ವೈಜ್ಞಾನಿಕ ವಿಚಾರಶೀಲತೆ ಕಳೆದುಕೊಳ್ಳುತ್ತಿರುವ ನಾಗರಿಕ ಸಮಾಜ

Update: 2018-07-31 18:30 GMT

ಸಂವಿಧಾನದ ‘ಆರ್ಟಿಕಲ್ 51ಎ’ ಅನ್ವಯ ವೈಜ್ಞಾನಿಕ ಸ್ವಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಚೈತನ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವೂ ಆಗಿರುತ್ತದೆ. ಈ ಹಾದಿಯಲ್ಲಿ ನಾವು ಎಷ್ಟು ದೂರ ಸಾಗಿದ್ದೇವೆ ಎಂದರೆ, ಅನೇಕ ಅಂತರ್‌ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ, ವಿಶ್ವವಿದ್ಯಾನಿಲಯಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ಅಷ್ಟೇ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಲಕಾಲಕ್ಕೆ ವಿಜ್ಞಾನದ ನೀತಿ ಗಳನ್ನು ಪರಿಷ್ಕರಿಸಲಾಗುತ್ತಿದೆ. ಹೀಗಿದ್ದರೂ ಸಹ ಕಲಿತದ್ದನ್ನು ಅಳವಡಿಸಿಕೊಳ್ಳಲು ಯಾಕೆ ಸೋಲುತ್ತಿದ್ದೇವೆ ಎಂದು ಅರ್ಥೈಸಿಕೊಳ್ಳಲಾಗುತ್ತಿಲ್ಲ. ಎಲ್ಲೆಲ್ಲಿ ವಿಜ್ಞಾನ ಮನೆ ಮಾಡಬೇಕಿತ್ತೋ ಅಲ್ಲಿ ಅಂಧ, ಮೌಢ್ಯ ಆಚರಣೆಗಳು ಬೇರುಬಿಟ್ಟಿವೆ. ವಿಜ್ಞಾನದಿಂದ ವಿಶ್ವವನ್ನು ನೋಡಬೇಕಾದ ಸಂದರ್ಭದಲ್ಲಿ ಪುರಾತನ ಆಚರಣೆಗಳ ಕನ್ನಡಕ ಹಾಕಲಾಗುತ್ತಿದೆ.

ಎಂದಿನಂತೆ ಸಾಮಾಜಿಕ ಜಾಲಗಳನ್ನು ಜಾಲಾಡುವಾಗ ಸ್ನೇಹಿತರೊಬ್ಬರು ಕಳುಹಿಸಿದ್ದ ಮೆಸೇಜ್ ಕಡೆಗೆ ವಿಶೇಷವಾಗಿ ಗಮನಹರಿಯಿತು. ಅದು, ಇಂದು ಮಂಗಳ ಗ್ರಹದಿಂದ ಕಾಸ್ಮಿಕ್ ಕಿರಣಗಳು ಬರುತ್ತವೆ ಹಾಗಾಗಿ ಮೊಬೈಲ್ ಗಳನ್ನು ಹತ್ತಿರ ಇಟ್ಟುಕೊಳ್ಳಬೇಡಿ ಎಂದಾಗಿತ್ತು. ಮೊಬೈಲ್ ಹತ್ತಿರವಿಟ್ಟುಕೊಂಡು ಮಲಗಬಾರದು ಎನ್ನುವುದು ಬೇರೆ ವಿಚಾರ. ಆದರೆ, ನಕ್ಷತ್ರಗಳು ಮಾತ್ರ ಕಾಸ್ಮಿಕ್ ಕಿರಣಗಳ ಸಹಿತ ಹಲವಾರು ರೀತಿಯ ಕಿರಣಗಳನ್ನು ಸೂಸಬಲ್ಲವು ಎಂದರೆ...?

