ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ 'ಕಸದ ತೊಟ್ಟಿ' ಅಳವಡಿಕೆ

Update: 2018-08-01 13:08 GMT

► ಕಡಲಾಮೆ ಸಹಿತ ಮೀನು ಸಂತತಿ ನಾಶ ತಡೆಯಲು ಯತ್ನ

ಮಂಗಳೂರು, ಜು.31: ಪ್ರಸಕ್ತ ಸಾಲಿನ ಮೀನುಗಾರಿಕಾ ಋತುವಿನಲ್ಲೇ ಯಾಂತ್ರೀಕೃತ ಮೀನುಗಾರಿಕಾ ದೋಣಿ ಗಳಿಗೆ ‘ಕಸದ ತೊಟ್ಟಿ’ ಅಳವಡಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಅದನ್ನು ಜಾರಿಗೊಳಿಸಲು ಮೀನುಗಾರಿಕಾ ಇಲಾಖೆಯು ಮುಂದಾಗಿದೆ. ಅದರಂತೆ ಆಗಸ್ಟ್ 2ರಂದು ಮೀನುಗಾರಿಕಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಮೀನುಗಾರರ ಮುಖಂಡರ ಸಭೆ ಕರೆಯಲಾಗಿದೆ.

ಯಾಂತ್ರೀಕೃತ ಮೀನುಗಾರಿಕೆಯ ಸಂದರ್ಭ ಮೀನುಗಾರರು ದೋಣಿಯಲ್ಲಿ ತಾವು ಬಳಸಿದ ಆಹಾರ ತ್ಯಾಜ್ಯಗಳಲ್ಲದೆ ಪ್ಲಾಸ್ಟಿಕ್ ಸಹಿತ ಮತ್ತಿತರ ವಸ್ತುಗಳನ್ನು ಸಮುದ್ರಕ್ಕೆ ಎಸೆಯುವುದು ಸಾಮಾನ್ಯವಾಗಿದೆ. ಇದನ್ನು ಕಡಲಾಮೆ ಸಹಿತ ಕೆಲವು ಮೀನುಗಳು ತಿನ್ನುತ್ತಿವೆ. ಇದು ಈ ಮೀನುಗಳ ಸಂತತಿಯ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಸರಕಾರವು ಪ್ರತಿಯೊಂದ ಯಾಂತ್ರೀಕೃತ ಮೀನುಗಾರಿಕಾ ದೋಣಿಯಲ್ಲಿ ‘ಕಸದ ಬುಟ್ಟಿ’ ಅಳವಡಿಸಲು ಆದೇಶಿಸಿದೆ. ಆಹಾರ ತ್ಯಾಜ್ಯ ಹೊರತುಪಡಿಸಿ ಪ್ಲಾಸ್ಟಿಕ್ ಸಾಮಗ್ರಿ ಗಳು, ಬೆಂಕಿ ಪೊಟ್ಟಣ, ಬೀಡಿ-ಸಿಗರೇಟ್‌ನ ಕವರ್ ಇತ್ಯಾದಿಯನ್ನು ಎಸೆಯುವುದು ಕಂಡು ಬರುತ್ತದೆ. ಇದರಿಂದ ಕಡಲು ಮಾಲಿನ್ಯವಲ್ಲದೆ, ಮೀನುಗಳ ಸಂತತಿಯ ಅವನತಿಗೂ ಇದು ಕಾರಣವಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಹೊಸ ಪ್ರಯೋಗದ ಮೂಲಕ ಸಮುದ್ರ ಮಾಲಿನ್ಯ ತಡೆಗಟ್ಟಲು ಚಿಂತನೆ ನಡೆಸಿದೆ.

