ಕೊಲ್ಕತ್ತಾ: ಮುಸ್ಲಿಮರೆಂಬ ಕಾರಣಕ್ಕೆ 4 ಯುವ ವೈದ್ಯರಿಗೆ ಮನೆ ತೆರವುಗೊಳಿಸಲು ಒತ್ತಡ

Update: 2018-08-02 08:43 GMT

ಕೊಲ್ಕತ್ತಾ, ಆ.2: ಮುಸ್ಲಿಮರೆಂಬ ಒಂದೇ ಕಾರಣಕ್ಕೆ ನಾಲ್ವರು ವೈದ್ಯರಿಗೆ ಅವರು ದಕ್ಷಿಣ ಕೊಲ್ಕತ್ತಾದ ಕುದ್ಘಟ್ ಪ್ರದೇಶದಲ್ಲಿ ವಾಸಿಸುವ ಫ್ಲ್ಯಾಟ್ ತೆರವುಗೊಳಿಸುವಂತೆ ಅವರ ನೆರೆಮನೆಯವರು ಒತ್ತಾಯ ಪಡಿಸಿದ ಘಟನೆ ನಡೆದಿದೆ.

ವೈದ್ಯಕೀಯ ಕೋರ್ಸ್ ಮುಗಿಸಿ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಫ್ತಾಬ್ ಆಲಂ, ಮೊಜ್ತಬ ಹಸನ್, ನಾಸಿರ್ ಶೇಖ್ ಹಾಗೂ ಸಾವ್ಕತ್ ಶೇಖ್ ತಮಗೆ ಸಹಾಯ ಮಾಡುವಂತೆ ಕೋರಿ ಸ್ವಯಂಸೇವಾ ಸಂಘಟನೆ ಸಂಘಟಿ ಅಭಿಜನ್ ಗೆ ಮೊರೆ ಹೋಗಿದ್ದಾರೆ. ಸಂಘಟನೆಯು ಈ ನಾಲ್ವರು ವೈದ್ಯರ ನೆರೆಹೊರೆಯವರ ಜತೆ ಮಾತನಾಡಿ ಹಾಗೂ ಸ್ಥಳೀಯ ಮುನಿಸಿಪಲ್ ಕೌನ್ಸಿಲರ್ ಬಳಿಯೂ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದೆ.

ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಳೆ ವಿದ್ಯಾರ್ಥಿಗಳಾಗಿರುವ ಇವರು ಈ ಫ್ಲ್ಯಾಟ್ ಅನ್ನು ಎರಡು ತಿಂಗಳ ಹಿಂದೆ ಬಾಡಿಗೆಗೆ ಪಡೆದಿದ್ದರು. ‘‘ನಮ್ಮ ಮನೆ ಮಾಲಕನಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಕೆಲ ನೆರೆಹೊರೆಯವರು ಸುಮ್ಮನೆ ಇಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಸೋಮವಾರ ನಮ್ಮನ್ನು ಭೇಟಿಯಾಗಲು ಗೆಳೆಯರೊಬ್ಬರು ಬಂದಾಗ ಅವರನ್ನು ನೆರೆಹೊರೆಯವರು ಪ್ರಶ್ನಿಸಿ ಅವರ ಗುರುತು ಚೀಟಿ ತೋರಿಸುವಂತೆ ಹೇಳಿದ್ದರು. ಅವರಲ್ಲೊಬ್ಬ ಮಧ್ಯ ವಯಸ್ಕ ವ್ಯಕ್ತಿ ನಾವು ಮುಸ್ಲಿಮರಾಗಿರುವುದರಿಂದ ಬೇರೆ ಕಡೆ ಮನೆ ಹುಡುಕಬೇಕೆಂದರು’’ ಎಂದು ಹೌರಾಹ್ ಜಿಲ್ಲೆಯವರಾದ ಆಲಂ ಹೇಳಿದ್ದಾರೆ.

‘‘ಹಲವಾರು ತಿಂಗಳುಗಳ ಕಾಲ ಮನೆಗಾಗಿ ಅಲೆದಾಡಿದ ನಂತರ ಈ ಮನೆ ದೊರಕಿತ್ತು. ಹಲವಾರು ಮಂದಿ ನಮ್ಮ ಧರ್ಮದ ಕಾರಣಕ್ಕಾಗಿ ನಮಗೆ ಮನೆ ನೀಡಲು ನಿರಾಕರಿಸಿದ್ದರು’’ ಎಂದು ಅವರು ಹೇಳುತ್ತಾರೆ.

ಸದ್ಯ ಅವರು ತಮ್ಮ ಈ ಫ್ಲ್ಯಾಟ್ ತೊರೆದಿಲ್ಲವಾದರೂ ಬೇರೆ ಕಡೆ ಸ್ಥಳಾಂತರಗೊಳ್ಳುವ ಬಗ್ಗೆ ಈಗಾಗಲೇ ಹೆಚ್ಚು ಕಡಿಮೆ ನಿರ್ಧರಿಸಿದ್ದಾರೆ. ಅವರ ಮನೆ ಮಾಕನಿಗೆ ಅವರು ಬಾಡಿಗೆಗಿರುವುದಕ್ಕೆ ಅಭ್ಯಂತರವಿಲ್ಲದೇ ಇದ್ದರೂ ನೆರೆಹೊರೆಯವರ ಒತ್ತಡ ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News