ಶೀಘ್ರವೇ ಮೌಢ್ಯ ನಿಷೇಧ ಕಾಯ್ದೆ ಜಾರಿಯಾಗಲಿ

Update: 2018-07-29 18:31 GMT

ಮಾನ್ಯರೇ,

  ಗ್ರಹಣ ಸಮಯದಲ್ಲಿ ಮೌಢ್ಯತೆಯ ವಿರುದ್ಧ ಜಗಳೂರಿನ ಪತ್ರಕರ್ತರು ಮತ್ತು ಹಲವು ಯುವಕರು ಸ್ಮಶಾನದಲ್ಲಿ ಊಟ ಸವಿದು ಜನರಲ್ಲಿ ಜಾಗೃತಿ ಮೂಡಿಸಿರುವುದು ಸ್ವಾಗತಾರ್ಹ ವಿಷಯ. ಶತಮಾನದ ಅತೀ ಅಪರೂಪದ ರಕ್ತ ಚಂದ್ರಗ್ರಹಣವು ಸಂಭವಿಸುವುದು ಖಗೋಳದಲ್ಲಿನ ಬದಲಾವಣೆಗೋಸ್ಕರವಾಗಿದೆ. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಮಾತ್ರ ಇದು ಸಂಭವಿಸುತ್ತದೆ ಎಂದು ನಾವು ಖಗೋಳಶಾಸ್ತ್ರದಲ್ಲಿ ತಿಳಿದುಕೊಂಡಿದ್ದೇವೆ. ಆದರೆ ಇದನ್ನು ವೈಜ್ಞಾನಿಕವಾಗಿ ನೋಡದೆ ಕೆಲವು ಸ್ವಾಮೀಜಿಗಳು ಜನರಲ್ಲಿ ಭೀತಿ ಹುಟ್ಟಿಸುವಂತಹ ಕಾರ್ಯಗಳನ್ನು ಮಾಡುವುದಲ್ಲದೆ ಅವರಲ್ಲಿ ಮೂಢನಂಬಿಕೆ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಇವುಗಳಿಂದ ಗ್ರಾಮೀಣ ಭಾಗದ ಬಹುತೇಕ ಜನರಲ್ಲಿ ಮೂಢನಂಬಿಕೆ ಅವರಿಸಿ ಕೊಂಡಿದೆ. ನಿಜಕ್ಕೂ ಸ್ವಾಮೀಜಿಗಳು ಮಾಡುವಂತಹ ಕೆಲಸಗಳು ಸರೀನಾ? ಗ್ರಹಣದ ಸಮಯದಲ್ಲಿ ಇವರು ಮಾಡುವಂತಹ ಕಾರ್ಯದಿಂದ ಜನರು ಮನೆಯಿಂದ ಹೊರಗೆ ಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ತಮ್ಮ ರಾಶಿಗೆ ಅಶುಭ ಇದೆ ಎಂದು ನಂಬಿಸಿ ಅದೆಷ್ಟೋ ಜನರಿಂದ ಲಕ್ಷ ಗಟ್ಟಲೆ ಹಣವನ್ನು ಪಿಕಿಸುವಂತಹ ಉದ್ಯೋಗವನ್ನು ಹಲವು ಡೋಂಗಿ ಸ್ವಾಮೀಜಿಗಳು ಮಾಡಿಕೊಂಡಿದ್ದಾರೆ. ದಯವಿಟ್ಟು ಇಂತಹ ಸ್ವಾಮೀಜಿಗಳ ಮಾತಿಗೆ ಮಾರು ಹೋಗದೆ ವೈಜ್ಞಾನಿಕವಾಗಿ ಚಿಂತಿಸುವ ಪ್ರಯತ್ನವನ್ನು ಜನ ಸಾಮಾನ್ಯರು ಮಾಡಬೇಕು ಹಾಗೂ ಜನಸಾಮಾನ್ಯರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಇಂಥವರ ವಿರುದ್ಧ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಶೀಘ್ರವೇ ವೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಬೇಕು.
  ಸಂದೀಪ ಚಿಕ್ಕಮಲ್ಲನಹೊಳೆ, ದಾವಣಗೆರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News