2019ರ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಶಿವಸೇನೆ ಸಹಿತ 17 ಪಕ್ಷಗಳ ಒತ್ತಾಯ

Update: 2018-08-03 14:27 GMT

ಹೊಸದಿಲ್ಲಿ, ಆ.3: 2019ರ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ದ ಬದಲು ಮತಪತ್ರ ಬಳಸಬೇಕೆಂದು ಒತ್ತಾಯಿಸಿ ಶೀಘ್ರದಲ್ಲೇ 17 ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್, ಶಿವಸೇನೆ, ಟಿಎಂಸಿ, ಡಿಎಂಕೆ, ಆರ್‌ಜೆಡಿ, ಸಿಪಿಐ, ಸಿಪಿಐ(ಎಂ), ಟಿಡಿಪಿ, ಬಿಎಸ್ಪಿ, ಎಸ್ಪಿ, ಆಪ್, ವೈಎಸ್‌ಆರ್‌ಸಿಪಿ, ಎನ್‌ಸಿಪಿ ಹಾಗೂ ಜೆಡಿಎಸ್ ಸೇರಿದಂತೆ ಪ್ರಮಖ ವಿಪಕ್ಷಗಳು ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಸಬೇಕೆಂದು ಆಗ್ರಹಿಸುತ್ತಿವೆ. ಈ ವಿಷಯಲ್ಲಿ ವಿಪಕ್ಷಗಳಲ್ಲಿ ಸಹಮತವಿದೆ. ಮುಂದಿನ ವಾರ ಚುನಾವಣಾ ಆಯೋಗವನ್ನು ಭೇಟಿಮಾಡಿ 2019ರ ಲೋಕಸಭಾ ಚುನಾವಣೆಯಲ್ಲಿ ಮತಪತ್ರ ಬಳಸಬೇಕೆಂದು ಒತ್ತಾಯಿಸುತ್ತೇವೆ ಎಂದು ಟಿಎಂಸಿ ಮುಖಂಡ ಡೆರೆಕ್ ಒ’ಬ್ರಿಯಾನ್ ತಿಳಿಸಿದ್ದಾರೆ.

ದಿಲ್ಲಿಗೆ ಭೇಟಿ ನೀಡಿದ್ದ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ವಿಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗಿದ್ದು ಈ ಸಂದರ್ಭ ಸಂಘಟಿತರಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದವರು ತಿಳಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸುವ ಮನವಿಯ ಕರಡು ಪ್ರತಿಯನ್ನು ಸಿದ್ಧವಾಗಿರಿಸಿಕೊಳ್ಳಲಾಗಿದ್ದು, ಆಯಾ ಪಕ್ಷಗಳ ಉನ್ನತ ಮುಖಂಡರ ಅನುಮೋದನೆ ಪಡೆದು ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ವಿಪಕ್ಷಗಳು ತಿಳಿಸಿವೆ. ಇವಿಎಂಗಳಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಯಿರುವ ಕಾರಣ ಮತಪತ್ರದ ವ್ಯವಸ್ಥೆ ಜಾರಿಯಾಗಬೇಕು ಎಂದು ವಿಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಾ ಬಂದಿವೆ. ಆದರೆ ಇವಿಎಂಗಳಲ್ಲಿ ಹಸ್ತಕ್ಷೇಪದ ಸಾಧ್ಯತೆಯಿದೆ ಎಂಬ ವಾದವನ್ನು ಚುನಾವಣಾ ಆಯೋಗ ತಳ್ಳಿಹಾಕಿದ್ದು 2019ರ ಚುನಾವಣೆಯಲ್ಲಿ ವಿವಿಪ್ಯಾಟ್ ಮತಯಂತ್ರ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News