ಕ್ಯಾನ್ಸರ್ ನೋವು ಏನು ಎನ್ನುವುದು ನಿಮಗೆ ಗೊತ್ತೇ....?

Update: 2018-08-03 10:55 GMT

ಕ್ಯಾನ್ಸರ್ ಎನ್ನುವುದು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚದಿದ್ದರೆ ವ್ಯಕ್ತಿಯ ಬದುಕನ್ನು ನರಕ ಯಾತನೆಗೆ ತಳ್ಳುವ ರೋಗ. ಆರೋಗ್ಯಕರ ಆಹಾರಕ್ರಮ ಮತ್ತು ಜೀವನಶೈಲಿಯನ್ನು ಅನುಸರಿಸಿದರೆ ನಾವು ಖಂಡಿತವಾಗಿಯೂ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ತಗ್ಗಿಸಿಕೊಳ್ಳಬಹುದು.

ಏನಿದು ಕ್ಯಾನ್ಸರ್ ನೋವು?

ನೋವು ಕ್ಯಾನ್ಸರ್‌ನ ಭಾಗವಲ್ಲ,ಆದರೆ ಕ್ಯಾನ್ಸರ್ ಆಗಾಗ್ಗೆ ನೋವಿಗೆ ಕಾರಣವಾಗುತ್ತದೆ. ಕ್ಯಾನ್ಸರ್ ಗಡ್ಡೆಯು ನರಗಳು,ಮೂಳೆಗಳು ಅಥವಾ ಶರೀರದ ಯಾವುದೇ ಭಾಗವನ್ನು ಒತ್ತಿದಾಗ ನೋವನ್ನುಂಟು ಮಾಡುತ್ತದೆ. ಕೆಲವು ಕಿಮೊಥೆರಪಿ ಔಷಧಿಗಳೂ ಕ್ಯಾನ್ಸರ್ ರೋಗಿಗಳ ಕೈಕಾಲುಗಳಲ್ಲಿ ಜುಮುಗುಟ್ಟುವ,ಮರಗಟ್ಟುವ ಮತ್ತು ಉರಿಯುತ್ತಿರುವ ಅನುಭವವನ್ನುಂಟು ಮಾಡಬಹುದು.

ಕ್ಯಾನ್ಸರ್ ರೋಗಿಯು ಯಾವುದೇ ನೋವಿನಿಂದ ನರಳುತ್ತಿದ್ದರೆ ಆತನನ್ನು ನೋಡಿಕೊಳ್ಳುವವರು ಮತ್ತು ವೈದ್ಯರು ಅದನ್ನು ಶಮನಿಸಲು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಔಷಧಿರಹಿತ ಪದ್ಧತಿಗಳ ಜೊತೆಗೆ ನೋವನ್ನು ಉಪಶಮನಗೊಳಿಸಲು ವಿವಿಧ ವಿಧಗಳ ಔಷಧಿಗಳು ಲಭ್ಯವಿವೆ.

ಕ್ಯಾನ್ಸರ್ ನೋವುಗಳನ್ನು ಸಾಮಾನ್ಯವಾಗಿ ಮೂರು ವಿಧಗಳಲ್ಲಿ ವರ್ಗೀಕರಿಸಬಹುದಾಗಿದೆ

ತೀವ್ರ ನೋವು

ಯಾವುದಾದರೊಂದು ರೀತಿಯಲ್ಲಿ ಶರೀರಕ್ಕೆ ಗಾಯವಾದಾಗ ಈ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಗಾಯವು ಗುಣವಾದಾಗ ನೋವೂ ಮಾಯವಾಗುತ್ತದೆ. ಇದು ತೀವ್ರ ಸ್ವರೂಪದ ನೋವಾಗಿದ್ದು,ಅಲ್ಪ ಸಮಯದವರೆಗೆ ಬಾಧಿಸುತ್ತದೆ.

ದೀರ್ಘಕಾಲದ ನೋವು

ಈ ನೋವು ಕೆಲವೊಮ್ಮೆ ಮೂರು ತಿಂಗಳುಗಳವರೆಗೂ ಕಾಡುತ್ತಿರುತ್ತದೆ. ಇದು ತೀವ್ರವೂ ಆಗಿರಬಹುದು ಅಥವಾ ಸೌಮ್ಯವೂ ಆಗಿರಬಹುದು. ಇದು ಸುಲಭವಾಗಿ ಗುಣವಾಗುವುದಿಲ್ಲವಾದ್ದರಿಂದ ಸೂಕ್ತ ಚಿಕಿತ್ಸೆಯು ಅಗತ್ಯವಾಗುತ್ತದೆ.

