'ಕವರ್-ಅಪ್ ಸಂಸ್ಕೃತಿ'ಯಲ್ಲಿ ಕಾವಿ ಹಿಂಸೆ

Update: 2018-07-26 18:39 GMT

ಕೇವಲ ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲದ 'ಕವರ್-ಅಪ್' ಸಂಸ್ಕೃತಿಗೆ ಸಮಾಜವನ್ನು ತಳ್ಳಿರುವ ಶಕ್ತಿಗಳು ಯಾವುವು? ನಮ್ಮ ಸಮಕಾಲೀನ ಸಮಾಜ ಮತ್ತು ಸಂಘಟಿತ ಧರ್ಮದ ಯಾವ ರೀತಿಯ ಕಟ್ಟುಪಾಡುಗಳು, ನಿಷೇಧಗಳು ಯಾವ ರೀತಿಯ ಧಾರ್ಮಿಕ, ಸಾಮಾಜಿಕ ವಿಕೃತಿಗಳಿಗೆ ಕಾರಣವಾಗುತ್ತಿದೆ? ದೇಶದ ಧಾರ್ಮಿಕ ವ್ಯವಸ್ಥೆ ಎಲ್ಲಿ ಎಡವಿದೆ? ಇನ್ನೂ ಎಲ್ಲಿ ಎಡವುತ್ತಿದೆ? ಈಗ ಆಗಿರುವಂತಹ 'ಶಾಕ್-ಅಬ್ಸಾರ್ಬರ್' ರೀತಿಯ 'ಆಘಾತ'ಗಳು ಆಸ್ತಿಕ ಸಮುದಾಯಕ್ಕೆ ಆಗದಂತೆ ತಡೆಯುವುದು ಸಾಧ್ಯವೇ? ಸಾಧ್ಯವೆಂದಾದಲ್ಲಿ ಹೇಗೆ?

'It is better to marry than to burn''- ಪವಿತ್ರ ಬೈಬಲ್

ಅಮೆರಿಕದ ಅತ್ಯಂತ ಗೌರವಾನ್ವಿತ ಕಾರ್ಡಿನಲ್‌ಗಳಲ್ಲೊಬ್ಬರಾದ ಕಾರ್ಡಿನಲ್ ಥಿಯೋಡೋರ್ ಮ್ಯಾಕ್ ಕ್ಯಾರಿಕ್, ಮಕ್ಕಳನ್ನು ಮತ್ತು ವಯಸ್ಕ ಸೆಮಿನರಿಯನ್ (ವಿದ್ಯಾರ್ಥಿ)ಗಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂಬ ಆಪಾದನೆಯ ವಿಚಾರಣೆ ಈಗ ಪೋಪ್ ಫ್ರಾನ್ಸಿಸ್‌ರವರ ಮೇಜಿನ ಮೇಲೆ ಕುಳಿತಿದೆ ಎನ್ನುತ್ತದೆ ಮೊನ್ನೆ ಮೊನ್ನೆ ಪ್ರಕಟವಾದ ಒಂದು ಪತ್ರಿಕಾ ವರದಿ. 2018ರ ಬಹುಭಾಗವನ್ನು ಚಿಲಿಯ ಚರ್ಚ್‌ಗಳಿಗೆ ಸಂಬಂಧಿಸಿ ನಡೆದಿದೆ ಎನ್ನಲಾದ ಮಕ್ಕಳ ಲೈಂಗಿಕ ಶೋಷಣೆ, ವಯಸ್ಕ ಸಲಿಂಗಕಾಮ ಮತ್ತು ಲೈಂಗಿಕ ಅಪರಾಧಗಳನ್ನು ಬಚ್ಚಿ ಇಡುವ ಹಗರಣದಲ್ಲೇ ಕಳೆದಿರುವ ಪೋಪ್, ಚರ್ಚ್‌ನಲ್ಲಿರುವ ''ಬಚ್ಚಿ ಇಡುವ ಸಂಸ್ಕೃತಿ''ಯನ್ನು ಈಗಾಗಲೇ ಖಂಡಿಸಿದ್ದಾರೆ ಎಂದು ಅದೇ ವರದಿ ಹೇಳುತ್ತದೆ.
