ಸಂಧಿವಾತದಲ್ಲಿ ಎಷ್ಟೊಂದು ವಿಧಗಳಿವೆ ಗೊತ್ತೇ.....?

Update: 2018-07-25 10:28 GMT

ನಮ್ಮ ಶರೀರದಲ್ಲಿಯ ಸಂದುಗಳು ಅಥವಾ ಕೀಲುಗಳ ಉರಿಯೂತವನ್ನು ಆರ್ಥ್ರಿಟಿಸ್ ಅಥವಾ ಸಂಧಿವಾತ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಂಧಿವಾತವು ಸಂದುಗಳು ಮತ್ತು ಸ್ನಾಯುಗಳ ದೀರ್ಘಕಾಲಿಕ ಕಾಯಿಲೆಗಳ ಗುಂಪನ್ನು ಸೂಚಿಸುತ್ತದೆ. ಸದ್ಯಕ್ಕೆ ತಿಳಿದಿರುವಂತೆ ಸಂಧಿವಾತದಲ್ಲಿ ಸುಮಾರು 100 ಬೇರೆ ಬೇರೆ ವಿಧಗಳಿವೆ ಮತ್ತು ಈ ಸಂಖ್ಯೆಯು ಹೆಚ್ಚುತ್ತಲೇ ಇದೆ.

 ಸಂದುಗಳಲ್ಲಿ ನೋವು,ಉರಿಯೂತ ಮತ್ತು ಕೀಲುಗಳ ಸೀಮಿತ ಚಲನವಲನ ಇವು ಸಂಧಿವಾತದ ಸಾಮಾನ್ಯ ಲಕ್ಷಣಗಳಾಗಿವೆ. ಕೆಲವು ವಿಧಗಳ ಸಂಧಿವಾತದಲ್ಲಿ ಉರಿಯೂತವಿರುವ ಸಂದು ಊದಿಕೊಳ್ಳುತ್ತದೆ,ಕೆಂಪುಛಾಯಯೆನ್ನು ಹೊಂದಿದ್ದು ಮುಟ್ಟಿದರೆ ಬೆಚ್ಚಗಿರುತ್ತದೆ. ಕೆಲವು ವಿಧಗಳ ಸಂಧಿವಾತಗಳು ಸಂದು ನೋವಿನ ಜೊತೆಗೆ ಶರೀರದ ಇತರ ಅಂಗಾಂಗಗಳ ಮೇಲೂ ಪರಿಣಾಮವನ್ನುಂಟು ಮಾಡುತ್ತವೆ. ಹೀಗಾಗಿ ಕೆಲವು ಸಂಧಿವಾತ ರೋಗಿಗಳಲ್ಲಿ ಸಂದುಗಳ ನೋವಿನ ಜೊತೆಗೆ ಜ್ವರ,ದುಗ್ಧಗ್ರಂಥಿಗಳ ಊತ,ತೂಕದಲ್ಲಿ ಇಳಿಕೆ,ಬಳಲಿಕೆ ಮತ್ತು ಶ್ವಾಸಕೋಶಗಳು,ಹೃದಯ ಅಥವಾ ಮೂತ್ರಪಿಂಡಗಳಲ್ಲಿ ಅಸಹಜತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

 ಆಸ್ಟಿಯೊಆರ್ಥ್ರಿಟಿಸ್(ಒಎ) ಮತ್ತು ರುಮಾಟಾಯ್ಡಿ ಆರ್ಥ್ರಿಟಿಸ್(ಆರ್‌ಎ) ಇವು ಸಂಧಿವಾತದ ಎರಡು ಅತ್ಯಂತ ಸಾಮಾನ್ಯ ರೂಪಗಳಾಗಿವೆ. ಒಎ ಕ್ಷಯಿಸುವ ಸಂದು ರೋಗವಾಗಿದ್ದು,ಸಂದುಗಳ ಅಂಗಾಂಶಗಳು ಸವಕಳಿಗೊಳ್ಳುವುದರಿಂದ ಉಂಟಾಗುತ್ತದೆ ಮತ್ತು ಸಂದುಗಳಲ್ಲಿ ನೋವು ಕಾಣಿಸಿಕೊಳ್ಳಲು ಮತ್ತು ಅವು ಸೆಟೆದುಕೊಳ್ಳಲು ಕಾರಣವಾಗುತ್ತದೆ. ಶರೀರದ ಯಾವುದೇ ಸಂದಿನಲ್ಲಿಯೂ ಒಎ ಕಾಣಿಸಿಕೊಳ್ಳುತ್ತದೆಯಾದರೂ, ಸಾಮಾನ್ಯವಾಗಿ ಮಂಡಿ,ಪೃಷ್ಠ,ಕೈಗಳು ಮತ್ತು ಬೆನ್ನುಮೂಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಸಂದುಗಳಲ್ಲಿ ನೋವು ಮತ್ತು ಅವುಗಳ ಸುತ್ತಲೂ ಊತ,ಕೆಂಪಗಾಗುವುದು ಮತ್ತು ಅವುಗಳ ಚಲನವಲನ ಸೀಮಿತಗೊಳ್ಳುವುದು ಒಎ ಲಕ್ಷಣಗಳಾಗಿವೆ.

