ಉಚಿತ ಬಿರಿಯಾನಿ ನೀಡದ ಹೋಟೆಲ್ ಸಿಬ್ಬಂದಿಯನ್ನು ಥಳಿಸಿದ ಡಿಎಂಕೆ ಸದಸ್ಯರು !

Update: 2018-08-02 06:26 GMT

ಚೆನ್ನೈ, ಆ.2: ರೆಸ್ಟೋರೆಂಟ್ ಒಂದರಲ್ಲಿ ತಮಗೆ ಉಚಿತ ಬಿರಿಯಾನಿ ನೀಡಲು ನಿರಾಕರಿಸಿದ ಅಲ್ಲಿನ ಸಿಬ್ಬಂದಿಗೆ ಥಳಿಸಿದ ಇಬ್ಬರು ಡಿಎಂಕೆ ಸದಸ್ಯರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಅನ್ಬಝಗನ್ ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ್ದಾರೆ.

ಹಲ್ಲೆ ಘಟನೆಯ ವೀಡಿಯೋ ವೈರಲ್ ಆದ ನಂತರ ಪಕ್ಷ ಈ ಶಿಸ್ತು ಕ್ರಮವನ್ನು ಯುವ ಘಟಕದ ಕಾರ್ಯದರ್ಶಿ ಯುವರಾಜ್ ಹಾಗೂ ದಿವಾಕರ್ ಎಂಬವರ ವಿರುದ್ಧ ಕೈಗೊಂಡಿದೆ.

ಘಟನೆ ಜುಲೈ 28ರಂದು ನಡೆದಿದೆಯೆನ್ನಲಾಗಿದ್ದು ಆ ದಿನ ಯುವರಾಜ್ ಮತ್ತಿತರರು ವಿರುಗಬಕ್ಕಂ ಎಂಬಲ್ಲಿನ ಸೇಲಂ ಆರ್‌ಆರ್ ಅನ್ಬು ಬಿರಿಯಾನಿ ರೆಸ್ಟೋರೆಂಟ್ ಗೆ ತೆರಳಿದ್ದರು. ಆದರೆ ಅದಾಗಲೇ ರೆಸ್ಟೋರೆಂಟ್  ಮುಚ್ಚಿದೆ ಎಂದು ತಿಳಿಯುತ್ತಲೇ ಅವರು ಅಲ್ಲಿನ ಸಿಬ್ಬಂದಿ ಜತೆ ಜಗಳ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಯುವರಾಜ್ ಹೋಟೆಲ್ ನ ಕ್ಯಾಶಿಯರ್ ಜತೆ ಜಗಳವಾಡುತ್ತಿರುವುದು ಕಾಣಿಸುತ್ತದೆ. ಆತ ಸ್ವಲ್ಪ ಹೊತ್ತಿನಲ್ಲಿಯೇ ಕ್ಯಾಶಿಯರ್ ಕೆನ್ನೆಗೆ ಬಾರಿಸಿದ್ದೇ ಅಲ್ಲದೆ ಅದನ್ನು ತಡೆಯಲು ಬಂದು ವೈಟರ್ ಮೇಲೂ ಹಲ್ಲೆಗೈದಿದ್ದ. ಇಬ್ಬರು ಹೋಟೆಲ್ ಸಿಬ್ಬಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಈ ರೀತಿಯ ಅಶಿಸ್ತನ್ನು ಪಕ್ಷ ಸಹಿಸುವುದಿಲ್ಲ, ಪಕ್ಷಕ್ಕೆ ಕೆಟ್ಟ ಹೆಸರ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News