ಹಾಷಿಮೊಟೊ ಕಾಯಿಲೆಯ ಬಗ್ಗೆ ನಿಮಗೆಷ್ಟು ಗೊತ್ತು....?

Update: 2018-07-28 10:55 GMT

ನಮ್ಮ ಶರೀರವು ರೋಗಕಾರಕಗಳ ವಿರುದ್ಧ ಅಥವಾ ಶರೀರದಲ್ಲಿ ಉತ್ಪತ್ತಿಯಾಗುವ ವಿಷವಸ್ತುಗಳನ್ನು ಹೊರಕ್ಕೆ ಹಾಕಲು ಹೋರಾಡುವ ಮೂಲಕ ರೋಗಗಳಿಂದ ನಮ್ಮನ್ನು ರಕ್ಷಿಸುವ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ಶರೀರದ ರೋಗ ನಿರೋಧಕ ವ್ಯವಸ್ಥೆಯೆಂದು ಕರೆಯಲಾಗುತ್ತದೆ ಮತ್ತು ಇದು ನಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಒತ್ತಡ,ಕೆಲವು ಕಾಯಿಲೆಗಳು ಅಥವಾ ಔಷಧಿಗಳ ಅಡ್ಡಪರಿಣಾಮಗಳು, ಅನಾರೋಗ್ಯಕರ ಜೀವನಶೈಲಿ ಇತ್ಯಾದಿಗಳಂತಹ ವಿವಿಧ ಅಂಶಗಳಿಂದಾಗಿ ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಂಡಾಗ ಹಲವಾರು ಕಾಯಿಲೆಗಳು ನಮ್ಮನ್ನು ಅಮರಿಕೊಳ್ಳುತ್ತವೆ.

 ಕೆಲವು ಸಂದರ್ಭಗಳಲ್ಲಿ ನಿರೋಧಕ ವ್ಯವಸ್ಥೆಯೇ ನಮ್ಮ ಶರೀರದ ಮೇಲೆ ದಾಳಿ ಮಾಡಿ ಕೆಲವು ರೋಗಗಳು ಮತ್ತು ಹಾನಿಗಳಿಗೆ ಕಾರಣವಾಗುತ್ತದೆ. ಇಂತಹ ರೋಗಗಳನ್ನು ಆಟೊಇಮ್ಯೂನ್ ಅಥವಾ ಸ್ವಪ್ರತಿರಕ್ಷಿತ ಕಾಯಿಲೆಗಳೆಂದು ಕರೆಯಲಾಗುತ್ತದೆ ಮತ್ತು ಇಂದು ಸಾಮಾನ್ಯವಾಗಿಬಿಟ್ಟಿವೆ.

ರುಮಟಾಯ್ಡ ಸಂಧಿವಾತ,ಚರ್ಮಕ್ಷಯ,ಉದರದ ಕಾಯಿಲೆಗಳು,ಬಹು ಅಂಗಾಂಶಗಳ ಊತ ಇತ್ಯಾದಿಗಳು ಕೆಲವು ಸಾಮಾನ್ಯ ಸ್ವಪ್ರತಿರಕ್ಷಿತ ರೋಗಗಳಾಗಿವೆ.

ಹಾಷಿಮೊಟೊ ಕಾಯಿಲೆಯ ಬಗ್ಗೆ ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ. ಇದು ಅಷ್ಟಾಗಿ ಪರಿಚಿತವಲ್ಲದ ಸ್ವಪ್ರತಿರಕ್ಷಿತ ರೋಗವಾಗಿದೆ. ಶರೀರದ ನಿರೋಧಕ ವ್ಯವಸ್ಥೆಯು ಅತ್ಯಂತ ಮುಖ್ಯ ಅಂತಃಸ್ರಾವಕ ಗ್ರಂಥಿಗಳಲ್ಲೊಂದಾದ ಥೈರಾಯ್ಡಾ ಗ್ರಂಥಿಯ ಮೇಲೆ ದಾಳಿ ಮಾಡುವುದು ಈ ರೋಗವನ್ನು ತರುತ್ತದೆ.

ಕುತ್ತಿಗೆಯ ತಳದಲ್ಲಿರುವ ಥೈರಾಯ್ಡಿ ಗ್ರಂಥಿಯು ಚಯಾಪಚಯ,ಶರೀರದ ಬೆಳವಣಿಗೆಯಂತಹ ಕೆಲವು ಪ್ರಮುಖ ಕಾರ್ಯಗಳಲ್ಲಿ ಮುಖ್ಯವಾಗಿರುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ.

