ದೊಂಬಿ ಹತ್ಯೆಗಳು ಇದು ಭಾರತದ ಕಥನ

Update: 2018-07-30 06:33 GMT

ದೊಂಬಿ ಹತ್ಯೆಗಳ ಇಂಡಿಯಾ ಇಂದು ಬಿಜೆಪಿ ಹೇಳುತ್ತಿರುವ ಹೊಸ ಭಾರತದ ಪರಿಕಲ್ಪನೆ. ಈ ಹೊಸ ಭಾರತದ ಕಥನಕ್ಕೆ ಕೇವಲ ಬಿಜೆಪಿ ಮಾತ್ರ ಕಾರಣವಲ್ಲ. ತಮ್ಮ ಬೌದ್ಧಿಕ ದಿವಾಳಿತನ, ನಿಷ್ಕ್ರಿಯತೆ ಮತ್ತು ಭ್ರಷ್ಟತೆಯ ಗುಣಗಳಿಂದ ವಿರೋಧ ಪಕ್ಷಗಳು ಸಹ ಈ ಕಥನದ ಪಾಲುದಾರರು. ಹದಿಹರೆಯದವರನ್ನು ಆರೆಸ್ಸೆಸ್‌ನ ತೆಕ್ಕೆಯೊಳಗೆ ತಳ್ಳಿದ ಇಲ್ಲಿನ ಪ್ರಜ್ಞಾವಂತರೂ ಸಹ ಈ ಕಥನದ ರಚನೆಕಾರರು. ಇಲ್ಲಿ ಪ್ರಜಾಪ್ರಭುತ್ವ, ಮಾನವೀಯತೆ ಉಳಿದಿದೆ ಎನಿಸುವುದಿಲ್ಲ.

ಬೆಟ್ಟದಂತಹ ನಿರಂಕುಶ ಪ್ರಭುತ್ವವು ಹತ್ತಿಯಂತೆ ಹಾರಿ ಹೋಗುವುದನ್ನು ನಾವು ನೋಡುತ್ತೇವೆ, ಪ್ರತಿಯೊಂದು ಕಿರೀಟವೂ ಉದುರುತ್ತದೆ, ಸಿಂಹಾಸನವು ಕಳಚಿ ಬೀಳುತ್ತದೆ

- ಫೈಜ್ ಅಹ್ಮದ್ ಫೈಜ್

ಅಂದು: ಆರೆಸ್ಸೆಸ್- ಗೋಳ್ವಾಲ್ಕರ್‌ರ ಗೋಹತ್ಯೆ ಹೆಸರಿನ ರಾಜಕೀಯ

ಐವತ್ತು, ಅರವತ್ತರ ದಶಕಗಳಲ್ಲಿ ಆರೆಸ್ಸೆಸ್ ಸಂಘಟನೆಯು ಸರ ಸಂಚಾಲಕ ಗೋಳ್ವಾಲ್ಕರ್ ನೇತೃತ್ವದಲ್ಲಿ ಗೋವು ಉಳಿಸಿ ಎನ್ನುವ ಪ್ರಚಾರ ಆರಂಭಿಸಿತು. ಆಗ ದೇಶಾದ್ಯಂತ ಈ ಗೋವು ರಕ್ಷಣೆ ಕುರಿತಾಗಿ ಉಗ್ರ ಪ್ರಚಾರ ನಡೆಸಲಾಗಿತ್ತು. ಇದೇ ನೆಪದಲ್ಲಿ ಹಿಂದೂ ಸಾಧುಗಳು1966ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿದರು. ಗೋಳ್ವಾಲ್ಕರ್ ಅವರ ಪುಸ್ತಕ ‘ಬಂಚ್ ಆಫ್ ಥಾಟ್ಸ್’ ನ ಒಂದು ಅಧ್ಯಾಯದಲ್ಲಿ ಗೋವು, ಬೀಫ್ ಕುರಿತಾಗಿಯೇ ಬರೆಯಲಾಗಿದೆ. ಗುರೂಜಿಯವರು ಬೀಫ್ ತಿನ್ನುವುದನ್ನು ‘ಮಾನಸಿಕ ಗುಲಾಮಗಿರಿ’ ಎಂದು ಅದರಲ್ಲಿ ಬರೆದಿದ್ದರು. ಮುಸ್ಲಿಂ ಸಮುದಾಯಕ್ಕೂ ಬೀಫ್ ಆಹಾರಕ್ಕೂ ಮತ್ತು ಗೋಹತ್ಯೆಗೂ ಸಂಬಂಧಗಳನ್ನು ಕಲ್ಪಿಸಿದರು. ಮುಸ್ಲಿಮರಿಂದಾಗಿ ಗೋಹತ್ಯೆ ಎನ್ನುವ ಒಂದು ಮಿಥ್ ಅನ್ನು ಸೃಷ್ಟಿಸಿ ದರು. ಗೋಳ್ವಾಲ್ಕರ್ ಅವರು ವಿದೇಶದ ಪ್ರಭಾವದಿಂದ ಆಹಾರಕ್ಕಾಗಿ ಗೋವನ್ನು ಸಾಯಿಸಲಾಗುತ್ತಿದೆ. ಮಹಮ್ಮದನ್‌ಗಳು ಇದನ್ನು ಪ್ರಾರಂಭಿಸಿದರು ಮತ್ತು ಬ್ರಿಟಿಷರು ಇದನ್ನು ಮುಂದುವರಿಸಿದರು. ಈಗ ನಮಗೆ ಸ್ವಾತಂತ್ರ ಬಂದಿದೆ. ನಮಗೆ ಅಂಟಿದ ಈ ಕಲೆಯನ್ನು ತೊಳೆದುಕೊಳ್ಳಬೇಕಾಗಿದೆ, ಇಲ್ಲದೆ ಹೋದರೆ ನಾವು ಮಾನಸಿಕ ಗುಲಾಮಗಿರಿಯಲ್ಲಿ ನರಳಬೇಕಾಗುತ್ತದೆ ಎಂದು ಭಾಷಣ ಮಾಡಿ ಮುಗ್ಧ ಜನರ ಭಾವನೆಗಳನ್ನು ಕೆರಳಿಸುತ್ತಿದ್ದರು.

