ಶೌಚ ಗುಂಡಿಯಂತೆಯೇ... ಇಂಗು ಗುಂಡಿಯೂ ಕಡ್ಡಾಯವಾಗಲಿ

Update: 2018-07-26 18:44 GMT

ಈ ವರ್ಷ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣದಷ್ಟು ಮಳೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸುರಿದಿತ್ತೆಂದು ಹವಾಮಾನ ಇಲಾಖೆಯ ವರದಿ ಪ್ರಕಟಿಸಿದೆ. ಅಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಮಳೆಯಾಗಿಲ್ಲ ಎಂದಾಯಿತು. ಕರ್ನಾಟಕದ ಮಲೆನಾಡು ಮತ್ತು ಕರಾವಳಿಗೆ ಹೋಲಿಸಿದರೆ ಬೇರೆಲ್ಲೂ ಇಷ್ಟು ಅಗಾಧ ಪ್ರಮಾಣದ ಮಳೆಯಾಗುವುದಿಲ್ಲ. ಆಗಲೂ ಕೂಡದು. ಯಾಕೆಂದರೆ ಇಷ್ಟು ದೊಡ್ಡ ಪ್ರಮಾಣದ ಮಳೆಯನ್ನು ತಾಳಿಕೊಳ್ಳುವ ಶಕ್ತಿ ಅಲ್ಲಿನ ಬೌಗೋಳಿಕತೆಗೆ ಇಲ್ಲ.

ಇಷ್ಟೆಲ್ಲಾ ಮಳೆಯಾದರೂ ನಮ್ಮ ಕರಾವಳಿಯ ನೀರಿನ ಸಮಸ್ಯೆ ಈ ಬಾರಿಯೂ ಜನವರಿ ತಿಂಗಳಾಂತ್ಯಕ್ಕೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಯಾರಿಗೂ ಸಂಶಯವಿಲ್ಲ. ಇಲ್ಲಿ ಎಷ್ಟೇ ಮಳೆಯಾದರೂ ಮಳೆನೀರು ಹರಿದು ಹೋಗಿಬಿಡುತ್ತದೆ. ಇಲ್ಲಿ ಮಳೆನೀರನ್ನು ಸಮರ್ಪಕವಾಗಿ ಕೊಯ್ಲು ಮಾಡಿದರೆ ಅರ್ಥಾತ್ ಸಂಗ್ರಹಿಸುವ ವ್ಯವಸ್ಥೆ ಮಾಡಿದರೆ ಖಂಡಿತವಾಗಿಯೂ ಇಲ್ಲಿ ನೀರಿನ ಸಮಸ್ಯೆ ಉದ್ಭವಿಸದು. ಇಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಥಳೀಯಾಡಳಿತವಾಗಲೀ, ಜನರಾಗಲೀ ವೈಜ್ಞಾನಿಕ ಪ್ರಯತ್ನ ಮಾಡುವುದೇ ಇಲ್ಲ. (ನನ್ನನ್ನೂ ಒಳಗೊಂಡಂತೆ)
 ಇಲ್ಲಿ ನೀರಿನ ಸಮಸ್ಯೆಗೆ ಬಹುಮುಖ್ಯ ಕಾರಣಗಳಲ್ಲೊಂದು ಅಡ್ಡಾದಿಡ್ಡಿ, ಬೇಕು ಬೇಕೆಂದಲ್ಲೆಲ್ಲಾ ಕೊಳವೆ ಬಾವಿ ಕೊರೆಯುವುದು. ಇದಕ್ಕೆ ಸದ್ಯ ನಿರ್ಬಂಧವಿದ್ದರೂ ಅದು ಕೇವಲ ಕಡತಕ್ಕೆ ಮಾತ್ರ ಸೀಮಿತ. ಅನೇಕ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ನಿರ್ಬಂಧಗಳನ್ನು ಮೀರಿ ಹೇಗೆ ಕೊಳವೆ ಬಾವಿ ಕೊರೆಸಬಹುದೆಂಬ ಉಪಾಯವನ್ನು ಮತ್ತು ನಿರ್ಬಂಧದ ಲೂಪ್ ಹೋಲ್ಗಳನ್ನು ಖಾಸಗಿಯಾಗಿ ಕೊಳವೆಬಾವಿ ಕೊರೆಸುವವರಿಗೆ ತಿಳಿಸಿಕೊಡುತ್ತಾರೆ. ಉದಾಹರಣೆಗೆ ರಾತ್ರಿ ಹೊತ್ತು ಕೊಳವೆಬಾವಿ ಕೊರೆಸಿ, ರವಿವಾರ ಕೊರೆಸಿ ಎಂದೆಲ್ಲಾ.. ಅಧಿಕಾರಿಗಳು ಮತ್ತು ಕೆಲವು ಜನಪ್ರತಿನಿಧಿಗಳು ಉಪಾಯ ನೀಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೊರೆಸಿದ ಅದೆಷ್ಟೋ ಕೊಳವೆಬಾವಿಗಳು ಪಾತಾಳ ತಲುಪಿದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕ ಕೊಳವೆಬಾವಿಗಳಲ್ಲಿ ತೃಪ್ತಿದಾಯಕವೆನ್ನುವಂತಿಲ್ಲ. ಅದಕ್ಕೆ ಖರ್ಚು ಮಾಡಿದ ಲೆಕ್ಕದಲ್ಲಿ ಅದು ನಷ್ಟದ ಬಾಬ್ತು.