 ಗ್ರಹಗಳಾಗಲಿ ಅಥವಾ ಉಪಗ್ರಹಗಳಾಗಲಿ ಯಾವುದೇ ಕಿರಣಗಳನ್ನು ಹೊರಸೂಸುವುದಿಲ್ಲ, ಅವು ಕೇವಲ ನಕ್ಷತ್ರಗಳಿಂದ ಬರುವ ಕಿರಣಗಳನ್ನು ಪ್ರತಿಫಲಿಸಬಲ್ಲವು, ಹಾಗೆಯೇ ಭೂಮಿಗೆ ಓಜೋನ್ ಪದರದ ಹೊದಿಕೆ ಇರುವುದರಿಂದ ಕಾಸ್ಮಿಕ್ ಕಿರಣಗಳು ಭೂಮಿಯನ್ನು ಪ್ರವೇಶಿಸಲಾರವು. ಸೂರ್ಯ ಒಂದು ನಕ್ಷತ್ರ, ಭೂಮಿ ಒಂದು ಗ್ರಹ ಎನ್ನುವುದು ಪ್ರಾಥಮಿಕ ಶಾಲೆಯ ವಿಜ್ಞಾನದ ಪಾಠ. ಇದನ್ನು ನಮ್ಮ ಕಲಿಕೆಯ ಪ್ರಾರಂಭದ ದಿನಗಳಲ್ಲೇ ಓದಿದರೂ ಸಹ, ಈ ರೀತಿ ಮಂಗಳ ಗ್ರಹದಿಂದ ಕಾಸ್ಮಿಕ್ ಕಿರಣಗಳು ಬರುತ್ತವೆ ಅನ್ನುವ ಮೆಸೇಜ್ ಸೃಷ್ಟಿ ಆದದ್ದಾದರೂ ಹೇಗೆ? ಅದೇ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್‌ನಲ್ಲಿ ಈ ರೀತಿಯ ವಿಷಯಗಳನ್ನು ಪರಾಮರ್ಶಿಸದೆ ಹೇಗೆ ಜನರು ಒಬ್ಬರಿಂದೊಬ್ಬರಿಗೆ ಫಾರ್ವರ್ಡ್ ಮಾಡುತ್ತಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆ. ಉತ್ತರ ಬಲು ಸುಲಭ, ಅದೇ ವೈಜ್ಞಾನಿಕ ಮನೋಭಾವದ ಕೊರತೆ ಹಾಗೂ ಮೌಢ್ಯದ ತಾಂಡವ. ಮಾನವನ ದೇಹವೂ (ಮೂಳೆ ಹೊರತುಪಡಿಸಿ), ಹೂವೂ ಸೇರಿದಂತೆ ಪೂಜೆಗೆ ಉಪಯೋಗಿಸುವ ವಸ್ತುಗಳು ನೀರಿನಲ್ಲಿ ಕೊಳೆಯುತ್ತವೆ, ಹೀಗೆ ಕೊಳೆಯುವುದರಿಂದ ಬ್ಯಾಕ್ಟೀರಿಯಾಗಳಂಥ ಸೂಕ್ಷ್ಮ್ಮಾಣು ಜೀವಿಗಳು ಅತಿ ವೇಗವಾಗಿ ವೃದ್ಧಿಗೊಂಡು ನೀರಿನಲ್ಲಿ ಸಾಮಾನ್ಯವಾಗಿ ಕರಗಿರುವ ಆಮ್ಲಜನಕವನ್ನು ಬಹಳ ವೇಗವಾಗಿ ಉಪಯೋಗಿಸಿಕ್ಕೊಳ್ಳುತ್ತವೆ. ಇದರಿಂದ ಬೇರೆ ಜಲಚರಗಳಿಗೆ ಆಮ್ಲಜನಕದ ಕೊರತೆಯುಂಟಾಗಿ ಅವು ಸಾಯುತ್ತವೆ. ಅಷ್ಟೇ ಅಲ್ಲದೆ ಆ ನೀರು ಮತ್ತೆ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ ಎನ್ನುವ ವೈಜ್ಞಾನಿಕ ಸತ್ಯ ನಾವು ಶಾಲೆಗಳಲ್ಲಿ ಓದುತ್ತೇವೆ. ಈ ಸಾಮಾನ್ಯ ಅರಿವು ವಿಚಾರಗಳನ್ನು ನಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡು, ನಾವು ಪೂಜೆ ನಂತರ ಹೂವು ಹಾಗೂ ಇತರ ನೀರಿನಲ್ಲಿ ಕೊಳೆಯುವ ವಸ್ತುಗಳನ್ನು ನದಿಗಳಿಗೆ ಅಥವಾ ನೀರಿರುವ ಜಾಗಗಳಿಗೆ ಎಸೆಯದೆ ಇದ್ದಿದರೆ ಈ ದಿನ ನೀರಿನ ಮೂಲಗಳ ಮಾಲಿನ್ಯ ಒಂದು ತಲೆ ನೋವಾಗಿ ಪರಿಣಮಿಸುತ್ತಿರಲಿಲ್ಲ. ಹಾಗೆಯೇ, ಗಂಗಾ ನದಿಯನ್ನು ಸ್ವತ್ಛಗೊಳಿಸಲು ‘ನಮಾಮಿ ಗಂಗಾ’ನಂತಹ ಕಾರ್ಯಕ್ರಮಗಳಿಗೆ ಕೊಟ್ಟಿಗಟ್ಟಲೆ ಹಣ ಸುರಿದು ಕೈಕಟ್ಟಿ ಕೂರಬೇಕಿರಲಿಲ್ಲ. ಎಲ್ಲಿಯವರೆಗೂ ಸಾಮಾನ್ಯ ಜನರಲ್ಲಿ ಈ ವೈಜ್ಞಾನಿಕತೆ ಆಚರಣೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಗಂಗಾ ನದಿಯಲ್ಲ, ಯಾವುದೇ ನದಿ ಸಹ ಮಾಲಿನ್ಯಮುಕ್ತವಾಗುವುದಿಲ್ಲ. ಇನ್ನು 50 ವರ್ಷಗಳ ನಂತರವೂ ‘ನಮಾಮಿ ಗಂಗಾ- 10’ ಚಾಲನೆಯಲ್ಲಿ ಇರಬಹುದಲ್ಲದೆ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು. ಇಲ್ಲಿ ಸರಕಾರಗಳ ಮೇಲೆ ಜನರಿಗೆ ವೈಜ್ಞಾನಿಕ ಚಿಂತನೆ ವಿಚಾರಗಳನ್ನು ತಲುಪಿಸುವ ಜವಾಬ್ದಾರಿ ಇರಬೇಕಲ್ಲದೆ, ಜನಸಾಮಾನ್ಯರು ಕೂಡಾ ಅದನ್ನು ಅರ್ಥೈಸಿಕೊಂಡು ಪಾಲಿಸುವಲ್ಲಿ ಮುಂದಾಗಬೇಕು.