1967ರಲ್ಲಿ ಇಂದಿರಾ ಗಾಂಧಿಯವರು ಗೋವು ರಕ್ಷಣೆ ಸಂಬಂಧ ಎದ್ದ ವಿವಾದಗಳನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನು ನೇಮಿಸಿದ್ದರು. ಅದರಲ್ಲಿ ಗೋಳ್ವಾಲ್ಕರ್, ವರ್ಗೀಸ್ ಕುರಿಯನ್(ಕ್ಷೀರ ಕ್ರಾಂತಿಯ ಹರಿಕಾರ)ರಂತಹ ತಜ್ಞರು ಸದಸ್ಯರಾಗಿದ್ದರು. ಈ ಸಮಿತಿ ಯು ಕಡೆಗೂ ತನ್ನ ವರದಿ ಸಲ್ಲಿಸಲಿಲ್ಲ. ಅದು ಬೇರೆ ಮಾತು. ಆದರೆ ಅದೇ ಸಂದರ್ಭದಲ್ಲಿ ಕುರಿಯನ್ ಮತ್ತು ಗೋಳ್ವಾಲ್ಕರ್ ಅವರು ಸ್ನೇಹಿತರಾದರು. ಮುಂದೆ ಕುರಿಯನ್ ಅವರು ‘‘ನನಗೂ ಒಂದು ಕನಸಿದೆ’’ ಎನ್ನುವ ತಮ್ಮ ಆತ್ಮಕಥೆಯಲ್ಲಿ ಈ ಗೋ ರಕ್ಷಣೆ ಕುರಿತಾಗಿ ಗೋಳ್ವಾಲ್ಕರ್ ಅವರು ಹೇಳಿದ ಮಾತುಗಳ ಕುರಿತು ಪ್ರಸ್ತಾಪಿಸುತ್ತಾರೆ. ಅದರ ಕೆಲ ಸಾಲುಗಳು ಹೀಗಿವೆ; ‘‘ಸಮಿತಿಯ ಸಭೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ನಮ್ಮ ನಡುವೆ ಕಾವೇರಿದ ಚರ್ಚೆ ನಡೆಯುತ್ತಿತ್ತು. ಅಂತಹ ಒಂದು ದಿನ ಗೋಳ್ವಾಲ್ಕರ್ ಅವರು ನನ್ನನ್ನು ಪಕ್ಕಕ್ಕೆ ಕರೆದು‘ಕುರಿಯನ್ ನಾನು ಯಾಕೆ ಗೋ ಮಾಂಸದ ವಿಷಯವನ್ನು ಒಂದು ವ್ಯಾಪಾರದ ಸಂಗತಿಯನ್ನಾಗಿಸಿದ್ದೇನೆ ಗೊತ್ತೆ’ ಎಂದು ಕೇಳಿದರು.ಅದಕ್ಕೆ ನಾನು ಗೊತ್ತಿಲ್ಲ, ಏತಕ್ಕೆ ಎಂದು ಹೇಳಿ ಅಂತ ಕೇಳಿದೆ. ಗೋಳ್ವಾಲ್ಕರ್ ಅವರು ‘ನಾನು ಸರಕಾರವನ್ನು ಪೇಚಿಗೆ ಸಿಲುಕಿಸಲು ಗೋರಕ್ಷಣೆಯ ಹೆಸರಿನಲ್ಲಿ ಅಹವಾಲುಗಳನ್ನು ಸಲ್ಲಿಸಲು ಪ್ರಾರಂಭಿ ಸಿದೆ. ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಲಕ್ಷ ಸಹಿಸಂಗ್ರಹಣೆಯ ಅಭಿಯಾನ ಆರಂಭಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಚರಿ ಸಿದಾಗ ಈ ಗೋರಕ್ಷಣೆ ಹೆಸರಿನ ಸಂಘಟನೆ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುತ್ತದೆ ಎಂದು ನನಗೆ ಖಚಿತವಾಯಿತು. ನಾನು ಗೋವನ್ನು ಬಳಸಿಕೊಂಡು ಹಿಂದೂಗಳ ಒಳಗಿರುವ ಭಾರತೀಯತೆಯನ್ನು ಹೊರತರುತ್ತೇನೆ’ ಎಂದು ಹೇಳಿದರು’’. ಇದೇ ಸಮಿತಿಯಲ್ಲಿ ಆಗ ಸದಸ್ಯರಾಗಿದ್ದ ವಿಜ್ಞಾನಿ ಪುಷ್ಪ ಭಾರ್ಗವ ಅವರ ಜೀವನ ಚರಿತ್ರೆ ಯಲ್ಲಿ ಕುರಿಯನ್ ಅವರು ಗೋಳ್ವಾಲ್ಕರ್ ಅವರು ಇದನ್ನು ರಾಜಕೀಯ ವಾಗಿ ಬಳಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದನ್ನು ನನಗೆ ಹೇಳಿದರು. ಆ ಸಮಿತಿಯ ಸದಸ್ಯರಾಗಿದ್ದ ವೈದ್ಯ ರಾಮಚಂದರ್ ಅವರು, ‘ನಾವು ಗೋವನ್ನು ತಿನ್ನದಿದ್ದರೆ ಅದು ನಮ್ಮನ್ನು ತಿನ್ನುತ್ತದೆ ಎಂದು ಹೇಳಿದ ಮಾತು ಆಕ್ರೋಶವನ್ನೇ ಸೃಷ್ಟಿಸಿತು, ನಾನೂ ಸಹ ಗೋ ಮಾಂಸ ವನ್ನು ಧರ್ಮದ ಆಧಾರದಲ್ಲಿ ನಿಷೇಧಿಸುವುದನ್ನು ವಿರೋಧಿಸುತ್ತೇನೆ’ ಎಂದು ಹೇಳುತ್ತಾರೆ.
ಇಂದು : ಮುಸ್ಲಿಂ, ದಲಿತ, ಆದಿವಾಸಿಗಳ ಹತ್ಯೆ

