ಗಾಂಧೀಜಿ ಮಾತೆ ಎಂದು ಪರಿಗಣಿಸಿದ್ದ ಮೇಕೆಯ ಮಾಂಸವನ್ನೂ ಹಿಂದೂಗಳು ತ್ಯಜಿಸಲಿ

Update: 2018-07-28 07:05 GMT

ಕೊಲ್ಕತ್ತಾ, ಜು.28: ಮಹಾತ್ಮ ಗಾಂಧೀಜಿ ಮೇಕೆಯನ್ನು ಮಾತೆಯಾಗಿ ಪರಿಗಣಿಸಿದ್ದರು. ಆದ್ದರಿಂದ ಹಿಂದೂಗಳು ಮೇಕೆ ಮಾಂಸ ಸೇವನೆಯನ್ನೂ ತ್ಯಜಿಸಬೇಕು ಎಂದು ಸುಭಾಸ್‌ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರೂ ಆಗಿರುವ ಬೋಸ್ ಅವರನ್ನು ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗೋ ಸಂರಕ್ಷಕರಿಂದ ಹತ್ಯೆಗಳು ಹೆಚ್ಚುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

"ಗಾಂಧೀಜಿಯವರು ನಮ್ಮ ಅಜ್ಜ ಶರತ್‌ಚಂದ್ರ ಬೋಸ್ ಅವರ ಉಡ್‌ಬರ್ನ್ ಪಾರ್ಕ್ ಮನೆಯಲ್ಲಿ ತಂಗುತ್ತಿದ್ದರು. ಅವರು ಮೇಕೆ ಹಾಲು ಕೇಳುತ್ತಿದ್ದರು! ಇದಕ್ಕಾಗಿಯೇ ಮನೆಗೆ ಎರಡು ಆಡುಗಳನ್ನು ತರಲಾಗಿತ್ತು. ಹಿಂದೂ ಸಂರಕ್ಷಕರಾದ ಗಾಂಧಿ ಮೇಕೆಗಳನ್ನೂ ಮಾತೆ ಎಂದು ಪರಿಗಣಿಸಿ ಮೇಕೆ ಹಾಲು ಕುಡಿಯುತ್ತಿದ್ದರು. ಆದ್ದರಿಂದ ಹಿಂದೂಗಳು ಮೇಕೆ ಮಾಂಸ ತಿನ್ನುವುದು ನಿಲ್ಲಿಸಿ" ಎಂದು ಗುರುವಾರ ಬೋಸ್ ಟ್ವೀಟ್ ಮಾಡಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ರಾಯ್, "ಗಾಂಧೀಜಿಯವರಾಗಲೀ, ನಿಮ್ಮ ಅಜ್ಜನಾಗಲೀ ಮೇಕೆಯನ್ನು ಮಾತೆ ಎಂದಿಲ್ಲ. ಇದು ನಿಮ್ಮ ನಿರ್ಣಯ. ಗಾಂಧೀಜಿಯಾಗಲೀ ಇತರ ಯಾರೇ ಆಗಲಿ ಹಿಂದೂ ಸಂರಕ್ಷಕರೆಂದು ಹೇಳಿಕೊಳ್ಳಲಿಲ್ಲ. ನಮಗೆ ಹಿಂದೂಗಳಿಗೆ ಗೋವು ಮಾತೆ. ಮೇಕೆಯಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಇಂಥ ವಿವಾದ ಹುಟ್ಟುಹಾಕಬೇಡಿ ಎಂದು ಚಾಟಿ ಬೀಸಿದ್ದಾರೆ.

ಈ ಬಗ್ಗೆ ವಾದ ವಿವಾದ ಹುಟ್ಟು ಹಾಕಬೇಡಿ. ಗಾಂಧೀಜಿ ಆಡಿನ ಹಾಲು ಕುಡಿಯುತ್ತಿದ್ದರು ಎಂದರೆ ಮಾತೆ ಎಂದು ಪರಿಗಣಿಸಿದಂತಲ್ಲವೇ ಎಂದು ಬೋಸ್ ಮರು ಪ್ರಶ್ನೆ ಎಸೆದಿದ್ದಾರೆ. ಇದಕ್ಕೆ ರಾಯ್ ತಿರುಗೇಟು ನೀಡಿ, "ಮೇಕೆಯನ್ನು ಮಾತೆ ಎಂದು ಪರಿಗಣಿಸಲು ಹೇಗೆ ಸಾಧ್ಯ? ಗಾಂಧೀಜಿಯವರ ಪರಮಾಪ್ತ ಜವಾಹರಲಾಲ್ ನೆಹರೂ ಮತ್ತು ಅವರ ಸಮುದಾಯದವರು ಮಾಂಸಾಹಾರಿಗಳು" ಎಂದು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News