್ಸಾರ ಭಾವನೆ, ಹೆಣ್ಣು ಭ್ರೂಣ ಹತ್ಯೆ ಹಾಗೂ ಪುರುಷ ಪ್ರಧಾನ ಸಮಾಜದ ಕಲ್ಪನೆ ಮುಂತಾದವುಗಳು.
ಒಂದು ದುಃಖದ ಸಂಗತಿಯೇನೆಂದರೆ ಇತ್ತೀಚಿನ ಒಂದು ವರದಿಯಂತೆ ಕರ್ನಾಟಕದಲ್ಲಿ ದೇಶದ ಸರಾಸರಿ ಲಿಂಗಾನುಪಾತಕ್ಕಿಂತ ಸ್ತ್ರೀಯರ ಸಂಖ್ಯೆ ಸಾವಿರ ಗಂಡಸರಿಗೆ ಸುಮಾರು 930 ಎಂದು ಲೆಕ್ಕ ಸಿಕ್ಕಿರುವುದು. ಅದೇ ಕೇರಳದಲ್ಲಿ ಅದು 1,095 ಅಂತ ವರದಿಯಿದೆ. ಸಾಮಾನ್ಯವಾಗಿ ಸಾಕ್ಷರತೆ ಹೆಚ್ಚಿದಂತೆ ಲಿಂಗಾನುಪಾತದಲ್ಲಿ ಸ್ತ್ರೀಯರ ಸಂಖ್ಯೆ ಹೆಚ್ಚುತ್ತದೆ ಎಂಬ ವಾದ. ಆದರೆ ಅದು ತಿರುಗು ಮುರುಗು ಆದದ್ದನ್ನು ಕಂಡರೆ ನಮ್ಮಲ್ಲಿ ಇನ್ನೂ ಕೂಡ ಸಂಪ್ರದಾಯವನ್ನು ಬಿಡಲು ತಯಾರಿಲ್ಲ ಎಂಬುದು ಬೇಸರದ ವಿಷಯ.
ಇದೇ ಸ್ಥಿತಿ ಮುಂದುವರಿದರೆ ನಮ್ಮ ದೇಶದಲ್ಲಿ ಮುಂದೆ ಉದ್ಭವಿಸಬೇಕಾದ ಸಮಸ್ಯೆಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.
* ಮದುವೆಯ ಪದ್ಧತಿಗೆ ತೆರೆ ಬೀಳಬಹುದು.
* ವರದಕ್ಷಿಣೆಯ ಸ್ಥಾನವನ್ನು ವಧು ದಕ್ಷಿಣೆ ಆಕ್ರಮಿಸುವ ಕಾಲ ದೂರವಿಲ್ಲ.

* ಸಲಿಂಗ ಮದುವೆ ಪದ್ಧತಿ ಹೆಚ್ಚಬಹುದು.

* ಹೆಣ್ಣುಗಳ ಕೊರತೆಯಿಂದ ಕೆಲ ಗಂಡುಗಳಿಗೆ ಕಡ್ಡಾಯದ ಬ್ರಹ್ಮಚರ್ಯ
* ವೇಶ್ಯಾವಾಟಿಕೆಯ ದಂಧೆ ಹೆಚ್ಚುವ ಸಂಭವವನ್ನು ಅಲ್ಲಗಳೆಯಲಾಗದು.
* ಮದುವೆಯಾಗದೆ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಬಹುದು.

ಆದ್ದರಿಂದ ಇನ್ನಾದರೂ ನಮ್ಮ ದೇಶದಲ್ಲಿ ಹೆಣ್ಣಿನ ಕುರಿತು ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಈ ಮೇಲೆ ತಿಳಿಸಿದ ಹಾಗೆ ಹೆಣ್ಣುಮಕ್ಕಳ ಕೊರತೆಯಿಂದ ನಮ್ಮಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಅವುಗಳಿಗೆ ಪರಿಹಾರ ನಮ್ಮಲ್ಲಿಯೇ ಇದೆ. ಮುಂದಿನ ದಿನಗಳಲ್ಲಾದರೂ ನಾವು ಹೆಣ್ಣು ಮತ್ತು ಗಂಡುಗಳಲ್ಲಿ ಭೇದವೆಣಿಸದೆ ಗಂಡುಮಕ್ಕಳಿಗೆ ಸರಿಸಮಾನವಾಗಿ ಹೆಣ್ಣುಮಕ್ಕಳನ್ನು ಬೆಳೆಸಬೇಕು. ಆಗ ಮಾತ್ರ ಮುಂಬರುವ ಸಮಸ್ಯೆಗಳಿಗೆ ಪರಿಹಾರ ಶಕ್ಯ. ‘ಬೇಟಿ ಬಚಾವೋ ಮತ್ತು ಬೇಟಿ ಪಢಾವೋ’ ಘೋಷಣೆಯಿಂದ ಮಾತ್ರ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಲಾಗದು. ಬದಲು ಈ ಯೋಜನೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಿದರೆ ಮಾತ್ರ ಹೆಣ್ಮಕ್ಕಳ ಸಂಖ್ಯೆ ಹೆಚ್ಚುವುದಲ್ಲದೆ, ಅವರ ಬದುಕೂ ಬಂಗಾರವಾದೀತು.

Writer - ಡಾ. ಎಸ್.ಡಿ.ನಾಯ್ಕ, ಕಾರವಾರ

contributor

Editor - ಡಾ. ಎಸ್.ಡಿ.ನಾಯ್ಕ, ಕಾರವಾರ

contributor

Similar News

ಜಗದಗಲ
ಜಗ ದಗಲ