ಕಳ್ಳತನದ ಖುಷಿಯಲ್ಲಿ ಕುಣಿದು ಕುಪ್ಪಳಿಸಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಚೋರರ ತಂಡ ಪೊಲೀಸ್ ಬಲೆಗೆ

Update: 2018-08-02 08:43 GMT

ಹೊಸದಿಲ್ಲಿ, ಆ.2: ಉತ್ತರ ದಿಲ್ಲಿಯ ಲಹೋರಿ ಗೇಟ್ ಪ್ರದೇಶದಲ್ಲಿ ಇತ್ತೀಚೆಗೆ ಕಳ್ಳತನ ನಡೆಸುವಾಗ ಕುಣಿದು ಕುಪ್ಪಳಿಸಿದ್ದ ಆರು ಮಂದಿ ಚೋರರ ತಂಡವನ್ನು ಪೊಲೀಸರ ಬಂಧಿಸಿದ್ದಾರೆ. ಕಳ್ಳರು ಕುಣಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದರಿಂದ ಈ ವಿಚಾರ ಭಾರೀ ಸುದ್ದಿಯಾಗಿತ್ತು.

ತಂಡದ ಇತರ ಸದಸ್ಯರು ಅಲ್ಲಿನ ಹಲವಾರು ಅಂಗಡಿಗಳಿಗೆ ನುಗ್ಗಿ ನಗದು, ಬೆಲೆಬಾಳುವ ವಸ್ತುಗಳನ್ನು ದೋಚಲು ಸಫಲವಾಗುತ್ತಿದ್ದಂತೆಯೇ ಅವರು ವಿಜಯದ ಸಂಕೇತವಾಗಿ ಕುಣಿದಿದ್ದು, ರಸ್ತೆ ಬದಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು.

ಆರೋಪಿಗಳನ್ನು ಆಲಂ, ಆನಂದ್ ಸಾಹಿಬ್ ಅನ್ಸಾರಿ, ಮುಹಮ್ಮದ್ ಶಫೀಕ್, ಸಲ್ಮಾನ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಅವರ ಬಳಿಯಿದ್ದ ಒಂದು ಆಟೋರಿಕ್ಷಾ, ಎರಡು ಲ್ಯಾಪ್ ಟಾಪ್, ಒಂದು ಎಲ್‌ಸಿಡಿ ಮತ್ತಿತರ ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಬೀಗ ಮುರಿಯುವ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 10ರಂದು ಕಳ್ಳತನ ನಡೆದಿದ್ದು ಸಿಸಿಟಿವಿ ದಾಖಲೆ ಪರಿಶೀಲಿಸಿದಾಗ ಕಳ್ಳರು ಬಂದಿದ್ದ ಆಟೋರಿಕ್ಷಾದ ಹಿಂಬದಿಯಲ್ಲಿ ತ್ರಿವರ್ಣ ಡಿಸೈನ್ ಇದ್ದುದನ್ನು ಪೊಲೀಸರು ಗಮನಿಸಿದ್ದರು. ಇದರ ಆಧಾರದಲ್ಲಿ ಆರ್‌ಟಿಒ ಸಹಾಯದಿಂದ ಸುಮಾರು 3,000 ಆಟೋರಿಕ್ಷಾಗಳನ್ನು ಪರಿಶೀಲಿಸಿ ಕೊನೆಗೆ ಎರಡು ಆಟೋ ರಿಕ್ಷಾಗಳ ಮೇಲೆ ಸಂಶಯವಿದ್ದಾಗ ಅವುಗಳ ಮೇಲೆ ಪೊಲೀಸರು ನಿಗಾ ಇರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಆಲಂ ವಿರುದ್ಧ 43 ಕಳ್ಳತನ ಪ್ರಕರಣಗಳಿದ್ದರೆ, ಆನಂದ್ ವಿರುದ್ಧ ಆರು ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News