ಮಾನವನ ಇತಿಹಾಸದುದ್ದಕ್ಕೂ ಭೂಮಿಯ ಸುತ್ತ ಸೂರ್ಯನು ಸೇರಿದಂತೆ ಅನ್ಯಗ್ರಹಗಳು ಸುತ್ತುತ್ತಿವೆ, ಭೂಮಿಯೇ ಕೇಂದ್ರ ಎಂದು ತಿಳಿದಿದ್ದ ಮೌಢ್ಯಕ್ಕೆ ತನ್ನ ಪ್ರಯೋಗಗಳಿಂದ ಇದು ತಪ್ಪು ಗ್ರಹಿಕೆ, ಭೂಮಿಯು ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ ಸೂರ್ಯನೇ ಕೇಂದ್ರ ಎಂದು ನಿರೂಪಿಸಿದ ಕೊಪರ್ನಿಕಸ್ ಅನ್ವೇಷಣೆಗೆ ಸರಿಸುಮಾರು 500 ವರ್ಷಗಳ ಇತಿಹಾಸವಿದೆ. ಈ ಪಯಣದಲ್ಲಿ ಮಾನವ ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ್ದಲ್ಲದೆ, ಸ್ಪೇಸ್ ಸ್ಟೇಷನ್‌ನಲ್ಲಿ ಹಲವು ತಿಂಗಳುಗಳು ಕಳೆದು, ಸೌರ ಮಂಡಲದ ಆಚೆಗೂ ಕೃತಕ ಉಪಗ್ರಹ (ವಾಯೆಜರ್-1) ತಲುಪಿಸಿದ್ದಷ್ಟೇ ಅಲ್ಲದೆ ಪ್ರಪಂಚದ ಬಹುತೇಕ ದೇಶಗಳು ಪ್ರತಿಯೊಂದರಲ್ಲೂ ವೈಜ್ಞಾನಿಕತೆಯನ್ನು ಹುಡುಕುವ ದೃಷ್ಟಿ ಮೈಗೂಡಿಸಿಕೊಂಡಿವೆ. ಆದರೆ, ಭಾರತದಲ್ಲಿನ ವಿದ್ಯಾವಂತರು ಸೇರಿದಂತೆ ಸೌರ ಮಂಡಲ ಉದಯಿಸಿದಂದಿನಿಂದ ನಡೆಯುತ್ತಿರುವ ಗ್ರಹಣಗಳಂಥ ನೈಸರ್ಗಿಕ ಕ್ರಿಯೆಗಳಲ್ಲೂ ಸಹ ಮೌಢ್ಯತೆಯಿಂದ ಹೊರಬಾರದಷ್ಟು ಮೂಢರಾಗಿರುವುದು ಖೇದಕರ ಸಂಗತಿ.

