ಎಬಿಪಿ ಪತ್ರಕರ್ತರ ನಿರ್ಗಮನ ಕುರಿತು ಸಂಸತ್ತಿನಲ್ಲಿ ಸರಕಾರ-ಪ್ರತಿಪಕ್ಷ ಜಟಾಪಟಿ

Update: 2018-08-03 17:25 GMT

ಹೊಸದಿಲ್ಲಿ,ಆ.3: ಎಬಿಪಿ ನ್ಯೂಸ್ ಹಿಂದಿ ಸುದ್ದಿವಾಹಿನಿಯಿಂದ ಪ್ರತಿಷ್ಠಿತ ಪತ್ರಕರ್ತರಿಬ್ಬರ ನಿರ್ಗಮನವು ಶುಕ್ರವಾರ ಸಂಸತ್ತಿನಲ್ಲಿ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಸರಕಾರವನ್ನು ಟೀಕಿಸಿದ್ದ ವರದಿಗಾಗಿ ಎಬಿಪಿ ನ್ಯೂಸ್ ಅನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ಸರಕಾರವು ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸರಕಾರವು ಕಳೆದ ಕೆಲವು ವರ್ಷಗಳಲ್ಲಿ ಮಾಧ್ಯಮಗಳ ಧ್ವನಿಯುಡುಗಿಸಲು ಪ್ರಯತ್ನಿಸಿದ ಹಲವಾರು ನಿದರ್ಶನಗಳಿವೆ. ವಿಶೇಷವಾಗಿ ಮಾಧ್ಯಮಗಳು ಸರಕಾರದ ಅಭಿಪ್ರಾಯಗಳ ವಾಸ್ತವ ತನಿಖೆಗೆ ಮಂದಾದಾಗ ಈ ಪ್ರಯತ್ನ ನಡೆಯುತ್ತಿದೆ. ಅಂತಹ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತದೆ, ಹೆದರಿಸಲಾಗುತ್ತದೆ. ವಾಕ್ ಸ್ವಾತಂತ್ರವಿಲ್ಲದಿದ್ದರೆ ನಾವು ಮಾತನಾಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಆರೋಪವನ್ನು ಬಲವಾಗಿ ವಿರೋಧಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರು,ಎಬಿಪಿ ತಪ್ಪು ವರದಿಗಳನ್ನು ನೀಡುತ್ತಿದೆ,ಆದರೆ ಸರಕಾರವು ಅದರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಸರಕಾರವು ಹಸ್ತಕ್ಷೇಪ ಮಾಡಲು ಬಯಸಿದ್ದರೆ ಉಚಿತ ಡಿಷ್(ಸರಕಾರಿ ಉಪಗ್ರಹ ಟಿವಿ ಸೇವೆ) ಸರಕಾರದ್ದಾಗಿರುವುದು ಅದಕ್ಕೆ ಕಾರಣವಾಗುತ್ತದೆ ಎಂದರು.

ಪತ್ರಕರ್ತರ ನಿರ್ಗಮನಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಜನರು ಎಬಿಪಿ ನ್ಯೂಸ್ ವಾಹಿನಿಯನ್ನು ವೀಕ್ಷಿಸಲು ಬಯಸುತ್ತಿಲ್ಲ,ಹೀಗಾಗಿ ಅದರ ಟಿಆರ್‌ಪಿ ಭರದಿಂದ ಕುಸಿಯುತ್ತಿದೆ. ಆದರೆ ಅವರು ಸರಕಾರವನ್ನು ದೂರುತ್ತಿದ್ದಾರೆ ಎಂದರು.

ಗುರುವಾರ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯಾನ್ ಅವರೂ ಈ ವಿಷಯವನ್ನು ಎತ್ತಿದ್ದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಸರಕಾರದ ವಿರುದ್ಧ ಟ್ವಿಟರ್ ದಾಳಿ ನಡೆಸಿದ್ದಾರೆ. ಮುಕ್ತ ಮಾಧ್ಯಮವು ಪ್ರಜಾಪ್ರಭುತ್ವದ ಜೀವನಾಡಿಯಾಗಿದೆ. ಆದರೆ ಸ್ವತಂತ್ರ ಪತ್ರಿಕೋದ್ಯಮವನ್ನು ಮುಗಿಸಲು ಮೋದಿ ಸರಕಾರವು ಪಟ್ಟು ಹಿಡಿದಿದೆ ಎಂದು ಅವರು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News