ಹಾಷಿಮೊಟೊ ರೋಗದಿಂದಾಗಿ ನಿರೋಧಕ ವ್ಯವಸ್ಥೆಯು ಥೈರಾಯ್ಡೆ ಗ್ರಂಥಿಯ ಮೇಲೆ ದಾಳಿ ಮಾಡಿದಾಗ ಅದು ಊರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಥೈರಾಯ್ಡೆ ರೋಗಗಳನ್ನುಂಟು ಮಾಡುತ್ತದೆ. ಈ ಉರಿಯೂತವು ವಿಶೇಷವಾಗಿ ಮಧ್ಯವಯಸ್ಕ ಮಹಿಳೆಯರಲ್ಲಿ ಥೈರಾಯ್ಡೆ ಗ್ರಂಥಿಯ ಕ್ಷಮತೆಯನ್ನು ಕುಂದಿಸುತ್ತದೆ. ಈ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯುತ್ತಾರೆ ಮತ್ತು ಇದು ಯಾವುದೇ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಬಾಧಿಸಬಹುದು.

ಹಾಷಿಮೊಟೊ ರೋಗದ ಲಕ್ಷಣಗಳು

ಈ ರೋಗದ ಲಕ್ಷಣಗಳು ಸಾಮಾನ್ಯವಾಗಿ ನಂತರದ ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವರು ತಮ್ಮ ಕುತ್ತಿಗೆಯ ಮುಂಭಾಗದಲ್ಲಿ ಊತವನ್ನು ಗಮನಿಸಬಹುದು ಮತ್ತು ಇದು ಹಾಷಿಮೊಟೊ ರೋಗದ ಪ್ರಮುಖ ಸಂಕೇತವಾಗಿದೆ. ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಇದರ ಲಕ್ಷಣಗಳು ಕಾಲಕ್ರಮೇಣ ನಿಧಾನವಾಗಿ ಬೆಳೆದು ಕೆಲವು ವರ್ಷಗಳಲ್ಲಿ ಸ್ಥಿತಿಯು ತೀರ ಬಿಗಡಾಯಿಸಬಹುದು.

ದೀರ್ಘ ಕಾಲದಿಂದ ಬಳಲಿಕೆ ಮತ್ತು ನಿಷ್ಕ್ರಿಯತೆ,ಮಲಬದ್ಧತೆ,ಪೇಲವ ಮತ್ತು ಒಣ ಚರ್ಮ,ಚಳಿಯನ್ನು ತಡೆದುಕೊಳ್ಳಲು ಸಾಧ್ಯವಾಗದಿರುವುದು,ಉಗುರುಗಳಲ್ಲಿ ಒಡಕು,ಊದಿಕೊಂಡ ಮುಖ,ತಲೆಗೂದಲು ನಷ್ಟ,ನಾಲಿಗೆ ದಪ್ಪವಾಗುವುದು, ಯಾವುದೇ ಕಾರಣವಿಲ್ಲದೆ ದೇಹತೂಕದಲ್ಲಿ ಇಳಿಕೆ,ಸಂದುಗಳಲ್ಲಿ ಮತ್ತು ಸ್ನಾಯುಗಳಲ್ಲಿ ನೋವು ಮತ್ತು/ಅಥವಾ ಸೆಟೆತ,ಮಹಿಳೆಯರಲ್ಲಿ ರಜಸ್ವಲೆಯಾದಾಗ ತುಂಬ ಸಮಯದವರೆಗೆ ಅತಿಯಾದ ರಕ್ತಸ್ರಾವ,ನೆನಪಿನ ಶಕ್ತಿ ಕುಂಠಿತ ಮತ್ತು ಖಿನ್ನತೆ ಇವು ಹಾಷಿಮೊಟೊ ರೋಗದ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ರೋಗಕ್ಕೆ ಕಾರಣಗಳು

ಆನುವಂಶಿಕತೆ,ಚರ್ಮಕ್ಷಯ,ಸಂಧಿವಾತ ಮತ್ತು ಮಧುಮೇಹ ಇತ್ಯಾದಿಗಳಂತಹ ಇತರ ಸ್ವಪ್ರತಿರಕ್ಷಿತ ರೋಗಗಳು,ಪರಿಸರದಲ್ಲಿನ ವಿಕಿರಣಕ್ಕೆ ಹೆಚ್ಚಾಗಿ ಒಡ್ಡಿಕೊಳ್ಳುವುದು, ಹಿಂದೆ ಥೈರಾಯ್ಡಿ ಶಸ್ತ್ರಚಿಕಿತ್ಸೆಯಾಗಿದ್ದರೆ,ಹಾರ್ಮೋನ್ ಅಥವಾ ವಿಕಿರಣ ಚಿಕಿತ್ಸೆಗಳು ಮತ್ತು ಅಧಿಕ ಕೊಲೆಸ್ಟ್ರಾಲ್ ಇವು ಹಾಷಿಮೊಟೊ ರೋಗಕ್ಕೆ ಕೆಲವು ಸಾಮಾನ್ಯ ಕಾರಣಗಳಾಗಿವೆ.

