ಉತ್ತರ ಕರ್ನಾಟಕ ಅಭಿವೃದ್ಧಿ ನನ್ನ ಜವಾಬ್ದಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-31 12:52 GMT

ಬೆಂಗಳೂರು, ಜು.31: ಉತ್ತರ ಕರ್ನಾಟಕದ ಅಭಿವೃದ್ದಿ ನನ್ನ ಜವಾಬ್ದಾರಿ. ಇನ್ನೊಂದು ವಾರದ ನಂತರ ನಾನೇ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಉತ್ತರ ಕರ್ನಾಟಕ ಭಾಗದ ಹೋರಾಟಗಾರರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆವರೆಗೆ ಮಾತ್ರ ಬಿಜೆಪಿಯವರು ಉತ್ತರ ಕರ್ನಾಟಕ ಅಂತ ಹೋರಾಟ ಮಾಡುತ್ತಾರೆ ಎಂದರು. ಚುನಾವಣೆ ಗೆಲ್ಲಲು ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ನಾನು ಎರಡೇ ತಿಂಗಳಲ್ಲಿ ಮಾಡಿದ ಕೆಲಸಗಳನ್ನ ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದ ಮೂವತ್ತೂ ಜಿಲ್ಲೆಗಳ ರೈತ ಮುಖಂಡರ ಜೊತೆ ಸಭೆ ಮಾಡಿದ್ದೇನೆ. ಸಭೆಗೆ ಯಡಿಯೂರಪ್ಪನವರು ಬರಲೇ ಇಲ್ಲ. ಈಗ ಸ್ವಾಮೀಜಿಗಳೊಂದಿಗೆ ಹೋರಾಟ ಮಾಡಿಕೊಂಡು ಕುಳಿತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾತೆತ್ತಿದರೆ ಪ್ರತ್ಯೇಕ ಉತ್ತರ ಕರ್ನಾಟಕ ಅಂತೀರಾ? ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿದರೆ, ಅಭಿವೃದ್ಧಿಗೆ ಹಣ ಎಲ್ಲಿಂದ ತರ್ತೀರಾ? ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸಾಧ್ಯವಿಲ್ಲ ಎಂದು ಹೋರಾಟಗಾರರಿಗೆ ಮುಖ್ಯಮಂತ್ರಿ ಮನವಿ ಮಾಡಿಕೊಟ್ಟರು.

ನಾವು ದುಡಿಯಲು ಸಿದ್ಧರಿದ್ದೇವೆ. ಆದರೆ, ವಿದ್ಯುತ್ ಸಮಸ್ಯೆ ಬಹಳಷ್ಟಿದೆ. ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲ. ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಜನ ಸಚಿವರು ಬಂದಿದ್ದಾರೆ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಉತ್ತರ ಕರ್ನಾಟಕ ಹಿಂದುಳಿದಿದೆ. ಪ್ರತ್ಯೇಕ ರಾಜ್ಯದ ಕೂಗು ಇವತ್ತಿನ ಸರಕಾರದ ವಿರುದ್ದ ಅಲ್ಲ. ಈ ಚಳವಳಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ ಎಂದು ಹೋರಾಟಗಾರರು ಮನವರಿಕೆ ಮಾಡಿಕೊಟ್ಟರು. ನೀವೆ ಕಟ್ಟಿಸಿದ ಬೆಳಗಾವಿಯ ಸುವರ್ಣ ವಿಧಾನಸೌಧ ನಿಷ್ಕ್ರಿಯವಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಅದನ್ನು ಪುನಶ್ಚೇತನಗೊಳಿಸಿ ಎಂದು ಹೋರಾಟಗಾರರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಹೋರಾಟಗಾರರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಗ್ರಾಮ ವಾಸ್ತವ್ಯದಲ್ಲಿ ಹೆಚ್ಚಿನ ಸಮಯ ಉತ್ತರ ಕರ್ನಾಟಕಕ್ಕೆ ಮೀಸಲಿಟ್ಟಿದ್ದೇನೆ. ಸುಮಾರು 35 ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. 450 ಕೋಟಿ ರೂ.ವೆಚ್ಚದಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿ, ಅಧಿವೇಶನ ನಡೆಸಿದ್ದೇನೆ ಎಂದರು.