ಅಂದಿನಿಂದ ಶುರುವಾದ ಗೋವು ಹೆಸರಿನ ಭಯೋತ್ಪಾದನೆ ಇಂದು ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ, ದಲಿತ, ಆದಿವಾಸಿಗಳನ್ನು ಹತ್ಯೆ ಮಾಡುವ ಮಟ್ಟಕ್ಕೆ ಬಂದು ತಲುಪಿದೆ. ಮೊನ್ನೆ ರಾಜಸ್ಥಾನದ ಆಲ್ವಾರ್ ನಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಅಕ್ಬರ್ ಖಾನ್‌ರನ್ನು ಇದೇ ಮತಾಂಧರು ಹತ್ಯೆ ಮಾಡಿದ್ದಾರೆ. ಅಧಿಕೃತವಾಗಿ ಲಭ್ಯವಿರುವ ಮಾಹಿತಿಯ ಅನುಸಾರ 2015ರಿಂದ ಇಲ್ಲಿಯವರೆಗೆ ಈ ಮತಾಂಧರು ಧರ್ಮದ, ಜಾತಿಯ ಹೆಸರಿನಲ್ಲಿ ನಡೆಸಿದ ದೊಂಬಿ ಹತ್ಯೆಗಳಲ್ಲಿ ಉ.ಪ್ರ. ದಾದ್ರಿಯಲ್ಲಿ ಅಖ್ಲಾಕ್ ಖಾನ್‌ನ ಕೊಲೆಯಿಂದ ಶುರುವಾಗುವ ಈ ಸರಣಿ ಮೊನ್ನೆ ಅಕ್ಬರ್ ಖಾನ್ ಕೊಲೆವರೆಗೆ 68 ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಇಲ್ಲಿ 5 ಕೊಲೆಗಳು ದಕ್ಷಿಣ ಭಾರತದಲ್ಲಿ ನಡೆದರೆ ಉಳಿದ 63 ಕೊಲೆಗಳು ಉತ್ತರ ಭಾರತ, ಪಶ್ಚಿಮ ಭಾರತ, ಪೂರ್ವ ಭಾರತದಲ್ಲಿ ನಡೆದಿವೆ.

ಭಾರತ ದಂಡಸಂಹಿತೆ ಕಲಂ 153(ಎ) ಅನುಸಾರ ‘ಎರಡು ಗುಂಪು ಗಳ ನಡುವೆ, ಧರ್ಮಗಳ ನಡುವೆ, ಭಾಷೆಗಳ, ಜಾತಿಗಳ ನಡುವೆ ದ್ವೇಷವನ್ನು ಹುಟ್ಟುಹಾಕಿದರೆ ಅದಕ್ಕೆ ಕಾರಣಕರ್ತರನ್ನು ಶಿಕ್ಷಿಸಬೇಕು’. ಕಲಂ 295 ಅನುಸಾರ ‘ಯಾವುದೇ ಧರ್ಮವನ್ನು ಅವಮಾನಿಸು ವುದು, ಧಾರ್ಮಿಕ ಸ್ಥಳಗಳನ್ನು ನಾಶ ಮಾಡುವುದು ಶಿಕ್ಷಾರ್ಹ’. ಆದರೆ ಕೇಂದ್ರದ ಆಡಳಿತ ಪಕ್ಷ ಬಿಜೆಪಿ ಯಾವ ರೀತಿ ತನ್ನ ಜವಬ್ದಾರಿ ನಿರ್ವಹಿಸಿದೆ? ತಾತ್ವಿಕವಾಗಿ ಮತ್ತು ಮಾನವೀಯ ನೆಲೆಯಿಂದ ಕೂಡಲೇ ತುರ್ತುಕ್ರಮ ಕೈಗೊಳ್ಳಲು ಬಿಜೆಪಿಯಂತಹ ಧರ್ಮ ಆಧಾರಿತ ಪಕ್ಷಕ್ಕೆ ಸಾಧ್ಯವಿಲ್ಲ. ಆದರೆ ಕನಿಷ್ಠ ಸಂವಿಧಾನದ ನೀತಿ ಸಂಹಿತೆಗಳಿಗೆ ತಲೆಬಾಗಿ ಮೇಲಿನ ದಂಡಸಂಹಿತೆ 153(ಎ) ಮತ್ತು 295 ಅನ್ನು ಬಳಸಿಕೊಂಡು ದೊಂಬಿ ಹತ್ಯೆಮಾಡುವ ಮತಾಂಧರನ್ನು ಬಂಧಿಸಿ ಶಿಕ್ಷಿಸಲು ಬಿಜೆಪಿಗೆ ಯಾವುದೇ ಅಡ್ಡಿಗಳಿಲ್ಲ. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದೇನು?

