ರಫೇಲ್ ಡೀಲ್: ಭಾರತೀಯರು ಲಕ್ಷ ಕೋಟಿ ರೂ. ತೆರಿಗೆ ಪಾವತಿಸಬೇಕಾಗಿದೆ; ರಾಹುಲ್ ಗಾಂಧಿ

Update: 2018-07-29 08:15 GMT

ಹೊಸದಿಲ್ಲಿ, ಜು.29: ರಫೇಲ್ ಯುದ್ಧವಿಮಾನ ಒಪ್ಪಂದದ ಕಾರಣದಿಂದಾಗಿ ಭಾರತದ ತೆರಿಗೆ ಪಾವತಿದಾರರು, ಪ್ರಧಾನಿಯ ಸ್ನೇಹಿತನ ಜಂಟಿ ಸಹಭಾಗಿತ್ವದ ಕಂಪೆನಿಗೆ ವಿಮಾನ ನಿರ್ವಹಣೆಗಾಗಿ ಮುಂದಿನ ಐದು ದಶಕಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿ ಹೇಳಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಮೂಲಿನಂತೆ ಪತ್ರಿಕಾಗೋಷ್ಠಿ ಕರೆದು ಆರೋಪ ಅಲ್ಲಗಳೆಯುತ್ತಾರೆ ಎಂದು ಅವರು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಭಾರತ ಖರೀದಿ ಮಾಡುತ್ತಿರುವ 36 ರಫೇಲ್ ಯುದ್ಧವಿಮಾನಗಳನ್ನು ನಿರ್ವಹಿಸಲು ಮೋದಿಯವರ ಸ್ನೇಹಿತನ ಜಂಟಿಸಹಭಾಗಿತ್ವದ ಕಂಪನಿಗೆ ಭಾರತೀಯ ತೆರಿಗೆ ಪಾವತಿದಾರ ಒಂದು ಲಕ್ಷ ಕೋಟಿ ರೂಪಾಯಿ ತೆರಿಗೆ ಹಣ ನೀಡಬೇಕಾಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

"ರಕ್ಷಣಾ ಸಚಿವರು ಮಾಮೂಲಿನಂತೆ ಪತ್ರಿಕಾಗೋಷ್ಠಿ ಕರೆದು ಇದನ್ನು ನಿರಾಕರಿಸಬಹುದು. ಆದರೆ ಸತ್ಯ ನಾನು ಉಲ್ಲೇಖಿಸಿರುವ ಈ ಪ್ರಸ್ತುತಿಯಲ್ಲಿದೆ" ಎಂದು ಅವರು ಹೇಳಿದ್ದಾರೆ. ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಹೂಡಿಕೆದಾರರ ಪ್ರಸ್ತುತಿಯನ್ನು ರಾಹುಲ್ ಟ್ಯಾಗ್ ಮಾಡಿದ್ದಾರೆ.

“ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್, ಡಸ್ಸಾಲ್ಟ್ ಏವಿಯೇಷನ್ಸ್‍ನಿಂದ 30 ಸಾವಿರ ಕೋಟಿ ರೂ.ಗೆ ಗುತ್ತಿಗೆ ಪಡೆದಿದೆ. ಆದರೆ ಅದರ ಜೀವಿತಾವರ್ತದ ಅವಕಾಶ ಮುಂದಿನ 50 ವರ್ಷಗಳ ಅವಧಿಗೆ ಒಂದು ಲಕ್ಷ ಕೋಟಿ ರೂಪಾಯಿ ಆಗುತ್ತದೆ” ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News