ಕಥುವಾ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ: ಸಿಟ್ ವಿರುದ್ಧ ಮೂವರು ಸಾಕ್ಷಿಗಳು ನ್ಯಾಯಾಲಯಕ್ಕೆ
ಶ್ರೀನಗರ, ಆ. 1: ಆರೋಪಿಗಳ ವಿರುದ್ಧ ನಕಲಿ ಸಾಕ್ಷ್ಯಗಳನ್ನು ರೂಪಿಸುವಂತೆ ದೌರ್ಜನ್ಯ, ಕಿರುಕುಳ ಎಸಗಲಾಗಿದೆ ಎಂದು ಆರೋಪಿಸಿ ಕಥುವಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಸಾಕ್ಷಿಗಳು ಕ್ರೈಮ್ ಬ್ರಾಂಚ್‌ನ ಸಿಟ್ ವಿರುದ್ಧ ಜಮ್ಮು ಹಾಗೂ ಕಾಶ್ಮೀರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಆರೋಪಿ ವಿಶಾಲ್ ಜಂಗೋತ್ರ ವಿರುದ್ಧ ನಕಲಿ ಸಾಕ್ಷ್ಯ ರೂಪಿಸುವಂತೆ ದೌರ್ಜನ್ಯ ಹಾಗೂ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಟ್‌ನ ಎಲ್ಲ ಸದಸ್ಯರು ಹಾಗೂ ಗೃಹ ಕಾರ್ಯದರ್ಶಿ ಅವರಿಂದ ಉಚ್ಚ ನ್ಯಾಯಾಲಯ ಪ್ರತಿಕ್ರಿಯೆ ಕೋರಿದೆ. ಪ್ರತಿಕ್ರಿಯೆ ಸಲ್ಲಿಸಲು ಉಚ್ಚ ನ್ಯಾಯಾಲಯ ಮೂರು ವಾರಗಳ ಕಾಲಾವಕಾಶ ನೀಡಿದೆ ಎಂದು ನ್ಯಾಯವಾದಿ ಅಂಕುರ್ ಶರ್ಮಾ ಹೇಳಿದ್ದಾರೆ. ಸಾಕ್ಷಿಗಳಾದ ಸಾಹಿಲ್ ಶರ್ಮಾ, ಸಚಿನ್ ಶರ್ಮಾ ಹಾಗೂ ನೀರಜ್ ಶರ್ಮಾ ಅವರು ಪ್ರಕರಣದ ಪ್ರಮುಖ ಆರೋಪಿ ಗಳಲ್ಲಿ ಓರ್ವನ ಗೆಳೆಯರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್‌ನ ಕಿರುಕುಳದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಸಾಕ್ಷಿಗಳು ಮನವಿ ಮಾಡಿದ್ದಾರೆ. ತಮ್ಮ ಹೇಳಿಕೆಗಳನ್ನು ದಾಖಲು ಮಾಡುವಾಗ ರಾಜ್ಯ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.