ಆದಾಗ್ಯೂ ಕೊಳವೆಬಾವಿ ಕೊರೆಸುವ ಪ್ರಕ್ರಿಯೆಯೇನೂ ಕಡಿಮೆಯಾಗಿಲ್ಲ.
ಕೊಳವೆ ಬಾವಿಯಲ್ಲಿ ನೀರು ಸಿಕ್ಕರೂ ಅದರಲ್ಲಿ ಯಾವಾಗ ಬೇಕಾದರೂ ಹೂಳು ತುಂಬಬಹುದು. ತೆರೆದ ಬಾವಿಯಲ್ಲಿ ಹೂಳು ತುಂಬಿದರೂ ಹೂಳೆತ್ತಲು ಸಾಧ್ಯ. ಆದರೆ ಕೊಳವೆ ಬಾವಿಯಲ್ಲಿ ಅದು ಸಾಧ್ಯವಿಲ್ಲ. ಒಂದು ವೇಳೆ ಯಾವುದಾದರೂ ಹೊಸ ತಂತ್ರಜ್ಞಾನದ ಮೂಲಕ ಹೂಳೆತ್ತಿದರೂ ಇನ್ನೊಂದು ಕೊಳವೆಬಾವಿ ಕೊರೆಸಿದಷ್ಟು ಖರ್ಚು ತಗಲುತ್ತದೆ.
ಕೊಳವೆ ಬಾವಿಯಿಂದ ವೈಯಕ್ತಿಕವಾಗಿ ಕೊರೆಸಿದವನಿಗೆ ಮಾತ್ರ ನಷ್ಟವಲ್ಲ. ಅದು ಒಂದಿಡೀ ಪ್ರದೇಶದ ನೀರಿನ ಸಮಸ್ಯೆ ಉಲ್ಭಣಿಸಲು ಹೇತುವಾಗುತ್ತದೆ.
ಕೊಳವೆ ಬಾವಿಯ ಅತೀ ದೊಡ್ಡ ಹಿನ್ನಡೆಯೇನೆಂದರೆ ಅದು ಅಂತರ್ಜಲ ಮಟ್ಟವನ್ನು ಮತ್ತಷ್ಟು ಪಾತಾಳಕ್ಕಿಳಿಸುತ್ತದೆ.
ಕೊಳವೆ ಬಾವಿಯಿಂದಾಗಿ ಆ ಸುತ್ತಮುತ್ತಲಿನ ಪ್ರದೇಶದ ತೆರೆದ ಬಾವಿಗಳ ನೀರಿನ ಒರತೆಯನ್ನು ಸ್ಥಳಾಂತರಿಸುತ್ತದೆ.
ನಾವು ಇನ್ನೂ ಮಳೆನೀರನ್ನು ಇಂಗಿಸುವ ವೈಜ್ಞಾನಿಕ ಪ್ರಕ್ರಿಯೆಗೆ ಮನಸ್ಸು ಮಾಡದಿದ್ದರೆ ಎಷ್ಟೇ ಮಳೆ ಬಂದರೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.
