ನಿಮ್ಮ ನಾಲಿಗೆಯನ್ನು ಬ್ರಷ್ ಮಾಡದಿದ್ದರೆ ಏನಾಗುತ್ತದೆ....?

Update: 2018-07-30 10:40 GMT

ಹೆಚ್ಚಿನವರು ತಮ್ಮ ಹಲ್ಲುಗಳನ್ನು ಉಜ್ಜುವಾಗ ಬಾಯಿಯ ಬಹುಮುಖ್ಯ ಭಾಗವಾಗಿರುವ ನಾಲಿಗೆಯನ್ನು ಮರೆತುಬಿಡುತ್ತಾರೆ. ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳದಿದ್ದರೆ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಬಹುದು.

ಹಲ್ಲುಗಳನ್ನು ಉಜ್ಜಿ ಬಾಯಿಯನ್ನು ಮುಕ್ಕಳಿಸಿಕೊಂಡರೆ ಸಾಕು ಎಂಬ ತಪ್ಪು ಅಭಿಪ್ರಾಯ ಹೆಚ್ಚಿನವರಲ್ಲಿದೆ. ನಾವು ಹಲ್ಲುಗಳನ್ನು ಬ್ರಷ್ ಮಾಡುವಾಗ ಅತ್ಯಂತ ಕಡೆಗಣನೆಗೊಳಗಾಗುವುದು ನಾಲಿಗೆಯೇ. ಅದನ್ನು ಸ್ವಚ್ಛಗೊಳಿಸದಿದ್ದರೆ ಬಾಯಿಯ ಸ್ವಚ್ಛತೆ ಪೂರ್ಣವಾಗುವುದಿಲ್ಲ. ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಬಾಯಿಯ ಮತ್ತು ದಂತ ಸಮಸ್ಯೆಗಳಿಗೆ ಶೇ.50ರಷ್ಟು ಕಾರಣವಾಗಿದೆ.

ನೀವು ಹಲ್ಲುಗಳನ್ನು ಉಜ್ಜುವಾಗ ನಾಲಿಗೆಯನ್ನು ಕಡೆಗಣಿಸಿದರೆ ಎದುರಿಸಬಹುದಾದ ಕೆಲವು ಸಮಸ್ಯೆಗಳು ಇಲ್ಲಿವೆ....

ಕೆಟ್ಟ ಉಸಿರು

ಇತ್ತೀಚಿಗೆ ನಿಮ್ಮ ಬಾಯಿ ದುರ್ವಾಸನೆಯನ್ನು ಬೀರುತ್ತಿದೆಯಾದರೆ ನಿಮ್ಮ ಅಸ್ವಚ್ಛ ನಾಲಿಗೆ ಅದಕ್ಕೆ ಕಾರಣವಾಗಿರಬಹುದು. ಕೆಲವೂ ಆಹಾರಗಳೂ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ,ನಿಜ. ಆದರೆ ನೀವು ನಾಲಿಗೆಯನ್ನು ಬ್ರಷ್ ಮಾಡದಿದ್ದರೆ ಅದರ ಮೇಲೆ ಬ್ಯಾಕ್ಟೀರಿಯಾಗಳು ದಾಳಿಯಿಡಲು ಶುರು ಮಾಡುತ್ತವೆ ಮತ್ತು ಕ್ರಮೇಣ ಅಲ್ಲಿ ವೃದ್ಧಿಗೊಳ್ಳುವ ಬ್ಯಾಕ್ಟೀರಿಯಾಗಳು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ವಾಸ್ತವದಲ್ಲಿ ನಿಮ್ಮ ನಾಲಿಗೆಯನ್ನು ವಾಸಸ್ಥಾನವಾಗಿ ಮಾಡಿಕೊಂಡಿರುವ ಸೂಕ್ಷ್ಮಜೀವಿಗಳಿಂದ ಈ ವಾಸನೆ ಬರುತ್ತಿರುತ್ತದೆ ಮತ್ತು ಬರಿಗಣ್ಣಿನಲ್ಲಿ ನೀವು ಅವುಗಳನ್ನು ನೋಡಲು ಸಾಧ್ಯವಿಲ್ಲ. ಹಲ್ಲುಗಳನ್ನು ಉಜ್ಜುವಾಗ ಟಂಗ್ ಕ್ಲೀನರ್‌ನಿಂದ ನಾಲಿಗೆಯನ್ನೂ ಸ್ವಚ್ಛಗೊಳಿಸುವುದನ್ನು ರೂಢಿಸಿಕೊಳ್ಳಿ.

ನಿಷ್ಕ್ರಿಯ ರುಚಿಮೊಗ್ಗುಗಳು

ನೀವು ನಾಲಿಗೆಯನ್ನು ಸ್ವಚ್ಛಗೊಳಿಸದಿದ್ದರೆ ಅದರ ಮೇಲೆ ತಿಂದ ಆಹಾರ, ಬ್ಯಾಕ್ಟೀರಿಯಾಗಳು ಮತ್ತು ಮೃತಚರ್ಮ ಕುಳಿತುಕೊಳ್ಳುತ್ತವೆ ಮತ್ತು ರುಚಿ ಮೊಗ್ಗುಗಳನ್ನು ಮರೆ ಮಾಡುತ್ತವೆ. ಇದರಿಂದಾಗಿ ಆಹಾರದ ರುಚಿಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ನೀವು ಏನನ್ನಾದರೂ ತಿಂದಾಗ ಅಥವಾ ಪಾನೀಯವನ್ನು ಸೇವಿಸಿದಾಗ ಅದರ ಕಣಗಳು ನಾಲಿಗೆಯ ಮೇಲೆ ಪದರವನ್ನುಂಟು ಮಾಡುತ್ತವೆ,ಆದರೆ ಬ್ರಷ್ ಮಾಡುವುದರಿಂದ ಇದನ್ನು ನಿವಾರಿಸಬಹುದು. ನಿಯಮಿತವಾಗಿ ನಾಲಿಗೆಯನ್ನು ಬ್ರಷ್ ಮಾಡುವುದರಿಂದ ರುಚಿಮೊಗ್ಗುಗಳೂ ಸ್ವಚ್ಛವಾಗಿರುತ್ತವೆ ಮತ್ತು ಕ್ರಿಯಾಶೀಲವಾಗಿರುತ್ತವೆ.

ಕಿಣ್ವದ ಬೆಳವಣಿಗೆ

ನಾಲಿಗೆಯನ್ನು ಸ್ವಚ್ಛಗೊಳಿಸದಿದ್ದಾಗ ಬಾಯಿಯಲ್ಲಿ ಬೆಳವಣಿಗೆಯಾಗುವ ಯೀಸ್ಟ್ ಅಥವಾ ಕಿಣ್ವವು ನಿಮ್ಮ ವಸಡುಗಳು ಮತ್ತು ಹಲ್ಲುಗಳಿಗೆ ಹರಡುತ್ತವೆ. ಹೌದು,ಬಾಯಿಯನ್ನು ಬ್ಯಾಕ್ಟೀರಿಯಾಗಳು ಮತ್ತು ಕಿಣ್ವ ಆಕ್ರಮಿಸಿಕೊಂಡಾಗ ಅಂಗಾಂಶಗಳು ಮತ್ತು ವಸಡುಗಳಲ್ಲಿ ಉರಿಯೂತದಂತಹ ದಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News