ಝಿಂಬಾಬ್ವೆ ನೂತನ ಅಧ್ಯಕ್ಷರಾಗಿ ಎಮ್ಮರ್‌ಸನ್ ಆಯ್ಕೆ

Update: 2018-08-03 06:48 GMT

 ಹರಾರೆ, ಆ.3: ಸತತ 37 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಅಧ್ಯಕ್ಷ ರಾಬರ್ಟ್ ಮುಗಾಬೆ ಪದಚ್ಯುತಗೊಳಿಸಿದ ನಂತರ ಝಿಂಬಾಬ್ವೆ ದೇಶದಲ್ಲಿ ಸೋಮವಾರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿರುವ ಚುನಾವಣೆಯಲ್ಲಿ ಝಿಂಬಾಬ್ವೆ ಆಫ್ರಿಕನ್ ನ್ಯಾಶನಲ್ ಯೂನಿಯನ್-ಪೆಟ್ರಿಯಾಟಿಕ್ ಫ್ರಂಟ್ (ಜೆಎಎನ್‌ಯು-ಪಿಎಫ್)ಪಕ್ಷದ ಅಭ್ಯರ್ಥಿ ಎಮ್ಮರ್‌ಸನ್ ನನ್‌ಗಾಗುವಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಎಮ್ಮರ್‌ಸನ್ 50.8 ಶೇ. ಮತ ಪಡೆದರೆ, ಪ್ರಮುಖ ವಿರೋಧ ಪಕ್ಷದ ಅಭ್ಯರ್ಥಿ ನೆಲ್ಸನ್ ಚಾಮಿಸ 44.3 ಶೇ.ಮತ ಪಡೆದಿದ್ದಾರೆ. ಚುನಾವಣೆ ಫಲಿತಾಂಶದ ಬಗ್ಗೆ ಚಾಮಿಸ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರುವ ಅಥವಾ ಬೀದಿಗಿಳಿಯುವುದು ನಿಶ್ಚಿತವಾಗಿದೆ.

ಚುನಾವಣೆ ಆಯೋಗ ಫಲಿತಾಂಶ ಪ್ರಕಟಗೊಳಿಸುವ ಮೊದಲು ಸುದ್ದಿಗೋಷ್ಠಿ ನಡೆಸಿದ ಚಾಮಿಸರ ವಕ್ತಾರ ಮೊರ್ಗನ್ ಕಮಿಚಿ, ‘‘ನಮ್ಮ ಪಕ್ಷ ಫಲಿತಾಂಶವನ್ನು ಸಂಪೂರ್ಣವಾಗಿ ತಿರಸ್ಕರಿಸಲಿದೆ. ಎಮ್ಮರ್‌ಸನ್ ಅಧ್ಯಕ್ಷರನ್ನಾಗಿ ಸಮರ್ಥಿಸಿ ಚುನಾವಣೆ ಕಮಿಶನ್ ನೀಡುವ ಪೇಪರ್‌ಗಳಿಗೆ ಸಹಿ ಹಾಕುವುದಿಲ್ಲ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ’’ ಎಂದು ಆರೋಪಿಸಿದ್ದಾರೆ.

1980ರಲ್ಲಿ ಝಿಂಬಾಬ್ವೆ ಸ್ವಾತಂತ್ರ ಪಡೆದಾಗಿನಿಂದ ಇಲ್ಲಿಯವರೆಗೆ ದೇಶವನ್ನು ಮುನ್ನಡೆಸಿದ್ದ ರಾಬರ್ಟ್ ಮುಗಾಬೆಯವರನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಪದಚ್ಯುತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News