ಪತ್ರಕರ್ತ ಸಿದ್ಧ್ದಾರ್ಥ ಭಾಟಿಯ ಅವರು ‘ನರೇಂದ್ರ ಮೋದಿ ಪ್ರಧಾನಿ ಯಾದ ನಂತರ ಈ ಹತ್ಯೆಗಳು ಸಾಮಾನ್ಯ ಘಟನೆ ಗಳಾಗಿವೆ. ಯುಪಿಎ-2 ಸರಕಾರದ ಜೊತೆಗೆ ಹಗರಣಗಳು ಹೇಗೆ ತಳಕು ಹಾಕಿಕೊಂಡಿತ್ತೊ ಅದೇ ರೀತಿ ಈ ಮೋದಿ ಸರಕಾರದ ಜೊತೆಗೆ ಈ ಹತ್ಯೆಗಳು ಹೆಣೆದುಕೊಂಡಿವೆ. ಧರ್ಮದ, ಜಾತಿ ಆಧಾರಿತ ಈ ಹತ್ಯೆಗಳನ್ನು ಟೀಕಿಸಿದಾಗ ಬಿಜೆಪಿ ನಾಯಕರು, ಕಾರ್ಯ ಕರ್ತರು ಮನಮೋಹನ್ ಸಿಂಗ್ ಸರಕಾರದ ಭ್ರಷ್ಟಾಚಾರ, 1984ರಸಿಖ್ ಹತ್ಯೆಗಳನ್ನು ಎಳೆದು ತರುತ್ತಾರೆ. ಆದರೆ ಆಗ ಯಾವುದೇ ಪಕ್ಷದ ನಾಯಕರು ಆಗಿನ ಹತ್ಯೆಗಳನ್ನು ಸಮರ್ಥಿಸಿಕೊಂಡಿರಲಿಲ್ಲ. ಆದರೆ ಇಂದು ಪ್ರತಿಯೊಬ್ಬ ಬಿಜೆಪಿ ನಾಯಕನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈಗಿನ ದೊಂಬಿ ಹತ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿ ದ್ದಾನೆ. ಕೇಂದ್ರ ಮಂತ್ರಿ ಜಯಂತ್ ಸಿನ್ಹಾರವರು ಕೊಲೆ ಆರೋಪಿ ಗಳಿಗೆ ಸನ್ಮಾನ ಮಾಡುತ್ತಾರೆ. ಈ ಹಿಂದೆ ಯುಪಿಎ-2 ಸರಕಾರದ ಹಗರಣಗಳು ಮಧ್ಯಮವರ್ಗವನ್ನು ಉದ್ರೇಕಿಸಿದಷ್ಟು ಮುಸ್ಲಿಮರ ಈ ದೊಂಬಿ ಹತ್ಯೆಗಳು ಉದ್ರೇಕಿಸುತ್ತಿಲ್ಲ. ಈ ಕೊಲೆಗಳು ಸಾಮಾನ್ಯ ಎನ್ನುವಂತೆ ಮಧ್ಯಮವರ್ಗಗಳು ವರ್ತಿಸುತ್ತಿವೆ. ನಮ್ಮ ಇತರೆ ರಾಜಕೀಯ ಪಕ್ಷಗಳಿಗೂ ಈ ಹತ್ಯೆಗಳಿಂದ ರಾಜಕೀಯ ಲಾಭ ಇಲ್ಲದಿರುವುದರಿಂದ ಅವುಗಳಿಗೂ ಅಷ್ಟಾಗಿ ಆಸಕ್ತಿಯೂ ಇಲ್ಲ’ ಎಂದು ಬರೆಯುತ್ತಾರೆ. 2015ರಲ್ಲಿ ಅಖ್ಲಾಕ್ ಖಾನ್ ಅವರ ದೊಂಬಿ ಹತ್ಯೆಯಾದಾಗ ಕೇಂದ್ರ ಸಂಸ್ಕೃತಿ ಮಂತ್ರಿ ಮಹೇಂದ್ರ ಶರ್ಮಾ ಅವರು ಹತ್ಯೆ ಆರೋಪಿಗಳ ಗ್ರಾಮಕ್ಕೆ ಭೇಟಿ ನೀಡಿ ಅವರ ಕುಟುಂಬ ವನ್ನು ಸಂತೈಸಿದ್ದರು. ಈ ದೊಂಬಿ ಹತ್ಯೆಯ ಹಿಂಸೆಯನ್ನು ಗೋಹತ್ಯೆಯ ಜೊತೆಗೆ ಸಮೀಕರಿಸಿ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಮೂರು ವರ್ಷಗಳ ನಂತರ 2018ರಲ್ಲಿ ರಾಜಸ್ಥಾನದ ಗೃಹಮಂತ್ರಿ ಗುಲಾಬ್ ಚಂದ್ ಕಟಾರಿಯ ಅವರು ‘ಅಕ್ಬರ್ ಖಾನ್ ಅವರ ಸಾವು ಪೊಲೀಸ್ ಬಂಧನದಲ್ಲಿದ್ದಾಗ ಆಗಿದೆ’ಎಂದು ಹೇಳಿಕೆ ನೀಡುತ್ತಾರೆ. ಗೃಹ ಮಂತ್ರಿಯ ಈ ಹೇಳಿಕೆಯನ್ನು ಉದಾಹರಿಸಿ ಬಿಜೆಪಿ ಶಾಸಕ ಗ್ಯಾನ ದೇವ ಅಹೂಜ ಅವರು ಪೊಲೀಸ್ ಕಸ್ಟಡಿಯಲ್ಲಿ ಸತ್ತಿರುವುದರಿಂದ ಬಂಧಿಸಿದ ಆರೋಪಿ ಗಳನ್ನು ಬಿಡುಗಡೆಗೊಳಿಸಿ’ ಎಂದು ಆದೇಶ ಕೊಡುತ್ತಾರೆ. ಉ.ಪ್ರ.ದ ಮುಖ್ಯಮಂತ್ರಿ ಆದಿತ್ಯನಾಥ ಅವರು ಈ ಕೊಲೆಯನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ, ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ‘ಮನುಷ್ಯರು ಮುಖ್ಯ, ಹಾಗೆಯೆ ಗೋವುಗಳು ಸಹ’ ಎಂದು ಹೇಳಿಕೆ ನೀಡುವುದರ ಮೂಲಕ ಕೊಲೆಗಡುಕರಿಗೆ ನೀವು ನಿಮ್ಮ ಹತ್ಯಾಕಾಂಡವನ್ನು ಮುಂದುವರಿಸಿ ಎಂದು ಸೂಚನೆ ನೀಡಿದ್ದಾರೆ.

ಇದರ ಮುಂದುವರಿದ ಭಾಗವಾಗಿ ಆಲ್ವಾರ್ ಹತ್ಯೆಯ ನಂತರ ಆರೆಸ್ಸೆಸ್ ಸಂಚಾಲಕ ಇಂದ್ರಕುಮಾರ್ ಅವರು ‘ಬೀಫ್ ತಿನ್ನುವು ದನ್ನು ಸಂಪೂರ್ಣವಾಗಿ ನಿಲ್ಲಿಸಿದ ತಕ್ಷಣ ಗೋವಿನ ಹೆಸರಿನಲ್ಲಿ ಹತ್ಯೆಗಳೂ ನಿಲ್ಲುತ್ತವೆ’ ಎಂದು ಹೇಳಿದ್ದಾರೆ. ಅಂದರೆ ಸಚಿವರು ಆಹಾರ ಮತ್ತು ಕೊಲೆಯ ಕೊಡುಕೊಳ್ಳುವಿಕೆಯ ಒಂದು ಬಗೆಯ ವ್ಯವಹಾರ ವನ್ನು ಮುಂದಿಟ್ಟಿದ್ದಾರೆ. ಇಂದ್ರ ಕುಮಾರ್ ಅವರ ಹೇಳಿಕೆಯೆ ಮೋದಿ ಸರಕಾರದ ಅಧಿಕೃತ ಹೇಳಿಕೆ ಎಂದು ಪರಿಗಣಿಸುವುದಾದರೆ (ಯಾಕೆಂದರೆ ಪ್ರಧಾನಿಗಳು ಈ ಹತ್ಯೆಗಳ ಕುರಿತು ಮೌನವನ್ನು ಮುರಿದಿಲ್ಲ, ಇವರ ಹೇಳಿಕೆಯನ್ನು ಅಲ್ಲಗೆಳೆದಿಲ್ಲ) ಇನ್ನು ಸರಕಾರದ ಬಳಿ ನ್ಯಾಯ ಕೇಳುವ ಆವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಬೀಫ್ ತಿನ್ನುವುದನ್ನು ಬಿಟ್ಟರೆ ಮಾತ್ರ ಆತ/ಅವಳು ರಾಷ್ಟ್ರೀಯವಾದಿ ಎಂದು ಬಿಜೆಪಿ ಸರಕಾರ ಸರ್ಟಿಫಿಕೇಟ್ ನೀಡುವ ದಿನಗಳು ಬಂದರೆ ಆಶ್ಚರ್ಯವಿಲ್ಲ. ಮುಂದಿನ ದಾರಿಯನ್ನು ಬೀಫ್ ತಿನ್ನುವವರು ಸ್ವತಃ ತಾವೇ ಕಂಡುಕೊಳ್ಳಬೇಕು. ಆದರೆ ಈಗ ಕೇವಲ ಇದು ಆಹಾರದ ಪ್ರಶ್ನೆಯಾಗಿ ಉಳಿದಿಲ್ಲ. ಇದೇ ಇಂದಿನ ದುರಂತ.

