​ಸ್ವೀಡನ್ ರಾಜನ ರತ್ನಖಚಿತ ಅಮೂಲ್ಯ ಕಿರೀಟಗಳು ಕಳವು

Update: 2018-08-02 03:52 GMT

ಸ್ಟಾಕ್‌ಹೋಂ, ಆ.2: ನಗರದ ಮಧ್ಯಕಾಲೀನ ಚರ್ಚ್‌ನಲ್ಲಿ ಪ್ರದರ್ಶನಕ್ಕಿದ್ದ ಸ್ವೀಡನ್ ರಾಜ ಮತ್ತು ರಾಣಿಯ ರತ್ನಖಚಿತ ಅಮೂಲ್ಯ ಚಿನ್ನದ ಕಿರೀಟಗಳನ್ನು ಕಳ್ಳರು ಅಪಹರಿಸಿದ್ದಾರೆ. 1600ನೇ ಇಸ್ವಿಗಿಂತಲೂ ಪ್ರಾಚೀನವಾದ ಈ ಅಮೂಲ್ಯ ಕಲಾತ್ಮಕ ಕಿರೀಟಗಳನ್ನು ಕದ್ದು, ಕಳ್ಳರು ಸ್ಪೀಡ್‌ಬೋಡ್‌ನಲ್ಲಿ ಪರಾರಿಯಾಗಿದ್ದಾರೆ.

ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ಚರ್ಚ್ ಪಕ್ಕದ ಸರೋವರದ ಮೂಲಕ ಪರಾರಿಯಾಗಿರುವ ಕಳ್ಳರು ಬಹುಶಃ ಬಳಿಕ ವಿಮಾನದಲ್ಲಿ ತೆರಳಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಕಿಂಗ್ ಕಾರ್ಲ್ 9 ಮತ್ತು ರಾಣಿ ಕ್ರಿಸ್ಟಿನಾ ಅವರ ಕಿರೀಟಗಳನ್ನು ಕದಿಯಲಾಗಿದೆ. ರಾಜನ ಕಿರೀಟ ಚಿನ್ನದ್ದಾಗಿದ್ದು ಹಲವು ಅಮೂಲ್ಯ ಹರಳುಗಳು ಮತ್ತು ಮುತ್ತುಗಳನ್ನು ಜೋಡಿಸಲಾಗಿತ್ತು. ಅಂತೆಯೇ ರಾಣಿಯ ಕಿರೀಟ ಕೂಡಾ ಚಿನ್ನದಿಂದ ಮಾಡಿದ್ದು, ಅಮೂಲ್ಯ ಹರಳುಗಳು ಮತ್ತು ಮುತ್ತುಗಳನ್ನು ಅಳವಡಿಸಲಾಗಿತ್ತು.

ಕೆಥೆಡ್ರಲ್‌ನಲ್ಲಿ ಈ ಅಮೂಲ್ಯ ವಸ್ತುಗಳ ಪ್ರದರ್ಶನ ನಡೆಯುತ್ತಿದ್ದ ವೇಳೆ ಈ ಕಳ್ಳತನ ನಡೆದಿದೆ. ವಸ್ತು ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸುತ್ತಿದ್ದಾಗಲೇ, ಕಳ್ಳರು ಭದ್ರತಾ ಗಾಜನ್ನು ಒಡೆದು ಒಳಕ್ಕೆ ನುಗ್ಗಿ ಈ ಕಲಾತ್ಮಕ ಕಿರೀಟವನ್ನು ಕದ್ದೊಯ್ದರು. ಆದರೆ ಈ ದರೋಡೆ ವೇಳೆ ಯಾರಿಗೂ ಗಾಯಗಳಾಗಿಲ್ಲ. ಸ್ಪೀಡ್‌ಬೋಟ್‌ನಲ್ಲಿ ತೆರಳಿದ ಬಳಿಕ ಕಳ್ಳರು ಜೆಟ್ ವಿಮಾನಗಳಲ್ಲಿ ತೆರಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕಿರೀಟಗಳಿಗೆ ಭಾರಿ ಐತಿಹಾಸಿಕ ಮೌಲ್ಯವಿದ್ದು, ಇದನ್ನು ಮಾರಾಟ ಮಾಡುವುದು ಕಷ್ಟಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News