ಈ ''ಬಚ್ಚಿ ಇಡುವ ಸಂಸ್ಕೃತಿ'' (culture of cover-up) ಪೋಪ್ ಫ್ರಾನ್ಸಿಸ್‌ರವರನ್ನು ಮಾತ್ರವಲ್ಲ, ಈಗ ಕರ್ನಾಟಕದ ಸಂಘಟಿತ ಧಾರ್ಮಿಕ ರಂಗದ ಓರ್ವ ಪ್ರಮುಖ ನೇತಾರರಾಗಿರುವ ಶ್ರೀ ವಿಶ್ವೇಶತೀರ್ಥರನ್ನೂ ಕಾಡತೊಡಗಿದೆ. ಈಗ ಕೆಲವು ದಿನಗಳ ಹಿಂದೆ ರಾಜ್ಯದ ಹಲವು ಟಿವಿ ಚಾನೆಲ್‌ಗಳಲ್ಲಿ ಹಗಲಿರುಳೂ ಸುದ್ದಿಯಾದ ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಸುತ್ತ ನಡೆದಿರುವ ಊಹಾಪೋಹ, ವಾದ-ಪ್ರತಿವಾದ, ಮದ್ಯ-ಮಾನಿನಿಯರ ಕುರಿತ ಆರೋಪ-ಪ್ರತ್ಯಾರೋಪ, ಭಕ್ತಗಡಣವನ್ನು ಕಾಡುತ್ತಿರುವ ಅನುಮಾನ, ಅವಮಾನ, ಮುಜುಗರ, ಸ್ವಲ್ಪ ಬೇಸರ, ತುಂಬ ಸಿಟ್ಟು- ಈ ಎಲ್ಲ ಘಟನಾವಳಿಗಳ ಮೂಲಕ್ಕೆ ಇಳಿದು ನಿರುದ್ವಿಗ್ನವಾಗಿ ತುಸು ಯೋಚಿಸಿದರೆ ಕಾಡುವ ಒಂದು ಮೂಲಭೂತ ಪ್ರಶ್ನೆ: ಇದಕ್ಕೆಲ್ಲ ನಿಜವಾದ ಕಾರಣದ ಬೇರು ಎಲ್ಲಿದೆ? ಕೇವಲ ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲದ 'ಕವರ್-ಅಪ್' ಸಂಸ್ಕೃತಿಗೆ ಸಮಾಜವನ್ನು ತಳ್ಳಿರುವ ಶಕ್ತಿಗಳು ಯಾವುವು? ನಮ್ಮ ಸಮಕಾಲೀನ ಸಮಾಜ ಮತ್ತು ಸಂಘಟಿತ ಧರ್ಮದ ಯಾವ ರೀತಿಯ ಕಟ್ಟುಪಾಡುಗಳು, ನಿಷೇಧಗಳು ಯಾವ ರೀತಿಯ ಧಾರ್ಮಿಕ, ಸಾಮಾಜಿಕ ವಿಕೃತಿಗಳಿಗೆ ಕಾರಣವಾಗುತ್ತಿದೆ? ದೇಶದ ಧಾರ್ಮಿಕ ವ್ಯವಸ್ಥೆ ಎಲ್ಲಿ ಎಡವಿದೆ? ಇನ್ನೂ ಎಲ್ಲಿ ಎಡವುತ್ತಿದೆ? ಈಗ ಆಗಿರುವಂತಹ 'ಶಾಕ್-ಅಬ್ಸಾರ್ಬರ್' ರೀತಿಯ 'ಆಘಾತ'ಗಳು ಆಸ್ತಿಕ ಸಮುದಾಯಕ್ಕೆ ಆಗದಂತೆ ತಡೆಯುವುದು ಸಾಧ್ಯವೆ? ಸಾಧ್ಯವೆಂದಾದಲ್ಲಿ ಹೇಗೆ?
