ಸರಕಾರಿ ಶಾಲೆಗಳನ್ನು ಉಳಿಸಬೇಕಾದವರು ಯಾರು?

Update: 2018-07-30 18:36 GMT

ಮಾನ್ಯರೇ,

ವರ್ಷದಿಂದ ವರ್ಷಕ್ಕೆ ಸರಕಾರಿ ಕನ್ನಡ ಶಾಲೆಗಳು ಕ್ಷೀಣಿಸುತ್ತಿವೆ. ಇವುಗಳ ಉಳಿವಿಗಾಗಿ ಸರಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆಯಾದರೂ ಬದಲಾವಣೆ ಏನೂ ಕಾಣುತ್ತಿಲ್ಲ. ಕಾರಣ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎಂದು ಕೆಲವರು ನೆಪ ಮಾತ್ರಕ್ಕೆ ಹೇಳುತ್ತಿದ್ದಾರೆ. ಆದರೆ ನಿಜವಾದ ಕಾರಣ ಬೇರೆನೇ ಇದೆ. ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ನಮ್ಮ ಮಕ್ಕಳು ಸರಕಾರಿ ಶಾಲೆಯಲ್ಲಿ ಓದಬೇಕೇ? ಎಂಬ ಕೀಳರಿಮೆ ಮನೋಭಾವ ಪ್ರಸ್ತುತ ಜನರಲ್ಲಿ ಹುಟ್ಟಿಕೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಏನು ಕಲಿಸುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿಯೇ ಓದಬೇಕು ಎಂಬ ಹುಚ್ಚು ಆಸೆ. ಇತ್ತೀಚೆಗೆ ಇದೊಂದು ಫ್ಯಾಶನ್ ಆಗಿದೆ ಎಂದರೆ ತಪ್ಪಾಗಲಾರದು. ಇನ್ನೊಂದೆಡೆ ಸರಕಾರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿಯೇ ಓದಿಸಿ ಅಂತ ಹೇಳುತ್ತದೆ. ಆದರೆ ಸರಕಾರಿ ನೌಕರರು, ನಮ್ಮನ್ನಾಳುವ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಓದಿಸುತ್ತಿಲ್ಲ. ವಿಪರ್ಯಾಸವೆಂದರೆ ಸರಕಾರಿ ಕನ್ನಡ ಶಾಲೆಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಈ ಮೂಲಕ ತಾವೆಲ್ಲ ಮಕ್ಕಳಿಗೆ ಪಾಠ ಬೋಧಿಸಲು ಸಮರ್ಥರಲ್ಲ ಎಂಬುದನ್ನು ತಾವೇ ಒಪ್ಪಿಕೊಂಡಿದ್ದಾರೆ. ಇದು ದುರಂತದ ಸಂಗತಿ. ನಿಜವಾಗಿ ಬಡವರ ಮಕ್ಕಳು ಮಾತ್ರ ಸರಕಾರಿ ಶಾಲೆಗಳಲ್ಲಿಯೇ ಕಲಿಯುತ್ತಿದ್ದಾರೆ. ಸರಕಾರಿ ನೌಕರರಿಗೆ ಕೆಲಸ ಮಾತ್ರ ಸರಕಾರದ್ದು ಬೇಕು ಆದರೆ ಅವರ ಮಕ್ಕಳು ಓದಲು ಸರಕಾರಿ ಶಾಲೆಗಳು ಬೇಡ. ಇಂತಹ ಹೀನ ಮನಸ್ಥಿತಿಯಿಂದ ಹೊರ ಬಂದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯವಾಗಬಹುದು. ಸರಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಓದಿಸಬೇಕು ಎಂಬ ಹೊಸ ನಿಯಮ ಜಾರಿಗೆ ತರಲಿ. ಆಗ ಸರಕಾರಿ ಕನ್ನಡ ಶಾಲೆಗಳು ತಾನಾಗಿಯೇ ಅಭಿವೃದ್ಧಿ ಹೊಂದುತ್ತವೆ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News