ಈ ಹತ್ಯೆಗಳ ಸರಣಿ ನಿಲ್ಲುವ ಸೂಚನೆಯೂ ಇಲ್ಲ. ಏಕೆಂದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ-ಆರೆಸ್ಸೆಸ್ ಸರಕಾರವು ಮಕ್ಕಳನ್ನು ಚಿವುಟುವ-ತೊಟ್ಟಿಲು ತೂಗುವ ಅಪಾಯಕಾರಿ ಆಟವಾ ಡುತ್ತಿರುವುದರಿಂದ ಮತಾಂಧರಿಗೆ ಮುಕ್ತ ಅವಕಾಶ ಕೊಟ್ಟಂತಾಗಿದೆ. ದಶಕಗಳ ಕಾಲ ಆರೆಸ್ಸೆಸ್ ಬಿತ್ತಿದ ಹಿಂದುತ್ವ ಸಿದ್ಧಾಂತಗಳೇ ಈ ಗೋರಕ್ಷಕರ ಮತಾಂಧತೆಗೆ ಮೂಲ ಪ್ರೇರಣೆಯಾಗಿದೆ. ಇಂದು ಹದಿಹರೆಯದವರೊಳಗೆ ಮುಸ್ಲಿಂ, ದಲಿತರನ್ನು ಹತ್ಯೆ ಮಾಡುವ ಮಾನಸಿಕ ರೋಗವನ್ನು ಬೆಳೆಸಿದೆ. ಆರಂಭದಲ್ಲಿ ಬೀಫ್ ಆಹಾರದ ಬಗ್ಗೆ ಇದ್ದ ಈ ದ್ವೇಷ ಇಂದು ಮುಸ್ಲಿಂ ದ್ವೇಷದ ಮಾನಸಿಕ ಕಾಯಿಲೆಯ ಅಭಿವ್ಯಕ್ತಿಯಾಗಿದೆ. ಧರ್ಮದ ಮದವೇರಿದ ಯುವಜನತೆ ವಿವೇಚನೆ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ, ನಿರುದ್ಯೋಗಿ ತಳಸಮುದಾಯದ ಯುವಕರು ಇಲ್ಲಿ ಸಂಘಪರಿವಾರದ ಕಾಲಾಳು ಗಳಾಗಿ ಬಳಕೆಯಾಗುತ್ತಿದ್ದಾರೆ. ಅರೆಸ್ಸೆಸ್‌ನ ಹಿಂದುತ್ವದ ಸಿದ್ಧಾಂತ ಗಳನ್ನು ಒಂದು ಬಗೆಯ ಮುಗ್ಧತೆ, ಉನ್ಮಾದದಲ್ಲಿ ತಲೆಗೇರಿಸಿಕೊಂಡ ತಳಸಮುದಾಯದ, ಆದಿವಾಸಿ ಯುವಕರು ಬಾಣಗಳಾಗಿ ಬಳಕೆಯಾಗುವ ಸಮೂಹ ಸನ್ನಿ ಇಪ್ಪತ್ತೈದು ವರ್ಷಗಳ ಹಿಂದೆ ಬಾಬರಿ ಮಸೀದಿ ದ್ವಂಸದ ಘಟನೆಯಿಂದ ಶುರುವಾಗಿ ಇಂದು ದೊಂಬಿ ಹತ್ಯೆಗಳನ್ನು ನಡೆಸುವವರೆಗೆ ಬಂದು ತಲುಪಿದೆ. ಈ ಯುವಕರನ್ನು ಸಂಘಪರಿವಾರದ ಮುಷ್ಠಿಯಿಂದ ಬಿಡುಗಡೆಗೊಳಿಸದೆ ಈ ದೊಂಬಿ ಹತ್ಯೆಗಳಿಗೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ

ಇಂದಿನ ಭಾರತದಲ್ಲಿ ಯಾವುದೇ ಮುಸ್ಲಿಂ ಸಮುದಾಯ ದವರನ್ನುಮಾತನಾಡಿಸಿ ಅವರು ‘ಹೇಳುವುದು ಒಂದೇ ಮಾತು ನಮಗೆ ಇಲ್ಲಿ ಭಯದ ವಾತವರಣವಿದೆ. ಯಾವುದೇ ಸಂದರ್ಭದಲ್ಲಿ ಏನಾದರೂಆಗಬಹುದು ಎನ್ನುವ ಆತಂಕ ಅವರಲ್ಲಿ ಮನೆ ಮಾಡಿದೆ. ಪತ್ರಕರ್ತ ಶಿವಂ ಅವರು ಬರೆಯುವಂತೆ ‘ಇಂದು ಮಸ್ಲಿಂ ಸಮುದಾಯದವರು ಬಹುಸಂಖ್ಯಾತರ ಅನುಗ್ರಹದಲ್ಲಿ ಬದುಕುತ್ತಿದ್ದಾರೆ’. ಮುಂದು ವರಿದು ಶಿವಂ ಅವರು ‘ಈಗಿನ ವಾತವರಣ ಮುಸ್ಲಿಮರಿಗೆ ಅವರ ಸ್ಥಾನ ಏನೆಂದು ತೋರಿಸುತ್ತಿದೆ. ಇಂದು ಮಸ್ಲಿಮರು ರೈಲು, ಬಸ್ಸಿನಲ್ಲಿ ಮಾಂಸ, ಮೊಟ್ಟೆಯನ್ನು ತೆಗೆದುಕೊಂಡು ಹೋಗಲು ಸಹ ಹಿಂಜರಿಯುತ್ತಿದ್ದಾರೆ. ಅವರ ಹೆಸರನ್ನು ಕೇಳಿದಾಗ ಅಧೀರ ರಾಗುತ್ತಾರೆ. ಎಂತಹ ಬಯದ ವಾತವರಣವಿದೆಯೆಂದರೆ ಮುಸ್ಲಿಮರು ಪ್ರತಿಭಟಿಸುವುದನ್ನೂ ಕೈಬಿಟ್ಟಿದ್ದಾರೆ. ಒಂದು ಬಗೆಯ ನಿಗೂಢ ಮೌನದ ವಾತವರಣವಿದೆ. ಆದರೆ ಈ ಮೌನವು ತುಂಬಾ ದುಬಾರಿಯಾಗುತ್ತಿದೆ. ಸಾರ್ವಜನಿಕ ಚರ್ಚೆ, ವಾಗ್ವಾದದಲ್ಲಿ ಮುಸ್ಲಿ ಮರು ತಮ್ಮ ಸಮುದಾಯದ ಪರವಾಗಿ ಮಾತನಾಡುವ ಸಾಧ್ಯತೆಗಳೇ ಇಲ್ಲ. ಇಲ್ಲಿ ಮಸ್ಲಿಂ ಸಮುದಾಯಕ್ಕೆ ರಾಜಕೀಯ ನಾಯಕತ್ವವೂ ಮರೀಚಿಕೆಯಾಗಿದೆ. ಮುಸ್ಲಿಮರ ಮತವಿಲ್ಲದೆ ಅದಿಕಾರ ಹಿಡಿಯ ಬಲ್ಲೆ ಎಂದು ತೋರಿಸಿಕೊಟ್ಟ ಬಿಜೆಪಿ 2014ರಿಂದ ಇಲ್ಲಿಯವರೆಗೂ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಸಹ ತನ್ನ ಪಕ್ಷದ ಅಭ್ಯರ್ಥಿಯಾಗಿ ನೇಮಕ ಮಾಡಿಲ್ಲ. ಇನ್ನು ಸ್ವತಃ ಮುಸ್ಲಿಂ ಪಕ್ಷವನ್ನು ಸ್ಥಾಪಿಸಿದರೆ ಅದು ಕೆಟ್ಟ ವಿಚಾರವಾಗಿ ಕಾಣುತ್ತದೆ. ಹಾಗೆ ಪಕ್ಷವನ್ನು ಪ್ರಾರಂಭಿಸಿದರೆ ಕೂಡಲೇ ಪಾಕಿಸ್ತಾನದ ಜಿನ್ನಾ ಜೊತೆಗೆ ಹೋಲಿಕೆ ಮಾಡಲಾಗುತ್ತದೆ’ ಎಂದು ಬರೆಯುತ್ತಾರೆ
ಮರೆಯುವ ಮುನ್ನ

