ಜನ್ಮಜಾತ ಹೃದ್ರೋಗದ ಏಳು ಲಕ್ಷಣಗಳು ಗೊತ್ತೇ....?

Update: 2018-07-29 11:23 GMT

ಜನ್ಮಜಾತ ಹೃದಯ ರೋಗಗಳು ಹಲವಾರು ಮುನ್ನೆಚ್ಚರಿಕೆಗಳು ಮತ್ತು ಲಕ್ಷಣಗಳನ್ನು ತೋರಿಸಬಹುದು. ಈ ಲಕ್ಷಣಗಳು ಯಾವಾಗಲೂ ಗಮನಕ್ಕೆ ಬಾರದಿರಬಹುದು, ಆದರೆ ಅವುಗಳ ಪೈಕಿ ಕೆಲವೊಂದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಜನ್ಮಜಾತ ಹೃದ್ರೋಗಗಳು ಸಾಮಾನ್ಯವಾಗಿ ಎರಡು ವಿಧಗಳ ಹೃದಯಸಂಬಂಧಿ ಸಮಸ್ಯೆಗಳನ್ನು ಒಳಗೊಂಡಿವೆ.

ಹೃದಯ ಕವಾಟ ದೋಷಗಳು: ಈ ದೋಷವಿದ್ದಾಗ ಸಾಮಾನ್ಯವಾಗಿ ಹೃದಯದ ಕವಾಟಗಳು ಕುಗ್ಗುತ್ತವೆ ಅಥವಾ ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತವೆ. ಇದರಿಂದಾಗಿ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಕವಾಟವು ರಂಧ್ರವನ್ನು ಹೊಂದಿದ್ದು,ಅದು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ ರಕ್ತವು ಹಿಮ್ಮುಖವಾಗಿ ಸೋರಿಕೆಯಾಗುವುದು ಸೇರಿದಂತೆ ಇತರ ದೋಷಗಳೂ ಇವೆ.

ಭಿತ್ತಿಗಳಲ್ಲಿ ದೋಷಗಳು: ಹೃತ್ಕರ್ಣಗಳು ಮತ್ತು ಹೃತ್ಕುಕ್ಷಿಗಳ ನಡುವಿನ ಭಿತ್ತಿಯಲ್ಲಿ ದೋಷಗಳಿರುವುದು ಎರಡನೇ ವಿಧವಾಗಿದೆ.

ಜನ್ಮಜಾತ ಹೃದ್ರೋಗದ ಲಕ್ಷಣಗಳು ಹೀಗಿವೆ.....

ಹೆಚ್ಚಿನ ಜನ್ಮಜಾತ ಹೃದ್ರೋಗಗಳ ಲಕ್ಷಣಗಳು ಎಂದಿಗೂ ಪ್ರಕಟಗೊಳ್ಳುವುದೇ ಇಲ್ಲ. ಕೆಲವು ಪ್ರಕರಣಗಳಲ್ಲಿ ಕೆಲವೇ ಲಕ್ಷಣಗಳಿದ್ದರೂ ದೈಹಿಕ ತಪಾಸಣೆಯ ವೇಳೆ ವೈದ್ಯರಿಗೂ ಅವುಗಳನ್ನು ಗುರುತಿಸಲು ಸಾಧ್ಯವಾಗದಿರಬಹುದು. ಹೀಗಾಗಿ ಜನ್ಮಜಾತ ಹೃದ್ರೋಗವಿದ್ದರೂ ಅವುಗಳನ್ನು ಸುಲಭವಾಗಿ ನಿರ್ಣಯಿಸಲಾಗುವುದಿಲ್ಲ. ಕೆಲವು ಹೃದಯ ದೋಷಗಳು ಅವುಗಳ ಸಂಖ್ಯೆ,ವಿಧ ಮತ್ತು ತೀವ್ರತೆಯನ್ನು ಆಧರಿಸಿ ಲಕ್ಷಣಗಳನ್ನು ತೋರಿಸಬಹುದು.