ಚಾರ್ಲ್ಸ್ ಡಾರ್ವಿನ್ ಜೀವ ವಿಕಸನದ ಸಿದ್ಧಾಂತ ಮುಂದಿಟ್ಟಾಗ ಯುರೋಪ್ ಹಾಗೂ ಅಮೆರಿಕದಲ್ಲಿನ ಸಂಪ್ರದಾಯವಾದಿಗಳು ಬಲವಾಗಿ ವಿರೋಧಿಸಿದರು. ತದನಂತರ ನಡೆದ ವಿಸ್ತೃತ ಚರ್ಚೆ ಹಾಗೂ ಅನ್ವೇಷಣೆಗಳ ಪ್ರತಿಫಲವಾಗಿ ಸಂಪ್ರದಾಯವಾದಿಗಳು ಡಾರ್ವಿನ್ ಸಿದ್ಧಾಂತವನ್ನು ಒಪ್ಪಿಕೊಂಡರು. ಈ ರೀತಿಯ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಆ ನಿಟ್ಟಿನಲ್ಲಿ ಯೋಚಿಸುವ ಮನೋಭಾವ ಬೆಳೆಸಿಕೊಂಡಿದ್ದರಿಂದಲೇ ಇಂದು ಅನೇಕ ಸಾಂಕ್ರಾಮಿಕ ರೋಗಗಳನ್ನು ಹತೋಟಿಯಲ್ಲಿ ಇಡಲಾಗಿದೆ, ಎದುರಾಗುವ ರೋಗಗಳಿಗೆ ಪರಿಹಾರ ಹುಡುಕಲಾಗುತ್ತಿದೆ, ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಕೊರೆತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗೊಂದು ವೇಳೆ ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿದು ಸಮಾಜ ಹಾಗೂ ಸರಕಾರಗಳು ವಿಜ್ಞಾನಕ್ಕೆ ಒತ್ತುಕೊಡದೆ ಹೋಗಿದ್ದಿದ್ದರೆ ಇಂದಿನ ಆಧುನಿಕ 21ನೇ ಶತಮಾನ ಊಹೆಗೆ ಸಿಲುಕುತ್ತಿರಲಿಲ್ಲ. ಪ್ರಪಂಚಾದ್ಯಂತ ವೈಜ್ಞಾನಿಕ ಚಿಂತನೆಗಳು ಶರವೇಗದಲ್ಲಿ ನಡೆಯುತ್ತಿದ್ದರೆ, ಭಾರತದಲ್ಲಿ ಅದರ ನಡಿಗೆ ಆಮೆಗತಿಯಲ್ಲಿ ಅಥವಾ ವಿರುದ್ಧ ದಿಕ್ಕಿನಲ್ಲಿ ಎಂದೇ ಹೇಳಬೇಕು.