ಕಾಮ, ಮೋಹ, ಮದ, ಮಾತ್ಸರ್ಯಗಳ ಮೂಟೆಯಾಗಿರುವ ಮನುಷ್ಯನನ್ನು ಪಳಗಿಸಿ, ಸಾತ್ವೀಕರಿಸಿ ನಿಜವಾದ ಮನುಷ್ಯನನ್ನಾಗಿ ಮಾಡುವ ಪ್ರಯತ್ನಗಳೇ ಜಗತ್ತಿನ ಮುಂದಿರುವ ವಿವಿಧ ಪವಿತ್ರ ಧಾರ್ಮಿಕ ಗ್ರಂಥಗಳ ಮೂಲ ಉದ್ದೇಶ. ಉದಾಹರಣೆಗೆ ಸುಮಾರು 2,700 ವರ್ಷಗಳ ಹಿಂದೆ ರಚಿತವಾಯಿತೆನ್ನಲಾಗುವ, ಮತ್ತು ಭಾರತೀಯ ಆರ್ಷೇಯ ಸಂಸ್ಕೃತಿಯ ಜೀವಾಳವಾದ ಸ್ವ-ನಿಯಂತ್ರಣ, ದಾನ, ದಯೆ (ದಮಂ ದಾನಂ ದಯಾಮಿತಿ) ಮತ್ತು ಇವುಗಳಿಂದ ಹುಟ್ಟಿಕೊಳ್ಳದ ಅಹಿಂಸೆ, ಸತ್ಯ, ಆಸ್ತೇಯ (ಕಳ್ಳತನ ಮಾಡದಂತೆ ತನ್ನ ಮೇಲೆ ತಾನೇ ಹೇರಿಕೊಳ್ಳುವ ನಿಯಂತ್ರಣ), ಬ್ರಹ್ಮಚರ್ಯ (ಕಾಮದ ಮೇಲೆ ನಿಯಂತ್ರಣ), ಅಪರಿಗ್ರಹ (ಆಸೆಗಳ ಮೇಲೆ ನಿಯಂತ್ರಣ) ಎನ್ನುವ ಸಾರ್ವಕಾಲಿಕ ವೌಲ್ಯಗಳ ನಿಧಿಯಾಗಿರುವ ಬೃಹದಾರಣ್ಯಕೋಪನಿಷತ್ ಅಥವಾ ಪವಿತ್ರ ಕುರ್‌ಆನ್ ಅಥವಾ ಪವಿತ್ರ ಬೈಬಲ್. ಬೃಹದಾರಣ್ಯಕೋಪನಿಷತ್ ಆಗಲಿ ಅಥವಾ ಬೈಬಲ್‌ನ ನಾಲ್ಕರಿಂದ ಹತ್ತರವರೆಗಿನ ನಿಯಮ (ಕಮಾಂಡ್‌ಮೆಂಟ್ಸ್)ಗಳಾಗಲಿ, ಸುಖೀ ಹಾಗೂ ಶಾಂತವಾದ ಸಾಮಾಜಿಕ ವ್ಯವಸ್ಥೆಯನ್ನು, ಗಾಂಧೀಜಿಯ ಕನಸಿನ ರಾಮರಾಜ್ಯವನ್ನು ನಿರ್ಮಿಸುವ ಉದ್ದೇಶದಿಂದಲೇ ಹುಟ್ಟಿಕೊಂಡವುಗಳು. ಕಾಲ ಹಾಗೂ ದೇಶ ಬೇರೆ ಬೇರೆಯಾಗಿರಬಹುದಾದರೂ ಮೂಲಭೂತವಾದ ಉದ್ದೇಶದಲ್ಲಿ ಅದ್ಭುತವಾದ ಸಾಮ್ಯಹೊಂದಿರುವ ಪ್ರಾಚೀನ ಶಾಸನಗಳು ಇವು. ಆದರೆ ಇವುಗಳು ಹೇಳುವ ನೀತಿಯನ್ನು, ಆದೇಶಿಸುವ ನಿಯಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸ್ವಾರ್ಥ ಸಂಘಟಿತ ಧರ್ಮ ಸೋತಿದೆ ಮತ್ತು ಆ ಎಲ್ಲ ನಿಯಮಗಳನ್ನು ನಿಷೇಧಗಳನ್ನು ಪಾಲಿಸುವುದು ಎಲ್ಲ ಹುಲುಮಾನವರಿಗೆ ಸಾಧ್ಯವೇ? ಮತ್ತು ಅವುಗಳಲ್ಲಿ ಕೆಲವಂತೂ ಬದಲಾದ ಜಗತ್ತಿಗೆ ಅಸಾಧ್ಯವೆಂದಾದ ಮೇಲೆ ಧಾರ್ಮಿಕ ವ್ಯವಸ್ಥೆಯನ್ನೇ ಹೇಗೆ ಬದಲಾಯಿಸಬಹುದು? ಎಂಬ ದಿಕ್ಕಿನಲ್ಲಿ ಯೋಚಿಸುವುದೂ ಅನಿವಾರ್ಯ. ಯಾಕೆಂದರೆ ನಮ್ಮ ಪವಿತ್ರ ಗ್ರಂಥಗಳು ಹೇಳುವ ಎಲ್ಲ ಮಾತುಗಳನ್ನು ಎಲ್ಲ ಮನುಷ್ಯರು ಎಲ್ಲ ಸಮಾಜಗಳಲ್ಲೂ ಅನುಸರಿಸಿದರೆ, ಆಗ ನಮಗೆ ಪೊಲೀಸರ, ನ್ಯಾಯಾಲಯಗಳ, ಸೇನಾಪಡೆಗಳ ಅಗತ್ಯವೇ ಇರುವುದಿಲ್ಲ! ವೇಶ್ಯಾವೃತ್ತಿ, ಜೂಜಾಟಗಳ ಕಾಟ ಇರುವುದಿಲ್ಲ! ಇದೆಲ್ಲವುಗಳ ಅಗತ್ಯ ಅನಿವಾರ್ಯವಾಗಿರುವ ಒಂದು ಕಾಲದಲ್ಲಿ ನಾವು ಬದುಕಲೇ ಬೇಕಾದ್ದರಿಂದ ಸದ್ಯದ ವಿಕೃತ ವ್ಯವಸ್ಥೆಯನ್ನು ಬದಲಾಯಿಸುವುದು, ಅದು ಅಥವಾ ಬದಲಾಯಿಸಲು ಸಾಧ್ಯವೇ ಇಲ್ಲವೆಂದಾದಲ್ಲಿ, ಸಮಾಜವೇ ಆ ವ್ಯವಸ್ಥೆಗೆ ಹೊಂದಿಕೊಳ್ಳುವುದಲ್ಲದೆ ಬೇರೆ ದಾರಿ ಇಲ್ಲ.
ನನ್ನ ಇದುವರೆಗಿನ ಮಾತುಗಳಿಗೆ ಪೂರಕವಾಗಿ ನನ್ನ ವಾದವನ್ನು ಕೆಲವು ಉದಾಹರಣೆಗಳ ಮೂಲಕ, ಕಳೆದ ಅರ್ಧಶತಮಾನಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ನಾನು ಗಮನಿಸಿದ ಕೆಲವು ಬೆಳವಣಿಗೆಗಳ ವಿವರಗಳ ಮೂಲಕ ಮುಂದುವರಿಸುತ್ತೇನೆ.
