ಉ.ಕ ಪ್ರತ್ಯೇಕ ರಾಜ್ಯಕ್ಕಾಗಿ ನಡೆಸುವ ಹೋರಾಟ ರಾಜಕೀಯ ಪ್ರೇರಿತ: ಡಿಸಿಎಂ ಪರಮೇಶ್ವರ್

Update: 2018-07-31 12:21 GMT

ಬೆಂಗಳೂರು, ಜು.31: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಆಗ್ರಹಿಸಲು ನಡೆಯುತ್ತಿರುವ ಹೋರಾಟವು ರಾಜಕೀಯ ಪ್ರೇರಿತವಾದದ್ದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ವ್ಯತ್ಯಾಸಗಳಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶಗಳಿವೆ. ಆದರೆ, ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕುರಿತು ಧ್ವನಿ ಎತ್ತುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆಲ, ಜಲ, ಭಾಷೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹ ಮಾಡುವುದು ತಪ್ಪು. ಭಾಷಾವಾರು ಪ್ರಾಂತ್ಯಗಳ ರಚನೆ ಹಿನ್ನೆಲೆಯಲ್ಲಿ ಕನ್ನಡ ಮಾತನಾಡುವವರು ಒಂದೇ ರಾಜ್ಯದಲ್ಲಿರಬೇಕೆಂಬ ಉದ್ದೇಶದಿಂದ ಏಕೀಕರಣ ಚಳವಳಿಯು ನಡೆಯಿತು ಎಂದು ಅವರು ಹೇಳಿದರು.

ರಾಜ್ಯದ ಏಕೀಕರಣಕ್ಕಾಗಿ ಹಲವಾರು ಮಹನೀಯರು ಹೋರಾಟ ಮಾಡಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಈ ರೀತಿಯ ಪ್ರತ್ಯೇಕತೆಯ ಹೋರಾಟ ಮಾಡುವ ಮೂಲಕ ಏಕೀಕರಣದ ಉದ್ದೇಶವನ್ನೆ ಬುಡಮೇಲು ಮಾಡಿದಂತಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನಂಜುಂಡಪ್ಪ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ, ರಾಜ್ಯದ 114 ತಾಲೂಕುಗಳು ಹಿಂದುಳಿದಿರುವುದಾಗಿ ವರದಿ ನೀಡಿತ್ತು. ಅದನ್ನು ಆಧರಿಸಿ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ ಎಂದು ಅವರು ತಿಳಿಸಿದರು. ಆದರೂ, ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವ್ಯತ್ಯಾಸಗಳಾಗಿರುವುದು ಕಂಡು ಬಂದಿದೆ. ಈ ಸಂಬಂಧ ಸರಕಾರ ಚರ್ಚೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಆದರೆ, ಇದಕ್ಕಾಗಿ ಪ್ರತ್ಯೇಕತೆಯ ಕೂಗು ಮೊಳಗಿಸುವುದು ಸರಿಯಾದುದ್ದಲ್ಲ ಎಂದು ಪರಮೇಶ್ವರ್ ಹೇಳಿದರು.

ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿ ಅವರ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಎಫ್‌ಎಸ್‌ಎಲ್ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News