 1945ರಲ್ಲಿ ಶ್ರೀಲಂಕಾದ ಅರ್ಥರ್ ಸಿ. ಕ್ಲರ್ಕ್ ತಮ್ಮ 28 ನೇ ವಯಸ್ಸಿನಲ್ಲಿ ಆರ್ಟಿಫಿಶಿಯಲ್ ಸೆಟೆಲೈಟ್ ಕಮ್ಯುನಿಕೇಶನ್ ಸಿಸ್ಟಂ ಅಂತ ಒಂದು ವೈಜ್ಞಾನಿಕ ದಂತಕತೆಯ ಪ್ರಬಂಧವನ್ನು ಪ್ರಕಟಿಸಿದರು. ಇದರಿಂದ ಮೆದುಳಿಗೆ ಕೆಲಸ ಕೊಟ್ಟ ವಿಜ್ಞಾನಿಗಳು ಕೇವಲ 17 ವರ್ಷಗಳಲ್ಲಿ (1962) ಟೆಲೆಸ್ಟಾರ್ ಎನ್ನುವ ಪ್ರಥಮ ಕೃತಕ ಸಂವಹನ ಉಪಗ್ರಹ ಹಾರಿಸಿದರು. ಅದರ ಮುಂದುವರಿದ ಭಾಗವೇ ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್. ಅಷ್ಟೇ ಅಲ್ಲದೆ, ಇಂದು ಭೂಮಿಯಲ್ಲಿನ ಪ್ರಕೃತಿ ವಿಕೋಪ, ನೈಸರ್ಗಿಕ ಸಂಪನ್ಮೂಲಗಳ ಹುಡುಕಾಟ ಎಲ್ಲವೂ ಸಾಧ್ಯವಾಗಿದೆ. ಒಬ್ಬ ವ್ಯಕ್ತಿಯ ಪ್ರಬಂಧ ಇಡೀ ಮಾನವಕುಲದ ದಿಕ್ಕನ್ನೇ ತಿರುಗಿಸಬಹುದು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ? ಈ ರೀತಿ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲಾಗುತ್ತಿಲ್ಲ ಯಾಕೆ?. ವಿಪರ್ಯಾಸವೆಂದರೆ, ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವ ಮುನ್ನ ಪ್ರೈಮ್ ಟೈಮ್ನಲ್ಲಿ, ಟಿವಿ ಮಾಧ್ಯಮಗಳಲ್ಲಿ ಜ್ಯೋತಿಷ್ಯ ಪ್ರಸಾರವಾಗುತ್ತದೆ. ಎಷ್ಟೋ ಜನ ಪೋಷಕರು ಈ ಕಾರ್ಯಕ್ರಮಗಳನ್ನು ನೋಡಿಕೊಂಡೇ ಮಕ್ಕಳನ್ನು ಶಾಲೆಗೆ ತಯಾರು ಮಾಡುವುದು. ಜ್ಯೋತಿಷ್ಯ ಒಂದು ವಿಜ್ಞಾನ ಅಂತ ಹೇಳುತ್ತ್ತಾರೆ. ಆದರೆ ಅದು ಯಾವ ರೀತಿ ಜನರಲ್ಲಿ ವೈಜ್ಞಾನಿಕತೆ ಬೆಳಸುತಿದೆ ಎಂದು ಇಂದಿಗೂ ಅರ್ಥವಾಗಿಲ್ಲ. ಮನೆಯಲ್ಲಿ ಆ ಗ್ರಹ ಅಲ್ಲಿರುತ್ತೆ, ಅದರಿಂದ ಒಳ್ಳೆಯದು-ಕೆಟ್ಟದ್ದು, ಎಂದು ಕೇಳಿಸಿಕೊಂಡು ಬಂದ ಮಗು, ಶಾಲೆಯಲ್ಲಿ ಕೇಳಿಸಿಕೊಳ್ಳುವ ವಿಜ್ಞಾನದಿಂದ ದ್ವಂದ್ವಕ್ಕೆ ಒಳಗಾಗುತ್ತದೆ. ಅಲ್ಲದೆ ಇತ್ತೀಚೆಗೆ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ, ಮಕ್ಕಳು ಹೆಚ್ಚು ಇಷ್ಟಪಡುವ ಕಾರ್ಟೂನ್ ಕಾರ್ಯಕ್ರಮಗಳಲ್ಲಿ ಹೆಸರಿಗೆ ಹೇಳಲು ಸಹ ಒಂದೆರಡು ಸಾಮಾನ್ಯ ವಿಜ್ಞಾನದ ಪ್ರಸಾರಗಳಿರುವುದಿಲ್ಲ. ಮಾಧ್ಯಮಗಳು ಸದೃಢ ಸಮಾಜ ನಿರ್ಮಾಣದೆಡೆಗೆ ತಮ್ಮ ಜವಾಬ್ದಾರಿಯನ್ನು ಮರೆತಂತಿವೆ. ಆಡಳಿತಗಾರರಾಗಲಿ ಅಥವಾ ಪೋಷಕರಿಗಾಗಲಿ ಇದರ ಅರಿವೇ ಇಲ್ಲವೇನೋ ಅನ್ನುವ ಮಟ್ಟಕ್ಕೆ ನಾವು ಕುಸಿಯುತ್ತಿದ್ದೇವೆ. ಇದರಲ್ಲಿ ಪೋಷಕರ ಪಾತ್ರ ಬಹಳ ಮಹತ್ವವಾದದ್ದು. ಹಾಗೆಯೇ, ಕೇವಲ ವಾಸ್ತುಶಾಸ್ತ್ರದಿಂದಲೇ ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬ ಸುಖವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. 