ಬೃಹದಾರಣ್ಯಕೋಪನಿಷತ್ ಹೇಳುವ ಮೊದಲ ಗುಣವಾದ 'ದಮ'ವನ್ನಾಧರಿಸಿ ಪತಂಜಲಿ ತನ್ನ ಯೋಗ ಸೂತ್ರದಲ್ಲಿ ಪಟ್ಟಿ ಮಾಡುವ ಐದು ನಿಯಮಗಳಲ್ಲೊಂದಾದ ಬ್ರಹ್ಮಚರ್ಯವನ್ನು ಸನ್ಯಾಸಕ್ಕೆ ತಳಕು ಹಾಕಿರುವುದರಿಂದ, ತೀರ ಚಿಕ್ಕ ವಯೋಮಾನದ ಬಾಲಕನಿಗೆ ಸನ್ಯಾಸದೀಕ್ಷೆ ನೀಡುವ ಸಂಪ್ರದಾಯ ಬೆಳೆದು ಬಂತು. ಆದರೆ ಈ ನಿಯಮದ ಪಾಲನೆಯ ಯಾತನೆ ಅರಿವಿಗೆ ಬರುವುದು ಧರ್ಮ ಸಾಧನೆಗೆ ಮುಖ್ಯವಾದ ಶರೀರಕ್ಕೆ ಕಾವಿಯೇ ಒಂದು ಹಿಂಸೆ ಅನ್ನಿಸತೊಡಗುವುದು ಬಾಲಕ ಯುವಕನಾಗಿ ಜಗತ್ತಿನ ಪ್ರಕೃತಿ ಸೌಂದರ್ಯದ ಜೊತೆ ಹೆಣ್ಣಿನ ಸೌಂದರ್ಯವನ್ನು ಗಮನಿಸತೊಡಗಿದಾಗ, ಆಕೆಯ ಆಕರ್ಷಣೆಗೆ ಒಳಗಾಗುವ ದೈಹಿಕ ಅನಿವಾರ್ಯತೆ ಉಂಟಾದಾಗ. ಆತ ಈ ಆಕರ್ಷಣೆಗೆ ಒಳಗಾಗಿ ತನ್ನ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವುದನ್ನು, ತಮ್ಮ ಪಾಡಿಗೆ ಸಕಲ ಸುಖಗಳನ್ನೂ ಅನುಭವಿಸುತ್ತ ಬದುಕುವ 'ಕವರ್-ಅಪ್' ಸಂಸ್ಕೃತಿಯ ಭಕ್ತಜನ ಒಪ್ಪುವುದಿಲ್ಲ. ಆದರೂ ಅದೆಲ್ಲವನ್ನೂ ಸಹಿಸಿಕೊಂಡು ಮಠ ಪೀಠಗಳಿಗೆ ನಿಷ್ಠೆ ತೋರುತ್ತಾ, ತಮಗೆ ಬೇಕೆಂದಾಗ ಮಾತ್ರ ಆ ಪೀಠಗಳಿಗೆ ಭೇಟಿ ನೀಡುತ್ತ, ಪೀಠದಲ್ಲಿ ಕುಳಿತ ವ್ಯಕ್ತಿಗೆ ಭಕ್ತಿಯಿಂದ ನಮಿಸುತ್ತ ಬದುಕುತ್ತಿರುತ್ತಾರೆ. 'ಕವರ್-ಅಪ್' ಸಂಗತಿಗಳು ಬಹಿರಂಗಗೊಂಡಾಗ ಸ್ವಲ್ಪ ಇರಿಸು-ಮುರಿಸಾದರೂ ಅಂಗೀಕೃತ ವ್ಯವಸ್ಥೆಯಲ್ಲಿ ಉತ್ಪಾತಗಳೇನೂ ಸಂಭವಿಸುವುದಿಲ್ಲ. ಇದು ಪ್ರಾಯಶಃ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಒಂದು ಪರಂಪರೆ.
