ಮನೆ ಬಿಡಬೇಕೆಂಬ ಒತ್ತಾಯ ಎದುರಿಸಿದ್ದ ಯುವ ಮುಸ್ಲಿಂ ವೈದ್ಯರ ಸಹಾಯಕ್ಕೆ ಧಾವಿಸಿದ ದುರ್ಗಾ ಪೂಜಾ ಸಮಿತಿ, ಎನ್‍ಜಿಒ

Update: 2018-08-03 09:39 GMT
ಚಿತ್ರ ಕೃಪೆ : enewsroom

ಕೊಲ್ಕತ್ತಾ,ಆ.3 : ಮುಸ್ಲಿಮರೆಂಬ ಒಂದೇ ಕಾರಣಕ್ಕೆ ನಾಲ್ಕು ಮಂದಿ  ವೈದ್ಯರಿಗೆ ಅವರು ದಕ್ಷಿಣ ಕೊಲ್ಕತ್ತಾದ ಕುದ್ಘಟ್ ಪ್ರದೇಶದಲ್ಲಿ ವಾಸಿಸುವ ಫ್ಲ್ಯಾಟ್ ತೆರವುಗೊಳಿಸುವಂತೆ  ಅವರ ನೆರೆಮನೆಯವರು ಒತ್ತಾಯ ಪಡಿಸಿದ ಘಟನೆ ಇದೀಗ ಸುಖಕರ ಅಂತ್ಯ ಕಂಡಿದೆ. ಈ ಮುಸ್ಲಿಂ ಯುವ ವೈದ್ಯರ ಸಹಾಯಕ್ಕೆ  ಸ್ವಯಂಸೇವಾ ಸಂಘಟನೆ ಸಂಗಾತಿ ಅಭಿಜನ್ ಸಹಿತ ಸ್ಥಳೀಯ ದುರ್ಗಾ ಪೂಜಾ ಸಮಿತಿ ಕೂಡ ಕೈಜೋಡಿಸಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ನಾಲ್ಕು ಮಂದಿ ಯುವ ವೈದ್ಯರೂ ಈಗ ಅದೇ ಫ್ಲ್ಯಾಟ್ ನಲ್ಲಿ ನೆಲೆಸಲಿದ್ದು ಅವರ ಎಲ್ಲಾ ಹಿಂದೂ ನೆರೆಹೊರೆಯವರು ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಹಾಗೂ ಅವರು ಬೇರೆಲ್ಲಿಯೂ ಮನೆ ಹುಡುಕುವುದು ಅಗತ್ಯವಿಲ್ಲ ಹಾಗೂ ಅವರ ಧರ್ಮದ ನೆಪದಲ್ಲಿ ಅವರಿಗೆ ಯಾವುದೇ ತೊಂದರೆಯುಂಟು ಮಾಡುವುದಿಲ್ಲವೆಂದೂ ಹೇಳಿದ್ದಾರೆ.

ವೈದ್ಯಕೀಯ ಕೋರ್ಸ್ ಮುಗಿಸಿ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಫ್ತಾಬ್ ಆಲಂ, ಮೊಜ್ತಬ ಹಸನ್, ನಾಸಿರ್ ಶೇಖ್ ಹಾಗೂ ಸೌಕತ್ ಶೇಖ್  ತಮ್ಮ ಸಮಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಾಗ  ಸ್ವಯಂಸೇವಾ ಸಂಘಟನೆ ಸಂಗಾತಿ ಅಭಿಜನ್ ಅವರ ಸಹಾಯಕ್ಕೆ ಧಾವಿಸಿತ್ತು.

ಸಂಘಟನೆಯ ಸ್ಥಾಪಕ ಸದಸ್ಯ ದ್ವೈಪಾಯನ್ ಬ್ಯಾನರ್ಜಿ ಮಾತನಾಡುತ್ತಾ ಮುಸ್ಲಿಂ ಸಮುದಾಯದವರಿಗೆ ಬಾಡಿಗೆ ಮನೆ ನೀಡದೇ ಇರುವುದು ಕೊಲ್ಕತ್ತಾದಲ್ಲಿ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡರೂ ಈ ನಿರ್ದಿಷ್ಟ ಪ್ರಕರಣದ ಬಗ್ಗೆ ತಮ್ಮ ಸಂಘಟನೆ ನೆರೆಹೊರೆಯವರಲ್ಲಿ ಮಾತನಾಡಿದಾಗ ಎಲ್ಲರೂ ಈ ಯುವವೈದ್ಯರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು ಎಂದು ಅವರು ಹೇಳಿದ್ದಾರೆ. ಸ್ಥಳೀಯ ದುರ್ಗಾ ಪೂಜಾ ಸಮಿತಿ ಕೂಡ ಕೈಜೋಡಿಸಿದ್ದರಿಂದ ಎಲ್ಲವೂ ಸುಲಲಿತವಾಗಿತ್ತು.

ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಳೆ ವಿದ್ಯಾರ್ಥಿಗಳಾಗಿರುವ ಈ ನಾಲ್ಕು ಮಂದಿ ವೈದ್ಯರು ಈ ಫ್ಲ್ಯಾಟ್ ಅನ್ನು ಎರಡು ತಿಂಗಳ ಹಿಂದೆ ಬಾಡಿಗೆಗೆ ಪಡೆದಿದ್ದರು. “ನಮ್ಮ ಮನೆ ಮಾಲಿಕನಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಕೆಲ ನೆರೆಹೊರೆಯವರು ಸುಮ್ಮನೆ ಇಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಸೋಮವಾರ ನಮ್ಮನ್ನು ಭೇಟಿಯಾಗಲು ಗೆಳೆಯರೊಬ್ಬರು ಬಂದಾಗ  ಅವರನ್ನು ನೆರೆಹೊರೆಯವರು ಪ್ರಶ್ನಿಸಿ ಅವರ ಗುರುತು ಚೀಟಿ ತೋರಿಸುವಂತೆ ಹೇಳಿದ್ದರು. ಅವರಲ್ಲೊಬ್ಬ ಮಧ್ಯ ವಯಸ್ಕ ವ್ಯಕ್ತಿ ನಾವು ಮುಸ್ಲಿಮರಾಗಿರುವುದರಿಂದ ಬೇರೆ ಕಡೆ  ಮನೆ ಹುಡುಕಬೇಕೆಂದರು'' ಎಂದು ಹೌರಾಹ್ ಜಿಲ್ಲೆಯವರಾದ ಆಲಂ ಹೇಳಿದ್ದರು.

ಇದೀಗ ಅವರು ಅದೇ ಫ್ಲ್ಯಾಟ್ ನಲ್ಲಿ ನೆಲೆಸುವಂತೆ ಆಗಿದ್ದು ನಾಲ್ಕು ಮಂದಿಗೂ ಅತೀವ ಸಂತಸ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News