ಎಸ್ಸಿ/ಎಸ್ಟಿ ಕಾಯ್ದೆಯ ಮೂಲ ನಿಬಂಧನೆಗಳನ್ನು ಮರು ಜಾರಿಗೊಳಿಸುವ ಮಸೂದೆಗೆ ಸಂಪುಟದ ಸಮ್ಮತಿ

Update: 2018-08-01 18:21 GMT

ಹೊಸದಿಲ್ಲಿ, ಆ.1: ದಲಿತ ಗುಂಪುಗಳು ಆ.9ರಂದು ಕರೆ ನೀಡಿರುವ ‘ಭಾರತ ಬಂದ್’ಗೆ ಮುನ್ನ ಮಹತ್ವದ ಬೆಳವಣಿಗೆಯೊಂದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಲ್ಲಿನ ಮೂಲ ನಿಬಂಧನೆಗಳನ್ನು ಮರುಸ್ಥಾಪಿಸಲು ಅವಕಾಶ ನೀಡುವ ಮಸೂದೆಗೆ ಕೇಂದ್ರ ಸಂಪುಟವು ಬುಧವಾರ ಹಸಿರು ನಿಶಾನೆ ತೋರಿಸಿದೆ. ತನ್ಮೂಲಕ ದಲಿತ ಗುಂಪುಗಳ ಮುಖ್ಯ ಬೇಡಿಕೆಯನ್ನು ಒಪ್ಪಿಕೊಂಡಿದೆ.

ಮಸೂದೆಯನ್ನು ಸಂಸತ್ತಿನ ಅಂಗೀಕಾರಕ್ಕಾಗಿ ಮಂಡಿಸಲಾಗುವುದು ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯವು ಕಳೆದ ಮಾರ್ಚ್‌ನಲ್ಲಿ ತನ್ನ ತೀರ್ಪೊಂದರಲ್ಲಿ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಕಾಯ್ದೆಯಲ್ಲಿನ ಕೆಲವು ನಿಬಂಧನೆಗಳನ್ನು ರದ್ದುಗೊಳಿಸಿತ್ತು.ಇದು ಕಾಯ್ದೆಯನ್ನು ದುರ್ಬಲಗೊಳಿಸಿದೆ ಮತ್ತು ಅದಕ್ಕೆ ಹಲ್ಲಿಲ್ಲದಂತೆ ಮಾಡಿದೆ ಎಂದು ದಲಿತ ನಾಯಕರು ಮತ್ತು ಸಂಸ್ಥೆಗಳು ಆರೋಪಿಸಿದ್ದವು.

ಬಿಜೆಪಿಯ ಮಿತ್ರಪಕ್ಷ ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಬುಡಮೇಲುಗೊಳಿಸಲು ನೂತನ ಶಾಸನವನ್ನು ತರುವಂತೆ ದಲಿತರ ಕರೆಯ ಮುಂಚೂಣಿಯಲ್ಲಿದ್ದರು. ದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಹಲವಾರು ಆಡಳಿತ ಪಕ್ಷ ಸಂಸದರೂ ಈ ಬೇಡಿಕೆಯನ್ನು ಬೆಂಬಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News