ಅದರಂತೆ ಎಲ್ಲಾ ಯಾಂತ್ರೀಕೃತ ಮೀನುಗಾರರು ಮೀನುಗಾರಿಕೆಗೆ ಹೋಗುವಾಗ ಕಸದ ಬುಟ್ಟಿಯನ್ನು ಕೊಂಡೊಯ್ಯಬೇಕು. ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತು ವನ್ನು ಕಡಲಿಗೆ ಎಸೆಯದೆ ಅದನ್ನು ಬುಟ್ಟಿಯಲ್ಲಿ ಸಂಗ್ರಹಿಸಬೇಕು. ಮೀನುಗಾರಿಕೆಯಿಂದ ಮರಳಿ ಬರುವಾಗ ಬಂದರು ದಕ್ಕೆ ಪರಿಸರದ ನಿರ್ದಿಷ್ಟ ಸ್ಥಳದಲ್ಲಿ ಈ ಕಸವನ್ನು ಸುರಿಯಬೇಕು. ಬಳಿಕ ಅದನ್ನು ಮಂಗಳೂರು ಮಹಾನಗರ ಪಾಲಿಕೆಯ ವಾಹನಗಳ ಮೂಲಕ ಬೇರೆ ಕಡೆ ಕೊಂಡೊಯ್ದು ಡಂಪಿಂಗ್ ಮಾಡಲಾಗುತ್ತದೆ. ಅದಕ್ಕಾಗಿ ಮನಪಾ ಅಧಿಕಾರಿಗಳೊಂದಿಗೆ ಮೀನುಗಾರಿಕಾ ಇಲಾಖೆಯು ಮಾತುಕತೆಯನ್ನೂ ನಡೆಸಿದೆ.

ಈ ಹೊಸ ಪ್ರಯೋಗಕ್ಕೆ ಎಲ್ಲಾ ಮೀನುಗಾರರು ಏಕಾಏಕಿ ಒಗ್ಗಿಕೊಳ್ಳುವ ಸಾಧ್ಯತೆ ಕಡಿಮೆ. ಆ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಸಭೆ ಕರೆದು ಮಾಹಿತಿ ನೀಡಲಾಗುತ್ತದೆ. ಅಲ್ಲದೆ ದಕ್ಕೆ ಪರಿಸರದಲ್ಲಿ ಕರಪತ್ರ ಹಂಚು ವಿಕೆ, ತರಬೇತಿ ಶಿಬಿರ ಇತ್ಯಾದಿ ಮೂಲಕ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದೆ.

ಮಂಗಳೂರು ಬಂದರು ದಕ್ಕೆಯಲ್ಲಿ ಇದೀಗ 1,280 ಯಾಂತ್ರೀಕೃತ ಮೀನು ಗಾರಿಕಾ ದೋಣಿಗಳು ಕಾರ್ಯಾಚರಿಸುತ್ತಿವೆ. ಇವೆಲ್ಲಾ ದಿನಂಪ್ರತಿ ಟನ್‌ಗಟ್ಟಳೆ ತ್ಯಾಜ್ಯವನ್ನು ಸಮುದ್ರಕ್ಕೆ ಚೆಲ್ಲುತ್ತದೆ. ಹಸಿ ಅಲ್ಲದ ಪ್ಲಾಸ್ಟಿಕ್ ಸಹಿತ ಇತರ ಮಾದರಿಯ ತ್ಯಾಜ್ಯವನ್ನು ಸಮುದ್ರಕ್ಕೆ ಚೆಲ್ಲುವುದನ್ನು ತಡೆಯುವ ಹೊಸ ಸವಾಲು ಇಲಾಖೆಯ ಮೇಲೆ ಬಿದ್ದಿರುವ ಕಾರಣ ಅಧಿಕಾರಿಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮೀನುಗಾರರ ಮನಪರಿವರ್ತನೆಯ ಮೂಲಕ ಹೊಸ ಪ್ರಯೋಗದ ಯಶಸ್ಸಿಗೆ ಪಣತೊಟ್ಟಿವೆ.