ಈ ಮತಾಂಧತೆ, ದೊಂಬಿ ಹತ್ಯೆಗಳು ಯಾವುದೇ ಅನ್ಯಲೋಕದಲ್ಲಿ ನಡೆಯುವ ಪ್ರತ್ಯೇಕ ಘಟನೆಗಳಲ್ಲ. ಈ ಹತ್ಯೆಗಳನ್ನು ಸಮಾಜದ ಆಗು ಹೋಗುಗಳಿಂದ, ಜನಸಾಮಾನ್ಯರ ದಿನನಿತ್ಯದ ಬದುಕಿನಿಂದ ಪ್ರತ್ಯೇಕಿಸಿ ವಿಶ್ಲೇಷಿಸಲಾಗುವುದಿಲ್ಲ. ಈ ಹಿಂಸೆ ಸಮಾಜದ ಒಡಲೊಳ ಗಿಂದಲೇ ಹುಟ್ಟಿಕೊಂಡಿರುತ್ತದೆ. ಈ ದೊಂಬಿಯಲ್ಲಿ ತೊಡಗಿರು ವವರು ಇಂದಿನ ಭಾರತೀಯ ಸಮಾಜವನ್ನು ಸಾಂಕೇತಿಕವಾಗಿ ಪ್ರತಿ ನಿಧಿಸುತ್ತಾರೆ. ಹಿಂದೆ 1865-1920ರ ಅವಧಿಯಲ್ಲಿ ವರ್ಣಭೇದ ನೀತಿಯ ಹಿಂಸೆಯಿಂದ, ಜನಾಂಗೀಯ ದ್ವೇಷದಿಂದ ಕಪ್ಪು ಜನರನ್ನು, ನೀಗ್ರೋಗಳನ್ನು ಗುರಿಯಾಗಿಸಿಕೊಂಡು ಸುಮಾರು 3,500 ದೊಂಬಿ ಹತ್ಯೆಗಳಾಗಿದ್ದವು. ಇದನ್ನು ಉದಾಹರಿಸಿ ಅಮೆರಿಕದ ಪ್ರೊ. ರಾಂಡಲ್ ಮಿಲ್ಲರ್ ಅವರು ಜನಾಂಗೀಯ ಆಧಾರದ ಮೇಲಿನ ದೊಂಬಿ ಹತ್ಯೆಯು ಅಮೆರಿಕದ ಕಥನ ಎಂದು ಹೇಳಿದ್ದರು. ಇಂದು ಇಂಡಿಯಾದಲ್ಲಿ ಧರ್ಮದ, ಜಾತಿಯ ಆಧಾರದ ಮೇಲೆ ನಡೆಯುವ ಈ ಹತ್ಯಾಕಾಂಡಗಳು ಸಹ ಭಾರತದ ಕಥನ. ಈ ಹತ್ಯೆಗಳಿಗೆ ಮಧ್ಯಮವರ್ಗ, ಮೇಲ್ಜಾತಿಯ ಜಾತಿವಾದಿಗಳು ಮೌನಸಮ್ಮತಿ ಸೂಚಿಸಿದ್ದಾರೆ. ಒಪ್ಪಿಗೆ ದ್ಯೋತಕವಾಗಿ ರುಜುವಾತು ಮಾಡಿದ್ದಾರೆ. ಇಲ್ಲಿ ಕೇಂದ್ರ ಮಂತ್ರಿ ಜಯಂತ ಸಿನ್ಹಾ ಕೊಲೆ ಆರೋಪಿಗಳಿಗೆ ಮಾಲೆ ಹಾಕಿ ಸತ್ಕರಿಸಿರುವುದು ಒಂದು ಪ್ರತ್ಯೇಕ ಘಟನೆಯಲ್ಲ. ಇದು ಇಡೀ ಭಾರತವೇ ಈ ಹತ್ಯೆಗಳನ್ನು ಸಮರ್ಥಿಸಿಕೊಂಡ ಸಂದರ್ಭ. ಬಿಜೆಪಿಯಾಗಲಿ, ಪ್ರಧಾನಿ ಮೋದಿಯಾಗಲಿ ಈ ದೊಂಬಿ ಹತ್ಯೆ ಗಳನ್ನು ಖಂಡಿಸಿ ಒಂದು ಮಾತನ್ನೂ ಆಡಲಿಲ್ಲ ಎಂದರೆ ಅದು ಸಾಮಾನ್ಯ ಸಂಗತಿ ಎಂದು ತಳ್ಳಿ ಹಾಕುವಂತಿಲ್ಲ. ಬಿಜೆಪಿ-ಮೋದಿ ತಮ್ಮ ಲೆಕ್ಕಚಾರದ ಮೌನದ ಮೂಲಕ ಈ ಹತ್ಯೆಗಳನ್ನು ಭಾರತದ ಕಥನ ಎಂದು ದೃಢೀಕರಿಸಿದ್ದಾರೆ. ಈ ಆದಿತ್ಯನಾಥಗಳು, ಮಹೇಂದ್ರ ಶರ್ಮಾಗಳು, ಗಿರಿರಾಜ್‌ಗಳು ಅಲ್ಲೊಂದು, ಇಲ್ಲೊಂದು ಹೇಳಿಕೆ ಕೊಡುವ ಕೇವಲ ರಾಜಕಾರಣಿಗಳಲ್ಲ. ಇವರು ಆರೆಸ್ಸೆಸ್ ಬರೆದ ಮೇಲಿನ ಭಾರತದ ಕಥನವನ್ನು ಜಾರಿಗೊಳಿಸುತ್ತಿದ್ದಾರೆ, ನಿರೂಪಿ ಸುತ್ತಿದ್ದಾರೆ, ಸಮರ್ಥಿಸುತ್ತಿದ್ದಾರೆ. ಇನ್ನು ಮಾಧ್ಯಮಗಳೂ ಈ ಭಾರತದ ಕಥನದ ಪಾತ್ರಗಳಾಗಿವೆ. ಗೋವನ್ನು ಕದ್ದು ಸಾಗಿಸುತ್ತಿದ್ದಾರೆ, ಅಖ್ಲಾಕ್ ಮನೆಯ ಫ್ರಿಡ್ಜ್ ನಲ್ಲಿ ದನದ ಮಾಂಸವಿತ್ತೆಂದು ಶಂಕಿಸಲಾಗಿತ್ತು, ಇದರಿಂದ ಕುಪಿತಗೊಂಡ ಜನತೆ, ಸ್ಥಳೀಯರು ಆರೋಪಿಗಳನ್ನು ಥಳಿಸಿ, ಗೂಸ ಕೊಟ್ಟಿದ್ದಾರೆ. ಇದರ ಪರಿಣಾಮದಿಂದ ಶಂಕಿತರು ಮೃತಪಟ್ಟಿದ್ದಾರೆ ಎಂದು ವರದಿ ಮಾಡುವ ನಮ್ಮ ಬಹುಪಾಲು ಮಾಧ್ಯಮಗಳು ಆ ಮೂಲಕ ಎರಡೂ ಕಡೆಗೂ ಆರೋಪಿಗಳಿದ್ದಾರೆ ಎಂದು ನಿರ್ಧರಿಸಿಬಿಡುತ್ತಾರೆ. ಇದು ಕ್ರಿಯೆಗೆ ಸಮನಾದ ಮತ್ತು ವಿರೋಧ ನೆಲೆಯ ಪ್ರತಿಕ್ರಿಯೆ ಎಂದು ತೀರ್ಪು ಕೊಡುವ ಮಾಧ್ಯಮಗಳು ಹತ್ಯೆ ಮಾಡುವವರನ್ನು ಗೋರಕ್ಷಕರು ಎಂದೂ ಹತ್ಯೆಗೀಡಾದ ಮುಸ್ಲಿಂ, ದಲಿತ, ಆದಿವಾಸಿ ಗಳನ್ನು ದನಗಳನ್ನು ಕದ್ದು ಸಾಗಿಸುವವರು ಎಂದೇ ಉಲ್ಲೇಖಿಸಿ ಬರೆಯುತ್ತಾರೆ. ಆ ಮೂಲಕ ದೊಂಬಿ ಹತ್ಯೆಯನ್ನು ಪರೋಕ್ಷವಾಗಿ ಸಮರ್ಥನೆಗಿಳಿದುಬಿಡುತ್ತಾರೆ.