ಮುಂದುವರಿದ ನೋವು

ಕ್ಯಾನ್ಸರ್ ರೋಗಿಯು ತನ್ನ ದೀರ್ಘಕಾಲೀನ ನೋವಿನಿಂದ ಮುಕ್ತಿ ಪಡೆಯಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಈ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿನ ತೀವ್ರತೆಯನ್ನು ನಿರೀಕ್ಷಿಸಲಾಗುವುದಿಲ್ಲ,ಆದರೆ ಇದು ದೀರ್ಘಕಾಲೀನ ನೋವಿಗಿಂತ ತೀವ್ರ ಹದಗೆಟ್ಟ ಸ್ಥಿತಿ ಎಂದು ಹೇಳಬಹುದು. ಅದು ಒಂದು ಗಂಟೆಯಷ್ಟು ಕಾಲ ಬಾಧಿಸಬಹುದು ಮತ್ತು ದಿನಕ್ಕೆ ಹಲವಾರು ಬಾರಿ ಕಾಣಿಸಿಕೊಳ್ಳಬಹುದು.

ಕ್ಯಾನ್ಸರ್‌ನ ವಿಭಿನ್ನ ನೋವುಗಳು ಹೀಗಿವೆ...

►ಮೂಳೆ ನೋವು

ಇದು ಕ್ಯಾನ್ಸರ್‌ನಿಂದ ಶರೀರದ ನಿರ್ದಿಷ್ಟ ಜಾಗದಲ್ಲಿ ಅಥವಾ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವು ಆಗಿದೆ. ಇದು ತೀವ್ರ ಸ್ವರೂಪದ್ದಾಗಿದ್ದು,ನಿರಂತರ ಕಾಡುತ್ತಿರುತ್ತದೆ,ಸೆಟೆತ ಕಾಣಿಸಿಕೊಳ್ಳುತ್ತದೆ.

► ನರದ ನೋವು

ನರಗಳು,ಶರೀರದ ಇತರ ಅಂಗಗಳು,ಮಿದುಳು ಬಳ್ಳಿಗಳ ಮೇಲೆ ಒತ್ತಡದಿಂದ ಅಥವಾ ಹಾನಿಗೀಡಾದ ನರಗಳಿಂದ ಈ ನೋವು ಉಂಟಾಗುತ್ತದೆ. ಕಿಮೊಥೆರಪಿ,ರೇಡಿಯೊ ಥೆರಪಿ ಮತ್ತು ಇತರ ಕ್ಯಾನ್ಸರ್ ಚಿಕಿತ್ಸೆಗಳು ಈ ನೋವಿಗೆ ಕಾರಣಗಳಾಗಿವೆ.

► ಫ್ಯಾಂಟಮ್ ಪೇಯ್ನಾ

ಶರೀರದಲ್ಲಿ ಕ್ಯಾನ್ಸರ್‌ಗೆ ಗುರಿಯಾದ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ನಿವಾರಿಸಿದ ಜಾಗದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಸಹಿಸಲಸಾಧ್ಯ ನೋವು ಎಂದು ಬಣ್ಣಿಸಲಾಗಿದೆ ಮತ್ತು ಈ ನೋವಿಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಕೆಲವರಲ್ಲಿ ಈ ನೋವು ಕೆಲವು ತಿಂಗಳ ಬಳಿಕ ಮಾಯವಾಗುತ್ತದೆ,ಇನ್ನು ಕೆಲವರು ಒಂದು ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಈ ನೋವನ್ನು ಅನುಭವಿಸಬಹುದು. ಈ ನೋವು ಕಾಣಿಸಿಕೊಂಡಾಗ ರೋಗಿಗಳು ಅಗತ್ಯವಾಗಿ ವೈದ್ಯರಿಗೆ ತಿಳಿಸಬೇಕಾಗುತ್ತದೆ.

► ಮೃದು ಅಂಗಾಂಶ ನೋವು

ಇದನ್ನು ಒಳಾಂಗಗಳ ನೋವು ಎಂದೂ ಕರೆಯಲಾಗುತ್ತದೆ ಮತ್ತು ಇದು ಮಾಂಸಖಂಡಗಳು ಮತ್ತು ಅಂಗಾಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

► ಅನ್ವಯಿಕ ನೋವು

ಶರೀರದ ಒಂದು ಅಂಗಲ್ಲಿಯ ನೋವು ಇನ್ನೊಂದು ಭಾಗದಲ್ಲಿ ನೋವನ್ನುಂಟು ಮಾಡಿದರೆ ಅದನ್ನು ಅನ್ವಯಿಕ ನೋವು ಎಂದು ಕರೆಯಲಾಗುತ್ತದೆ.

ನೋವು ಯಾವುದೇ ಇರಲಿ,ಅದರ ತೀವ್ರತೆಯ ಕುರಿತು ವೈದ್ಯರಿಗೆ ತಿಳಿಸುವುದು ಮುಖ್ಯವಾಗಿದೆ ಮತ್ತು ಅವರು ಸೂಕ್ತ ಔಷಧಿಯನ್ನು ಸೂಚಿಸುತ್ತಾರೆ. ನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮತ್ತು ಕೆಲವರಿಗೆ ಹೆಚ್ಚುವರಿ ನೋವು ನಿವಾರಕ ಡೋಸ್‌ಗಳು ಅಗತ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News