►ರೋಗದಿಂದಾಗುವ ಅಪಾಯಗಳು

ಹಾಷಿಮೊಟೊ ರೋಗಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಅದು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಗಳಗಂಡ: ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳದೆ ಹಾಗೆಯೇ ಬಿಟ್ಟರೆ ಉರಿಯೂತವು ಥೈರಾಯ್ಡೆ ಗ್ರಂಥಿಯನ್ನು ದೊಡ್ಡದಾಗಿಸುತ್ತದೆ. ಇದನ್ನು ಗಳಗಂಡವೆಂದು ಕರೆಯಲಾಗುತ್ತದೆ ಮತ್ತು ಥೈರಾಯ್ಡೆ ಗ್ರಂಥಿಯ ಕ್ಷಮತೆ ಕುಗ್ಗುವುದು ಇದಕ್ಕೆ ಕಾರಣವಾಗುತ್ತದೆ.

ಹೃದಯ ಸಮಸ್ಯೆಗಳು: ಹೈಪೊಥೈರಾಯ್ಡಿಸಂ ಸ್ಥಿತಿಯಲ್ಲಿ ಥೈರಾಯ್ಡಿ ಗ್ರಂಥಿಯು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್)ನ ಅತಿಯಾದ ಉತ್ಪತ್ತಿಗೆ ಕಾರಣವಾಗುತ್ತದೆ. ಇದು ಅಂತಿಮವಾಗಿ ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡಿ ಹೃದ್ರೋಗಗಳಿಗೆ ಕಾರಣವಾಗುತ್ತದೆ.

ಮಾನಸಿಕ ಆರೋಗ್ಯ ಸಮಸ್ಯೆಗಳು: ಖಿನ್ನತೆ ಮತ್ತು ಕುಂದಿದ ಲೈಂಗಿಕ ಬಯಕೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಷಿಮೊಟೊ ರೋಗದೊಂದಿಗೆ ತಳುಕು ಹಾಕಿಕೊಂಡಿವೆ. ಶರೀರದಲ್ಲಿ ಥೈರಾಯ್ಡೆ ಹಾರ್ಮೋನ್‌ಗಳಲ್ಲಿಯ ಏರುಪೇರುಗಳು ಇದಕ್ಕೆ ಕಾರಣವಾಗಿವೆ.

ಮಿಕ್ಸೆಡೆಮಾ: ಇದು ಸುದೀರ್ಘ ಕಾಲದವರೆಗೆ ಹಾಷಿಮೊಟೊ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಉಂಟಾಗುವ ಮಾರಣಾಂತಿಕ ಸ್ಥಿತಿಯಾಗಿದೆ. ದೀರ್ಘಕಾಲೀನ ಬಳಲಿಕೆ,ವಿಷಯಗಳನ್ನು ಗ್ರಹಿಸುವಲ್ಲಿ ಗೊಂದಲ,ಮುಖ ಮತ್ತು ಕಾಲುಗಳು ಊದಿಕೊಳ್ಳುವುದು ಇತ್ಯಾದಿಗಳು ಇದರ ಲಕ್ಷಣಗಳಾಗಿವೆ. ಇದಕ್ಕೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಹುಟ್ಟುವ ಮಕ್ಕಳಲ್ಲಿ ವೈಕಲ್ಯ: ಹಾಷಿಮೊಟೊ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳದ ಮಹಿಳೆಯರಿಗೆ ಜನಿಸುವ ಮಕ್ಕಳು ಹುಟ್ಟುವೈಕಲ್ಯಗಳನ್ನು ಹೊಂದಿರುವ ಸಾಧ್ಯತೆಗಳು ಹೆಚ್ಚಿರುತ್ತವೆ ಮತ್ತು ಇವು ಬುದ್ಧಿಮಾಂದ್ಯತೆಯ ಜೊತೆಯಲ್ಲಿ ಹೃದಯ,ಮಿದುಳು ಮತ್ತು ಮೂತ್ರಪಿಂಡ ಸಮಸ್ಯೆಗಳಿಗೂ ಕಾರಣವಾಗುತ್ತವೆ.

ಚಿಕಿತ್ಸೆ: ವೈದ್ಯರು ಸಾಮಾನ್ಯವಾಗಿ ಹಾರ್ಮೋನ್ ಮತ್ತು ಆ್ಯಂಟಿಬಾಡಿಗಳ ಪರೀಕ್ಷೆಗಳ ಮೂಲಕ ಹಾಷಿಮೊಟೊ ರೋಗವನ್ನು ನಿರ್ಧರಿಸುತ್ತಾರೆ. ಔಷಧಿಗಳ ಮೂಲಕ ಶರೀರದಲ್ಲಿ ಕೃತಕ ಹಾರ್ಮೋನ್‌ಗಳನ್ನು ಸೇರಿಸಿ ಈ ರೋಗಕ್ಕೆ ಚಿಕಿತ್ಸೆಯನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News