ದೊಂಬಿ ಹತ್ಯೆಗಳ ಇಂಡಿಯಾ ಇಂದು ಬಿಜೆಪಿ ಹೇಳುತ್ತಿರುವ ಹೊಸ ಭಾರತದ ಪರಿಕಲ್ಪನೆ. ಈ ಹೊಸ ಭಾರತದ ಕಥನಕ್ಕೆ ಕೇವಲ ಬಿಜೆಪಿ ಮಾತ್ರ ಕಾರಣವಲ್ಲ. ತಮ್ಮ ಬೌದ್ಧಿಕ ದಿವಾಳಿತನ, ನಿಷ್ಕ್ರಿಯತೆ ಮತ್ತು ಭ್ರಷ್ಟತೆಯ ಗುಣಗಳಿಂದ ವಿರೋಧ ಪಕ್ಷಗಳು ಸಹ ಈ ಕಥನದ ಪಾಲುದಾರರು. ಹದಿಹರೆಯದವರನ್ನು ಆರೆಸ್ಸೆಸ್‌ನ ತೆಕ್ಕೆಯೊಳಗೆ ತಳ್ಳಿದ ಇಲ್ಲಿನ ಪ್ರಜ್ಞಾವಂತರೂ ಸಹ ಈ ಕಥನದ ರಚನೆಕಾರರು. ಇಲ್ಲಿ ಪ್ರಜಾಪ್ರಭುತ್ವ, ಮಾನವೀಯತೆ ಉಳಿದಿದೆ ಎನಿಸುವುದಿಲ್ಲ

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News

ಜಗದಗಲ
ಜಗ ದಗಲ