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದು ಘೋಷಿಸಲು ತೀರ್ಮಾನಿಸಿದ್ದೆ. ಆದರೆ, ನಂತರ ಬಂದ ಸರಕಾರಗಳು ಆ ಕಡೆ ಗಮನ ಹರಿಸಿಲ್ಲ. 20 ತಿಂಗಳ ನನ್ನ ಸರಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಗಮನ ಕೊಟ್ಟಿದ್ದೇನೆ ಎಂದು ಅವರು ಹೇಳಿದರು. ಉತ್ತರ ಕರ್ನಾಟಕ ಭಾಗದ ಜನ ನನಗೆ ಹೆಚ್ಚಿನ ಪ್ರೀತಿ ತೋರಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮಗೆ ನೆಲೆ ಇಲ್ಲ. ಅಲ್ಲಿ ಮತ ಹಾಕಿಸಿಕೊಳ್ಳುವಷ್ಟು ನಮ್ಮ ನಾಯಕರು ಸಶಕ್ತರಲ್ಲ. ಪೂರ್ಣ ಬಹುಮತ ಕೊಡಿ ರೈತರ ಸಾಲ ಮನ್ನಾ ಮಾಡ್ತೀನಿ ಅಂದಿದ್ದೆ. 37 ಸ್ಥಾನ ಇಟ್ಕೊಂಡು ಕಾಂಗ್ರೆಸ್ ಜೊತೆಗೆ ಸರಕಾರ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.

ಬಜೆಟ್‌ನಲ್ಲಿ ಎಲ್ಲ ವಲಯಗಳಿಗೂ ಅನುದಾನ ಒದಗಿಸಲಾಗಿದೆ. 6500 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇನೆ. ಬೆಂಗಳೂರಿನ ರಸ್ತೆಗಳಿಗೆ 1000 ಕೋಟಿ ರೂ.ನೀಡಿದ್ದೇನೆ. ಮೊದಲ ದಿನದಿಂದಲೂ ನನ್ನ ಮೇಲೆ ಮೇಲೆ ಕೌಂಟರ್ ಅಟ್ಯಾಕ್ ಮಾಡುತ್ತಿದ್ದಾರೆ. ನಾನು ಉತ್ತರ ಕರ್ನಾಟಕ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸರಕಾರದ 4000 ಕೋಟಿ ರೂ.ರೈತರ ಸಾಲ ಮನ್ನಾ ನಾನೇ ಮಾಡಬೇಕಿದೆ. ಇತ್ತೀಚೆಗೆ 1500 ಕೋಟಿ ರೂ.ಬಿಡುಗಡೆ ಮಾಡಿದ್ದೇನೆ. ಚಾಲ್ತಿ ಸಾಲ 1 ಲಕ್ಷ ರೂ.ವರೆಗೆ ಮನ್ನಾ ಮಾಡಿದ್ದೇನೆ. ಈ ವರ್ಷ ಒಟ್ಟಾರೆ 18 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಆಗಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡ್ಡಿ ಸಹಿತ 37 ಸಾವಿರ ಕೋಟಿ ರೂ. ಸಾಲ ಇದೆ. ಚುನಾವಣೆ ಸಂದರ್ಭದಲ್ಲಿ ನನ್ನನ್ನು ಯಾಕೆ ಮರೀತಿರಿ ಅಂತ ಕೇಳಿದ್ದೇನೆಯೆ ಹೊರತು, ರೈತರನ್ನ ನಾನು ಬೈಯ್ಯಲಿಲ್ಲ. ಈಗ ರೈತ ಮುಖಂಡರು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಏನಾದರೂ ಹೇಳಿದರೆ ಮಾಧ್ಯಮದವರು ಬೇಸರ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೆ ನಿನ್ನೆ ಆತ್ಮಾವಲೋಕನ ಮಾಡಿಕೊಂಡಿದ್ದೇನೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News