ಸಾಮಾನ್ಯವಾಗಿ ಕಡಲಾಮೆಯು ‘ಜಲ್ಲಿ ಫಿಶ್’ ಎಂದು ಭಾವಿಸಿ ಪ್ಲಾಸ್ಟಿಕ್ ತೊಟ್ಟೆಗಳನ್ನು ಸೇವಿಸುತ್ತದೆ. ಇನ್ನಿತರ ಕೆಲವು ಮೀನುಗಳು ಕೂಡಾ ಇದನ್ನು ಆಹಾರ ಎಂದೇ ಭಾವಿಸಿ ತಿನ್ನುತ್ತದೆ. ಇದರಿಂದ ಭವಿಷ್ಯದಲ್ಲಿ ಕಡಲಾಮೆಯಲ್ಲದೆ ಮತ್ಸಸಂತತಿಯ ನಾಶ ತಪ್ಪಿದ್ದಲ್ಲ. ಆ ಹಿನ್ನೆಲೆಯಲ್ಲಿ ಈ ಪ್ರಯೋಗವನ್ನು ಪರಿಣಾಮಕಾರಿಯಾಗಿ ನಡೆಸಲು ಇಲಾಖೆಯು ಮೀನುಗಾರಿಕಾ ಸಂಘಟನೆಗಳ ಪ್ರಮುಖರ ಸಹಾಯಹಸ್ತ ಬಯಸಿದೆ.

► ಹೇಗಿರಬೇಕು ಮೀನಿನ ಬಲೆ?

ಮೀನಿನ ಬಲೆಯು ಚೌಕಾಕಾರ ಮಾದರಿಯಲ್ಲಿದ್ದು ಅದರ ರಂಧ್ರ 35 ಮಿ.ಮೀ.ಗಿಂತ ಹೆಚ್ಚಿರಬೇಕು. ಅದಕ್ಕಿಂತ ಕಡಿಮೆ ಇದ್ದರೆ ಮೀನು ಮರಿಗಳು ಬಲೆಯಲ್ಲಿ ಸಿಲುಕಿ ಸಾವಿಗೀಡಾಗಲಿದೆ. ಇದರಿಂದ ಮೀನಿನ ಸಂತತಿ ವೃದ್ಧಿಯ ಮೇಲೂ ಪರಿಣಾಮ ಬೀಳಲಿದೆ. ಹಾಗಾಗಿ 35 ಮಿ.ಮೀ.ಗಿಂತ ಕಡಿಮೆ ಗಾತ್ರದ ಬಲೆಗಳನ್ನು ಅಳವಡಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಕೂಡ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಸರಕಾರಿ ಸೌಲಭ್ಯಗಳು ತಡೆ ಹಿಡಿಯಲಾಗುತ್ತದೆ. ಬಳಿಕವೂ ಅಂಥದ್ದೇ ಬಲೆಯನ್ನು ಬಳಸಿದರೆ ಪರವಾನಿಗೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

 ► ಪರಿಹಾರ ನಿಧಿ

ಸಹಕಾರಿ ಸಂಘದಲ್ಲಿ ಸದಸ್ಯತ್ವ ಪಡೆದ ಮೀನುಗಾರರಿಗೆ 2 ಲಕ್ಷ ರೂ. ಮೊತ್ತದ ಜೀವವಿಮೆ ಲಭ್ಯವಿದೆ. ಅದಲ್ಲದೆ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ ಮೀನುಗಾರಿಕೆ ಸಂದರ್ಭ ಸಾವಿಗೀ ಡಾದರೆ ಮೃತ ಮೀನುಗಾರರ ಕುಟುಂಬಸ್ಥರಿಗೆ 6 ಲಕ್ಷ ರೂ. ಪರಿಹಾರ ಸಿಗಲಿದೆ. ಅಂಗವೈಕಲ್ಯವಾದರೆ 1ರಿಂದ 1.5 ಲಕ್ಷ ರೂ. ಪರಿಹಾರ ಸಿಗಲಿದೆ. ದೋಣಿ ಅನಾಹುತವಾದರೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ಪರಿಹಾರ ಸಿಗಲಿದೆ. ಮತ್ಸಾಶ್ರಯ ಯೋಜನೆಯಡಿ 1.20 ಲಕ್ಷ ರೂ.ನಿಂದ 2 ಲಕ್ಷ ರೂ.ವರೆಗೆ ಸಹಾಯ ಧನ ಸಿಗಲಿದೆ. ಉಳಿತಾಯ ಪರಿಹಾರ ಯೋಜನೆಯಡಿ ಉಳಿತಾಯದ 2 ಪಟ್ಟು ಅಂದರೆ ಕನಿಷ್ಠ 4 ಸಾವಿರ ರೂ.ವರೆಗೆ ಹಣವನ್ನು ಜಮೆ ಮಾಡುತ್ತದೆ.