ಸ್ವಾತಂತ್ರ ಬಂದು ಇಷ್ಟು ವರ್ಷಗಳು ಕಳೆದರೂ ಎಷ್ಟು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗಳನ್ನು ನಾವು ಗಳಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂಡರೆ ಉತ್ತರ ನಿರಾಸೆ. ಸಂವಿಧಾನದ ‘ಆರ್ಟಿಕಲ್ 51ಎ’ ಅನ್ವಯ ವೈಜ್ಞಾನಿಕ ಸ್ವಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಚೈತನ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವೂ ಆಗಿರುತ್ತದೆ. ಈ ಹಾದಿಯಲ್ಲಿ ನಾವು ಎಷ್ಟು ದೂರ ಸಾಗಿದ್ದೇವೆ ಎಂದರೆ, ಅನೇಕ ಅಂತರ್‌ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ, ವಿಶ್ವವಿದ್ಯಾನಿಲಯಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ಅಷ್ಟೇ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಲಕಾಲಕ್ಕೆ ವಿಜ್ಞಾನದ ನೀತಿ ಗಳನ್ನು ಪರಿಷ್ಕರಿಸಲಾಗುತ್ತಿದೆ. ಹೀಗಿದ್ದರೂ ಸಹ ಕಲಿತದ್ದನ್ನು ಅಳವಡಿಸಿಕೊಳ್ಳಲು ಯಾಕೆ ಸೋಲುತ್ತಿದ್ದೇವೆ ಎಂದು ಅರ್ಥೈಸಿಕೊಳ್ಳಲಾಗುತ್ತಿಲ್ಲ. ಎಲ್ಲೆಲ್ಲಿ ವಿಜ್ಞಾನ ಮನೆ ಮಾಡಬೇಕಿತ್ತೋ ಅಲ್ಲಿ ಅಂಧ, ಮೌಢ್ಯ ಆಚರಣೆಗಳು ಬೇರುಬಿಟ್ಟಿವೆ. ವಿಜ್ಞಾನದಿಂದ ವಿಶ್ವವನ್ನು ನೋಡಬೇಕಾದ ಸಂದರ್ಭದಲ್ಲಿ ಪುರಾತನ ಆಚರಣೆಗಳ ಕನ್ನಡಕ ಹಾಕಲಾಗುತ್ತಿದೆ.