ಒಎ 60 ವರ್ಷ ಪ್ರಾಯ ಮೀರಿದ ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಪ್ರಮಾಣದಲ್ಲಿ ಕಾಡುತ್ತದೆ. ಆದರೆ ಕೆಲವರಲ್ಲಿ ಮಾತ್ರ ಗಮನಾರ್ಹ ಅಥವಾ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಿನ ಜೊತೆಗೆ ಕೀಲುಗಳಿಗೆ ಪೆಟ್ಟು,ಬೊಜ್ಜು ಮತ್ತು ಕೀಲುಗಳ ಹೆಚ್ಚಿನ ಬಳಕೆ ಇವೂ ಒಎಗೆ ಕಾರಣವಾಗುತ್ತವೆ.

ಒಎಯನ್ನು ಸಂಪೂರ್ಣವಾಗಿ ಗುಣವಾಗಿಸುವ ಚಿಕಿತ್ಸೆಯಿಲ್ಲ. ಆದರೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಮತ್ತು ಕಾಯಂ ಹಾನಿ ಹಾಗೂ ಅಂಗವೈಕಲ್ಯವನ್ನು ತಡೆಯಲು ನಿಖರವಾದ ರೋಗನಿರ್ಣಯ ಮುಖ್ಯವಾಗಿದೆ.

ರುಮಾಟಾಯ್ಡ ಆರ್ಥ್ರಿಟಿಸ್(ಒಎ)

 ಇದು ಸಂಧಿವಾತದ ಅತ್ಯಂತ ಸಾಮಾನ್ಯ ಮತ್ತು ಗಂಭೀರ ಉರಿಯೂತದ ರೂಪವಾಗಿದ್ದು, ಇದಕ್ಕೆ ಆಕ್ರಮಕ ಚಿಕಿತ್ಸೆಯು ಅಗತ್ಯವಾಗಿದೆ. ಇದನ್ನು ಆಟೋ ಇಮ್ಯೂನ್ ಡಿಸೀಸ್ ಎಂದು ಕರೆಯಲಾಗುತ್ತದೆ. ಶರೀರದ ರೋಗ ನಿರೋಧಕ ಶಕ್ತಿಯು ಗೊಂದಲಗೊಂಡು ಸೈನೋವಿಯಂ ಎಂದು ಕರೆಯಲಾಗುವ ಕೀಲುಗಳ ಒಳಗಿನ ಜೀವಕೋಶಗಳ ಪದರದ ಮೇಲೆ ದಾಳಿ ನಡೆಸುವುದು ಈ ರೋಗಕ್ಕೆ ಕಾರಣವಾಗಿದೆ. ಆರ್‌ಎ ದೀರ್ಘ ಕಾಲೀನ ಮತ್ತು ಹೆಚ್ಚುತ್ತಲೇ ಹೋಗುವ ರೋಗವಾಗಿದ್ದು,ಅಂಗವಿಕಲತೆಗೂ ಕಾರಣವಾಗುತ್ತದೆ.

ಶರೀರದ ಯಾವುದೇ ಕೀಲು ಆರ್‌ಎಯಿಂದ ಪೀಡಿತವಾಗಬಹುದು,ಆದರೆ ಬೆರಳುಗಳ ಸಣ್ಣ ಕೀಲುಗಳು,ಮಣಿಗಂಟು,ಮಂಡಿ ಮತ್ತು ಕಾಲ್ಬೆರಳುಗಳ ಕೀಲುಗಳನ್ನು ಇದು ಹೆಚ್ಚಾಗಿ ಬಾಧಿಸುತ್ತದೆ.

ಸಾಮಾನ್ಯದಿಂದ ತೀವ್ರ ಸ್ವರೂಪದ ನೋವು,ಸಂದುಗಳು ಸೆಟೆದುಕೊಳ್ಳುವುದು ಮತ್ತು ಅವುಗಳ ಚಲನವಲನ ಸಾಮರ್ಥ್ಯ ಕುಗ್ಗುವುದು,ಕೆಂಪುಬಣ್ಣ,ಮೃದುತ್ವ ಮತ್ತು ಪೀಡಿತ ಭಾಗವು ಬಿಸಿಯಾಗಿರುವುದು,ಪೀಡಿತ ಸಂದಿನ ಸುತ್ತಲಿನ ಭಾಗವು ಊದಿಕೊಂಡಿರುವುದು, ಸಂದುಗಳ ಮೇಲೆ ಅಥವಾ ಸಮೀಪ ಸಣ್ಣ ಸಣ್ಣ ಗಟ್ಟಿಯಾದ ಗಂಟುಗಳು ಇದರ ಸಾಮಾನ್ಯ ಲಕ್ಷಣಗಳಾಗಿವೆ.

ಸಂದು ರೋಗವನ್ನು ಸೂಚಿಸುವ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿದರೆ ರೋಗನಿರ್ಣಯ ಸುಲಭವಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆಯನ್ನು ಆರಂಭಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News