ಸಮುದ್ರಕ್ಕೆ ಇಳಿಯುವ ಪ್ರತಿಯೊಂದು ದೋಣಿಯಲ್ಲೂ ಕಸದ ಬುಟ್ಟಿ ಅಳವಡಿಸುವ ಅಗತ್ಯವಿದೆ. ಯಾಂತ್ರೀಕೃತ ದೋಣಿಗಳಲ್ಲಂತೂ ಇದರ ಅಳವಡಿಕೆ ತುರ್ತಾಗಿ ಆಗಬೇಕಿದೆ. ಮೀನುಗಾರರು ಹಳೆಯ ಬಟ್ಟೆಬರೆ, ಪ್ಲಾಸ್ಟಿಕ್, ಮೀನಿನ ಹರಕುಮುರುಕು ಬಲೆ ಇತ್ಯಾದಿಯನ್ನು ಸಮುದ್ರಕ್ಕೆ ಎಸೆಯುವುದು ಸಾಮಾನ್ಯವಾಗಿದೆ. ಇದರ ಪರಿಣಾಮ ಏನು ಎಂಬುದು ನಮಗಿಂತ ಮೀನುಗಾರರಿಗೆ ಚೆನ್ನಾಗಿ ಗೊತ್ತು. ಆದರೂ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಹೊಸ ಪ್ರಯೋಗ ಅಳವಡಿಸಲು ಆದೇಶಿಸಿದೆ. ಈ ವರ್ಷ ನಾವು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತದೆ. ಮುಂದಿನ ವರ್ಷದಿಂದ ಇದನ್ನು ಕಡ್ಡಾಯವಾಗಿ ಜಾರಿಗೊಳಿಸಲು ಮುಂದಾಗುತ್ತೇವೆ. ಸ್ವತಃ ಮೀನುಗಾರಿಕಾ ದೋಣಿಯವರೇ ಇದ್ನು ಖರೀದಿಸಿ ಅಳವಡಿಸಬೇಕು.

ಮಹೇಶ್ ಕುಮಾರ್

ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರು

ಇದೊಂದು ಒಳ್ಳೆಯ ಯೋಜನೆ. ಕಡಲು ನಾಶ ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರದ್ದಾಗಿದೆ. ಪ್ರತಿಯೊಂದ ಯಾಂತ್ರೀಕೃತ ದೋಣಿಯು ಸುಮಾರು 50ರಿಂದ 100 ಕೆ.ಜಿ.ಯಷ್ಟು ತ್ಯಾಜ್ಯವನ್ನು ಹೊತ್ತು ತರುವುದಂತೂ ಸಾಮಾನ್ಯ. ಬಂದರು ದಕ್ಕೆಯ 1200ಕ್ಕೂ ಅಧಿಕ ಯಾಂತ್ರೀಕೃತ ದೋಣಿಯು ಹೊರಸೂಸುವ ಟನ್‌ಗಟ್ಟಳೆ ತ್ಯಾಜ್ಯವನ್ನು ಎಲ್ಲಿ ಡಂಪಿಂಗ್ ಮಾಡುವುದು? ಡಂಪಿಂಗ್ ಮಾಡಿದ್ದನ್ನು ಯಾರು, ಎಲ್ಲಿಗೆ ಸಾಗಿಸುವುದು ಎಂಬುದರ ಬಗ್ಗೆಯೂ ಯೋಚಿಸಬೇಕಿದೆ. ಮೀನುಗಾರಿಕಾ ಇಲಾಖೆಯು ಇದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದರೆ ಮೀನುಗಾರರು ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧರಾಗಿದ್ದಾರೆ.

ನಿತಿನ್ ಕುಮಾರ್

ಮಾಜಿ ಅಧ್ಯಕ್ಷರು, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ

Writer - - ಹಂಝ ಮಲಾರ್

contributor

Editor - - ಹಂಝ ಮಲಾರ್

contributor

Similar News