ಆದರೆ ಕಳೆದ ಕೆಲವು ದಶಕಗಳಲ್ಲಿ ಸುದ್ದಿ ಮಾಧ್ಯಮರಂಗದಲ್ಲಾದ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ 'ಕವರ್-ಅಪ್' ಸಂಸ್ಕೃತಿ ನಶಿಸುವಂತಾಗಿದೆ. ಪರಿಣಾಮವಾಗಿ ಮನೆಯ ಪಡಸಾಲೆಗೇ ಮಠ ಮಂದಿರಗಳ, ನಾನಾ ಬಾಬಾಗಳ ಬ್ರಹ್ಮಚರ್ಯ ಉಲ್ಲಂಘನೆಯ ಸುದ್ದಿಗಳು, ಲೈಂಗಿಕ ಅಪರಾಧಗಳ ದೃಶ್ಯಾವಳಿಗಳು ಟಿವಿ ಪರದೆಗಳ ಮೇಲೆ ರಾಶಿಯಾಗಿ ಒಂದು ಬೀಳುತ್ತಿವೆ.
ಸುಮಾರು ಅರ್ಧಶತಮಾನದ ಅವಧಿಯಲ್ಲಿ ಒಂದಷ್ಟು ಧಾರ್ಮಿಕ ನೆಲೆಗಳ ಅಧಿಪತಿಗಳ ಕಾಮನಿಯಮೋಲ್ಲಂಘನೆಯ ಅಧ್ಯಯನ ಮಾಡಿದಾಗ ಕಂಡುಬಂದ ಒಂದು ಮುಖ್ಯ ಅಂಶವೆಂದರೆ, ಎಲ್ಲ ಕಾಲದಲ್ಲೂ ಪ್ರಾಯಶಃ ಕನಿಷ್ಠ ಶೇ.50ರಷ್ಟು ಅಧಿಪತಿಗಳು ಬ್ರಹದಾರಣ್ಯಕೋಪನಿಷತ್ತಿನ 'ನಿಯಂತ್ರಣ' ಸಂಬಂಧಿ ನಿಯಮವನ್ನು ಪಾಲಿಸಲು ಮಾನವ ಸಹಜ ದೌರ್ಬಲ್ಯದಿಂದಾಗಿ ಸೋತಿದ್ದಾರೆ, ಯಾವಾಗಲೂ ಸೋಲುತ್ತಲೇ ಬಂದಿರಬೇಕು. ಇಲ್ಲವಾದಲ್ಲಿ 1905ರಲ್ಲಿ ಪ್ರಕಟವಾದ ಬೋಳಾರ ಬಾಬುರಾಯರ 'ವಾಗ್ದೇವಿ', ಜಿ.ಬಿ.ಜೋಷಿಯವರ 'ಸತ್ತವರ ನೆರಳು' ಕೃತಿಗಳಂತಹ ಕೃತಿಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ವಾಗ್ದೇವಿಯ ಚೆಲುವಿಗೆ ಮರುಳಾಗುವ ಚಂಚಲನೇತ್ರ ಸ್ವಾಮಿ ಇಂದಿಗೂ ಪ್ರಸ್ತುತವಾಗಿ ಉಳಿದಿರುವ ಒಂದು ಪ್ರಾತಿನಿಧಿಕ ಪಾತ್ರ. ಹಾಗಾದರೆ ಮುಂದೇನು? ನನಗೆ ಅನ್ನಿಸುವಂತೆ ಎರಡು ದಾರಿಗಳಿವೆ.