ಅಮೆರಿಕದಲ್ಲಿನ ರೈಸ್ ವಿಶ್ವವಿದ್ಯಾನಿಲಯದ ಪ್ರೊ. ಇಲೈನ್ ಹೊವರ್ಡ್ ಎಕ್ಲೆಂಡ್‌ರ ಸಂಶೋಧನಾ ವರದಿಯ ಪ್ರಕಾರ ಧಾರ್ಮಿಕತೆಯ ಜೊತೆಗೆ ಮೌಢ್ಯತೆ ಆಚರಣೆಯಲ್ಲಿ ನಂಬಿಕೆಯುಳ್ಳ ಶೇ. 94 ಭಾರತೀಯ ವಿಜ್ಞಾನಿಗಳಲ್ಲಿ ಶೇ. 32 ಮಂದಿ ತಿಂಗಳಿಗೊಮ್ಮೆಯಾದರೂ ಇಂತಹ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಶೇ. 65 ಬ್ರಿಟಿಷ್ ವಿಜ್ಞಾನಿಗಳು ತಾವು ಇದರಿಂದ ಹೊರತಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇದು ವಿಜ್ಞಾನವನ್ನು ಪಸರಿಸಬೇಕಾದ ವಿಜ್ಞಾನಿಗಳೇ ಮೌಢ್ಯದಿಂದ, ಅಂಧ ಆಚರಣೆಗಳಿಂದ ಹೊರಬರಲಾಗದೆ ಒದ್ದಾಡುತ್ತಿರುವ ಪರಿಸ್ಥಿತಿಗೆ ಹಿಡಿದ ಕನ್ನಡಿ. ಇತ್ತೀಚೆಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ‘‘ಚಂದ್ರ ಗ್ರಹಣದಿಂದ ನಮ್ಮ ದೇಹದಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಸಾಯುವ ಸಾಧ್ಯತೆಗಳು ಇರುತ್ತವೆ, ಅದರಿಂದ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ’’ ಅಂತ ಹೇಳಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರು ಎಲ್ಲೂ ಸಹ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್‌ನ ಹೆಸರನ್ನಾಗಲಿ ಅಥವಾ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ ವಿವರಣೆ ನೀಡಿಲ್ಲ. ಕೇವಲ ಅಂತೆ ಕಂತೆಗಳನ್ನು ಸಂತೆಯಲ್ಲಿ ಹರಿಬಿಟ್ಟಿದ್ದಾರೆ ಅಷ್ಟೇ. ಹಿಂದೊಮ್ಮೆ ಇಸ್ರೋದ ಅಧ್ಯಕ್ಷರು ಮಂಗಳ ಗ್ರಹದ ಅನ್ವೇಷಣೆಗೆ ಕಳುಹಿಸಿದ್ದ ಉಪಗ್ರಹದ ಪ್ರತಿಕೃತಿಯನ್ನು ತಿರುಪತಿ ದೇವಸ್ಥಾನಕ್ಕೆ ಕೊಂಡೊಯ್ದಿದ್ದರು. ಅದರಲ್ಲೂ ದೇವರನ್ನು ಹುಡುಕುವುದಾದರೆ, ಮಂಗಳ ಗ್ರಹದ ಅನ್ವೇಷಣೆ ಯಾಕೆ ಬೇಕಿತ್ತು. ನಂಬಿಕೆ ಅವರವರ ವೈಯಕ್ತಿಕ ವಿಚಾರ ಆದರೆ, ತಾವು ಅಲಂಕರಿಸಿರುವ ಹುದ್ದೆಯಲ್ಲಿ ಕುಳಿತು ಅದನ್ನು ಹೇಳಿದಾಗ ಸಮಾಜದ ಮೇಲೆ ಅದರ ಪರಿಣಾಮ ಗಾಢವಾಗಿರುತ್ತದೆ ಹಾಗೂ ಸಮಾಜದಲ್ಲಿ ವೈಜ್ಞಾನಿಕತೆ ಮನೋಭಾವಕ್ಕೆ ಜಾಗ ಕಿರಿದಾಗುತ್ತೆ ಎನ್ನುವ ಜವಾಬ್ದಾರಿ ಇರಬೇಕಲ್ಲವೇ.