ತ್ವರಿತ ಉಸಿರಾಟ

ಜನ್ಮಜಾತ ಹೃದ್ರೋಗಗಳು ತ್ವರಿತ ಉಸಿರಾಟಕ್ಕೆ ಕಾರಣವಾಗಬಹುದು. ನೀವು ಯಾವುದೇ ಕಠಿಣ ಶ್ರಮದ ಕೆಲಸವನ್ನು ಮಾಡಿರದಿದ್ದರೂ ದಿಢೀರ್ ಏದುಸಿರು ಅನುಭವವಾದರೆ ಅದು ಹೃದಯ ದೋಷದ ಸಂಕೇತವಾಗಿರಬಹುದು. ಯಾವುದೇ ಜನ್ಮಜಾತ ಹೃದ್ರೋಗವಿದೆಯೇ ಎನ್ನ್ನುವುದನ್ನು ತಿಳಿದುಕೊಳ್ಳಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆಯಾಸ

ಹೃದಯವು ಶರೀರದಲ್ಲಿ ರಕ್ತ ಮತ್ತು ಆಮ್ಲಜನಕ ಪ್ರಸರಣವನ್ನು ನಿಯಂತ್ರಿಸುತ್ತದೆ. ಜನ್ಮಜಾತ ಹೃದ್ರೋಗವು ಇವೆರಡರ ಮೇಲೂ ಪರಿಣಾಮವನ್ನುಂಟು ಮಾಡಿ ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದಿದ್ದಾಗಲೂ ಅನಗತ್ಯವಾಗಿ ಆಯಾಸವನ್ನುಂಟು ಮಾಡುತ್ತದೆ.

ರಕ್ತ ಪರಿಚಲನೆ ಕುಂಠಿತ

ಹೃದಯದ ಸಹಜ ಕಾರ್ಯನಿರ್ವಹಣೆಗೆೆ ಒಂದು ಅಥವಾ ಹೆಚ್ಚಿನ ಹೃದಯ ದೋಷಗಳು ಅಡ್ಡಿಯನ್ನುಂಟು ಮಾಡಿದಾಗ ಶರೀರದಲ್ಲಿ ರಕ್ತಪರಿಚಲನೆ ಕುಂಠಿತಗೊಳ್ಳುತ್ತದೆ. ಹೀಗಾದಾಗ ಅತಿಯಾದ ಬಳಲಿಕೆ ಕಾಣಿಸಿಕೊಳ್ಳುತ್ತದೆ.

ಸೈನೋಸಿಸ್

ಜನ್ಮಜಾತ ಹೃದ್ರೋಗಗಳಿಂದಾಗಿ ರಕ್ತ ಪರಿಚಲನೆಯು ಕುಂಠಿತಗೊಂಡಾಗ ಅದು ಸೈನೋಸಿಸ್ ಅಥವಾ ನೀಲಿಗಟ್ಟುವಿಕೆಗೆ ಕಾರಣವಾಗಬಹುದು ಮತ್ತು ಚರ್ಮ,ತುಟಿಗಳು ಹಾಗೂ ಬೆರಳುಗಳ ಉಗುರುಗಳ ಬಣ್ಣದಲ್ಲಿ ಬದಲಾವಣೆಯನ್ನು ಉಂಟು ಮಾಡುತ್ತದೆ. ತುಟಿಗಳು ಮತ್ತು ಚರ್ಮದ ಮೇಲೆ ನೀಲಿಬಣ್ಣದ ಛಾಯೆಗಳು ಕಾಣಿಸಿಕೊಳ್ಳುತ್ತವೆ.

ಎದೆನೋವಿನ ಅನುಪಸ್ಥಿತಿ

ಜನ್ಮಜಾತ ಹೃದಯ ದೋಷಗಳಿದ್ದಾಗ ಎದೆನೋವು ಕಾಣಿಸಿಕೊಳ್ಳುವುದಿಲ್ಲ. ಅವು ಹೃದಯದಲ್ಲಿ ಮೆಲುಶಬ್ದ, ಮಕ್ಕಳಲ್ಲಿ ದೇಹತೂಕ ಹೆಚ್ಚದಿರುವುದು ಮತ್ತು ದೈಹಿಕ ಚಟುವಟಿಕೆಗಳ ಸಂದರ್ಭದಲ್ಲಿ ಏದುಸಿರಿನಂತಹ ಇತರ ಹಲವಾರು ಲಕ್ಷಣಗಳನ್ನು ತೋರಿಸಬಹುದು. ಜನ್ಮಜಾತ ದೋಷಗಳಿದ್ದಾಗ ಹೃದಯವು ಅಗತ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗಬಹುದು ಮತ್ತು ಇದು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ವ್ಯಾಯಾಮ ಮಾಡಲು ಕಷ್ಟ

ವ್ಯಾಯಾಮ ಮಾಡುವುದು ಅಥವಾ ಕಠಿಣ ಕೆಲಸಗಳನ್ನು ಮಾಡಲು ಕಷ್ಟವಾಗಬಹುದು. ಇವುಗಳ ಪೈಕಿ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಜನ್ಮಜಾತ ಹೃದಯ ದೋಷಗಳ ಬಗ್ಗೆ ಅನುಮಾನವನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News