ಒಂದು: ಆಸೆಗಳಿಂದ, ತನ್ನನ್ನು ಸುಡುವ ಪ್ರಕೃತಿದತ್ತವಾದ ಕಾಮದಿಂದ ತನ್ನನ್ನು ಸುಟ್ಟುಕೊಳ್ಳುವುದಕ್ಕಿಂತ ಮದುವೆಯಾಗುವುದು 'ಬೆಟರ್' ಎಂದು ಒಪ್ಪಿಕೊಂಡು ಅದಕ್ಕೆ ಅನುಗುಣವಾಗಿ ಧಾರ್ಮಿಕ ವ್ಯವಸ್ಥೆಯಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು. ಹೀಗೆ ಮಾಡಿಕೊಂಡ ಕೆಲವು ಕ್ಷೇತ್ರಗಳು ಗೃಹಸ್ಥಾಶ್ರಮದ ವ್ಯವಸ್ಥೆಗೆ ಒಪ್ಪಿ, ಅಕ್ರಮ ಕಾಮದ ಆಪಾದನೆಗಳಿಂದ ಮುಕ್ತಿ ಪಡೆದಿವೆೆ. ಎರಡು: ಮೊದಲನೆಯ ದಾರಿಯಲ್ಲಿ ಮುಂದೆ ಹೋಗಲು ತಾವು ಸುತರಾಂ ಒಪ್ಪುವುದಿಲ್ಲ, ತಾನು ಮದ್ಯಪಾನಿ, ಮಾನಿನಿ ವ್ಯಸನಿ, ತನಗೆ ಮಕ್ಕಳಿದ್ದಾರೆ ಎಂದು ಸ್ವತಃ ಒಪ್ಪಿಕೊಂಡವರಿಗೆ ಯಾರ ಕಣ್ಣಿಗೂ ಕಾಣದ ದೇವರ ಪೂಜೆಯ ಹಕ್ಕು ನೀಡಲು ಸಾಧ್ಯವೇ ಇಲ್ಲ ಎಂದು ಒಂದು ಸಮಾಜ ಹೇಳುವುದಾದಲ್ಲಿ, ಆ ಸಮಾಜ ತಾನು ಪೂಜಿಸುವ ಪೀಠಕ್ಕೆ ಏಕಕಾಲದಲ್ಲಿ ಲೌಕಿಕವೂ ಧಾರ್ಮಿಕವೂ ಆಗುವ ಸ್ವಾತಂತ್ರ ನೀಡುವ ಔದಾರ್ಯ ತೋರುವುದು.
ಯಾಕೆಂದರೆ ವ್ಯಕ್ತಿಯೊಬ್ಬ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡರೆ ಮಾತ್ರ ಅಪರಾಧಿ. ಆತ ತನಗೆ ಇರುವ ಧಾರ್ಮಿಕ ಅಧಿಕಾರವನ್ನು ಕಳೆದುಕೊಳ್ಳುತ್ತಾನೆ. ಒಪ್ಪಿಕೊಳ್ಳುವ ಆ ಅಧಿಕಾರವನ್ನು ಉಳಿಸಿಕೊಳ್ಳುತ್ತಾನೆ ಎಂದು ಹೇಳುವುದು ಒಂದು ಕೋರ್ಟ್ ನೀಡುವ ನ್ಯಾಯವಾಗಬಹುದು. ಅದು ಆತ್ಮಸಾಕ್ಷಿಯ ನ್ಯಾಯವಾಗಲಾರದು.
ಸಮಾಜದ ಆತ್ಮಸಾಕ್ಷಿಯಂತೆ ನಡೆದುಕೊಳ್ಳಬೇಕಾದ ಒಂದು ಧಾರ್ಮಿಕ ಕೇಂದ್ರ ಆತ್ಮಸಾಕ್ಷಿ ಇಲ್ಲದ ಜನಗಳಿಂದ ತುಂಬಿಹೋದಲ್ಲಿ ನೈತಿಕತೆ, ಮಾನವೀಯತೆಗಳೆಲ್ಲ ಅರ್ಥಕೋಶದಲ್ಲಿರುವ ಕೇವಲ ಶಬ್ದಗಳಾಗಲಾರದೇ?

(bhaskarrao599@gmail.com)

Writer - ಡಾ.ಬಿ.ಭಾಸ್ಕರ ರಾವ್

contributor

Editor - ಡಾ.ಬಿ.ಭಾಸ್ಕರ ರಾವ್

contributor

Similar News

ಜಗದಗಲ
ಜಗ ದಗಲ