 ಈ ನಿಟ್ಟಿನಲ್ಲಿ ಮುಂದಡಿಯಿಡಲು ಇನ್ನು ಮೀನ ಮೇಷ ಎನಿಸುವುದು ತರವಲ್ಲ. ಮಳೆನೀರು ಇಂಗಿಸುವ ಪ್ರಕ್ರಿಯೆಗೆ ಸರಕಾರದ ಮಟ್ಟದಿಂದಲೇ ಕೆಲಸವಾಗಬೇಕಿದೆ. ನೀರಿಂಗಿಸುವಿಕೆಯನ್ನು ಕಡ್ಡಾಯಗೊಳಿಸಲು ಸರಕಾರ ಕೈಗೊಳ್ಳಬಹುದಾದ ಪ್ರಾಥಮಿಕ ಕ್ರಮ ಯಾರೇ ಹೊಸದಾಗಿ ಮನೆ, ಕಟ್ಟಡ ನಿರ್ಮಿಸಲು ಪರವಾನಿಗೆಗೆ ಅರ್ಜಿ ಹಾಕಿದರೆ ಅವರಿಗೆ ಪರವಾನಿಗೆ ಕೊಡಲು ಹೇಗೆ ಶೌಚ ಗುಂಡಿ ಅಗತ್ಯವೋ ಹಾಗೆಯೇ ಮಳೆ ನೀರು ಇಂಗಿಸುವ ಇಂಗು ಗುಂಡಿಯೂ ಅಗತ್ಯ ಎಂಬ ಕಾಯ್ದೆ ಜಾರಿಗೆ ತರಬೇಕಿದೆ. ಇದಕ್ಕೆ ಮಾರ್ಗದರ್ಶನ ನೀಡಲು ಬೇಕಾಗುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಪಂಚಾಯತ್ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಇಂಗು ಗುಂಡಿ ನಿರ್ಮಿಸಲು ಸರಕಾರ ನೀರಾವರಿ ಇಲಾಖೆಯಲ್ಲಿ ಒಂದು ಪ್ರತ್ಯೇಕ ನಿಧಿ ಇರಿಸಬೇಕು. ಯಾರೇ ಇಂಗು ಗುಂಡಿ ನಿರ್ಮಿಸಿ ಮಳೆನೀರು ಕೊಯ್ಲು ಮಾಡಬಯಸಿದಲ್ಲಿ ಅವರಿಗೆ ಅದಕ್ಕೆ ಸ್ಥಳೀಯಾಡಳಿತದ ಮೂಲಕ ಅರ್ಥಿಕ ಸಹಾಯ ನೀಡಬೇಕು.
ಮಳೆ ನೀರು ಕೊಯ್ಲಿನ ಫಲ ಸಿಗಲು ಅನೇಕ ವರ್ಷಗಳೇನೂ ಬೇಕಾಗುವುದಿಲ್ಲ. ಒಂದೆರಡು ವರ್ಷಗಳಲ್ಲಿ ಅಂತರ್ಜಲ ಮಟ್ಟ ಮೇಲಕ್ಕೆ ಬಂದು ತೆರೆದ ಬಾವಿಗಳಲ್ಲಿ ಧಾರಾಳ ನೀರು ಸಿಗುವ ಸಾಧ್ಯತೆ ನಿಚ್ಚಳ. ಈ ರೀತಿಯ ಕ್ರಮಗಳಿಂದ ಸ್ಥಳೀಯಾಡಳಿತ ಸಂಸ್ಥೆಗಳು ನೀರಾವರಿ ಸಮಸ್ಯೆಗಾಗಿ ತನ್ನ ಬಜೆಟ್‌ನ ಬಹುದೊಡ್ಡ ಮೊತ್ತವನ್ನು ಮೀಸಲಿರಿಸುವುದು ಕ್ರಮೇಣ ಕಡಿಮೆಯಾದೀತು. ಅದೇ ದುಡ್ಡನ್ನು ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವ್ಯಯಿಸಲು ಸಾಧ್ಯವಾದೀತು. ಆದರೆ ಅದಕ್ಕೆ ಆಳುವ ವರ್ಗ ಇಚ್ಛಾಶಕ್ತಿ ತೋರಬೇಕಿದೆ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News

ಜಗದಗಲ
ಜಗ ದಗಲ