 ಎಲ್ಲೆಡೆ ಕೇಳಿಬರುವುದು ಒಂದೇ ಧ್ವನಿ. ಅದು ನಮ್ಮ ಪುರಾಣಗಳಲ್ಲಿ ಇದೆ ಅಂತ. ಪುರಾಣ ಪುಣ್ಯಕಥೆಗಳಲ್ಲಿ ಇರುವುದೆಲ್ಲವೂ ನಿಜ ಎನ್ನುವುದು ಮೌಢ್ಯದ ಇನ್ನೊಂದು ಮಗ್ಗಲಷ್ಟೇ. ಸ್ವಾಮಿ ವಿವೇಕಾನಂದರು ಸಹ ‘‘ಧರ್ಮದ ಯಾವುದೇ ಆಚರಣೆ ಮಾಡುವ ಮೊದಲು ಅದನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ. ಅದರಿಂದ ಏನಾದರೂ ತಿರುಳು ಸಿಕ್ಕಲ್ಲಿ ಮಾತ್ರ ಅದನ್ನು ಆಚರಿಸಿ, ಇಲ್ಲದಿದ್ದಲ್ಲಿ ಅದಕ್ಕೆ ಗಂಟು ಮೂಟೆ ಕಟ್ಟಿ’’ ಅಂತ ಹೇಳಿದ್ದರು. ರಾಜಾರಾಮ್ ಮೋಹನ್‌ರಾಯ್ ಸಹಿತ ಬ್ರಿಟಿಷ್ ಸರಕಾರಕ್ಕೆ ವಿಜ್ಞಾನ ಆಧಾರಿತ ಶಿಕ್ಷಣ ಕಾರ್ಯರೂಪಕ್ಕೆ ತನ್ನಿ ಎಂದು ಆಗ್ರಹಿಸಿದ್ದರು. ಹಾಗಂತ ನಮ್ಮ ಶಿಕ್ಷಣದಲ್ಲಿ ವಿಜ್ಞಾನ ವಿಷಯದ ಬೋಧನೆ ಇಲ್ಲ ಎಂದಲ್ಲಾ. ಅದು ಕೇವಲ ಒಂದು ವಿಷಯವಾಗಿ ಇರುವುದಷ್ಟೇ ಹೊರತು, ಶಾಲೆಯ ನಾಲ್ಕು ಗೋಡೆಗಳನ್ನು ಬಿಟ್ಟು ಬಂದು ನಾಗರಿಕನ ದೈನಂದಿನ ಕೆಲಸಗಳಲ್ಲಿ ಹಾಸುಹೊಕ್ಕಾಗದೆ ಪ್ರತಿಯೊಂದನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ವಿಚಾರಣೆಗೆ ಒಳಪಡಿಸುವಲ್ಲಿ ಬಹುತೇಕ ಸೋತಿದೆ. ಈ ಸೋಲೇ ಮೌಢ್ಯತೆಯು ತಂಡವವಾಡಲು ಅನುವು ಮಾಡಿಕೊಟ್ಟಿದೆ. ಕೆಲವರು ಸಮಾಜದಲ್ಲಿ ಮೌಢ್ಯತೆಯನ್ನು ಹರಿಬಿಟ್ಟು ತಾವು ವಿಜ್ಞಾನ ತಂತ್ರಜ್ಞಾನದಿಂದ ಲಾಭ ಮಾಡಿಕೊಳ್ಳುತ್ತಾರೆಯೇ ಹೊರತು ಜನಸಾಮಾನ್ಯರಿಗೆ ಇದರಿಂದ ನಷ್ಟವೇ ಜಾಸ್ತಿ. ‘... ಚಾಲೀಸ್’ ಅನ್ನು ಹತ್ತು ಜನರಿಗೆ ಕಳಿಸುವುದರಿಂದ ನೆಟ್‌ವರ್ಕ್ ಕಂಪೆನಿಗಳಿಗೆ ಲಾಭವೇ ಹೊರತು, ಜನಸಾಮಾನ್ಯರಿಗೆ ಯಾವುದೇ ಲಾಭ ಇಲ್ಲ ಅನ್ನುವ ಪರಿಜ್ಞಾನ ಜನರಲ್ಲಿ ಬೆಳೆಯದೆ ಇದ್ದರೆ ಭಾರತ ಎಂದಿಗೂ ‘ಡಿಜಿಟಲ್ ಇಂಡಿಯಾ’ ಆಗಲಾರದು.

Writer - ಡಾ. ಎ. ಮಹಾದೇವ, ಲಕ್ನೋ

contributor

Editor - ಡಾ. ಎ. ಮಹಾದೇವ, ಲಕ್ನೋ

contributor

Similar News

ಜಗದಗಲ
ಜಗ ದಗಲ